ಮೈಸೂರಿನಲ್ಲಿನ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಪರ –ವಿರೋಧದ ಭಿನ್ನರಾಗ

Posted By:
Subscribe to Oneindia Kannada

ಮೈಸೂರು, ಅಕ್ಟೋಬರ್ 10 : ನವೆಂಬರ್ ನಲ್ಲಿ ಮೈಸೂರಿನಲ್ಲಿ ನಿಗದಿಯಾಗಿರುವ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಹಗ್ಗ - ಜಗ್ಗಾಟ ಆರಂಭವಾಗಿದೆ.

ಅಖಿಲ ಭಾರತ ಸಾಹಿತ್ಯ ಸಮ್ಮೇಳನವನ್ನು ತರಾತುರಿಯಲ್ಲಿ ಆಯೋಜಿಸುವುದು ಬೇಡ. ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ನ ಭ್ರಷ್ಟಾಚಾರದ ತನಿಖೆಯ ಬಳಿಕ ಜನವರಿ ಅಥವಾ ಫೆಬ್ರವರಿಯಲ್ಲಿ ಸಮ್ಮೇಳನ ನಡೆಯಲಿ. ಈ ಸಂಬಂಧ ಸರ್ಕಾರಕ್ಕೆ ಮನವರಿಕೆ ಮಾಡಿಕೊಡಬೇಕು ಎಂದು ವಿವಿಧ ಕನ್ನಡ ಸಂಘಟನೆಗಳು, ಮುಖಂಡರ ಸಭೆಯಲ್ಲಿ ತೀರ್ಮಾನಿಸಲಾಯಿತು.

For and against voices about All India Kannada Sahitya Sammelana

ಈ ವೇಳೆ ಮಾತನಾಡಿದ ಇತಿಹಾಸತಜ್ಞ ಪ್ರೊ.ಪಿ.ವಿ.ನಂಜರಾಜೇ ಅರಸ್, ತರಾತುರಿಯಲ್ಲಿ ಸಮ್ಮೇಳನ ನಡೆಸುವ ಉದ್ದೇಶ ಏನು ಎಂದು ತಿಳಿಯುತ್ತಿಲ್ಲ. ಮೂರು ತಿಂಗಳ ಹಿಂದೆ ಸಭೆ ನಡೆಸಿ, ನವೆಂಬರ್‌ ನಲ್ಲಿ ಸಮ್ಮೇಳನ ಆಯೋಜಿಸುವುದು ಬೇಡ ಎಂದು ಒತ್ತಾಯಿಸಿದ್ದೆವು. ಇದಕ್ಕೆ ಸರ್ಕಾರ ಸಮ್ಮತಿಯನ್ನೂ ನೀಡಿತ್ತು ಎಂದರು.

ಮುಂದಿನ ವರ್ಷದ ಜನವರಿ ಅಥವಾ ಫೆಬ್ರವರಿಯಲ್ಲಿ ಸಮ್ಮೇಳನ ಆಯೋಜಿಸುವ ಸಾಧ್ಯತೆ ಇತ್ತು. ಆದರೆ ಇದೀಗ ಏಕಾಏಕಿ ನವೆಂಬರ್‌ನಲ್ಲಿ ಆಯೋಜಿಸುತ್ತಿರುವುದರ ಹಿಂದಿನ ಹುನ್ನಾರ ತಿಳಿಯುತ್ತಿಲ್ಲ. ಕಮಿಷನ್ ಏಜೆಂಟ್‌ಗಳು, ದಲ್ಲಾಳಿಗಳಿಗೆ ಮಾತ್ರ ಬೆಲೆ. ಸರಕಾರ ಯಾವುದೋ ಒತ್ತಡಕ್ಕೆ ಮಣಿದು ತರಾತುರಿಯಲ್ಲಿ ಸಮ್ಮೇಳನ ಆಯೋಜಿಸುತ್ತಿದೆ ಎಂದು ಆರೋಪಿಸಿದರು.

