ಮಗಳಿಗೆ ಮಾವಿನ ರಸದಲ್ಲಿ ವಿಷಬೆರೆಸಿ ಹತ್ಯೆಗೈದ ಪೋಷಕರು

By: ಮೈಸೂರು ಪ್ರತಿನಿಧಿ
Subscribe to Oneindia Kannada

ಮೈಸೂರು, ಏಪ್ರಿಲ್ 15 : ನಂಜನಗೂಡು ತಾಲೂಕಿನ ಚಂದವಾಡಿಯಲ್ಲಿ ನಡೆದ ಯುವತಿ ಮಧುಕುಮಾರಿಯ ನಿಗೂಢ ಸಾವಿಗೆ ತಿರುವು ಸಿಕ್ಕಿದ್ದು, ಆಕೆಯದು ಮರ್ಯಾದಾ ಹತ್ಯೆ ಎಂಬುದು ಪೊಲೀಸರ ತನಿಖೆಯಿಂದ ಬಹಿರಂಗಗೊಂಡಿದೆ. ಮರ್ಯಾದೆಗೆ ಹೆದರಿ ಪೋಷಕರು ಇಂಥ ಹೊಲಸು ಕೆಲಸ ಮಾಡಿದ್ದಾರೆ.

ಈ ಕುರಿತಂತೆ ಎಸ್ಪಿ ಅಭಿನವ್ ಖರೆ ಅವರೇ ಮಾಧ್ಯಮದವರಿಗೆ ಮಾಹಿತಿ ನೀಡಿದ್ದು, ವಿಚಾರಣೆ ಬಳಿಕ ಯುವತಿ ಮಧುಕುಮಾರಿಗೆ ಆಕೆಯ ಅಣ್ಣ ಗುರುಪ್ರಸಾದ್, ತಂದೆ ಗುರುಮಲ್ಲಪ್ಪ, ತಾಯಿ ಮಂಜುಳ ಮಾವಿನ ಹಣ್ಣಿನ ಜ್ಯೂಸ್‌ನಲ್ಲಿ ರಾಸಾಯನಿಕ ಔಷಧಿ ಬೆರೆಸಿ ಕುಡಿಸಿ ಸಾಯಿಸಿರುವುದಾಗಿ ತಿಳಿಸಿದ್ದಾರೆ. [ಮದುವೆ ಒಲ್ಲದ ಯುವತಿ ಸಾವು, ಮರ್ಯಾದಾ ಹತ್ಯೆ ಶಂಕೆ!]

Investigation confirms honor killing in Nanjangud

ಅಣ್ಣ ಗುರುಪ್ರಸಾದ್ ಮೂಲಕ ಜಯರಾಮನ ಪರಿಚಯ ಮಧುಕುಮಾರಿಗೆ ಆಗಿತ್ತು. ಅಣ್ಣನ ಸ್ನೇಹಿತನಾಗಿದ್ದರಿಂದ ಇಬ್ಬರ ನಡುವೆ ಸಲುಗೆ ಬೆಳೆದಿತ್ತಲ್ಲದೆ ಅದು ಪ್ರೇಮಕ್ಕೆ ತಿರುಗಿತ್ತು. ಈ ವಿಷಯ ಮನೆಯವರಿಗೆ ತಿಳಿದು ರಾದ್ಧಾಂತವಾಗಿತ್ತು. ಆತ ತಮ್ಮ ಜಾತಿಗಿಂತ ಕೀಳು ಜಾತಿಯಾದ್ದರಿಂದ ಅವನನ್ನು ಮರೆಯುವಂತೆ ಮನೆಯವರು ತಾಕೀತು ಮಾಡಿದ್ದರು. ಆದರೆ ಮಧುಕುಮಾರಿ ಮದುವೆ ಆಗೋದಾದ್ರೆ ಅವನನ್ನೇ ಎಂದು ಹಠ ಹಿಡಿದಿದ್ದಳು.

ಆದರೆ ಇದೆಲ್ಲದರ ನಡುವೆ ಮಧುಕುಮಾರಿಗೆ ಮತ್ತೊಬ್ಬ ಯುವಕನನ್ನು ಹುಡುಕಿ ಏ.29ರಂದು ಮದುವೆ ದಿನಾಂಕವನ್ನೂ ಗೊತ್ತು ಮಾಡಿ ಸರ್ವಸಿದ್ಧತೆ ಮಾಡಲಾಗಿತ್ತು. ಇದರಿಂದ ಬೇಸತ್ತ ಮಧುಕುಮಾರಿ ಮದುವೆಯನ್ನು ಧಿಕ್ಕರಿಸಿ ತಾನು ಪ್ರೀತಿಸಿದ ಜಯರಾಮನೊಂದಿಗೆ ಹೋಗಿ ಮದುವೆ ಮಾಡಿಕೊಳ್ಳುವ ನಿರ್ಧಾರ ಮಾಡಿದ್ದಳು. [ಮೋನಿಕಾ ಹತ್ಯೆ : ಗೃಹ ಸಚಿವರಿಗೆ ಮಹಿಳಾ ಆಯೋಗ ಪತ್ರ]

Investigation confirms honor killing in Nanjangud

ಇದು ಮನೆಯವರಿಗೆ ಗೊತ್ತಾಗಿ, ಇನ್ನು ಹೀಗೆ ಬಿಟ್ಟರೆ ನಮ್ಮ ಮಾನ ಮರ್ಯಾದೆ ಹೋಗುತ್ತದೆ ಎಂದು ಮಧುಕುಮಾರಿಯನ್ನೇ ಮುಗಿಸಲು ಮುಂದಾಗಿದ್ದಾರೆ. ಮಾವಿನ ಹಣ್ಣಿನ ಜ್ಯೂಸ್‌ನಲ್ಲಿ ಕ್ರಿಮಿನಾಶಕ ಔಷಧಿ ಬೆರೆಸಿ ಕುಡಿಸಿದ್ದಾರೆ. ಇದನ್ನು ಕುಡಿದ ಆಕೆ ಹೊಟ್ಟೆನೋವು ತಾಳಲಾರದೆ ಒದ್ದಾಡಿದ್ದಾಳೆ.

