ಹಿಮಾಲಯದಿಂದ ಬಂದ ಅಪರೂಪದ ಅತಿಥಿ ನವರಂಗಿ!

By: ಮೈಸೂರು ಪ್ರತಿನಿಧಿ
Subscribe to Oneindia Kannada

ಮೈಸೂರು, ಜನವರಿ 19 : ಚಳಿಗಾಲ ಆರಂಭವಾಗುತ್ತಿದ್ದಂತೆಯೇ ಚಳಿಯನ್ನು ಸಹಿಸದ ಹೆಚ್ಚಿನ ಹಕ್ಕಿಗಳು ಉತ್ತರ ಭಾರತದಿಂದ ದಕ್ಷಿಣ ಭಾರತದತ್ತ ಬರುವುದು ಸಾಮಾನ್ಯ. ಹೀಗೆ ಬರುವ ಹಕ್ಕಿಗಳು ಒಂದಷ್ಟು ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ವ್ಯಾಪ್ತಿಯಲ್ಲಿ ಕಂಡು ಬರುತ್ತಿವೆ.

ಇದೀಗ ಗುಂಡ್ಲುಪೇಟೆಯ ವನ್ಯಜೀವಿ ಛಾಯಾಗ್ರಾಹಕರಾದ ಆರ್.ಕೆ.ಮಧು ಮತ್ತು ಚಿದಾನಂದ ಎಂಬುವರು ವಲಸೆ ಬಂದ ಹಕ್ಕಿಗಳನ್ನು ತಮ್ಮ ಕ್ಯಾಮರಾದಲ್ಲಿ ಸೆರೆಹಿಡಿಯುವುದಲ್ಲದೆ ಅವುಗಳ ಅಧ್ಯಯನದಲ್ಲಿ ನಿರತರಾಗಿದ್ದಾರೆ. ಅವರ ಕ್ಯಾಮರಾ ಕಣ್ಣಿಗೆ ಹಿಮಾಲಯದ ಅಪರೂಪದ ಅತಿಥಿ ಸಿಕ್ಕಿ ಬಿದ್ದಿದೆ.

ಈಗಾಗಲೇ ಪಕ್ಷಿಗಳನ್ನು ಗುರುತಿಸಿ ಅವುಗಳ ಮಾಹಿತಿ ಕಲೆಹಾಕುತ್ತಿರುವ ಇವರಿಗೆ ಇದೀಗ ಮತ್ತೊಂದು ಪುಟ್ಟ ಹಕ್ಕಿ ಕಾಣ ಸಿಕ್ಕಿರುವುದದು ಸಂತೋಷ ತಂದಿದೆ. ಇವರ ಕಣ್ಣಿಗೆ ಕಾಣಸಿಕ್ಕಿರುವ ಹಕ್ಕಿಗಳ ಪೈಕಿ ಈಗಾಗಲೇ 4 ಚಿಕ್ಕ ಹಕ್ಕಿಗಳು ಹಿಮಾಲಯದಿಂದ ಗುಂಡ್ಲುಪೇಟೆಗೆ ಬಂದಿವೆ.

Indian Pitta - Navrang bird appears in Gundlupet

ಗುಂಡ್ಲುಪೇಟೆಯ ಕೆಬ್ಬೆಕಟ್ಟೆ ಹಳ್ಳದ ಕಾಲುವೆಯಲ್ಲಿ ಈ ಹಕ್ಕಿಗಳು ಕಂಡು ಬಂದಿದ್ದು, ಅದನ್ನು ಕ್ಯಾಮರಾದಲ್ಲಿ ಸೆರೆಹಿಡಿಯುವಲ್ಲಿ ಮಧು ಮತ್ತು ಚಿದಾನಂದ ಯಶಸ್ವಿಯಾಗಿದ್ದಾರೆ. ಈ ಹಕ್ಕಿ ಬಗ್ಗೆ ಮಾಹಿತಿ ಸಂಗ್ರಹಿಸಿರುವ ಅವರು ಈ ಹಕ್ಕಿಯ ಹೆಸರು ನವರಂಗಿ ಎಂದೂ, ಹಿಮಾಲಯದಿಂದ ಬಂದಿರುವುದಾಗಿ ಹೇಳಿದ್ದಾರೆ.