ಸಮ್ಮೇಳನಕ್ಕೆ ನಮ್ಮ ವಿರೋಧವಿಲ್ಲ. ಕಮಿಷನ್ ವ್ಯವಹಾರ, ಹಣ ನುಂಗುವುದನ್ನು ತಡೆಯುವುದೇ ನಮ್ಮ ಉದ್ದೇಶ ಎಂದು ಸರಕಾರಕ್ಕೆ ಮನವರಿಕೆ ಮಾಡಬೇಕು. ಇದೇ ತಿಂಗಳ ಹನ್ನೆರಡರಂದು ಲಾಂಛನ ಬಿಡುಗಡೆ ಮಾಡಲಿದ್ದು, ಅಂದು ಜಿಲ್ಲಾ ಉಸ್ತುವಾರಿ ಸಚಿವರನ್ನು ಭೇಟಿ ಮಾಡಿ ವಸ್ತುಸ್ಥಿತಿ ತಿಳಿಸಬೇಕು ಎಂದು ಹೇಳಿದರು.

ಸಮ್ಮೇಳನಕ್ಕೆ ಕೈ ಜೋಡಿಸುವಂತೆ ಸುದ್ದಿಗೋಷ್ಠಿ

23 ವರ್ಷಗಳ ನಂತರ ನಗರದಲ್ಲಿ ನಡೆಯುತ್ತಿರುವ ಕನ್ನಡದ ಹಬ್ಬವನ್ನು ಯಶಸ್ವಿಗೊಳಿಸಲು ಎಲ್ಲರೂ ತಮ್ಮ ವೈಯುಕ್ತಿಕ ಭಿನ್ನಾಭಿಪ್ರಾಯಗಳನ್ನು ಬದಿಗಿರಿಸಿ ಸಹಕರಿಸಬೇಕು. ಅಸಮಾಧಾನವಿದ್ದರೆ ಮಾತುಕತೆ ಮೂಲಕ ಬಗೆಹರಿಸಿಕೊಳ್ಳೋಣ ಎಂದು ಮೈಸೂರು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ನ ಕೆ.ಎಸ್.ಶಿವರಾಮು ಮುಕ್ತ ಆಹ್ವಾನವನ್ನು ನೀಡಿದರು.

For and against voices about All India Kannada Sahitya Sammelana

ನಾಡ ಹಬ್ಬಕ್ಕೆ ಕಳಂಕ ಬರದಂತೆ ನಡೆದುಕೊಳ್ಳೋಣ ಎಂದು ಸುದ್ದಿಗೋಷ್ಠಿಯಲ್ಲಿ ಕೋರಿದರು.. ಅಕ್ಟೋಬರ್ 12 ರಂದು, ಬೆಳಗ್ಗೆ 9.30ಕ್ಕೆ ಅರಮನೆ ಉತ್ತರ ದ್ವಾರದ ಕಸಾಪ ಸಭಾಂಗಣದಲ್ಲಿ ನಡೆಯುವ ಸಮಾರಂಭದಲ್ಲಿ ಜಿಲ್ಲಾ ಉಸ್ತುವಾರಿ ಸಚಿವರಾದ ಡಾ.ಎಚ್.ಸಿ.ಮಹದೇವಪ್ಪ ಅವರ ಕಾರ್ಯಾಲಯದ ಉದ್ಘಾಟನೆ ಹಾಗೂ ಲಾಂಛನ ಬಿಡುಗಡೆ ಇದೆ ಎಂದರು.

83 ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಲಾಂಛನ ಬಿಡುಗಡೆ ಸಮಾರಂಭದಲ್ಲಿ ಸಾಹಿತಿ ಸಿ.ಪಿ.ಕೃಷ್ಣ ಅಧ್ಯಕ್ಷತೆ ವಹಿಸುವರು, ಸಚಿವರಾದ ತನ್ವೀರ್ ಸೇಠ್, ಪಾಲಿಕೆ ಮಹಾಪೌರ ಎಂ.ಜೆ.ರವಿಕುಮಾರ್, ಸಂಸದರು, ವಿಧಾನ ಪರಿಷತ್ ಸದಸ್ಯರು ಸೇರಿದಂತೆ ಅನೇಕರು ಭಾಗವಹಿಸುವರು ಎಂದು ಮಾಹಿತಿ ನೀಡಿದರು.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
For and against voices about 83rd All India Kannada Sahitya Sammelana which will be decided to organise at Mysuru on November 24th to 26th.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