ಸಿಯಾಚಿನ್ ಹೀರೋ ಮಹೇಶ್ ಪಾರ್ಥಿವ ಶರೀರ ಯಾವಾಗ ಬರುತ್ತೆ?

By: ಮೈಸೂರು ಪ್ರತಿನಿಧಿ
Subscribe to Oneindia Kannada

ಮೈಸೂರು, ಫೆಬ್ರವರಿ 12 : ಒಂದು ಕಡೆ ವೀರಯೋಧ ಹನುಮಂತಪ್ಪ ಕೊಪ್ಪದ ಅವರ ಅಂತ್ಯಕ್ರಿಯೆ ಹುಟ್ಟೂರು ಧಾರವಾಡ ಜಿಲ್ಲೆಯ ಕುಂದಗೊಳ ತಾಲೂಕಿನ ಬೆಟದೂರಿನಲ್ಲಿ ಜನಸಾಗರದ ನಡುವೆ ಸಕಲ ಸರ್ಕಾರಿ ಗೌರವದೊಂದಿಗೆ ಅಂತ್ಯಕ್ರಿಯೆ ನಡೆಯುತ್ತಿದ್ದರೆ, ಇತ್ತ ಮೈಸೂರು ಜಿಲ್ಲೆಯ ಕೆ.ಆರ್.ನಗರದ ಪಶುಪತಿ ಗ್ರಾಮದಲ್ಲಿ ಹನುಮಂತಪ್ಪ ಕೊಪ್ಪದ ಅವರೊಂದಿಗೆ ಸಿಯಾಚಿನ್‌ನಲ್ಲಿ ಹುತಾತ್ಮನಾದ ಯೋಧ ಪಿ.ಎನ್.ಮಹೇಶ್ ಅವರ ಸಂಬಂಧಿಕರು ಪಾರ್ಥಿವ ಶರೀರದ ಆಗಮನದ ನಿರೀಕ್ಷೆಯಲ್ಲಿ ಅನ್ನ ನೀರು ಬಿಟ್ಟು ಕಾಯುತ್ತಿದ್ದಾರೆ.

ಹಾಗೆ ನೋಡಿದರೆ ಯೋಧ ಮಹೇಶ್ ಅವರ ತಂದೆ ನಾಗರಾಜ್ ಅವರು ಎಚ್.ಡಿ.ಕೋಟೆಯಲ್ಲಿ ಶಿಕ್ಷಕರಾಗಿದ್ದರಿಂದ ಅಲ್ಲಿಯೇ ನೆಲೆನಿಂತಿದ್ದರು. ಆದರೆ ಅವರು ಮೂಲತಃ ಕೃಷ್ಣರಾಜನಗರ ತಾಲೂಕು ಪಶುಪತಿ ಗ್ರಾಮದವರಾಗಿದ್ದು, ಸ್ವಗ್ರಾಮದಲ್ಲೀಗ ನಿರವಮೌನ ಆವರಿಸಿದ್ದು, ಕುಟುಂಬದ ರೋದನ ಮುಗಿಲು ಮುಟ್ಟಿದೆ.

ಪಾರ್ಥಿವ ಶರೀರ ಇಂದು ಬರುತ್ತೆ, ನಾಳೆ ಬರುತ್ತೆ ಎಂದು ಜನತೆ ಕಾಯುತ್ತಿದ್ದಾರೆ. ಮಗ ಜೀವಂತ ಬರುತ್ತಾನೆ ಎಂದು ನಂಬಿದ್ದ ಕುಟುಂಬಕ್ಕೆ ಸಾವಿನ ಸುದ್ದಿ ಬರಸಿಡಿಲಿಂತೆ ಬಡಿದಿದ್ದು, ಕೊನೆಪಕ್ಷ ಮಗನನ್ನು ಜೀವಂತವಾಗಿ ನೋಡಲಾಗದಿದ್ದರೂ ಪಾರ್ಥಿವ ಶರೀರ ನೋಡಿ ಸಮಾಧಾನ ಪಟ್ಟುಕೊಳ್ಳುತ್ತೇವೆ ಎಂದು ಹೆತ್ತವರು, ಸಂಬಂಧಿಕರು ಕಣ್ಣೀರು ತುಂಬಿಕೊಂಡು ಹೇಳುತ್ತಿದ್ದಾರೆ. [ಹನುಮಂತಪ್ಪ ಅಂತಿಮ ಯಾತ್ರೆ]