ಇಂಡಿಯನ್ ಪಿಟ್ಟಾ ಎಂಬ ಹೆಸರು ಇದಕ್ಕಿದೆ. ಪಿಟ್ಟ ಬ್ರಾಚಿಯುರಾ ವರ್ಗಕ್ಕೆ ಸೇರಿರುವ ಇದು ಮೈನಾ ಹಕ್ಕಿಯ ಗಾತ್ರವನ್ನು ಹೊಂದಿದೆ. ಬೆನ್ನಮೇಲೆ ಹಸಿರು, ನೀಲಿ, ಕಂದು, ಕಪ್ಪು ವರ್ಣ ಇದರದ್ದಾಗಿದೆ. ತಳಭಾಗದಲ್ಲಿ ಹಳದಿ, ಕೆಂಪು, ಕಿತ್ತಲೆ, ವರ್ಣ ಹೊಂದಿದ್ದರೆ ಕತ್ತು ಬಿಳಿಯಾಗಿದೆ. ಕಣ್ಣಬಳಿ ಕಪ್ಪುರೇಖೆ ಇದೆ. ಕಾಲು ಗುಲಾಬಿ ವರ್ಣವಿದೆ.

ಸುಮಾರು ಒಂಬತ್ತು ಬಣ್ಣವನ್ನು ತನ್ನ ಮೈಮೇಲೆ ಎಳೆದುಕೊಂಡಿರುವ ಇವು ಬೆಳಗ್ಗೆಯಾಗುತ್ತಿದ್ದಂತೆಯೇ ಗೂಡು ಬಿಟ್ಟು ಬಂದರೆ ಸಂಜೆ 6 ಗಂಟೆಗೆಲ್ಲ ಮತ್ತೆ ಗೂಡು ಸೇರುತ್ತವೆ. ಸಮಯಪಾಲನೆ ಮಾಡುವುದರಲ್ಲಿ ಇವುಗಳದು ಎತ್ತಿದಕೈ. ಸಂಜೆ 6 ಗಂಟೆಗೆ ಗುಂಪು ಸೇರಿ ಮರಗಳಲ್ಲಿ ವಾಸ್ತವ್ಯ ಹೂಡುತ್ತವೆ. ಹೀಗಾಗಿ ಇವುಗಳಿಗೆ 'ಸಿಕ್ಸ್ ವೋ ಕ್ಲಾಕ್' ಬರ್ಡ್ ಎಂಬ ಅನ್ವರ್ಥ ನಾಮ ಇದೆ.

ಹಿಮಾಲಯ ಪರ್ವತ ಪ್ರದೇಶ, ಈಶಾನ್ಯ ಭಾರತದಲ್ಲಿ ಇವು ಕಂಡು ಬರುತ್ತವೆ. ಚಳಿಗಾಲದಲ್ಲಿ ದಕ್ಷಿಣಭಾರತದ ಕಡೆ ವಲಸೆ ಬರುವ ಇವು, ಮೇ ನಂತರ ತವರಿಗೆ ಮರಳಿ ಜೂನ್- ಅಕ್ಟೋಬರ್ ನಲ್ಲಿ ಹಿಮಾಲಯದಲ್ಲಿ ಸಂತಾನೋತ್ಪತ್ತಿಯಲ್ಲಿ ತೊಡಗುತ್ತವೆ.

ನೆಲ ಅಥವಾ ಮರಗಿಡಗಳ ಕೆಳಗಿನ ಕೊಂಬೆಗಳಲ್ಲಿ ಗೂಡುಮಾಡಿ ನಾಲ್ಕೈದು ಮೊಟೆಯಿಟ್ಟು ಮರಿಮಾಡುತ್ತವೆ. ಒಂದಷ್ಟು ದೂರ ಕುಪ್ಪಳಿಸಿ. ಮತ್ತೊಂದಷ್ಟು ದೂರ ಹಾರಾಡಿ ಆಹಾರ ಸಂಗ್ರಹಿಸುತ್ತವೆ. ಒಟ್ಟಾರೆ ಇವು ನಿರುಪದ್ರವಿಯಾಗಿದ್ದು, ಅಳಿವಿನಂಚಿನಲ್ಲಿವೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Indian Pitta or well known as Navrang bird has appeared in Gundlupet taluk in Mysuru. This migratory bird has come from Himalaya. These beautiful birds migrate during winter. It is a pleasure to watch this bird also known as 6 o' clock bird. Photographers Madhu and Chidananda have clicked this little bird.
Please Wait while comments are loading...