ನಿಮ್ಮ ಒಡವೆ ಎಗರಿಸಿದ್ದು ಇವನೇನಾ? ವಸಿ ನೋಡಿ!

Posted By:
Subscribe to Oneindia Kannada

ಮೈಸೂರು, ಜೂನ್ 22 : ಮಹಿಳೆಯರೇ, ನೀವು ಯಾವತ್ತಾದರೂ ಚಿನ್ನದ ಒಡವೆಗಳನ್ನು ಪಾಲಿಶ್ ಮಾಡಲು ನೀಡಿ ಮೋಸ ಹೋಗಿದ್ದೀರಾ? ಅಥವಾ ಪಾಲಿಶ್ ನೆಪದಲ್ಲಿ ನಿಮ್ಮ ಚಿನ್ನದ ಒಡವೆಗಳನ್ನು ಎಗರಿಸಿಕೊಂಡು ಪರಾರಿಯಾಗಿದ್ದಾರಾ?

ಒಂದು ವೇಳೆ ನಿಮಗೆ ಇಂತಹ ಅನುಭವ ಆಗಿದ್ದರೆ ಇದೀಗ ಸಿಕ್ಕಿಬಿದ್ದಿರುವ ಕಳ್ಳನನ್ನು ದಿಟ್ಟಿಸಿ ನೋಡಿ, ಮೋಸ ಮಾಡಿದವನು ಇವನೇನಾ ಅಂತ ಯೋಚನೆ ಮಾಡಿ. ಆಭರಣಗಳೊಂದಿಗೆ ಪರಾರಿಯಾಗುತ್ತಿದ್ದ ಈ ಕಳ್ಳರನ್ನು ಗ್ರಾಮಸ್ಥರೇ ಹಿಡಿದು ಹುಣಸೂರು ಪೊಲೀಸರಿಗೆ ಒಪ್ಪಿಸಿದ್ದಾರೆ.

ಒಬ್ಬ ಮನೆಗೆ ಬಂದು ನಿಮ್ಮ ಚಿನ್ನದ ಒಡವೆ ಕೊಡಿ ಪಾಲಿಶ್ ಮಾಡಿಕೊಡುತ್ತೇವೆ ಎನ್ನುತ್ತಾ ಮಹಿಳೆಯರನ್ನು ನಂಬಿಸಿ, ಒಡವೆಗಳನ್ನು ಕೈಯಲ್ಲಿಡಿದು ಪಾಲಿಶ್ ಮಾಡುವಂತೆ ನಟನೆ ಮಾಡುತ್ತಿದ್ದಂತೆಯೇ ಮತ್ತೊಬ್ಬ ಬೈಕ್‌ನಲ್ಲಿ ಬರುತ್ತಾನೆ. ತಕ್ಷಣ ಪಾಲಿಶ್ ಮಾಡುತ್ತೇನೆಂದು ಚಿನ್ನಾಭರಣ ಪಡೆದ ವ್ಯಕ್ತಿ ಕ್ಷಣ ಮಾತ್ರದಲ್ಲಿ ಆ ಬೈಕ್‌ನ್ನೇರಿ ಮಾಯವಾಗಿ ಬಿಡುತ್ತಾನೆ. [ಎಲ್ಲ ಚಿನ್ನಾಭರಣಗಳಿಗೂ ಹಾಲ್ ಮಾರ್ಕ್ ಕಡ್ಡಾಯ]

Hunsur villagers catch cheater who used to dupe women of gold

ಗಂಡಸರಿಲ್ಲದ ಸಮಯದಲ್ಲಿ ಹೀಗೆ ಅದೆಷ್ಟು ಮಹಿಳೆಯರಿಗೆ ಮೋಸ ಮಾಡಿದ್ದರೋ? ಈ ಖದೀಮರು ಇದೀಗ ಹುಣಸೂರು ವ್ಯಾಪ್ತಿಯಲ್ಲಿ ಸಿಕ್ಕಿಬಿದ್ದಿದ್ದಾರೆ. ಪಾಲಿಶ್ ಮಾಡುವ ನೆಪದಲ್ಲಿ ಚಿನ್ನಾಭರಣ ಎಗರಿಸುತ್ತಿದ್ದವರ ಪೈಕಿ ಒಬ್ಬನ ಹೆಸರು ಸಮೀರ್ ಗುಪ್ತಾ. ಈತ ಒರಿಸ್ಸಾ ಮೂಲದವನು.

ಸೊಸೆಯರಿಗೆ ಚಳ್ಳೆಹಣ್ಣು ತಿನ್ನಿಸಿದ್ದ ಖದೀಮ : ಹುಣಸೂರು ಬಳಿಯ ಎಮ್ಮೆಕೊಪ್ಪಲು ಗ್ರಾಮಕ್ಕೆ ಬಂದ ಸಮೀರ್‌ ಗುಪ್ತಾ, ಗ್ರಾಮದ ನಿವಾಸಿ ದೇವರಸೆಗೌಡರ ಸೊಸೆಯಂದಿರಾದ ಅನುಪಮಾ ಶಂಕರ್, ಅರ್ಚನಾ ಮಹದೇವ್ ಅವರಿಗೆ ಒಡವೆ ಪಾಲಿಶ್ ಮಾಡುವುದಾಗಿ ಹೇಳಿದ್ದಾನೆ. ವಂಚನೆಯ ಬಗ್ಗೆ ತಿಳಿಯದ ಅವರು ಪಾಲಿಶ್ ಮಾಡಲು ಕೈ ಕುತ್ತಿಗೆಯಲ್ಲಿದ್ದ ಚಿನ್ನದ ಒಡವೆಗಳನ್ನು ಬಿಚ್ಚಿಕೊಟ್ಟಿದ್ದಾರೆ.

