ಮೈಸೂರಲ್ಲಿ ವಿಮಾನ ಹಾರಾಟ... ಮತ್ತೆ ಚಿಗುರಿದ ಕನಸು!

By: ಬಿಎಂ ಲವಕುಮಾರ್
Subscribe to Oneindia Kannada

ಮೈಸೂರು, ಜುಲೈ 30: ಮತ್ತೆ ಮೈಸೂರಿನ ಮಂಡಕಳ್ಳಿಯ ವಿಮಾನ ನಿಲ್ದಾಣಕ್ಕೆ ವಿಮಾನ ಬಂದಿಳಿಯುವ ಆಶೆ ಚಿಗುರಿದೆ. ಇದುವರೆಗೆ ಆವರಿಸಿದ್ದ ನೀರವ ಮೌನ ಹೋಗಿ ನಿಲ್ದಾಣದಲ್ಲಿ ವಿಮಾನ ಬಂದಿಳಿಯುವ, ಹಾರಾಡುವ, ಜನರ ಓಡಾಟ ಎಲ್ಲವೂ ಆರಂಭವಾಗಿ ಹೊಸಕಳೆ ಬರಲಿದೆ.

ಅದ್ಯಾಕೋ ಗೊತ್ತಿಲ್ಲ ಈಗಾಗಲೇ ಎರಡ್ಮೂರು ಸಂಸ್ಥೆಗಳು ಇಲ್ಲಿಂದ ವಿಮಾನಯಾನ ಆರಂಭಿಸಿ ನಷ್ಟ ಅನುಭವಿಸಿ ತೆಪ್ಪಗಾಗಿವೆ. ಹೀಗಿರುವಾಗ ಇದೀಗ ಸರ್ಕಾರದ ಉಡಾನ್ ಯೋಜನೆಯಡಿ ಮೂರು ವರ್ಷದ ಒಪ್ಪಂದದೊಂದಿಗೆ ವಿಮಾನಯಾನ ಆರಂಭವಾಗುತ್ತಿದೆ. ಈ ಬಗ್ಗೆ ವಿಮಾನಯಾನ ಆರಂಭಿಸುವ ಸಂಸ್ಥೆಯ ಅಧಿಕಾರಿಗಳು ಈಗಾಗಲೇ ಮಂಡಕಳ್ಳಿ ವಿಮಾನ ನಿಲ್ದಾಣವನ್ನು ಪರಿಶೀಲನೆ ನಡೆಸಿದ್ದಾರೆ. ಎಲ್ಲವೂ ಸರಿಹೋದರೆ ಟ್ರೂಜೆಟ್ ಸಂಸ್ಥೆ ಮತ್ತು ಏರ್ ಒಡಿಸ್ಸಾ ಸಂಸ್ಥೆಗೆ ಸೇರಿದ ವಿಮಾನಗಳು ಮೈಸೂರಿನಿಂದ ಚೆನ್ನೈಗೆ ಸೆಪ್ಟಂಬರ್‍ನಿಂದ ಹಾರಾಟ ನಡೆಸಲಿವೆ.

ಮೈಸೂರು-ಚೆನ್ನೈ ವಿಮಾನಯಾನ: ದಸರಾ ಹೊತ್ತಿಗೆ ಆರಂಭ!

ಹಾಗೆ ನೋಡಿದರೆ ಇದುವರೆಗೆ ಮೈಸೂರಿನಿಂದ ವಿಮಾನಯಾನ ಆರಂಭಿಸಿದ ಸಂಸ್ಥೆಗಳೆಲ್ಲವೂ ಆರಂಭದಲ್ಲಿ ಹುಮ್ಮಸ್ಸಿನಲ್ಲಿಯೇ ಆರಂಭಿಸಿ ಬಳಿಕ ನಷ್ಟ ಭರಿಸಲಾಗದೆ ಸಂಚಾರವನ್ನು ಸ್ಥಗಿತಗೊಳಿಸಿದ್ದು ಇತಿಹಾಸ.

ವಿಮಾನ ಹಾರಾಟಕ್ಕೆ ವಿಘ್ನ

ವಿಮಾನ ಹಾರಾಟಕ್ಕೆ ವಿಘ್ನ

ಅದ್ಯಾಕೋ ಗೊತ್ತಿಲ್ಲ. ಮೈಸೂರಿಗೂ ವಿಮಾನಯಾನಕ್ಕೂ ಸರಿ ಬರುತ್ತಲೇ ಇಲ್ಲ. ವಿಮಾನಯಾನ ಆರಂಭವಾದರೆ ಪ್ರವಾಸಿಗರು ಮೈಸೂರಿಗೆ ಬರುತ್ತಾರೆ. ಪ್ರವಾಸೋದ್ಯಮ ಅಭಿವೃದ್ಧಿಯಾಗುತ್ತದೆ ಎಂಬ ನೂರಾರು ಕನಸುಗಳಿದ್ದವು. ಆದರೆ ಅದ್ಯಾವುದೂ ಇದುವರೆಗೆ ನನಸಾದಂತೆ ಕಂಡು ಬಂದಿಲ್ಲ.

