ಜಿಎಸ್ ಟಿ ಹೊಡೆತಕ್ಕೆ ಮೈಸೂರ್ ಪಾಕ್ ಸಿಹಿಯಲ್ಲ, ಗೋಡಂಬಿ ರುಚಿಯಲ್ಲ

Posted By:
Subscribe to Oneindia Kannada

ಮೈಸೂರು, ಅಕ್ಟೋಬರ್ 9 : ಮೈಸೂರು ಪಾಕ್ ಎಂಬ ಸೊಗಸಾದ ಸಿಹಿ ತಿನಿಸು ಹುಟ್ಟಿದ ಸ್ಥಳದಲ್ಲೇ ಈಗ ಅದರ ಬೇಡಿಕೆ ಕುಸಿದಿದೆ. ಮಳಿಗೆಯ ಗಾಜಿನ ಪರದೆ ಹಿಂದೆ ವಿರಾಜಮಾನವಾದ ಮೈಸೂರು ಪಾಕ್ ನ ನೋಡಬಹುದೇ ವಿನಾ ಖರೀದಿ ಕಷ್ಟ ಕಷ್ಟ ಎನ್ನುತ್ತಿದ್ದಾರೆ ಗ್ರಾಹಕರು. ವಿಶ್ವದಾದ್ಯಂತ ಮೈಸೂರಿನ ಖ್ಯಾತಿಯನ್ನು ಹಬ್ಬಿಸಿದ ಸಿಹಿ ತಿನಿಸಿಗೆ ಸದ್ಯಕ್ಕೆ ತೆರಿಗೆಯ ಪೆಟ್ಟು ಬಿದ್ದಿದೆ.

ಅಷ್ಟಕ್ಕೂ.. ಮೈಸೂರ್ ಪಾಕ್ ಹೆಸರು ಬದಲಾಯಿಸಿಕೊಂಡಿದ್ದು ಯಾಕೆ?

ಈಗಾಗಲೇ ನೀವು ಊಹಿಸಿದ್ದೀರಿ ಅಂದರೆ, ಹೌದು. ಮೈಸೂರು ಪಾಕ್ ಗೆ ಜಿಎಸ್ ‌ಟಿ (ಸರಕು ಮತ್ತು ಸೇವಾ ತೆರಿಗೆ) ಖಾರವಾಗಿ ಪರಿಣಮಿಸಿದೆ. ಮೈಸೂರು ಪಾಕ್ ನ ಅತಿಯಾಗಿ ಇಷ್ಟಪಡುವ ಗ್ರಾಹಕರು ಬೇಸರದಿಂದ ಅಂಗಡಿಯ ಮುಂದೆ ತಲೆ ತಗ್ಗಿಸಿ ನಡೆದು ಹೋಗುತ್ತಿದ್ದಾರೆ.

ದಸರಾ ಹೊತ್ತಲ್ಲಿ ನೆನೆಯೋಣ ಬಾಯಲ್ಲಿ ನೀರೂರಿಸುವ ಮೈಸೂರು ತಿನಿಸುಗಳ...

ಸಿಹಿ ತಿಂಡಿಗಳಿಗೆ ಶೇ 5, ಖಾರ ತಿಂಡಿಗಳಿಗೆ ಶೇ 12ರಷ್ಟು ತೆರಿಗೆ ವಿಧಿಸಲಾಗುತ್ತಿದೆ. ಇದರ ಪರಿಣಾಮ ಪ್ರತಿ ಪದಾರ್ಥಕ್ಕೂ ಜಿಎಸ್ ಟಿ ಬೀಳುತ್ತದೆ. ಇದನ್ನು ಗ್ರಾಹಕರಿಗೇ ವಿಧಿಸ ಬೇಕಾಗಿದ್ದು, ಮಾರಾಟಕ್ಕೆ ಹೊಡೆತ ಬೀಳುತ್ತಿದೆ ಎಂದು ಅಂಗಡಿ ಮಾಲೀಕರು ಅಲವತ್ತುಕೊಳ್ಳುತ್ತಾರೆ.

