ಅನಿಲ ಸೋರಿಕೆ, ಹೊತ್ತಿತು ಬೆಂಕಿ: ಸಮಯಪ್ರಜ್ಞೆ ತಪ್ಪಿಸಿದ ದುರಂತ

By: ಮೈಸೂರು ಪ್ರತಿನಿಧಿ
Subscribe to Oneindia Kannada

ಮೈಸೂರು ಫೆಬ್ರವರಿ 2: ಮನೆಯೊಂದರಲ್ಲಿ ಅನಿಲ ಸೋರಿಕೆಯಿಂದ ಬೆಂಕಿ ಕಾಣಿಸಿಕೊಂಡು ದಟ್ಟ ಹೊಗೆ ಆವರಿಸಿದ್ದು, ಸಂಭವಿಸಲಿದ್ದ ಭಾರೀ ದುರಂತವೊಂದು ನೆರೆಹೊರೆಯವರ, ಪೊಲೀಸರ ಸಮಯಪ್ರಜ್ಞೆಯಿಂದ ತಪ್ಪಿದ ಘಟನೆ ಮೈಸೂರಿನಲ್ಲಿ ನಡೆದಿದೆ.

ಮೈಸೂರಿನ ಕುಂಬಾರ ಕೊಪ್ಪಲಿನ ಬಸ್ ನಿಲ್ದಾಣದ ಬಳಿ ಇರುವ ಮನೆಯೊಂದರಲ್ಲಿ ಈ ಅನಾಹುತ ಸಂಭವಿಸಿದೆ. ತಾಯಮ್ಮ ಹಾಗೂ ಆದರ್ಶ ಎಂಬವರು ಮನೆಯಿಂದ ಹೊರ ಹೋದ ವೇಳೆ ಮನೆಯಲ್ಲಿದ್ದ ಅಡುಗೆ ಅನಿಲ ಸೋರಿಕೆಯಾಗಿದ್ದು, ಬೆಂಕಿ ಕಾಣಿಸಿಕೊಂಡು ಮನೆಯ ಹೊರಗೆ ದಟ್ಟವಾದ ಹೊಗೆ ಆವರಿಸಿತ್ತು. ಇದನ್ನು ನೋಡಿದ ಅಕ್ಕಪಕ್ಕದ ಮನೆಯವರು ತಕ್ಷಣ ಅಗ್ನಿಶಾಮಕ ಠಾಣೆಗೆ ಮಾಹಿತಿ ನೀಡಿದರು.

fire accident

ಕೂಡಲೇ ಸ್ಥಳಕ್ಕಾಗಮಿಸಿದ ಸರಸ್ವತಿ ಪುರಂ ಅಗ್ನಿಶಾಮಕ ಠಾಣೆಯ ನಾಗರಾಜ್ ಅರಸ್ ನೇತೃತ್ವದ ಅಗ್ನಿಶಾಮಕ ತಂಡ ಬೆಂಕಿ ಆರಿಸುವಲ್ಲಿ ಯಶಸ್ವಿಯಾಗಿದೆ. ಬಳಿಕ ಮನೆಯ ಬಾಗಿಲು ತೆರೆದು ಅನಿಲ ಸೋರದಂತೆ ತಡೆಹಿಡಿಯಲಾಗಿದೆ. ಮೇಟಗಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

fire accident 1

ಎಪಿಎಂಸಿ ಅಂಗಡಿಗಳಲ್ಲಿ ಕಳ್ಳತನ : ಆರೋಪಿಗಳ ಬಂಧನ

ಮೈಸೂರು: ಎಪಿಎಂಸಿಯಲ್ಲಿ ಕೂಲಿ ಕೆಲಸ ಮಾಡಿಕೊಂಡಿದ್ದ ಐವರು ವ್ಯಕ್ತಿಗಳು ಪ್ರತಿದಿನ ಒಂದೊಂದು ಅಂಗಡಿಯಲ್ಲಿ ಸಾವಿರಾರು ರೂಪಾಯಿ ಸ್ವತ್ತುಗಳನ್ನು ಕಳವುಗೈದು ಇದೀಗ ಪೊಲೀಸರ ಅತಿಥಿಯಾಗಿದ್ದಾರೆ.