ಅದನ್ನು ಪಡೆದ ಆತ ಪಾಲಿಶ್ ಮಾಡಲು ಮುಂದಾಗುತ್ತಿದ್ದಂತೆಯೇ ಕೆ.ಎ-02 ಎಚ್.ಜಿ- 6536 ನಂಬರಿನ ಕಪ್ಪು ಬಣ್ಣದ ಪಲ್ಸರ್ ಬೈಕ್‌ನಲ್ಲಿ ಮತ್ತೊಬ್ಬ ಯುವಕ ಬಂದಿದ್ದು, ಕ್ಷಣ ಮಾತ್ರದಲ್ಲಿ ಪಾಲಿಶ್ ಮಾಡುತ್ತಿದ್ದ ಸಮೀರ್ ಗುಪ್ತಾ ಆ ಬೈಕನ್ನೇರಿ ಪರಾರಿಯಾಗಿದ್ದಾನೆ. [ಡ್ರೈವಿಂಗ್ ಕಲಿಸಿದ ಯುವಕನೇ ಸುಂದರಿಯ ಹಂತಕ]

ಸಿಕ್ಕಿಬಿದ್ದರು ಕಳ್ಳರು : ಕ್ಷಣ ಮಾತ್ರದಲ್ಲಿ ನಡೆದ ಘಟನೆಯಿಂದ ವಿಚಲಿತರಾದ ಮಹಿಳೆಯರು ಸಹಾಯಕ್ಕಾಗಿ ಕೂಗಿದ್ದಾರೆ. ತಕ್ಷಣ ಸುತ್ತಮುತ್ತ ಇದ್ದವರು ಕಳ್ಳರನ್ನು ಹಿಡಿಯಲು ಹಿಂಬಾಲಿಸಿ ಹೋಗಿದ್ದಾರೆ. ಪರಾರಿಯಾಗಲು ವೇಗವಾಗಿ ಬೈಕ್‌ನಲ್ಲಿ ಹೋಗುತ್ತಿದ್ದವರು ಹುಣಸೂರು ಮುಖ್ಯ ರಸ್ತೆಗೆ ಬಂದಾಗ ಹುಣಸೂರು ಕಡೆಯಿಂದ ಮೈಸೂರಿಗೆ ಹೋಗುತ್ತಿದ್ದ ಕಾರು(ಕೆ.ಎ-09 ಡಿ 7568)ಗೆ ಡಿಕ್ಕಿ ಹೊಡೆದು ನಿಯಂತ್ರಣ ತಪ್ಪಿ ನೆಲಕ್ಕೆ ಬಿದ್ದಿದ್ದಾರೆ.

ತಕ್ಷಣ ಅಲ್ಲಿಗೆ ಬಂದ ಗ್ರಾಮಸ್ಥರು ಅವರನ್ನು ಹಿಡಿದು ಬಿಳಿಕೆರೆ ಪೊಲೀಸ್ ಠಾಣೆಗೆ ಒಪ್ಪಿಸಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ವಿಚಾರಣೆ ನಡೆಸುತ್ತಿದ್ದು, ಎಲ್ಲೆಲ್ಲಿ ಯಾರ‍್ಯಾರಿಗೆ ವಂಚಿಸಿ ಚಿನ್ನಾಭರಣ ದೋಚಿದ್ದಾರೆ ಎನ್ನುವುದು ಇನ್ನಷ್ಟೆ ಬೆಳಕಿಗೆ ಬರಬೇಕಾಗಿದೆ. [ಹೆಣ್ಣಿನ ಆಶೆಗೆ ಬಿದ್ದವರನ್ನು ಏನು ಮಾಡ್ತಿದ್ದರು ಗೊತ್ತಾ?]

ಯಾಕೀ ಬಂಗಾರದ ಮೋಹ? : ಈ ಮಹಿಳೆಯರಿಗೆ ಹೊಳೆಯುವ ಚಿನ್ನವೆಂದರೆ ಅದೇನು ಹುಚ್ಚೋ? ಇಂಥ ಹಲವಾರು ಮೋಸದ ಘಟನೆಗಳು ನಡೆಯುತ್ತಿದ್ದರೂ ಬಂಗಾರದ ಮೋಹದಲ್ಲಿ ಬಿದ್ದವರು ಇನ್ನೂ ಎಚ್ಚೆತ್ತುಕೊಂಡಿಲ್ಲ. ಮಹಿಳೆಯರೇ, ಇನ್ನಾದರೂ ಎಚ್ಚೆತ್ತುಕೊಳ್ಳಿ! ಮೋಸ ಹೋಗುವವರ ಬಲೆಗೆ ಬೀಳಬೇಡಿ, ಎಲ್ಲಕ್ಕಿಂತ ಹೆಚ್ಚಾಗಿ ಬಂಗಾರದ ಮೋಹಕ್ಕೆ ಬೀಳಬೇಡಿ!

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ - ನೋಂದಣಿ ಉಚಿತ!

English summary
Have a look at this person. Is he the one who ran away with your golden ornaments in the pretext of polishing it? Villagers of Hunsur in Mysuru district have caught a person who used to dupe women and ran away with booty.
Please Wait while comments are loading...