HD Kote waiting for Siachen martyr Mahesh body

ಅಂತ್ಯ ಸಂಸ್ಕಾರಕ್ಕೆ ಸಕಲ ಸಿದ್ಧತೆ : ಇಷ್ಟರಲ್ಲೇ ಪಾರ್ಥಿವ ಶರೀರ ಬರುತ್ತದೆ ಎಂಬ ನಿರೀಕ್ಷೆಯಲ್ಲಿರುವ ಕಾರಣ ಹುಟ್ಟೂರು ಪಶುಪತಿ ಗ್ರಾಮದಲ್ಲಿ ತಂದೆಗೆ ಸೇರಿದ ಜಮೀನಿನಲ್ಲಿ ಅಂತ್ಯ ಸಂಸ್ಕಾರಕ್ಕೆ ಸಕಲ ಸಿದ್ದತೆಯನ್ನು ಗ್ರಾಮಸ್ಥರು ಮಾಡಿದ್ದಾರೆ. ಜಮೀನನ್ನು ಸಮತಟ್ಟು ಮಾಡಿ ವಾಹನ ನಿಲುಗಡೆಗೆ ವ್ಯವಸ್ಥೆ ಮಾಡಲಾಗಿದೆ. ಜತೆಗೆ ವೀರಯೋಧನ ಮುಖದರ್ಶನ ಮಾಡಲು ಬರುವ ಜನಕ್ಕೆ ಅನುಕೂಲವಾಗಲು ಎಲ್ಲ ವ್ಯವಸ್ಥೆ ಮಾಡಲಾಗುತ್ತಿದೆ. ಶಾಮಿಯಾನ ಅಳವಡಿಕೆಯನ್ನು ಮಾಡಲಾಗಿದೆ. ಸೇರಿದಂತೆ ನಾನಾ ಸಿದ್ದತಾ ಕಾರ್ಯಗಳನ್ನು ಸಮರೋಪಾದಿಯಲ್ಲಿ ಕೈಗೊಂಡಿದ್ದಾರೆ.

ದೇಶ ಸೇವೆಯಲ್ಲೇ ಪ್ರಾಣ ಬಿಟ್ಟ ಯೋಧನ ಅಂತ್ಯಸಂಸ್ಕಾರ ಮಾಡುವ ಸಂಬಂಧ ಜಿಲ್ಲಾಡಳಿತ ಯಾವುದೇ ಕ್ರಮ ಕೈಗೊಂಡಿಲ್ಲ. ಒಂದಿಬ್ಬರು ಅಧಿಕಾರಿಗಳು ಭೇಟಿ ನೀಡಿದ್ದು ಬಿಟ್ಟರೆ ಇನ್ಯಾವುದೇ ಸೌಲಭ್ಯ ಕಲ್ಪಿಸಿಲ್ಲ. ಜನಪ್ರತಿನಿಧಿಗಳು ಕೂಡ ಸುಳಿದಿಲ್ಲ.

