ಕಬಿನಿ ಹಿನ್ನೀರಲ್ಲಿ 4 ಅಡಿ ಉದ್ದದ ದಂತವಿರುವ ದೈತ್ಯ ಗಾತ್ರದ ಆನೆ

By: ಮೈಸೂರು ಪ್ರತಿನಿಧಿ
Subscribe to Oneindia Kannada

ಮೈಸೂರು, ಜನವರಿ 3: ಕಬಿನಿ ಜಲಾಶಯದ ಹಿನ್ನೀರು ಹಲವು ವಿಶೇಷತೆಗಳಿಗೆ ಸಾಕ್ಷಿಯಾಗಿದೆ. ಇಲ್ಲಿನ ಸೌಂದರ್ಯವನ್ನು ಸವಿಯಲೆಂದು ಜನ ಇತ್ತ ದೌಡಾಯಿಸಿದರೆ, ಪಕ್ಕದ ನಾಗರಹೊಳೆ ಅಭಯಾರಣ್ಯದಿಂದ ವಿವಿಧ ಪ್ರಾಣಿ, ಪಕ್ಷಿಸಂಕುಲಗಳು ನೀರು ಕುಡಿದು ದಣಿವಾರಿಸಿಕೊಳ್ಳಲು ಬರುತ್ತವೆ.

ಸಾಮಾನ್ಯವಾಗಿ ಮಧ್ಯಾಹ್ನ ಅಥವಾ ಸಂಜೆ ಹಿನ್ನೀರಿನಲ್ಲಿ ಪ್ರಾಣಿಗಳ ದಂಡುಗಳು ಬೇಸಿಗೆಯ ದಿನಗಳಲ್ಲಿ ಮಾತ್ರ ಕಂಡು ಬರುತ್ತವೆ. ಪ್ರಾಣಿಗಳು ಒಂದು ಕಡೆಯಿಂದ ಮತ್ತೊಂದು ಕಡೆಗೆ ಅಡ್ಡಾಡುವುದರಿಂದ ದಿನವೂ ಇಲ್ಲಿಗೆ ಬಾರದೆ ಅಪರೂಪಕ್ಕೆ ಪ್ರತ್ಯಕ್ಷವಾಗಿ ಅಚ್ಚರಿ ಮೂಡಿಸುತ್ತಿವೆ.[ನೀರು ಖಾಲಿಯಾದ ಕಬಿನಿಯಲ್ಲಿ ಎಲ್ಲಿಂದಲೋ ಬಂದ ಹಕ್ಕಿಗಳ ಸಂಭ್ರಮ]

ಸಾಮಾನ್ಯವಾಗಿ ನೀರು ಕುಡಿಯಲು ಕಾಡಾನೆಗಳು ಹಿಂಡುಹಿಂಡಾಗಿ ಬರುತ್ತವೆ. ಆದರೆ ಭಾರೀ ಗಾತ್ರದ, ಉದ್ದದ ಕೋರೆಯ ಕಾಡಾನೆಯೊಂದು ಅಪರೂಪಕ್ಕೆ ಕಾಣಿಸಿಕೊಂಡು ಗಮನಸೆಳೆಯುತ್ತಿದೆ. ತಾನಾಯಿತು ಎಂಬಂತೆ ಅರಣ್ಯದಲ್ಲಿ ಸುತ್ತಾಡುತ್ತಾ ಆಗೊಮ್ಮೆ, ಈಗೊಮ್ಮೆ ಕಬಿನಿ ಹಿನ್ನೀರಿನಲ್ಲಿ ನೀರು ಕುಡಿದು, ಅರಣ್ಯದತ್ತ ಹೆಜ್ಜೆ ಹಾಕುವ ಈ ಆನೆ ಹಲವರಿಗೆ ಕುತೂಹಲದಂತೆ ಕಾಣುತ್ತಿದೆ.