ಅಷ್ಟು ತೆರಿಗೆಗೆ ಐವತ್ತು ಗ್ರಾಮ್ ಹೆಚ್ಚು ಬರುತ್ತದೆ

ಅಷ್ಟು ತೆರಿಗೆಗೆ ಐವತ್ತು ಗ್ರಾಮ್ ಹೆಚ್ಚು ಬರುತ್ತದೆ

ಜಿಎಸ್ ಟಿ ಜಾರಿಯಾದ ಮೇಲೆ ಗ್ರಾಹಕರಿಗೆ ಬೀಳುವ ತೆರಿಗೆ ಸ್ಪಷ್ಟವಾಗಿ ಕಾಣುತ್ತದೆ. ಇಷ್ಟು ತೆರಿಗೆ ಹಣದಲ್ಲಿ ಇನ್ನೂ ಐವತ್ತು ಗ್ರಾಮ್ ಹೆಚ್ಚು ಬರುತ್ತದಲ್ಲಾ ಎಂದು ಪ್ರಶ್ನೆ ಮಾಡುತ್ತಾರೆ. ಅಲ್ಲದೆ, ರೈತರ ಕೈಯಲ್ಲಿ ದುಡ್ಡು ಓಡಾಡುತ್ತಿಲ್ಲ. ನಮ್ಮ ಗ್ರಾಹಕರ ಪೈಕಿ ಆ ವರ್ಗದವರೇ ಹೆಚ್ಚು. ಮಾರಾಟವೇ ಕಡಿಮೆ ಆಗಿದ್ದು, ಸಿಹಿ ತಿಂಡಿಗಳ ತಯಾರಿಕೆಯೂ ಕಡಿಮೆ ಮಾಡಿದ್ದೇವೆ ಎನ್ನುತ್ತಾರೆ ಅಂಗಡಿ ಮಾಲೀಕರು.

ಲೆಕ್ಕ ಹಾಕಿ ಸಿಹಿ ತಿನ್ನುತ್ತಿದ್ದೇವೆ

ಲೆಕ್ಕ ಹಾಕಿ ಸಿಹಿ ತಿನ್ನುತ್ತಿದ್ದೇವೆ

ವರ್ತಕ ಇರ್ಫಾನ್ ಅಹ್ಮದ್‌ ಒನ್ ಇಂಡಿಯಾದೊಂದಿಗೆ ಮಾತನಾಡಿ, ತೆರಿಗೆ ಹಾಕದೆ ಇದ್ದರೆ ಚೆನ್ನಾಗಿರುತ್ತಿತ್ತು. ಸಿಹಿಯನ್ನೂ ಲೆಕ್ಕ ಹಾಕಿ ತಿನ್ನುತ್ತಿದ್ದೇವೆ. ನಾಲ್ಕು ಪೀಸು ಮೈಸೂರು ಪಾಕು ತಿನ್ನುವ ಬದಲು ಎರಡೇ ಪೀಸು ತಿನ್ನುತ್ತಿದ್ದೇವೆ. ಜಿಎಸ್ ಟಿ ಬರುವ ಮೊದಲು ಮನೆಗೆ, ಬಂಧುಗಳಿಗೆ ಕೆ.ಜಿಗಟ್ಟಲೆ ಮೈಸೂರು ಪಾಕ್‌ ಒಯ್ಯುತ್ತಿದ್ದೆ. ಈಗ ಅರ್ಧ ಕೆ.ಜಿ, ಮುಕ್ಕಾಲು ಕೆ.ಜಿ ಒಯ್ಯುತ್ತಿದ್ದೇನೆ ಎಂದು ಬೇಸರದಿಂದ ಹೇಳುತ್ತಾರೆ. .