HD Kote waiting for Siachen martyr Mahesh body

ಸಿದ್ದರಾಮಯ್ಯನವರಿಗೇನಾಗಿದೆ? : ವೀರಯೋಧ ಮಹೇಶ್ ಮುಖ್ಯಮಂತ್ರಿ ತವರು ಜಿಲ್ಲೆಯವರಾದರೂ ಇತ್ತ ಸಿದ್ದರಾಮಯ್ಯನವರು ಕುಟುಂಬದವರಿಗೆ ಸಾಂತ್ವನ ಹೇಳಿಲ್ಲ. ಕಳೆದ ಕೆಲದಿನ ಮೈಸೂರಿನಲ್ಲೇ ಇದ್ದರೂ ಯೋಧನ ಮನೆಗೆ ತೆರಳುವ ಯತ್ನ ಮಾಡಿಲ್ಲ. ಉಸ್ತುವಾರಿ ಸಚಿರೂ ತಲೆಹಾಕಿಲ್ಲ. ಎಲ್ಲರೂ ಚುನಾವಣೆ ಗುಂಗಿನಲ್ಲಿರುವ ಕಾರಣ ಯಾರಿಗೂ ಯೋಧನ ಕುಟುಂಬದ ಯೋಗಕ್ಷೇಮ ವಿಚಾರಿಸುವ ಸೌಜನ್ಯ ತೋರಿದಂತೆ ಕಂಡು ಬರುತ್ತಿಲ್ಲ ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ಕರ್ತವ್ಯದಲ್ಲಿದ್ದ ಯೋಧ ಮಹೇಶ್ ನಾಲ್ಕು ತಿಂಗಳ ಹಿಂದೆ ಪಶುಪತಿಗೆ ಗ್ರಾಮಕ್ಕೆ ಬಂದು ಎರಡು ದಿನಗಳ ಕಾಲ ಉಳಿದು ಹೋಗಿದ್ದರು. ಏಪ್ರಿಲ್‌ನಲ್ಲಿ ರಜಾ ಮೇಲೆ ಊರಿಗೆ ಬರುವುದಾಗಿ ಹೇಳಿ ಹೋಗಿದ್ದನ್ನು ಅವರ ದೊಡಪ್ಪ ಬಸಪ್ಪ ನೆನಪಿಸಿಕೊಂಡು ಕಣ್ಣೀರಾಗುತ್ತಿದ್ದಾರೆ.

HD Kote waiting for Siachen martyr Mahesh body

35 ವರ್ಷದ ಹಿಂದೆಯೇ ಕೆಲಸದ ನಿಮಿತ್ತ ಎಚ್.ಡಿ.ಕೋಟೆ ಪಟ್ಟಣದಲ್ಲಿ ನೆಲೆನಿಂತ ನಾಗರಾಜು ಕುಟುಂಬ ಹಬ್ಬಹರಿದಿನದಲ್ಲಿ ಹುಟ್ಟೂರು ಪಶುಪತಿಗೆ ಬರುತಿತ್ತು. ಕೆಲ ವರ್ಷದ ಹಿಂದೆ ಇಹಲೋಕ ತ್ಯಜಿಸಿದ ತಂದೆ ನಾಗರಾಜ್ ಅವರಿಗೆ ನಾಲ್ಕು ಮಂದಿ ಸಹೋದರರು. ನಾಗರಾಜ್ ಅವರಿಗೆ ಸೇರಿದ ಜಮೀನನ್ನು ಸಹೋದರರೆ ನಿರ್ವಹಣೆ ಮಾಡುತ್ತಿದ್ದಾರೆ. ನಾಗರಾಜ್ ಅವರ ಕಿರಿಯ ಮಗನಾದ ಮಹೇಶ್‌ಗೆ ದೇಶಸೇವೆ ಮಾಡಬೇಕೆಂಬುದು ಹೆಬ್ಬಯಕೆ. ಹಾಗಾಗಿ 9 ವರ್ಷದ ಹಿಂದೆ ಯೋಧನಾಗಿ ಸೇನೆಗೆ ಸೇರಿದ್ದನು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Pashupati villagers are waiting for days for the arrival of body of Siachen martyr Mahesh, who died in Siachen on February 3 due to heavy snow storm. Villagers allege Siddaramaiah has not even cared to visit the village, even though the soldier belongs to his district Mysuru.
Please Wait while comments are loading...