ಅರಮನೆಗೆ ಪುಷ್ಪಗಳ ರಂಗವಲ್ಲಿ, ಮನಸ್ಸು ಪ್ರಫುಲ್ಲವಾಗಲಿ ಒಮ್ಮೆ ಬನ್ನಿ...

By: ಬಿ.ಎಂ.ಲವಕುಮಾರ್
Subscribe to Oneindia Kannada

ಮೈಸೂರು, ಡಿಸೆಂಬರ್ 27: ಐತಿಹಾಸಿಕ ಮೈಸೂರು ಅರಮನೆ ಆವರಣದಲ್ಲಿ ಏರ್ಪಡಿಸಿರುವ ಫಲಪುಷ್ಪ ಪ್ರದರ್ಶನ ಅರಮನೆಗೆ ಶೋಭೆ ತಂದಿದ್ದು, ಎಲ್ಲೆಂದರಲ್ಲಿ ಅರಳಿ ಕಂಗೊಳಿಸುತ್ತಿರುವ ಪುಷ್ಪರಾಣಿಯರು ನೋಡುಗರನ್ನು ತಮ್ಮತ್ತ ಸೆಳೆಯುತ್ತಿದ್ದಾರೆ.

ಕ್ರಿಸ್‍ಮಸ್ ಹಾಗೂ ಹೊಸವರ್ಷವನ್ನು ಆಚರಿಸುವ ಸಲುವಾಗಿಯೇ ಸಾಂಸ್ಕೃತಿಕ ನಗರಿಯತ್ತ ಆಗಮಿಸುವ ಪ್ರವಾಸಿಗರಿಗಾಗಿಅರಮನೆ ಆವರಣದಲ್ಲಿ ಪುಷ್ಪರಂಗವಲ್ಲಿಯನ್ನಿಟ್ಟು ಆಹ್ವಾನಿಸುತ್ತಿರುವಂತೆ ಈ ಪ್ರದರ್ಶನ ಭಾಸವಾಗುತ್ತಿದೆ. ನೂರಾರು ಬಗೆ ಪುಷ್ಪಗಿಡಗಳು, ಬೋನ್ಸಾಯ್, ಕ್ಯಾಕ್ಟಸ್, ಎಲೆಗಿಡಗಳು, ಹೂ ಬಳ್ಳಿಗಳು ತಮ್ಮದೇ ಸೌಂದರ್ಯದಿಂದ ಎಲ್ಲರ ಮನಕ್ಕೆ ಲಗ್ಗೆಯಿಡುತ್ತಿವೆ.

ಸುಮಾರು ಒಂದೂವರೆ ಎಕರೆ ಪ್ರದೇಶದಲ್ಲಿ ಏರ್ಪಡಿಸಿರುವ ಫಲಪುಷ್ಪ ಪ್ರದರ್ಶನ ನಿಧಾನವಾಗಿ ಹೆಜ್ಜೆ ಹಾಕುತ್ತಾ ಸಾಗುವ ವೀಕ್ಷಕರ ಕಣ್ಮನ ತಣಿಸುತ್ತಿವೆ. ತನ್ನ ಬಣ್ಣ, ಆಕಾರ, ಚೆಲುವುಗಳಿಂದ ಒಂದಕ್ಕಿಂತ ಮತ್ತೊಂದು ಕಡಿಮೆ ಇಲ್ಲ ಎಂಬಂತೆ ತಮ್ಮ ಚೆಲುವನ್ನು ಸೂಸುತ್ತಿವೆ. ಇನ್ನು ಇಲ್ಲಿ ಕುಂಡಗಳನ್ನು ಜೋಡಿಸಿಟ್ಟ ರೀತಿ ಮನೋಜ್ಞವಾಗಿದೆ.[ನೀರು ಖಾಲಿಯಾದ ಕಬಿನಿಯಲ್ಲಿ ಎಲ್ಲಿಂದಲೋ ಬಂದ ಹಕ್ಕಿಗಳ ಸಂಭ್ರಮ]

ಇದಕ್ಕಾಗಿಯೇ ಸುಮಾರು ಹತ್ತು ಸಾವಿರಕ್ಕೂ ಹೆಚ್ಚು ಕುಂಡಗಳನ್ನು ಹಾಗೂ ಲಕ್ಷದಷ್ಟು ಹೂಗಳನ್ನು ಬಳಸಲಾಗಿದೆ. ಈ ಪುಷ್ಟಗಳಲೋಕದ ನಡು ನಡುವೆ ಒಂಟೆ, ಕುದುರೆಗಳು ಕಾಣಸಿಗುತ್ತವೆ. ಚುಕುಬುಕು ರೈಲು, ಆಧುನಿಕತೆಯ ಭರದಲ್ಲಿ ಕಾಲಗರ್ಭದಲ್ಲಿ ಲೀನವಾಗುತ್ತಿರುವ ಹಳೆಯ ಕಾಲದ ಸ್ಕೂಟರ್, ಜೀಪುಗಳನ್ನು ಅಲಂಕಾರ ಮಾಡಿ ಪ್ರದರ್ಶನಕ್ಕಿಡಲಾಗಿದೆ.

