ಪುಷ್ಪಲೋಕದಲ್ಲಿ ಮಿನುಗುತ್ತಿರುವ ಮೈಸೂರು ಅರಮನೆ

By: ಮೈಸೂರು ಪ್ರತಿನಿಧಿ
Subscribe to Oneindia Kannada

ಮೈಸೂರು, ಜನವರಿ.02: ಸಾಂಸ್ಕೃತಿಕ ನಗರಿ ಮೈಸೂರಿಗೆ ಭೇಟಿ ನೀಡುವ ಪ್ರವಾಸಿಗರು ಅರಮನೆಯತ್ತ ಹೆಜ್ಜೆ ಹಾಕಿದರೆ ಅಲ್ಲಿ ಸೃಷ್ಟಿಯಾಗಿರುವ ಪುಷ್ಪಲೋಕ ಕಣ್ಮನ ಸೆಳೆಯುತ್ತದೆ. ಮನಸ್ಸಿಗೆ ಕ್ಷಣಕಾಲ ಹಿತವೆನಿಸುತ್ತದೆ.

ಪುಷ್ಪಲೋಕದ ನಡುವೆ ಮಿನುಗುತ್ತಿರುವ ಅರಮನೆ ನೋಡುಗರಿಗೆ ರಸದೌತಣ ನೀಡುತ್ತಿದೆ. ಅರಳಿ ನಿಂತ ಹೂಗಳು.. ಒಪ್ಪ ಓರಣವಾಗಿ ಜೋಡಿಸಿಟ್ಟ ಹೂಕುಂಡಗಳು.. ಅದರ ನಡುವೆ ಪುಷ್ಪ ಗಿಡಗಳಲ್ಲೇ ಸೃಷ್ಟಿಯಾದ ಕಲಾಕೃತಿಗಳು.. ಕೃಷ್ಣರಾಜ ಒಡೆಯರ ಕಂಚಿನ ಪ್ರತಿಮೆಗಳು.. ಗತ ವೈಭವ ನೆನಪಿಸುವ ಫಿರಂಗಿಗಳು.. ಹೀಗೆ ಒಂದಲ್ಲ ಎರಡಲ್ಲ ಪುಷ್ಪ ಪ್ರದರ್ಶನದಲ್ಲಿರುವ ನೂರಾರು ವಿಶೇಷತೆಗಳು ಅರಮನೆಗೊಂದು ಶೋಭೆ ತರುತ್ತಿದೆ.

ಗುರುವಾರದಿಂದ ಆರಂಭವಾಗಿರುವ ಸುಮಾರು ಐದು ದಿನಗಳ ಕಾಲ ನಡೆಯುತ್ತಿರುವ, ಪ್ರಪಥಮ ಬಾರಿಗೆ ಏರ್ಪಡಿಸಲಾಗಿರುವ ಪುಷ್ಪ ಪ್ರದರ್ಶನ ಹೊಸವರ್ಷಕ್ಕೊಂದು ಸೊಬಗು ಎಂದರೂ ತಪ್ಪಾಗುವುದಿಲ್ಲ.[ಬೆಂಗಳೂರು ಹೂವಿನ ಅರಮನೆ ನೋಡದಿದ್ದರೆ ನಿಮಗೇ ನಷ್ಟ]

ಈಗಾಗಲೇ ಹೊಸ ವರ್ಷಾಚರಣೆ ಮತ್ತು ವೀಕೆಂಡ್ ಮಜಾ ಸವಿಯಲು ಬಂದಿರುವ ಪ್ರವಾಸಿಗರು ಅರಮನೆ ಆವರಣದ ಶ್ವೇತ ವರಾಹ ದ್ವಾರದಲ್ಲಿ ಏರ್ಪಡಿಸಲಾಗಿರುವ ಪುಷ್ಪಪ್ರದರ್ಶನದಲ್ಲಿ ಪಾಲ್ಗೊಂಡು ಸಂತಸ ಪಡುತ್ತಿದ್ದಾರೆ. ಗುರುವಾರದಿಂದ ಆರಂಭವಾಗಿರುವ ಪ್ರದರ್ಶನ ಸೋಮವಾರದವರೆಗೆ ಪ್ರವಾಸಿಗರಿಗೆ ಮುದ ನೀಡಲಿದೆ. ಬನ್ನಿ ನಾವು ಒಂದು ಸುತ್ತು ಪುಷ್ಪಲೋಕದಲ್ಲಿ ವಿಹರಿಸೋಣ

ಹೂಗಳು ಎಲ್ಲೆಲ್ಲಿಂದ ಬಂದಿವೆ?