Gigantic elephant found in Kabini backwater

ಕಾರಣ ಇದು ಎಲ್ಲ ಆನೆಗಳಂತೆ ಇಲ್ಲ. ವಿಭಿನ್ನವಾಗಿಯೂ, ದೈತ್ಯಾಕಾರವಾಗಿಯೂ ಇರುವ ಈ ಆನೆಯ ವೈಶಿಷ್ಟ್ಯ ಏನೆಂದರೆ ಉದ್ದವಾದ ಕೋರೆಗಳು. ಇಷ್ಟೊಂದು ಉದ್ದದ ಕೋರೆಗಳು ಆನೆಗಳಿಗೆ ಇರುವುದು ಅಪರೂಪ. ಆದರೆ ಈ ಆನೆಗೆ ಅದುವೇ ಭೂಷಣ. ಸಾಮಾನ್ಯವಾಗಿ ಇತ್ತ ಕಡೆ ಬರುವ ಪ್ರವಾಸಿಗರು ತಮ್ಮ ಕ್ಯಾಮೆರಾಕ್ಕೆ ಆ ಕಾಡಾನೆ ಸಿಗುತ್ತಾ ಎಂದು ಕುತೂಹಲದಿಂದ ಕಾಯುತ್ತಾರೆ. ಒಂದು ವೇಳೆ ಸಿಕ್ಕರೆ ಅವರ ಸಂತೋಷಕ್ಕೆ ಪಾರವೇ ಇರುವುದಿಲ್ಲ.[ಗಜ ಬದುಕಿನ ರೋಚಕ ಸಂಗತಿಗಳ ಇಷ್ಟಿಷ್ಟೇ ವಿವರಗಳು...]

ಅರಣ್ಯ ಇಲಾಖೆ ಮೂಲಗಳು ತಿಳಿಸುವಂತೆ ಈ ಆನೆಗೆ ಅಂದಾಜು 70ವರ್ಷ ವಯಸ್ಸಿರಬಹುದು. ಇದರ ಕೋರೆ ಅಂದಾಜು 4 ಅಡಿ ಇದೆ. ದೈತ್ಯ ದೇಹ ಹೊಂದಿದ ಈ ಆನೆಯ ಹಣೆಭಾಗ ಅಗಲವಾಗಿ, ಕಿವಿಯು ಮೊರದಗಲವಿದೆ. ನಿಧಾನವಾಗಿ ಹೆಜ್ಜೆ ಹಾಕುತ್ತಾ ಸಾಗುವ ಈ ಆನೆಯ ನಡಿಗೆಯಲ್ಲಿಯೂ ಗಾಂಭೀರ್ಯವಿದೆ.

ನಾಡಿಗೆ ಬಂದು ಉಪಟಳ ನೀಡಿದ ನಿದರ್ಶನವಿಲ್ಲ. ಹಿಂಡಿನೊಂದಿಗೆ ಮೊದಲೆಲ್ಲ ಕಾಣಿಸಿಕೊಳ್ಳುತ್ತಿತ್ತು. ಆದರೆ ಇತ್ತೀಚೆಗೆ ಹೆಚ್ಚಾಗಿ ಏಕಾಂಗಿಯಾಗಿ ಮೇವು ತಿನ್ನುತ್ತಾ, ನೀರು ಕುಡಿಯುತ್ತಾ ಸಾಗುತ್ತಿರುತ್ತದೆ. ಹಾಗೆ ನೋಡಿದರೆ ವಿವಿಧ ಶಿಬಿರಗಳಲ್ಲಿ ಕಾಣಸಿಗುವ ಆನೆಗಳ ಪೈಕಿ ಎಚ್.ಡಿ.ಕೋಟೆಯ ನಾಗರಹೊಳೆ ಅಭಯಾರಣ್ಯ ವ್ಯಾಪ್ತಿಯಲ್ಲಿ ಸೆರೆ ಸಿಕ್ಕ ಆನೆಗಳೆಲ್ಲವೂ ದೈತ್ಯ ಗಾತ್ರ ಹೊಂದಿವೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Gigantic elephant found in Kabini backwater, Mysuru district. He has approximately 4 feet tusk. Attracting tourists.
Please Wait while comments are loading...