ಸಿದ್ದರಾಮಯ್ಯ ಸೋಲಿಸಲು ರಾಜ್ಯದ ಜನರು ಸಾಕು : ಎಚ್ಡಿಕೆ

Posted By: Gururaj
Subscribe to Oneindia Kannada

ಮೈಸೂರು, ನವೆಂಬರ್ 07 : 'ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇಂದು ಚುನಾವಣೆ ನಡೆಸಲಿ. ಕರ್ನಾಟಕ ಯಾವ ಪಕ್ಷಗಳೂ ಒಂದಾಗುವುದು ಬೇಡ, ರಾಜ್ಯದ ಜನರು ಅವರನ್ನು ಸೋಲಿಸುತ್ತಾರೆ' ಎಂದು ಮಾಜಿ ಮುಖ್ಯಮಂತ್ರಿ, ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ಹೇಳಿದರು.

ಚಿತ್ರಗಳು : ಕುಮಾರಸ್ವಾಮಿಯ ವಿಕಾಸ ವಾಹಿನಿ ಯಾತ್ರೆ ಆರಂಭ

ಮೈಸೂರಿನ ಚಾಮುಂಡೇಶ್ವರಿ ಕ್ಷೇತ್ರದ ಲಿಂಗದೇವರಕೊಪ್ಪ ಮೈದಾನದಲ್ಲಿ ಮಂಗಳವಾರ 'ಕುಮಾರಪರ್ವ 2018' ರಾಜ್ಯ ಪ್ರವಾಸಕ್ಕೆ ಚಾಲನೆ ನೀಡಿದ ಕುಮಾರಸ್ವಾಮಿ ಅವರು ಬೃಹತ್ ಸಮಾವೇಶ ಉದ್ದೇಶಿಸಿ ಮಾತನಾಡಿದರು.

ಕುಮಾರಸ್ವಾಮಿ ರಾಜ್ಯ ಪ್ರವಾಸದ ಬಸ್ ವಿಶೇಷತೆಗಳು

HD Kumaraswamy address Kumaraparva yatra in Mysuru

ಚಾಮುಂಡಿ ಸನ್ನಿಧಿಯಲ್ಲಿ 'ಕುಮಾರಪರ್ವ'ಕ್ಕೆ ಮುನ್ನುಡಿ ಬರೆದ ಜೆಡಿಎಸ್

ಸಮಾವೇಶದಲ್ಲಿ ಕುಮಾರಸ್ವಾಮಿ ಹೇಳಿದ್ದೇನು?

* ನಾಡ ದೇವತೆ ಚಾಮುಂಡೇಶ್ವರಿ ದರ್ಶನ ಪಡೆದು ರಾಜ್ಯ ಪ್ರವಾಸ ಆರಂಭಿಸಿದ್ದೇವೆ. ರಾಜ್ಯದ ಸಮಸ್ಯೆಗಳ ಬಗ್ಗೆ ಬೆಳಕು ಚೆಲ್ಲುವುದು ನಮ್ಮ ರಾಜ್ಯ ಪ್ರವಾಸದ ಉದ್ದೇಶ. ರಾಜ್ಯದ ಪ್ರತಿ ವಿಧಾನಸಭಾ ಕ್ಷೇತ್ರಕ್ಕೆ ಬರುತ್ತೇನೆ. ಕಾರ್ಯಕರ್ತರಿಗೆ ಶಕ್ತಿ ತುಂಬುತ್ತೇನೆ. ಎಲ್ಲರೂ ಒಟ್ಟಾಗಿ ಚುನಾವಣೆಯನ್ನು ಎದುರಿಸೋಣ

* ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಸಿದ್ದರಾಮಯ್ಯ ನಗಣ್ಯ. ಸಿದ್ದರಾಮಯ್ಯ ಅವರ ಮುಂದೆ ಶಕ್ತಿ ಪ್ರದರ್ಶನ ಮಾಡಲು ಕ್ಷೇತ್ರದಲ್ಲಿ ಸಮಾವೇಶ ನಡೆಸಿ, ಪ್ರಚಾರ ಆರಂಭಮಾಡುತ್ತಿಲ್ಲ. ನಮ್ಮ ಮೇಲೆ ಜನರು ಇಟ್ಟ ನಂಬಿಕೆಗಾಗಿ ಇಲ್ಲಿ ಸಮಾವೇಶ ಮಾಡುತ್ತಿದ್ದೇವೆ.