ಹೂಗಳು ಎಲ್ಲೆಲ್ಲಿಂದ ಬಂದಿವೆ?

ಇಲ್ಲಿ ವಿವಿಧ ನಮೂನೆಯ ಹೂಗಳ ಸುಮಾರು 7 ಸಾವಿರ ಹೂಕುಂಡಗಳನ್ನು ಜೋಡಿಸಲಾಗಿದೆ. ಈ ಪ್ರದರ್ಶನಕ್ಕಾಗಿಯೇ ಕಾಶ್ಮೀರ ಮತ್ತು ಕಲ್ಕತ್ತಾದಿಂದ ವಿಭಿನ್ನ ಬಗೆಯ ಹೂಕುಂಡಗಳನ್ನು ತರಿಸಿರುವುದು ವಿಶೇಷವಾಗಿದೆ. ಈ ಹೂಕುಂಡಗಳಲ್ಲಿ ಅರಳಿರುವ ಹೂಗಳು ಮನಸೆಳೆಯುತ್ತಿವೆ. ಅಷ್ಟೇ ಅಲ್ಲ ಉದಕಮಂಡಲದಿಂದ 5ಸಾವಿರ ಪ್ರಭೇಧದ ಒಣ ಹೂಗಳನ್ನು ಕೂಡ ತರಲಾಗಿದೆ.

ಫಲಪುಷ್ಪ ಪ್ರದರ್ಶನದಲ್ಲಿ ಏನೆಲ್ಲಾ ಸೃಷ್ಟಿಯಾಗಿವೆ?

ಫಲಪುಷ್ಪ ಪ್ರದರ್ಶನದಲ್ಲಿ ಏನೆಲ್ಲಾ ಸೃಷ್ಟಿಯಾಗಿವೆ?

ಫಲಪುಷ್ಪ ಪ್ರದರ್ಶನದಲ್ಲಿ ದರ್ಬಾರ್ ಹಾಲ್ ಸೃಷ್ಟಿಯಾಗಿದ್ದು, ಇಲ್ಲಿ ಕಂಚಿನ ಪ್ರತಿಮೆಯಲ್ಲಿ ದ್ವಾರಪಾಲಕೊಂದಿಗೆ ಪವಡಿಸಿರುವ ನಾಲ್ವಡಿ ಕೃಷ್ಣರಾಜ ಒಡೆಯರ್, ಅಂಬಾರಿ ಮೇಲೆ ವಿಜೃಂಭಿಸಿರುವ ಶ್ರೀ ಜಯಚಾಮರಾಜೇಂದ್ರ ಒಡೆಯರ್ ಮತ್ತು ಕಾವಲು ಕಾಯುತ್ತಿರುವ ಸಿಂಹಗಳು.. ಅಶ್ವದಳದ ಭಟರು.. ಪುಷ್ಪಪ್ರದರ್ಶನದಲ್ಲಿ ಕಾಣಸಿಗುತ್ತಾರೆ.

ಹೂಗಳನ್ನು ಹೊರತುಪಡಿಸಿ ಮತ್ತೇನಿದೆ?

ಹೂಗಳನ್ನು ಹೊರತುಪಡಿಸಿ ಮತ್ತೇನಿದೆ?

ಕೇವಲ ಹೂಗಳಲ್ಲದೆ, ದಪ್ಪ ಮೆಣಸಿನಕಾಯಿ, ಬದನೆಕಾಯಿ ಹಾಗೂ ಟೊಮೋಟೊ ಮತ್ತಿತರ ಹಣ್ಣುಗಳು ಕೂಡ ಇಲ್ಲಿ ಜಾಗ ಪಡೆದಿವೆ. ಇವುಗಳಿಂದ ಕಲಾವಿದನ ಕೈಚಳಕದಲ್ಲಿ ಮೂಡಿ ಬಂದಿರುವ ನವಿಲು ಸೇರಿದಂತೆ ಇನ್ನಿತರ ಕಲಾಕೃತಿಗಳು ಮೂಡಿ ಬಂದಿವೆ.