ಬ್ಯಾಂಕ್ ನ ಎಫ್ ಡಿ ದರಕ್ಕಿಂತ ತೆರಿಗೆಯೇ ಹೆಚ್ಚು ಕಣ್ರೀ

ಬ್ಯಾಂಕ್ ನ ಎಫ್ ಡಿ ದರಕ್ಕಿಂತ ತೆರಿಗೆಯೇ ಹೆಚ್ಚು ಕಣ್ರೀ

ಬ್ಯಾಂಕ್ ನೌಕರರಾದ ಹೇಮಾವತಿಯವರು ಮತ್ತೂ ಕುತೂಹಲದ ಲೆಕ್ಕಾಚಾರ ಮುಂದಿಡುತ್ತಾರೆ. ನೀವು ಒಂದು ವರ್ಷಕ್ಕೆ ಬ್ಯಾಂಕ್ ನಲ್ಲಿ ಎರಡು ಸಾವಿರ ರುಪಾಯಿ ಎಫ್ ಡಿ ಇಟ್ಟರೆ ವಾರ್ಷಿಕ ಶೇ ಏಳರಷ್ಟು ಬಡ್ಡಿ ಬಂದರೆ ಹೆಚ್ಚು. ಅದೇ ರೆಸ್ಟೋರೆಂಟ್ ನಲ್ಲಿ ಎರಡು ಸಾವಿರ ರುಪಾಯಿಯಷ್ಟು ತಿಂಡಿ- ಊಟ ಮಾಡಿದರೆ ಶೇ ಹದಿನೆಂಟರಷ್ಟು ತೆರಿಗೆ ಹಾಕಲಾಗುತ್ತದೆ. ಆದಾಯ ತೆರಿಗೆ- ಜಿಎಸ್ ಟಿ ಎಲ್ಲ ಸೇರಿ ಬದುಕು ಹೈರಾಣಾಗಿದೆ ಅಂತಾರೆ.

ಖರೀದಿ ಮಾಡದೆ ವಾಪಸಾಗುತ್ತಾರೆ

ಖರೀದಿ ಮಾಡದೆ ವಾಪಸಾಗುತ್ತಾರೆ

ಇನ್ನೂ ಕೆಲವು ಗ್ರಾಹಕರು ಜಿಎಸ್ ಟಿ ಯಾಕೆ ಕೊಡಬೇಕು ಎಂದು ವಾದವೇ ಶುರು ಮಾಡುತ್ತಾರೆ. ಜಿಎಎಸ್ ಟಿ ಸೇರಿಸಿ ಬಿಲ್ ಕೊಟ್ಟರೆ ಖರೀದಿಯೇ ಮಾಡದೆ ವಾಪಸು ಹೋಗುವವರೂ ಇದ್ದಾರೆ. ಇದಕ್ಕಾಗಿ ತಾಳ್ಮೆಯಿಂದ ಅವರಿಗೆ ಮನವರಿಕೆ ಮಾಡಿಕೊಡುತ್ತಿದ್ದೇವೆ. ಈಗ ಅನಿವಾರ್ಯವಾಗಿ ಕೊಡುತ್ತಿದ್ದಾರೆ.

ಇದರ ಜತೆಗೆ ಪ್ರತಿ ತಿಂಗಳು 5, 10 ಹಾಗೂ 20ರಂದು ಜಿಎಸ್ ಟಿಗೆ ಸಂಬಂಧಿಸಿ ರಿಟರ್ನ್ ಫೈಲ್‌ ಮಾಡಬೇಕು. ಈ ಮೊದಲು ಪ್ರತಿ ತಿಂಗಳ 20ರಂದು ಮಾತ್ರ ಫೈಲ್‌ ಮಾಡಬೇಕಿತ್ತು. ಈಗ ಮೂರು ಬಾರಿ ಫೈಲ್‌ ಮಾಡುವುದರಿಂದ ಅನನುಕೂಲವಾಗಿದೆ ಎಂದರು ಮಹಾಲಕ್ಷ್ಮಿ ಸ್ವೀಟ್ಸ್ ಮಾಲೀಕರಾದ ಶಿವಕುಮಾರ್.

