ಮೈಸೂರು : ಕಟ್ಟೆಮಳಲವಾಡಿ ಸಿಡಿ ಉತ್ಸವಕ್ಕೆ ಸಾಕ್ಷಿಯಾದ ಭಕ್ತರು

By: ಮೈಸೂರು ಪ್ರತಿನಿಧಿ
Subscribe to Oneindia Kannada

ಮೈಸೂರು, ಏಪ್ರಿಲ್ 26 : ಹುಣಸೂರು ತಾಲೂಕಿನ ಕಟ್ಟೆಮಳಲವಾಡಿಯಲ್ಲಿ ನಡೆದ ಗ್ರಾಮ ದೇವತೆ ಶ್ರೀ ಸಿಡಿಯಮ್ಮನ ಸಿಡಿ ಉತ್ಸವಕ್ಕೆ ಲಕ್ಷಾಂತರ ಭಕ್ತರು ಸಾಕ್ಷಿಯಾದರು. ಮೈಸೂರು ಭಾಗದಲ್ಲಿ ನಡೆಯುವ ಸಿಡಿ ಉತ್ಸವದಲ್ಲಿ ಕಟ್ಟೆಮಳಲವಾಡಿಯ ಸಿಡಿ ಉತ್ಸವಕ್ಕೆ ತನ್ನದೇ ಆದ ಇತಿಹಾಸವಿದೆ.

ಕಟ್ಟೆಮಳಲವಾಡಿ ಗ್ರಾಮಸ್ಥರು ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳಿಂದ ಆಗಮಿಸಿದ್ದ ಸಹಸ್ರಾರು ಭಕ್ತರು ಗ್ರಾಮದೇವತೆ ಶ್ರೀ ಸಿಡಿಯಮ್ಮನ ಉತ್ಸವದಲ್ಲಿ ಜೀವಂತ ಕೋಳಿ, ಹಣ್ಣು ಎಸೆದರೆ, ಕೆಲವು ಭಕ್ತರು ತಾವು ಮಾಡಿಕೊಂಡ ಹರಕೆಯಂತೆ ಕುರಿ, ಆಡು, ಕೋಳಿಗಳನ್ನು ಬಲಿಕೊಟ್ಟರು. [ಜಾತ್ರೆಗಳ ಸಂಭ್ರಮದಲ್ಲಿ ಮೈಸೂರು, ಅಬ್ಬಬ್ಬಾ ಜನವೋ ಜನ!]

sidi habba

ಮೈಸೂರು ಭಾಗದಲ್ಲಿ ನಡೆಯುವ ಸಿಡಿ ಉತ್ಸವದಲ್ಲಿ ಕಟ್ಟೆಮಳಲವಾಡಿಯ ಸಿಡಿ ಉತ್ಸವಕ್ಕೆ ತನ್ನದೇ ಆದ ಇತಿಹಾಸ, ಸಂಪ್ರದಾಯವಿದೆ. ಹಿಂದಿನ ಕಾಲದಿಂದಲೂ ಇದನ್ನು ಚಾಚೂ ತಪ್ಪದೆ ನಡೆಸಿಕೊಂಡು ಬರಲಾಗುತ್ತಿದೆ. [ಚಾಮರಾಜನಗರದ ಕಾಡಂಚಿನಲ್ಲೊಂದು ರೊಟ್ಟಿ ಹಬ್ಬ!]

ಮರೂರು, ಕಟ್ಟೆಮಳಲವಾಡಿ ಕೊಪ್ಪಲು, ಕಲ್ಕುಣಿಕೆ, ಕಟ್ಟೆಮಳಲವಾಡಿ ಗ್ರಾಮದಿಂದ ಆಗಮಿಸುವ ದೇವರುಗಳಿಗೆ ಮಧ್ಯಾಹ್ನ 3 ಗಂಟೆಯ ಸಮಯದಲ್ಲಿ ಲಕ್ಷ್ಮಣ ತೀರ್ಥ ನದಿಯಲ್ಲಿ ಸ್ನಾನ ಮಾಡಿಸಿ, ಪೂಜೆಸಲ್ಲಿಸಲಾಗುತ್ತದೆ. [ಪ್ರತಿ ಶವಸಂಸ್ಕಾರಕ್ಕೆ ಹಾಜರಾಗುವ ಮೇಕೆಯ ವಿಶಿಷ್ಟ ಕಥೆ]

