ದಸರೆ ಎಂದರೆ ಕನ್ನಡಮ್ಮನ ಪೂಜೆ: ನಿಸಾರ್ ಅಹ್ಮದ್ ಸಂದರ್ಶನ

By: ಯಶಸ್ವಿನಿ ಎಂ.ಕೆ
Subscribe to Oneindia Kannada

ಮೈಸೂರು, ಆಗಸ್ಟ್ 18 : ನಿತ್ಯೋತ್ಸವ ಕವಿ ಪ್ರೊ.ಕೆ ಎಸ್ ನಿಸಾರ್ ಅಹ್ಮದ್, ಈ ಬಾರಿಯ ದಸರಾ ಉದ್ಘಾಟಕರಾಗಿ ಆಯ್ಕೆಯಾಗಿದ್ದಾರೆ. ಇಲ್ಲಿಯವರೆಗೂ ಹತ್ತು ಹಲವು ಪ್ರಶಸ್ತಿಗಳನ್ನು ತಮ್ಮ ಬರವಣಿಗೆಯ ರೂಪದಲ್ಲಿ ಮುಡಿಗೇರಿಸಿಕೊಂಡ ಚಿಂತಕರು ಇವರು. ಇದೇ ಮೊಟ್ಟಮೊದಲ ಬಾರಿಗೆ ದಸರೆಯ ಉದ್ಘಾಟನೆಗೆ ಆಯ್ಕೆಯಾಗಿರುವ ನಿಸಾರ್ ಅಹ್ಮದ್ 'ಒನ್ ಇಂಡಿಯಾ'ದೊಂದಿಗೆ ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದು ಹೀಗೆ.

ಈ ಬಾರಿಯ ದಸರೆ ಉದ್ಘಾಟನೆಗೆ ನಿಮ್ಮನ್ನು ಆಯ್ಕೆ ಮಾಡಲಾಗಿದೆ, ನಿಮ್ಮ ಅಭಿಪ್ರಾಯವೇನು?
ಮೊದಲ ಬಾರಿಗೆ ನಾನು ದಸರೆಯನ್ನು ಉದ್ಘಾಟನೆ ಮಾಡುತ್ತಿರುವುದಕ್ಕೆ ಸಂತಸವಾಗುತ್ತಿದೆ. ಇಷ್ಟು ದಿನ ದಸರೆಯನ್ನು ಕೇವಲ ವೀಕ್ಷಕನಾಗಿ ಮಾತ್ರ ಅನುಭವಿಸುತ್ತಿದೆ. ಆದರೆ ಈ ಬಾರಿ ನಾನು ಅದರ ಉದ್ಘಾಟಕನಾಗಿದ್ದೇನೆ. ಹೆಮ್ಮೆಯೆನಿಸುತ್ತದೆ.

Interview of Dr.K.S.Nissar Ahmad who will be inaugurating Mysuru Dasara 2017

ನಿಮಗೆ ಈ ಅವಕಾಶ ಸಿಗುತ್ತದೆಯೆಂಬ ನಿರೀಕ್ಷೆಯಿತ್ತಾ?
ಖಂಡಿತಾ ಇಲ್ಲ. ನಾನೆಂದಿಗೂ ಇಂತಹ ಅವಕಾಶಕ್ಕಾಗಿ ಕಾದು ಕುಳಿತವನಲ್ಲ. ಕಳೆದ ಬಾರಿಯ ಆಯ್ಕೆ ಸಮಿತಿ ಪಟ್ಟಿಯಲ್ಲಿ ನನ್ನ ಹೆಸರಿತ್ತು. ಆಯ್ಕೆಯಾಗುವ ಕುರಿತಾದ ನಿರೀಕ್ಷೆಯಿರಲಿಲ್ಲ. ಈ ಬಾರಿ ಆಯ್ಕೆಯಾಗಿದ್ದೇನೆ. ಇದು ನನ್ನ ಸುಯೋಗ. ಮೊನ್ನೆ ಮೈಸೂರು ಡಿಸಿಯವರು ಕರೆ ಮಾಡಿ ನಿಮ್ಮನ್ನು ದಸರಾ ಉದ್ಘಾಟಕರನ್ನಾಗಿ ನೇಮಿಸಲಾಗಿದೆ ಎಂದಾಗ ನನಗೆ ಬಹಳ ಸಂತೋಷವಾಯಿತು. ನನ್ನನ್ನು ಆಯ್ಕೆ ಮಾಡಿದ ದಸರಾ ಆಯ್ಕೆ ಸಮಿತಿಯ ಎಲ್ಲರಿಗೂ ಧನ್ಯವಾದ ತಿಳಿಸುತ್ತೇನೆ.

ಈ ಬಾರಿಯ ದಸರೆ ಹೇಗಿರಬೇಕೆಂದು ನೀವೇನಾದರೂ ಸರ್ಕಾರಕ್ಕೆ ಸಲಹೆ ನೀಡುತ್ತೀರಾ?
ದಸರೆ ಎಂದರೆ ಅದ್ಧೂರಿ. ನಾವು ರಾಜರ ಕಾಲದಿಂದಲೂ ನಾಡಹಬ್ಬವನ್ನು ನೋಡಿ ಬೆಳೆದವರು. ಆಗಿನ ವೈಭವವೇ ಬೇರೆ. ಕಾಲಕ್ರಮೇಣ ಎಲ್ಲವೂ ಬದಲಾಗಬೇಕಿದೆ. ಹಾಗೆಯೇ ಬದಲಾಗುತ್ತಿದೆ ಕೂಡ. ನನ್ನ ಯೋಚನಾಲಹರಿಯ ಕುರಿತಾದ ಸಲಹೆಗಳನ್ನು ನೀಡಬಯಸುತ್ತೇನೆ. ಅದು ಓರ್ವ ಉದ್ಘಾಟಕನಾಗಿ ಅಲ್ಲ. ಸಾಮಾನ್ಯನಂತೆಯೇ ಆಗಿರುತ್ತದೆ.