ಬಂಧಿತರನ್ನು ಹೊಸಹುಂಡಿ ಗ್ರಾಮದ ಅರ್ಜುನ್, ಮನು, ಅಭಿಲಾಷಾ, ಅಪ್ಪು ಎಂದು ಗುರುತಿಸಲಾಗಿದೆ. ಆದರೆ ಕೃತ್ಯದಲ್ಲಿ ಭಾಗಿಯಾದ ದೀಪು ತಪ್ಪಿಸಿಕೊಂಡಿದ್ದಾನೆ. ಮೈಸೂರಿನ ಬಂಡೀಪಾಳ್ಯದ ಎಪಿಎಂಸಿಯಲ್ಲಿ ಕೂಲಿ ಕೆಲಸ ಮಾಡಿಕೊಂಡಿದ್ದ ಇವರು ಎಣ್ಣೆ ಅಂಗಡಿಯೊಂದರಲ್ಲಿ ರು.25 ಸಾವಿರ ಮೌಲ್ಯದ ಎಣ್ಣೆ ಪ್ಯಾಕೆಟ್ ಗಳನ್ನು ಹೊತ್ತೊಯ್ದು ಮಾರಾಟ ಮಾಡಿಕೊಂಡಿದ್ದರು. ಎಣ್ಣೆ ಕಳ್ಳತನವಾಗಿರುವ ಕುರಿತು ಗ್ರಾಮಾಂತರ ಠಾಣೆಯಲ್ಲಿ ದೂರು ದಾಖಲಾಗಿತ್ತು. ಆದರೆ ಮಂಗಳವಾರ ಮತ್ತೆ ಈ ಐವರು ಬೆಳ್ಳುಳ್ಳಿ ಅಂಗಡಿಯಲ್ಲಿ ರು. 50ಸಾವಿರ ಮೌಲ್ಯದ ಬೆಳ್ಳುಳ್ಳಿ ಮೂಟೆಗಳನ್ನು ಕಳವು ಮಾಡುವ ಕೃತ್ಯ ಎಪಿಎಂಸಿಯಲ್ಲಿ ಅಳವಡಿಸಲಾದ ಸಿಸಿಕ್ಯಾಮರಾದಲ್ಲಿ ಸೆರೆಯಾಗಿತ್ತು.

ಮತ್ತೆ ಗ್ರಾಮಾಂತರ ಠಾಣೆಯಲ್ಲಿ ದೂರು ದಾಖಲಾಗಿತ್ತು. ದೂರನ್ನು ಪರಿಶೀಲಿಸಿದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರವಿ.ಡಿ.ಚನ್ನಣ್ಣವರ್ ಆರೋಪಿಗಳ ಪತ್ತೆಗೆ ತಂಡವನ್ನು ರಚಿಸಿದ್ದರು. ಅವರ ನಿರ್ದೆಶನದ ಮೇರೆಗೆ ಸಬ್ ಇನ್ಸಪೆಕ್ಟರ್ ಜಯಪ್ರಕಾಶ್ ನೇತೃತ್ವದಲ್ಲಿ ಸಿಬ್ಬಂದಿಗಳಾದ ಹರೀಶ್, ಚಂದ್ರು, ಶರೀಫ್ ಕಾರ್ಯಾಚರಣೆ ನಡೆಸಿದ್ದು, ಆರೋಪಿಗಳನ್ನು ಬಂಧಿಸಿದ್ದಾರೆ.

teacher

ಕಾಮುಕ ಶಿಕ್ಷಕನ ಬಂಧನ

ಮೈಸೂರು: ಲೈಂಗಿಕ ಕಿರುಕುಳ ನೀಡುತ್ತಿದ್ದ ಆರೋಪದ ಮೇಲೆ ಕೆ.ಆರ್. ಮೊಹಲ್ಲಾದ ಹುಲ್ಲಿನ ಬೀದಿಯಲ್ಲಿ ಎಸ್.ಕೆ.ಎಂ ಕೋಚಿಂಗ್ ಸೆಂಟರ್ ನಡೆಸುತ್ತಿದ್ದ ಕಾಮುಕ ಶಿಕ್ಷಕನೋರ್ವನನ್ನು ಬಂಧಿಸಿದ್ದಾರೆ.