ಮೈಸೂರಿಗೆ ಒಂದು ಒಳ್ಳೆಯ ವಿಮಾನ ನಿಲ್ದಾಣ ಬೇಕೆಂಬ ಅಭಿಲಾಷೆ ಮೈಸೂರಿಗರಿಗೆ ಮೊದಲಿನಿಂದಲೂ ಇತ್ತು. ಒಂದೊಳ್ಳೆಯ ನಿಲ್ದಾಣಕ್ಕೆ ಹೋರಾಟವೂ ನಡೆದಿತ್ತು. ಹಲವು ಸಂಘಟನೆಗಳ ಹೋರಾಟದ ಬಳಿಕ ವಿಮಾನ ನಿಲ್ದಾಣವೇನೋ ನಿರ್ಮಾಣಗೊಂಡಿತ್ತು.

ವಿಮಾನಯಾನ ಆರಂಭಿಸಿದ್ದ ಕಿಂಗ್ ಫಿಷರ್

ವಿಮಾನಯಾನ ಆರಂಭಿಸಿದ್ದ ಕಿಂಗ್ ಫಿಷರ್

ಆದರೆ ಇಲ್ಲಿಗೆ ವಿಮಾನ ಸಂಚಾರಕ್ಕೆ ಯಾವ ಸಂಸ್ಥೆಗಳು ಒಪ್ಪಿರಲಿಲ್ಲ. ಆಗ ಮೊದಲಿಗೆ ಮುಂದೆ ಬಂದಿದ್ದು ವಿಜಯ ಮಲ್ಯ ಮಾಲೀಕತ್ವದ ಕಿಂಗ್‍ಫಿಶರ್ ಏರ್‍ಲೈನ್ಸ್.

2010 ಅಕ್ಟೋಬರ್ 1ರಂದು ವಿಜಯ್ ಮಲ್ಯ ಒಡೆತನದ ಕಿಂಗ್‍ಫಿಶರ್ ವಿಮಾನ ಮೈಸೂರಿನಿಂದ ಬೆಂಗಳೂರು ಮೂಲಕ ಚೆನ್ನೈಗೆ ಹಾರಾಡುವುದರೊಂದಿಗೆ ಆ ಕೊರಗನ್ನು ನೀಗಿಸಿತ್ತು. ಆದರೆ ಕೆಲವೇ ಸಮಯಗಳಲ್ಲಿ ಅದು ನಷ್ಟದ ಸುಳಿಗೆ ಸಿಲುಕಿ ಹಾರಾಟ ನಿಲ್ಲಿಸಿತ್ತು.

ಸ್ಪೈಸ್ ಜೆಟ್ ಕೂಡ ಸಂಚಾರ ನಿಲ್ಲಿಸಿತ್ತು

ಸ್ಪೈಸ್ ಜೆಟ್ ಕೂಡ ಸಂಚಾರ ನಿಲ್ಲಿಸಿತ್ತು

2013ರಲ್ಲಿ ಸ್ಪೈಸ್ ಜೆಟ್ ಸಂಸ್ಥೆ ವಿಮಾನಯಾನ ಆರಂಭಿಸಿತ್ತು. ಅದು ಕೂಡ ಹೆಚ್ಚು ದಿನ ನಡೆಯಲಿಲ್ಲ. ಆ ನಂತರ 2015ರ ಸೆಪ್ಟಂಬರ್ ನಲ್ಲಿ ಏರ್ ಅಲೆಯನ್ಸ್ ಆರಂಭವಾಯಿತು. ಅದು ಕೂಡ ಕೆಲವೇ ಸಮಯಗಳಲ್ಲಿ ಹಾರಾಟ ಸ್ಥಗಿತಗೊಳಿಸಿತ್ತು. ಅಲ್ಲಿಂದ ಇಲ್ಲಿವರೆಗೆ ನಿಲ್ದಾಣ ಬಿಕೋ ಎನ್ನುತ್ತಿತ್ತು. ಈಗ ಮತ್ತೆ ವಿಮಾನ ಹಾರಾಡಲಿದೆ ಎಂಬ ಸುದ್ದಿ ಒಂದಷ್ಟು ಭರವಸೆಗಳನ್ನು ಹುಟ್ಟು ಹಾಕುತ್ತಿದೆ.