ನಾಲ್ವಡಿ ಕೃಷ್ಣರಾಜರ ಪ್ರತಿಮೆ ಜೊತೆಗೆ ಮತ್ತೇನಿದೆ?

ನಾಲ್ವಡಿ ಕೃಷ್ಣರಾಜರ ಪ್ರತಿಮೆ ಜೊತೆಗೆ ಮತ್ತೇನಿದೆ?

ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಪ್ರತಿಮೆ ಮಾತ್ರವಲ್ಲದೆ ಸಾಧನೆಗಳ ಫಲಕವೂ ವಿಜೃಂಭಿಸುತ್ತಿದೆ. ಕನ್ನಂಬಾಡಿ ಕಟ್ಟೆ, ಶಿವನ ಸಮುದ್ರ ವಿದ್ಯುತ್ ಉತ್ಪಾದನೆ, ಮೈಸೂರು ವಿಶ್ವವಿದ್ಯಾನಿಲಯ, ಭದ್ರಾವತಿ ಕಾರ್ಖಾನೆ ಹಾಗೂ ಮೈಸೂರು ಆಕಾಶವಾಣಿಯ ಚಿತ್ರಗಳ ಮಾಹಿತಿಯನ್ನು ಫಲಕ ಸಾರಿ ಹೇಳುತ್ತದೆ.

ಫಲಪುಷ್ಪ ಪ್ರದರ್ಶನದ ಇನ್ನಷ್ಟು ವಿಶೇಷತೆಗಳೇನು?

ಫಲಪುಷ್ಪ ಪ್ರದರ್ಶನದ ಇನ್ನಷ್ಟು ವಿಶೇಷತೆಗಳೇನು?

ಇನ್ನು ಆಯುರ್ವೇದ ಗುಣಗಳುಳ್ಳ ಸಸ್ಯಗಳಿಗೂ ಇಲ್ಲಿ ಸ್ಥಾನ ನೀಡಲಾಗಿದೆ. ರಾಜವೈಭವ ಸಾರುವ ಫಿರಂಗಿಗಳು ಇಲ್ಲಿವೆ. ಒಟ್ಟಾರೆ ಮೈಸೂರು ಅರಮನೆ ಆವರಣದಲ್ಲಿ ಎದ್ದು ನಿಂತಿರುವ ಪುಷ್ಪಲೋಕ ಪುಷ್ಪಪ್ರೇಮಿಗಳ ಮನತಣಿಸುವುದಂತು ಖಚಿತ.

ಫಲಪುಷ್ಪ ಪ್ರದರ್ಶನ ನಡೆಯುವ ಅವಧಿ ಎಷ್ಟು?

ಫಲಪುಷ್ಪ ಪ್ರದರ್ಶನ ನಡೆಯುವ ಅವಧಿ ಎಷ್ಟು?

ಪ್ರದರ್ಶನ ಪ್ರತಿದಿನ ಬೆಳಿಗ್ಗೆ 11ಕ್ಕೆ ಆರಂಭವಾಗಿ ರಾತ್ರಿ 9ಗಂಟೆವರೆಗೆ ಇರುತ್ತದೆ. ರಾತ್ರಿ 7.30 ರಿಂದ 9ಗಂಟೆವರೆಗೆ ಅರಮನೆ ಪೊಲೀಸ್ ಬ್ಯಾಂಡ್‍ನ ಸಂಗೀತ ಕೇಳುವ ಅವಕಾಶವೂ ಇದೆ. ಪ್ರದರ್ಶನಕ್ಕೆ 10 ರೂ.ಗಳ ಪ್ರವೇಶ ಶುಲ್ಕ ವಿಧಿಸಲಾಗುತ್ತಿದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ - ನೋಂದಣಿ ಉಚಿತ!

English summary
Fruit and Flower exhibition started in Mysuru. Many kashmir flowers and fruits, Nalwadi Krishnaraj wadeyar statue, musiclal instruments, more than 5,000 flowers main attraction of the flower and fruit show.
Please Wait while comments are loading...