ನೋಟು ನಿಷೇಧದ ಹೊಡೆತದ ಮೇಲೆ ಜಿಎಸ್ ಟಿ ಬರೆ

ನೋಟು ನಿಷೇಧದ ಹೊಡೆತದ ಮೇಲೆ ಜಿಎಸ್ ಟಿ ಬರೆ

ನೋಟು ಅಮಾನ್ಯವಾದ ನಂತರ ವ್ಯಾಪಾರ ಕಡಿಮೆಯಾಯಿತು. ಈಗ ಜಿಎಸ್ ಟಿಯಿಂದ ವ್ಯಾಪಾರ ಇನ್ನಷ್ಟು ಕಡಿಮೆಯಾಗಿದೆ. ಜನರ ಬಳಿ ದುಡ್ಡಿದ್ದರೆ ಮೈಸೂರು ಪಾಕ್‌ ಜತೆಗೆ ಇತರ ಸಿಹಿತಿಂಡಿ, ಖಾರ ಪದಾರ್ಥಗಳನ್ನು ಕೊಳ್ಳುತ್ತಾರೆ. ಈಗ 100 ಗ್ರಾಂ ಮೈಸೂರು ಪಾಕ್‌ ಕೊಳ್ಳುವವರು 50 ಗ್ರಾಂಗೆ ಸೀಮಿತರಾಗಿದ್ದಾರೆ. ಆದರೂ ಪ್ರತಿವರ್ಷ ಶೇ 5ರಷ್ಟು ಮೈಸೂರು ಪಾಕ್‌ ದರ ಏರಿಸುತ್ತೇವೆ.

ಈ ಬಾರಿಯ ದೀಪಾವಳಿಯೊಳಗೆ ಏರಿಕೆಯಾಗುತ್ತದೆ. ಸದ್ಯ ಸ್ಪೆಷಲ್ ಮೈಸೂರು ಪಾಕ್ ಕೆ.ಜಿಗೆ ₹ 400 ದರವಿದೆ. ಏರಿಕೆಯಾದ ನಂತರ ₹ 440 ಆಗಲಿದೆ ಎಂದು ಗುರು ಸ್ವೀಟ್ಸ್ ಮಾರ್ಟ್ ಮಾಲೀಕರಾದ ಶಿವಾನಂದ್‌ ಮಾಹಿತಿ ನೀಡಿದರು.

ಶೇ 10ರಿಂದ 15ರಷ್ಟು ವ್ಯಾಪಾರ ಕಡಿಮೆ

ಶೇ 10ರಿಂದ 15ರಷ್ಟು ವ್ಯಾಪಾರ ಕಡಿಮೆ

ಇಂದಿರಾ ಕೆಫೆಯ ಪಾಲುದಾರ ರಾಕೇಶಕುಮಾರ್ ಅವರು, ‘ಬೆಣ್ಣೆ ಮೈಸೂರು ಪಾಕ್ ಅನ್ನು ಕೆ.ಜಿಗೆ ₹ 480ಕ್ಕೆ ಮಾರುತ್ತೇವೆ. ಜತೆಗೆ ಶೇ 12ರಷ್ಟು ಜಿಎಸ್ ಟಿ ವಿಧಿಸುತ್ತೇವೆ. ಇದರಿಂದ ಶೇ 10ರಿಂದ 15ರಷ್ಟು ವ್ಯಾಪಾರ ಕಡಿಮೆಯಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಜಿಎಸ್ ಟಿ ಬಗ್ಗೆ ಮಾಹಿತಿಯಿಲ್ಲ

ಜಿಎಸ್ ಟಿ ಬಗ್ಗೆ ಮಾಹಿತಿಯಿಲ್ಲ

ನ್ಯೂ ಬಾಂಬೆ ಟಿಫಾನಿಸ್ ಮಾಲೀಕ ಮನೀಶಕುಮಾರ್, ‘ನಮ್ಮಲ್ಲಿ ತುಪ್ಪದ ಮೈಸೂರು ಪಾಕ್ ಅನ್ನು ₹ 500, ಗೋಡಂಬಿ ಮೈಸೂರು ಪಾಕನ್ನು ₹ 600ಕ್ಕೆ ಮಾರುತ್ತೇವೆ. ಜತೆಗೆ ಜಿಎಸ್ ಟಿ ಹಾಕಿದ ಕೂಡಲೇ ಗ್ರಾಹಕರು ಬಿಲ್ ನೋಡಿ, ಜಗಳವಾಡುತ್ತಾರೆ. ಶೇ 70ರಷ್ಟು ಜನರಿಗೆ ಈ ಬಗ್ಗೆ ಮಾಹಿತಿ ಇಲ್ಲ. ಒಟ್ಟಾರೆ ಶೇ 30ರಿಂದ 35ರಷ್ಟು ವ್ಯಾಪಾರ ಕಡಿಮೆಯಾಗಿದೆ' ಎಂದು ತಿಳಿಸಿದರು.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
The GST Impact : Demand for sweets especially Mysuru Pak drops drastically in its native place! What the shop keepers and buyers has to say? this Deepavali Festival season!

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