ಮಂಡಕಳ್ಳಿ ನಿಲ್ದಾಣದ ಕುರಿತಂತೆ

ಮಂಡಕಳ್ಳಿ ನಿಲ್ದಾಣದ ಕುರಿತಂತೆ

ಮೈಸೂರು ನಗರದ ದಕ್ಷಿಣಕ್ಕೆ ನಂಜನಗೂಡಿಗೆ ತೆರಳುವ ರಸ್ತೆಯಲ್ಲಿ ಸುಮಾರು ಹತ್ತು ಕಿ.ಮೀ. ದೂರದಲ್ಲಿರುವ ಮಂಡಕಳ್ಳಿಯಲ್ಲಿ ವಿಮಾನ ನಿಲ್ದಾಣ ನಿರ್ಮಾಣವಾಗಿದೆ. ಹಾಗಾಗಿ ಮೈಸೂರು ವಿಮಾನ ನಿಲ್ದಾಣ ಎನ್ನುವ ಬದಲು ಹೆಚ್ಚಿನವರು ಮಂಡಕಳ್ಳಿ ವಿಮಾನ ನಿಲ್ದಾಣ ಎಂದು ಕರೆಯುವುದೇ ರೂಢಿಯಾಗಿದೆ. (ಈ ನಿಲ್ದಾಣಕ್ಕೆ ಪ್ರತ್ಯೇಕ ಬಸ್ ವ್ಯವಸ್ಥೆಯಿಲ್ಲವಾದರೂ ನಂಜನಗೂಡು ಕಡೆಗೆ ತೆರಳುವ ನಗರ ಸಾರಿಗೆ ಇನ್ನಿತರ ವಾಹನಗಳಲ್ಲಿ ತೆರಳಬಹುದಾಗಿದೆ.)

1947ರಲ್ಲಿಯೇ ಅಂದಿನ ಮಹಾರಾಜರು ಸುಮಾರು 168 ಎಕರೆಯ ಭೂಮಿಯನ್ನು ವಿಮಾನ ನಿಲ್ದಾಣಕ್ಕೆ ಕಾಯ್ದಿರಿಸಿದ್ದರು. ಆ ನಂತರ 1950ರಲ್ಲಿ ವಿಮಾನ ನಿಲ್ದಾಣ ಪ್ರಾರಂಭಿಸಲಾಯಿತು ಎಂದು ಹೇಳಲಾಗುತ್ತದೆ. ಆ ದಿನಗಳಲ್ಲಿ ದಸರಾ ಮಹೋತ್ಸವದ ಸಂದರ್ಭ ಮಾತ್ರ "ವಿಮಾನ ವಿಹಾರ" ನಡೆಸಲಾಗುತ್ತಿತ್ತು. ನಂತರದ ವರ್ಷಗಳಲ್ಲಿ ಅಂದರೆ 1958ರಲ್ಲಿ ನಾಲ್ಕು ಆಸನಗಳುಳ್ಳ ಲಘು ವಿಮಾನ ಇಲ್ಲಿ ಇಳಿಯುತ್ತಿತ್ತು.

Siddaramaiah Says, Mysuru Dasara Jamboo Savari Will Be Held On Sep 30th | Oneindia Kananda
ಚಾಮುಂಡಿಬೆಟ್ಟದ ಭಯ

ಚಾಮುಂಡಿಬೆಟ್ಟದ ಭಯ

ಇಷ್ಟೆಲ್ಲದರ ನಡುವೆ ಮೈಸೂರು ವಿಮಾನ ನಿಲ್ದಾಣ ಸುರಕ್ಷವಲ್ಲ ಎಂಬ ವಾದವನ್ನು ಕೆಲವು ಸಂಘ ಸಂಸ್ಥೆಗಳು ಮಾಡುತ್ತಿವೆ. ಅವರ ಪ್ರಕಾರ ಸಮುದ್ರ ಮಟ್ಟದಿಂದ 2865 ಅಡಿ ಎತ್ತರವಿರುವ ಚಾಮುಂಡಿಬೆಟ್ಟವು ರಾತ್ರಿ ವೇಳೆ ವಿಮಾನ ಹಾರಾಟಕ್ಕೆ ತೊಂದರೆ ನೀಡಲಿದೆ ಎಂಬ ಮಾತುಗಳು ಕೇಳಿ ಬರುತ್ತಿವೆ. ಅದೇನೇ ಇರಲಿ ಲಘು ವಿಮಾನ ಹಾರಾಟಕ್ಕೆ ಯಾವುದೇ ಅಡ್ಡಿಯಿಲ್ಲ ಎನ್ನುವುದರಲ್ಲಿ ಎರಡು ಮಾತಿಲ್ಲ.

ಇನ್ನು ಮುಂದೆಯಾದರೂ ಮಂಡಕಳ್ಳಿ ವಿಮಾನ ನಿಲ್ದಾಣಕ್ಕೆ ವಿಮಾನಗಳು ಬರುತ್ತವೆಯಲ್ಲ ಎಂಬುವುದೇ ಸಂತಸದ ಸಂಗತಿಯಾಗಿದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
The planes will return to Mandakalli airport in Mysuru. Airline starts their services with a three-year contract under the government's Udaan project. Already airline officials have reviewed Mandakalli airport.
Please Wait while comments are loading...