ಆ ನಂತರ ಮಂಗಳ ವಾದ್ಯಗಳ ಸಮೇತ ವೆಂಕಟರಮಣ ಸ್ವಾಮಿ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿ, ಗ್ರಾಮದ ಎಲ್ಲ ಸಮುದಾಯದಿಂದ ಪಡಿ ಎತ್ತಿದ ಅಕ್ಕಿಯಲ್ಲಿ ದೇವಸ್ಥಾನದ ಪೂಜಾರಿ ಮನೆತನದವರು ತಯಾರಿಸಿದ ಮಡೆ ಅನ್ನವನ್ನು ದೇವರುಗಳು ಹೊತ್ತು ಸಿಡಿ ಆಡುವ ಸ್ಥಳಕ್ಕೆ ತಂದು ಪೂಜೆ ಮಾಡಲಾಗುತ್ತದೆ. [ಮೈಸೂರಿನ ರಸ್ತೆ ಬದಿಯಲ್ಲೇ ಮಾವಿನಸಂತೆ..]

ಪೂಜೆ ಮುಗಿದ ಬಳಿಕ ಮಡೆ ಅನ್ನ ಎರಚಲಾಗುತ್ತದೆ. ಇದು ಮುಗಿಯುತ್ತಿದ್ದಂತೆಯೇ ಮೊದಲೇ ಸಿದ್ಧಗೊಂಡಿದ್ದ ಸಿಡಿ ಮರವನ್ನು ಕಟ್ಟೆಮಳವಾಡಿ ಸಿಡಿಯಮ್ಮ, ದರಳಮ್ಮ, ಕೊಪ್ಪಲು ಗ್ರಾಮದ ಬೆಟ್ಟದ ಚಿಕ್ಕಮ್ಮ, ಮರೂರು ಗ್ರಾಮದ ಆಂಜನೇಯ, ಕಲ್ಕುಣಿಕೆಯ ಪಟ್ಲದಮ್ಮ, ಹೀಗೆ ಸುಮಾರು 5 ದೇವರುಗಳು ಏರಿ ಒಂದೊಂದು ಸುತ್ತು ತಿರುಗುವುದು ಸಂಪ್ರದಾಯ.

ದೇವರು ಸಿಡಿರಥ ಏರುತ್ತಿದ್ದಂತೆಯೇ ನೆರೆದಿದ್ದ ಭಕ್ತರು ದೇವರಿಗೆ ಹಾಕುವ ಜೈಕಾರ ಮುಗಿಲು ಮುಟ್ಟುತ್ತದೆ. ನವದಂಪತಿಗಳು, ಭಕ್ತರು, ಜನಪ್ರತಿನಿಧಿಗಳು ಹಣ್ಣು, ಜೀವಂತ ಕೋಳಿಗಳನ್ನು ಸಿಡಿ ರಥಕ್ಕೆ ಎಸೆದು ದೇವರ ಕೃಪೆಗೆ ಪಾತ್ರರಾಗುತ್ತಾರೆ.

ವರ್ಷಕ್ಕೊಮ್ಮೆ ನಡೆಯುವ ಜಾತ್ರೆಯಲ್ಲಿ ಮೈಸೂರು ಕೊಡಗು ಸಂಸದ ಪ್ರತಾಪ್ ಸಿಂಹ, ಶಾಸಕ ಹೆಚ್.ಪಿ ಮಂಜುನಾಥ್, ಇಒ ಕೃಷ್ಣಕುಮಾರ್, ಜಿಲ್ಲಾ ಪಂಚಾಯ್ತಿ ಸದಸ್ಯೆ ಸಾವಿತ್ರಮ್ಮ ಸೇರಿದಂತೆ ಹಲವು ಗಣ್ಯರು ಪಾಲ್ಗೊಂಡಿದ್ದರು.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ - ನೋಂದಣಿ ಉಚಿತ!

English summary
Thousands of devotees witnessed the sidi habba at Kattemalalavadi village of Hunsur taluk Mysuru district.
Please Wait while comments are loading...