HD Kumaraswamy address Kumaraparva yatra in Mysuru

* ಎರಡೂ ರಾಷ್ಟ್ರೀಯ ಪಕ್ಷಗಳಿಗೆ ರಾಜ್ಯದ ಜನರು ಅವಕಾಶ ಕೊಟ್ಟು ನೋಡಿದ್ದಾರೆ. ಆದರೆ, ಯಾರೂ ರಾಜ್ಯದ ಜನರ ಹಿತ ಕಾಪಾಡಿಲ್ಲ. ರೈತರ ನೆರವಿಗೆ ಧಾವಿಸಿಲ್ಲ. ಆದ್ದರಿಂದ, ಈ ಬಾರಿ ಜೆಡಿಎಸ್‌ ಪಕ್ಷಕ್ಕೆ ಜನರು ಬೆಂಬಲ ನೀಡಲಿದ್ದಾರೆ.

* ಮಾತನಾಡಿದರೆ ನಾನು ರೈತರ ಮಗ, ಕುರಿ ಕಾದಿದ್ದೇನೆ ಎಂದು ಸಿದ್ದರಾಮಯ್ಯ ಹೇಳುತ್ತಾರೆ. ಆದರೆ, ರೈತರ ಆತ್ಮಹತ್ಯೆ ತಡೆಯಲು ಮುಂದಾಗುತ್ತಿಲ್ಲ. ರೈತರ ಸಾಲ ಮನ್ನಾ ಮಾಡುತ್ತಿಲ್ಲ. ಸಾಲ ಮನ್ನಾ ಮಾಡಿ ಎಂದರೆ ಬಿಜೆಪಿ ನಾಯಕರ ಕಡೆ ಕೈ ತೋರಿಸಿ, ಕೇಂದ್ರ ಸರ್ಕಾರಕ್ಕೆ ಹೇಳಿ ಎನ್ನುತ್ತಾರೆ.

* ಈ ವೇದಿಕೆ ಮೇಲಿನಿಂದ ರಾಜ್ಯದ ಜನರಿಗೆ ಮನವಿ ಮಾಡುತ್ತೇನೆ. ಬಿಜೆಪಿ, ಕಾಂಗ್ರೆಸ್ ಪಕ್ಷಕ್ಕೆ 5 ವರ್ಷ ಅವಕಾಶ ನೀಡಿದ್ದೀರಿ. ನಿಮ್ಮ ಒಳತಿಗಾಗಿ ನಮಗೆ ಒಂದು ಬಾರಿ ಅವಕಾಶ ಕೊಡಿ

* ಮುಖ್ಯಮಂತ್ರಿಯಾಗಿ ನನ್ನ 20 ತಿಂಗಳ ಆಡಳಿತ ಕೇಲವ ಟ್ರೈಲರ್. ಸಿನಿಮಾ ಬಿಡುಗಡೆಗೂ ಮುನ್ನ ಬರುವ ಟ್ರೈಲರ್. ನಮಗೆ ಒಂದು ಬಾರಿ ಅವಕಾಶ ನೀಡಿ. ಮುಂದಿನ ಚುನಾವಣೆಯಲ್ಲಿ ಜೆಡಿಎಸ್ ಪಕ್ಷವನ್ನು ಬೆಂಬಲಿಸಿ ಎಂದರು

* ಎಸ್.ಎಂ.ಕೃಷ್ಣ ಅವರನ್ನು ಬಿಜೆಪಿಗೆ, ಎಚ್.ವಿಶ್ವನಾಥ್ ಅವರನ್ನು ಜೆಡಿಎಸ್‌ ಪಕ್ಷಕ್ಕೆ ಕಳುಹಿಸಿದ್ದು ಸಿದ್ದರಾಮಯ್ಯ ಅವರ ಸಾಧನೆ. ಎಚ್.ವಿಶ್ವನಾಥ್ ಅವರಿಗೆ ಸಿದ್ದರಾಮಯ್ಯ ಎಷ್ಟು ಕಷ್ಟ ಕೊಟ್ಟರು ಎಂಬುದನ್ನು ಅವರನ್ನೇ ಕೇಳಿ.

