ಮೈಸೂರು ನೋಟು ಮುದ್ರಣಾಲಯದಲ್ಲಿ ಅಗ್ನಿ ಅವಘಡ

By: ಮೈಸೂರು ಪ್ರತಿನಿಧಿ
Subscribe to Oneindia Kannada

ಮೈಸೂರು, ಜುಲೈ 26 : ನಗರದ ಮೇಟಗಳ್ಳಿಯಲ್ಲಿರುವ ಭಾರತೀಯ ರಿಸರ್ವ್ ಬ್ಯಾಂಕ್‌ನ ನೋಟು ಮುದ್ರಣ ಘಟಕದಲ್ಲಿ ಬಾಯ್ಲರ್ ಸ್ಫೋಟದಿಂದಾಗಿ ಸಂಭವಿಸಿದ ಅಗ್ನಿ ಅವಘಡದಲ್ಲಿ ಭಾರೀ ನಷ್ಟವುಂಟಾಗಿದೆ. ಆದರೆ ಸಕಾಲದಲ್ಲಿ ಅಗ್ನಿಶಾಮಕ ಸಿಬ್ಬಂದಿ ತೆರಳಿ ಬೆಂಕಿಯನ್ನು ನಂದಿಸಿದ್ದರಿಂದ ಸಂಭವಿಸಬಹುದಾಗಿದ್ದ ಭಾರೀ ಅನಾಹುತ ತಪ್ಪಿದಂತಾಗಿದೆ.

ಸಾರ್ವಜನಿಕ ನಿರ್ಬಂಧಿತ ಪ್ರದೇಶವಾಗಿರುವುದಲ್ಲದೆ, ಬಿಗಿ ಬಂದೋಬಸ್ತ್‌ನಲ್ಲಿ ನೋಟು ಮುದ್ರಣ ಘಟಕವಿದ್ದು ಇಲ್ಲಿನ ಬಾಯ್ಲರ್ ಟ್ಯಾಂಕ್‌ನಲ್ಲಿ ಶಾಖೋತ್ಪತ್ತಿಯಾದ ಪರಿಣಾಮ ಅದರಲ್ಲಿನ ಫರ‍್ನೇಸ್ ಆಯಿಲ್ ಬೆಂಕಿ ಕಾಣಿಸಿಕೊಂಡು ಸ್ಪೋಟವುಂಟಾಗಿತ್ತು. [ಚಿಕ್ಕದೇವಮ್ಮ ಅಮ್ಮನವರ ಪ್ರತಿಷ್ಠಾಪನೆ; ಮೂಲವಿಗ್ರಹಕ್ಕೆ ಧಕ್ಕೆ?]

Fire accident in Bharatiya Reserve Bank Note Mudran Mysuru

ಇಲ್ಲಿ ಎರಡು ಫರ‍್ನೇಸ್ ಆಯಿಲ್ ಟ್ಯಾಂಕ್ ಮತ್ತು ಒಂದು ಡೀಸೆಲ್ ಟ್ಯಾಂಕ್ ಇದ್ದು, ಒಂದು ಟ್ಯಾಂಕ್‌ನಲ್ಲಿ ಸೋಮವಾರ ಮಧ್ಯಾಹ್ನದ ಮೂರು ಗಂಟೆ ವೇಳೆಯಲ್ಲಿ ಶಾಖ ಉತ್ಪತ್ತಿಯಾಗಿ ಬೆಂಕಿ ಕಾಣಿಸಿಕೊಂಡು ಸ್ಪೋಟವುಂಟಾಯಿತು. ತಕ್ಷಣ ಅಗ್ನಿಶಾಮಕ ಠಾಣೆಗೆ ಮಾಹಿತಿ ನೀಡಲಾಗಿ, ಬನ್ನಿಮಂಟಪ, ಸರಸ್ವತಿಪುರಂ ಮತ್ತು ಹೆಬ್ಬಾಳು ಅಗ್ನಿಶಾಮಕ ಠಾಣೆಯ ಸಿಬ್ಬಂದಿ ತೆರಳಿದ್ದಾರೆ.

Fire accident in Bharatiya Reserve Bank Note Mudran Mysuru

ಸುಮಾರು 30 ಸಿಬ್ಬಂದಿ 5 ವಾಹನಗಳಲ್ಲಿ ಬೆಂಕಿಯನ್ನು ನಂದಿಸಲು ಹರಸಾಹಸಪಡಬೇಕಾಯಿತು. ಸುಮಾರು ಎರಡು ಗಂಟೆಗಳ ಕಾಲ ನಡೆಸಿದ ಕಾರ್ಯಾಚರಣೆ ನಡೆಸಿ ಬೆಂಕಿಯನ್ನು ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ. ಬೆಂಕಿಯ ಕೆನ್ನಾಲಿಗೆ ಪಕ್ಕದ ಟ್ಯಾಂಕರ್‌ಗಳಿಗೆ ತಗುಲಿದ್ದರೆ ಭಾರೀ ಪ್ರಮಾಣದಲ್ಲಿ ಅಗ್ನಿ ಅನಾಹುತ ಸಂಭವಿಸುವ ಸಾಧ್ಯತೆಯಿತ್ತು.