ಕೃಷ್ಣ ಮೂರ್ತಿ ಬಂಧಿತ ಆರೋಪಿ. ಈತ ಟ್ಯೂಷನ್ ಗೆ ಬರುತ್ತಿದ್ದ ವಿದ್ಯಾರ್ಥಿನಿಯರಿಗೆ ಲೈಂಗಿಕ ಕಿರುಕುಳ ನೀಡುತ್ತಿದ್ದ ಎಂದು ವಿದ್ಯಾರ್ಥಿನಿಯರ ಪೋಷಕರು ಆರೋಪಿಸಿದ್ದಾರೆ. ಪೋಷಕರ ದೂರಿನ ಆಧಾರದ ಮೇಲೆ ಬಂಧಿಸಲಾಗಿದೆ. ಈತ ವಿದ್ಯಾರ್ಥಿನಿರೊಂದಿಗೆ ಆಶ್ಲೀಲ ಭಂಗಿಯಲ್ಲಿ ಫೋಟೋ, ವೀಡಿಯೋ ಮಾಡಿಕೊಂಡಿದ್ದ ಎನ್ನಲಾಗಿದೆ. ಆತನ ಮೊಬೈಲ್ ನೋಡಿ ಪೊಲೀಸರೇ ಬೆಚ್ಚಿ ಬಿದ್ದಿದ್ದಾರೆ. ಕೆ.ಆರ್.ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಅನುಮಾನಾಸ್ಪದ ಸಾವು

ಮೈಸೂರು : ವ್ಯಕ್ತಿಯೋರ್ವ ಅನುಮಾನಾಸ್ಪದ ರೀತಿಯಲ್ಲಿ ನೇಣು ಬಿಗಿದ ರೀತಿಯಲ್ಲಿ ಪತ್ತೆಯಾದ ಘಟನೆ ನಂಜನಗೂಡುನಗೂಡಿನ ಕೈಗಾರಿಕಾ ಪ್ರದೇಶದಲ್ಲಿ ಇರುವ ಕೆಐಡಿಬಿ ಸಮೀಪ ನಡೆದಿದೆ.

ಕೆಐಡಿಬಿ ಬಳಿ ನೇಣು ಬಿಗಿದ ಸ್ಥಿತಿಯಲ್ಲಿ ವ್ಯಕ್ತಿಯ ಶವ ಪತ್ತೆಯಾಗಿದ್ದು, ಈತ ಕಣ್ಣನೂರು ಗ್ರಾಮದ ನಿವಾಸಿ ಎನ್ನಲಾಗಿದೆ. ಆತ್ಮಹತ್ಯೆಗೆ ನಿಖರ ಕಾರಣ ತಿಳಿದುಬಂದಿಲ್ಲ. ಆದರೆ ಆತ ನೇಣು ಬಿಗಿದಿರುವ ಸ್ಥಿತಿ ಹಲವು ಅನುಮಾನಗಳಿಗೆ ಕಾರಣವಾಗಿದೆ. ಆತ್ಮಹತ್ಯೆ ಮಾಡಿಕೊಳ್ಳುವವರ ಪಾದ ನೆಲದಿಂದ ಮೇಲಕ್ಕೆ ಇರಬೇಕು. ಆದರೆ ನೆಲದ ಮೇಲೆ ಪಾದ ನಿಂತಿದೆ ಎಂದು ಸಾರ್ವಜನಿಕರು ಸಾವಿನ ಕುರಿತು ಅನುಮಾನ ವ್ಯಕ್ತಪಡಿಸುತ್ತಿದ್ದಾರೆ. ನಂಜನಗೂಡಿನ ಗ್ರಾಮಾಂತರ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
A major disaster was averted in the city, thanks to the alert public and timely action by the fire fighters as a house was engulfed in fire due to gas leakage from the cylinders.
Please Wait while comments are loading...