* ಸಿದ್ದರಾಮಯ್ಯ ಅವರು ನಾನೇ ಮುಂದಿನ ಮುಖ್ಯಮಂತ್ರಿ, ದಸರಾ, ಚಾಮುಂಡಿ ಉತ್ಸವವನ್ನು ನಾನೇ ಉದ್ಘಾಟಿಸುತ್ತೇನೆ ಎಂದು ಹೇಳುತ್ತಾರೆ. ಯಾವ ಪುರುಶಾರ್ಥಕ್ಕೆ ಮುಂದಿನ ಮುಖ್ಯಂಮತ್ರಿ ಯಾಗುತ್ತೀರಿ? ಎಂದು ಕುಮಾರಸ್ವಾಮಿ ಪ್ರಶ್ನಿಸಿದರು.

* ಜೆಡಿಎಸ್ ಬಿಟ್ಟು ಹೋದ ಸಿದ್ದರಾಮಯ್ಯ ಅವರು ದೇವೇಗೌಡರಿಗೆ ದ್ರೋಹ ಮಾಡಲಿಲ್ಲ. ಅವರನ್ನು ಬೆಳೆಸಿದ ಲಕ್ಷಾಂತರ ಕಾರ್ಯಕರ್ತರಿಗೆ ದ್ರೋಹ ಮಾಡಿದರು. ಕಾರ್ಯಕರ್ತರೇ ಮುಂದಿನ ಚುನಾವಣೆಯಲ್ಲಿ ಸಿದ್ದರಾಮಯ್ಯ ಅವರಿಗೆ ತಕ್ಕ ಪಾಠ ಕಲಿಸುತ್ತಾರೆ.

* ರಾಜ್ಯದ ಜನರು ಸಂಕಷ್ಟವನ್ನು, ರೈತರ ಗೋಳನ್ನು ದೇವೇಗೌಡರು ನೋಡುತ್ತಿದ್ದಾರೆ. ಮೆಕ್ಕೆಜೋಳಕ್ಕೆ ಸೈನಿಕ ಹುಳುಗಳ ಹಾವಳಿ ಹೆಚ್ಚಾದಾಗ ಅನಾರೋಗ್ಯವನ್ನು ಬದಿಗೊತ್ತಿ ದೇವೇಗೌಡರು ರಾಜ್ಯ ಪ್ರವಾಸ ಮಾಡಿದರು. ರೈತರ ಸಂಕಷ್ಟವನ್ನು ಬಗೆಹರಿಸಿ ಎಂದು ರಾಜ್ಯ ಸರ್ಕಾರಕ್ಕೆ ಪತ್ರ ಬರೆದರು. ಪ್ರಧಾನಿಗಳನ್ನು ಭೇಟಿ ಮಾಡಿದರು.

* ಎರಡು ತಿಂಗಳಿನಿಂದ ಶ್ರಮಪಟ್ಟರೂ ಬಿಜೆಪಿಯ ಸಮಾವೇಶಕ್ಕೆ ಜನರು ಸೇರಲಿಲ್ಲ. ಚಾಮುಂಡೇಶ್ವರಿ ಕ್ಷೇತ್ರದಲ್ಲಿಇಷ್ಟೊಂದು ಜನರು ಸೇರಿದ್ದಾರೆ. ಬಿಜೆಪಿಯ ಮಾತಿಗೆ ಮರುಳಾಗಬೇಡಿ. ಮೋದಿಯ ಹಿಂದಿ ಭಾಷಣ ಕೇಳಿ ಚಪ್ಪಾಳೆ ಹೊಡೆಯಬೇಡಿ ಎಂದರು.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
JDS president HD Kumaraswamy address Kumaraparva yatra in Mysuru. November 7, 2017 in the yatra JDS kick start the party's election campaign for 2018 assembly elections.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