Fire accident in Bharatiya Reserve Bank Note Mudran Mysuru

ಬೆಂಕಿ ಅವಘಡ ಸಂಭವಿಸಿದ ಹಿನ್ನಲೆಯಲ್ಲಿ ಮಂಗಳವಾರ ಮಧ್ಯಾಹ್ನದವರೆಗೆ ಮುದ್ರಣದ ಕೆಲಸವನ್ನು ತಡೆಹಿಡಿಯಲಾಗಿದೆ ಎಂದು ಆರ್‌ಬಿಐ ಮೂಲಗಳು ತಿಳಿಸಿದ್ದು, ಬೆಂಕಿ ಅನಾಹುತದಿಂದ ದುಸ್ಥಿತಿಗೊಳಗಾಗಿರುವ ಟ್ಯಾಂಕರ್‌ನ್ನು ದುರಸ್ತಿಗೊಳಿಸುವ ಕಾರ್ಯ ಸಮಾರೋಪಾದಿಯಲ್ಲಿ ಸಾಗಿದೆ ಎನ್ನಲಾಗಿದೆ.

ಗ್ಯಾಸ್ ಸೋರಿಕೆ : ತಪ್ಪಿದ ಅನಾಹುತ

ಹುಣಸೂರು : ಮಂಗಳೂರಿನ ಭಾರತ್ ಪೆಟ್ರೋಲಿಯಂ ಕಂಪನಿಯಿಂದ ಮೈಸೂರಿನ ಗ್ಯಾಸ್ ಏಜೆನ್ಸಿಗೆ ಲಾರಿಯಲ್ಲಿ ಸರಬರಾಜಾಗುತ್ತಿದ ಗ್ಯಾಸ್ ಸಿಲಿಂಡರ್ ಸೋರಿಕೆಯುಂಟಾಗಿ ಕೆಲಕಾಲ ಆತಂಕದ ವಾತಾವರಣ ಸೃಷ್ಟಿಯಾಗಿತ್ತಾದರೂ ಸಕಾಲದಲ್ಲಿ ಅಗ್ನಿಶಾಮಕ ದಳ ಆಗಮಿಸಿ ಸಂಭವಿಸಬಹುದಾಗಿದ್ದ ಭಾರೀ ಅನಾಹುತ ತಪ್ಪಿದೆ. [ನಗರದ ಬಡ ಕುಟುಂಬಗಳಿಗೆ ಹೆಚ್ಚುವರಿ ಸಿಲಿಂಡರ್]

LPG cylinder leakage

ಮಂಗಳೂರಿನ ಲಾರಿ(ಕೆಎ-19-ಎಸಿ-8874)ಯಲ್ಲಿ ಸುಮಾರು ಮೂನ್ನೂರಕ್ಕೂ ಹೆಚ್ಚು ಸಿಲಿಂಡರ್‌ಗಳನ್ನು ಮೈಸೂರಿಗೆ ಸಾಗಿಸಲಾಗುತ್ತಿತ್ತು. ಹುಣಸೂರು ನಗರದ ಹೊರವಲಯದ ಯಶೋಧಪುರ ಬಳಿ ಸಿಲಿಂಡರ್‌ನಲ್ಲಿ ಸೋರಿಕೆ ಕಂಡು ಬಂದಿದೆ. ವಾಸನೆ ಮೂಗಿಗೆ ಬಡಿಯುತ್ತಿದ್ದಂತೆಯೇ ಲಾರಿಯನ್ನು ಜನವಸತಿ ಪ್ರದೇಶದ ರಸ್ತೆ ಬದಿ ನಿಲ್ಲಿಸಿ ಬಳಿಕ ಅಗ್ನಿಶಾಮಕ ಠಾಣೆಗೆ ಮಾಹಿತಿ ನೀಡಿದ್ದಾರೆ.

ತಕ್ಷಣ ಸ್ಥಳಕಾಗಮಿಸಿದ ಅಗ್ನಿಶಾಮಕ ಠಾಣಾಧಿಕಾರಿ ಪಂಡಿತ್ ಆರಾಧ್ಯ ಸಿಬ್ಬಂದಿ ಸತ್ಯನಾರಯಣ, ರವಿ ಪ್ರಸಾದ್, ಮಹದೇವ್ ಹಾಗೂ ಗೃಹ ರಕ್ಷಕ ಸಿಬ್ಬಂದಿ ಸತೀಶ್ ಸೋರಿಕೆಯಾಗುತ್ತಿದ್ದ ಸಿಲಿಂಡರನ್ನು ಬೇರ್ಪಡಿಸಿ ಆಗಬಹುದಾದ ಭಾರೀ ಅನಾಹುತವನ್ನು ತಪ್ಪಿಸಿ ನಿಟ್ಟುಸಿರು ಬಿಡುವಂತೆ ಮಾಡಿದ್ದಾರೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ - ನೋಂದಣಿ ಉಚಿತ!

English summary
Fire accident has occured in Bharatiya Reserve Bank Note Mudran Pvt Ltd in Mysuru on Monday. Fire fighters doused the fire immediately and averted big accident.
Please Wait while comments are loading...