ಹಾಗಾದರೆ ಇಂದಿನ ದಸರೆಯಲ್ಲಿ ನಿಮಗೇನಾದರೂ ಕೊರತೆ ಕಾಣುತ್ತಿದೆಯೇ?
ಕೊರತೆ ಎಂದರ್ಥವಲ್ಲ. ಆಗಿನ ಕಾಲದಲ್ಲಿ ನಡೆಯುತ್ತಿದ್ದ ಆಚರಣೆಗಳಲ್ಲಿಯೂ, ಈಗಿನ ಕಾಲದ ಆಚರಣೆಗಳಲ್ಲಿಯೂ ಬಹಳಷ್ಟು ಬದಲಾವಣೆಗಳಿದೆ. ಅಂದಿನ ಕಾಲದಲ್ಲಿ ಅಂಬಾರಿಯಲ್ಲಿ ಮಹರಾಜರು ಬರುತ್ತಿದ್ದರು. ರಾಜನೇ ಜನರಿಗೆ ದೇವರಾಗಿದ್ದ ಕಾಲವದು. ಆದರೇ ಇಂದು ಶ್ರೀಸಾಮಾನ್ಯನ ಪ್ರಜಾಪ್ರಭುತ್ವ. ಆಚರಣೆಗಳಲ್ಲಿಯೂ ಇಂದು ಸಾಕಷ್ಟು ಬದಲಾವಣೆಗಳಾಗಿದೆ. ಮೈಸೂರು ದಸರೆ ವಿಶ್ವವಿಖ್ಯಾತವಾಗಿದೆಯೆಂದರೆ ಅದಕ್ಕೆ ಪ್ರಮುಖ ಅಡಿಪಾಯ ಇಲ್ಲಿನ ವೈಭೋಗ. ಹಾಗಾಗಿಯೇ ನಾಡಹಬ್ಬ ವಿದೇಶಿಯರನ್ನು ಸೆಳೆಯುತ್ತಿರುವುದು.

ನಿಮ್ಮ ಪ್ರಕಾರ ದಸರೆ ಎಂದರೇನು?
ದಸರೆ ಎಂದರೆ ಕನ್ನಡಿಗರ ಹೆಮ್ಮೆಯ ಪ್ರತಿರೂಪ. ಕನ್ನಡದಲ್ಲಿ ಸತ್ವವಿದೆ. ನಾಡದೇವತೆಯ ಪೂಜೆಯಿದು. ಇದು ನಮ್ಮಲ್ಲಿ ಮಾತ್ರ. ಆಗಿನ ರಾಜರ ಕಾಲದಲ್ಲಿಯೇ ಕನ್ನಡದ ದೇವತೆಯನ್ನು ಪೂಜಿಸಲಾಗುತ್ತಿದೆ. ಇಲ್ಲಿಯವರೆಗೂ ಮಾತನಾಡುವ ಭಾಷೆಯನ್ನು ಪೂಜಿಸಿದ ಸಂಸ್ಕೃತಿ ಕನ್ನಡಿಗರಿಗೆ, ಕನ್ನಡತನಕ್ಕೆ ಸಲ್ಲುತ್ತದೆ. ಹಾಗಾಗಿ ನನ್ನ ಪ್ರಕಾರ ದಸರೆ ಎಂದರೆ ಕನ್ನಡಮ್ಮನ ಪೂಜೆ, ಸಾಹಿತ್ಯದ ಆರಾಧನೆ.

ನಿಮ್ಮ ನೆಂಟಸ್ಥನ ಮೈಸೂರಿನೊಂದಿಗೆ ಹೇಗಿದೆ?
ನಾನು ಬಹು ಇಷ್ಟಪಡುವ ಊರಿನಲ್ಲಿ ಮೈಸೂರು ಸಹ ಒಂದು. ನಾನು ಮೊದಲ ಬಾರಿಗೆ 1957ರಲ್ಲಿ ಇಲ್ಲಿಗೆ ಬಂದಿದ್ದೆ. ನಂತರ 1959ರಲ್ಲಿ ಪುರಭವನದಲ್ಲಿ ನಡೆದ ಕವಿಗೋಷ್ಠಿಯಲ್ಲಿ ಪದ್ಯವನ್ನು ವಾಚಿಸಿದ್ದೆ. ಆನಂತರ ಹಲವು ಬಾರಿ ಮೈಸೂರಿಗೆ ಬಂದಿದ್ದೇನೆ. ಅದರಲ್ಲೂ ದಸರಾ ಕವಿಗೋಷ್ಠಿಯಲ್ಲಿ ಅಧ್ಯಕ್ಷತೆ ವಹಿಸಿದ್ದೇನೆ. ನನ್ನ ಹಲವು ಸ್ನೇಹಿತರು ಇಲ್ಲಿದ್ದಾರೆ. ಸಾಹಿತ್ಯ ಭಂಡಾರ ಮೈಸೂರಿನಲ್ಲಿ ತುಂಬಿರುವುದೇ ಸಂತಸದಾಯಕ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Famous Kannada writer Dr.K.S.Nissar Ahmad will be inaugurating Mysuru dasara this year. Here is an interview of Dr.K.S.Nissar Ahmad.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