ಇತಿಹಾಸ ಹೇಳುವ ಫಿರಂಗಿಗಳು

ಇತಿಹಾಸ ಹೇಳುವ ಫಿರಂಗಿಗಳು

ಪುಷ್ಟದಲ್ಲೇ ನಿರ್ಮಿಸಲಾದ ದಸರಾ ಅಂಬಾರಿ, ಮೈಸೂರು ಒಡೆಯರ್, ಸೇನಾಧಿಪತಿಗಳೊಂದಿಗೆ ಹೊರಟ ಪ್ರತಿಮೆಗಳು ಫಲಪುಷ್ಪ ಪ್ರದರ್ಶನಕ್ಕೆ ಮೆರಗು ನೀಡುತ್ತಿವೆ. ಹಿಂದಿನ ಕಾಲದಲ್ಲಿ ಯುದ್ಧಕ್ಕೆ ಬಳಸಲಾಗುತ್ತಿದ್ದ ಏಳು ಫಿರಂಗಿಗಳು, ನಾಗರಿಕತೆಯ ನಾಗಲೋಟದಲ್ಲಿ ಹೊಸಹೊಸ ವಾಹನಗಳ ಆವಿಷ್ಕಾರದ ನಡುವೆಯೂ ಸಾಂಪ್ರದಾಯಿಕವಾಗಿ ನಡೆದು ಬಂದಿರುವ ಮೈಸೂರಿನ ಸಂಸ್ಕೃತಿಯನ್ನು ಸಾರುವ ಟಾಂಗಾಕ್ಕೂ ಇಲ್ಲಿ ಅವಕಾಶ ಮಾಡಿಕೊಡಲಾಗಿದೆ.

ಎರಡು ಸಾವಿರದ ಹೊಸ ನೋಟುಗಳು

ಎರಡು ಸಾವಿರದ ಹೊಸ ನೋಟುಗಳು

ಇವು ಬರೀ ಪುಷ್ಟಗಿಡಗಳ ಜೋಡಣೆಯಷ್ಟೇ ಅಲ್ಲ. ಗತಕಾಲದ ಮತ್ತು ಪ್ರಸ್ತುತ ಬದುಕಿನ ಹಲವು ಸನ್ನಿವೇಶಗಳನ್ನು ಇಲ್ಲಿ ಹೇಳುವ ಪ್ರಯತ್ನ ಮಾಡಲಾಗಿದೆ. ಹಳೆಯ 500, 1000 ರುಪಾಯಿಗಳಿಗೆ ವಿದಾಯ ಹೇಳಿ ನೂತನವಾಗಿ ಕೈಸೇರಿರುವ 2000 ರುಪಾಯಿ ನೋಟುಗಳು ಮುದ್ರಣಗೊಳ್ಳುತ್ತಿರುವ ದೃಶ್ಯಗಳನ್ನು ಕೂಡ ಇಲ್ಲಿ ಸೃಷ್ಟಿ ಮಾಡಲಾಗಿದೆ.

ಬೃಹತ್ ಶಿವಲಿಂಗ

ಬೃಹತ್ ಶಿವಲಿಂಗ

ಪುಷ್ಟಗಳಲ್ಲೇ ಸೃಷ್ಟಿಯಾದ ಚಿಟ್ಟೆಗಳು ಹಾರಾಡದೆ ಅಲ್ಲೆ ಕುಳಿತಿದ್ದರೆ, ರೋಬೋಟ್ ನಮ್ಮನ್ನೇ ದಿಟ್ಟಿಸಿದಂತೆ ಭಾಸವಾಗುತ್ತದೆ. ಹೂ ಕುಂಡಗಳ ಕೋಟೆ ನಡುವಿನ ಬಯಲಲ್ಲಿ ಗುಲಾಬಿ ಹೂಗಳಿಂದಲೇ ಸೃಷ್ಟಿಯಾದ ಮೊಲ ಓಡಲು ತಯಾರಾಗಿ ನಿಂತಂತಿದೆ. ವಿವಿಧ ಬಗೆಯ ಪುಷ್ಟಗಿಡಗಳು ಹಾಗೂ ಗುಲಾಬಿ ಹೂಗಳಿಂದ ನಿರ್ಮಾಣಗೊಂಡ ಬೃಹತ್ ಶಿವಲಿಂಗ ಫಲಪುಷ್ಪ ಪ್ರದರ್ಶನಕ್ಕೊಂದು ಮುಕುಟ ಮಣಿಯಾಗಿದೆ.

ಜನವರಿ 1ರವರೆಗೆ ಪ್ರದರ್ಶನ

ಜನವರಿ 1ರವರೆಗೆ ಪ್ರದರ್ಶನ

ಸಂಜೆ ಆಗುತ್ತಿದ್ದಂತೆಯೇ ಅರಮನೆ ಬೆಳಕಿನಲ್ಲಿ ಮಿಂದೇಳುತ್ತಿರುವ ಪುಷ್ಪರಾಣಿಯರನ್ನು ನೋಡಲು ಕಣ್ಣುಗಳೇ ಸಾಲದು. ಪುಷ್ಪವನದಲ್ಲಿ ಪುಷ್ಪ ರಾಣಿಯರ ನಡುವೆ ಹೆಜ್ಜೆ ಹಾಕುತ್ತಾ ಖುಷಿ ಪಡಬೇಕಾದರೆ ಖಂಡಿತಾ ಮೈಸೂರು ಅರಮನೆಯ ಆವರಣದಲ್ಲಿ ಎದ್ದುನಿಂತಿರುವ ಪುಷ್ಪಲೋಕಕ್ಕೆ ಭೇಟಿ ನೀಡಬಹುದು. ನೋಡುಗರಿಗಾಗಿಯೇ ಈ ಪುಷ್ಪಲೋಕ ಜನವರಿ 1ರವರೆಗೂ ಬಾಗಿಲು ತೆರೆದು ನಿಂತಿರುತ್ತದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Flower and Fruit show is organising in Mysuru palace till January 1st. Camel, Horse, Rail structure created with flowers.
Please Wait while comments are loading...