ಆಕೆ ನರಳಾಡುತ್ತಿದ್ದರೂ ಕಟುಕರ ಮನಸ್ಸು ಕರಗಲಿಲ್ಲ. ಆಂಬ್ಯುಲೆನ್ಸ್ ತರೋಕೆ ಹೇಳಿದ್ದೇವೆ. ಸ್ವಲ್ಪ ಹೊತ್ತು ತಡೆದುಕೋ ಎಂದು ಹೇಳುತ್ತಾ ಸಮಯವನ್ನು ತಳ್ಳಿದ್ದಾರೆ. ಆಕೆ ಸಂಪೂರ್ಣ ಅಸ್ವಸ್ಥಗೊಂಡು ಸಾವನ್ನಪ್ಪಿದ ಬಳಿಕ ಸುತ್ತಮುತ್ತಲಿನವರಿಗೆ ಹೊಟ್ಟೆನೋವೆಂದು ಹೇಳುತ್ತಿದ್ದಳು ಆಂಬ್ಯುಲೆನ್ಸ್ ತರೋ ಹೊತ್ತಿಗೆ ಸಾವನ್ನಪ್ಪಿದ್ದಾಳೆ ಎಂದು ಹೇಳಿ ನಂಬಿಸಿದ್ದಾರೆ.

Investigation confirms honor killing in Nanjangud

ಹೂತು ಹಾಕಿದರೆ ತೊಂದರೆಯಾಗುತ್ತದೆ ಎಂದು ಯೋಚಿಸಿದ ಅವರು ಆಕೆಯ ಮೈಮೇಲೆ ಬಿಳಿ ಮಚ್ಚೆ ಇರೋದ್ರಿಂದ ಹೂಳುವುದು ಬೇಡ ಸುಟ್ಟು ಬಿಡೋಣ ಎಂದು ನಿರ್ಧರಿಸಿದ್ದಾರೆ. ಮನೆಯವರ ಮಾತಿನ ಮರ್ಮ ಅರಿಯದ ಸ್ಥಳೀಯರು ಅದರಂತೆ ಸುಟ್ಟುಹಾಕಿದ್ದಾರೆ.

ಆದಾದ ನಂತರ ಗ್ರಾಮದಲ್ಲಿ ಚರ್ಚೆ ಆರಂಭವಾಗಿ, ಗ್ರಾಮದ ವ್ಯಕ್ತಿಯೊಬ್ಬರು ಯುವತಿ ಸಾವಿನ ಬಗ್ಗೆ ಶಂಕೆ ವ್ಯಕ್ತಪಡಿಸಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಪೊಲೀಸರು ಸ್ಥಳಕ್ಕೆ ತೆರಳುವ ವೇಳೆಗೆ ಯುವತಿಯ ಶವದ ಅಂತ್ಯಕ್ರಿಯೆ ನಡೆದು ಹೋಗಿತ್ತು.

Investigation confirms honor killing in Nanjangud

ಬಳಿಕ ಎಸ್ಪಿ ಅಭಿನವ್ ಖರೆ ಅವರ ಸೂಚನೆ ಮೇರೆ ಪೊಲೀಸರು ಸ್ವಯಂ ಪ್ರೇರಿತವಾಗಿ ಅಸಹಜ ಸಾವಿನ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದರಿಂದ ಕುಟುಂಬದ ಭಾನಗಡಿ ಬೆಳಕಿಗೆ ಬಂದಿದೆ.

ಈ ವಿಚಾರವಾಗಿ ಮಧುಕುಮಾರಿ ಮನೆಯವರು ಪ್ರಿಯಕರ ಜಯರಾಮನಿಗೂ ಬೆದರಿಕೆ ಹಾಕಿದ್ದರಂತೆ. ಮಧುಕುಮಾರಿ ತನಗೆ ಸಾವಿನ ಭಯ ಇರುವುದಾಗಿ ತಿಳಿಸಿದ್ದಳಲ್ಲದೆ, ನನ್ನನ್ನು ಸಾಯಿಸಿ ನನ್ನ ಸಾವಿಗೆ ನೀನೇ ಕಾರಣ ಎಂದು ಮನೆಯವರು ನಿನ್ನ ಮೇಲೆ ಹಾಕಬಹುದು ಎಂದೆಲ್ಲ ಮಧುಕುಮಾರಿ ಆತನಿಗೆ ತಿಳಿಸಿದ್ದಳು ಎಂದು ಆತ ಹೇಳಿಕೆ ನೀಡಿದ್ದಾನೆ. ಸದ್ಯ ಪೊಲೀಸ್ ತನಿಖೆಯಿಂದ ಮಧುಕುಮಾರಿ ಸಾವಿನ ನಿಗೂಢರಹಸ್ಯ ಬಯಲಾಗಿದ್ದು, ಮೂವರನ್ನು ಪೊಲೀಸರು ಬಂಧಿಸಿದ್ದಾರೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Investigation has confirmed that parents of Madhu Kumari, who was in love with lower caste guy, killed her fearing dent to their honor. Father, mother and brother of Madhu Kumar killed her by lacing mango juice with pesticide. The incident took place in Chandawadi in Nanjangud taluk in Mysuru district.
Please Wait while comments are loading...