ತಮಿಳುನಾಡಿಗೆ ಮತ್ತೆ ಹರಿದ ಕಾವೇರಿ, ನದಿಗಿಳಿದು ರೈತರ ಪ್ರತಿಭಟನೆ

By: ಮೈಸೂರು ಪ್ರತಿನಿಧಿ
Subscribe to Oneindia Kannada

ಮೈಸೂರು, ಜುಲೈ 22 : ಕೃಷ್ಣ ರಾಜ ಸಾಗರ ಮತ್ತು ಕಬಿನಿ ಜಲಾಶಯದಿಂದ ತಮಿಳುನಾಡಿಗೆ ನೀರು ಬಿಡುತ್ತಿರುವುದನ್ನು ನಿಲ್ಲಿಸಿ ನಾಲೆಗಳಿಗೆ ನೀರು ಹರಿಸುವಂತೆ ಆಗ್ರಹಿಸಿ ತಿ.ನರಸೀಪುರದ ಶ್ರೀ ಗುಂಜಾನರಸಿಂಹ ಸ್ವಾಮಿ ದೇವಾಲಯದ ಬಳಿ ಕಾವೇರಿ ಕಪಿಲಾ ನದಿಗೆ ಇಳಿದು ರೈತರು ಶನಿವಾರ ಪ್ರತಿಭಟನೆ ನಡೆಸಿದರು.

ಭಾಗಮಂಡಲದಲ್ಲಿ ಭಾರೀ ಮಳೆ: ಉಕ್ಕಿದ ಕಾವೇರಿ, ಜನ ಜೀವನ ಅಸ್ತವ್ಯಸ್ತ

ರಾಜ್ಯ ಕಬ್ಬು ಬೆಳೆಗಾರರ ಸಂಘದ ಜಿಲ್ಲಾ ಕಾರ್ಯದರ್ಶಿ ಕಿರಗಸೂರು ಶಂಕರ್ ನೇತೃತ್ವದಲ್ಲಿ ನಡೆದ ಪ್ರತಿಭಟನೆಯಲ್ಲಿ ನೂರಾರು ರೈತರು ಕಾವೇರಿ ನದಿಗೆ ಇಳಿದು ರಾಜ್ಯ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

Farmers protest against release of water to Tamil Nadu

ತಮಿಳುನಾಡಿಗೆ ಹರಿಯಲು ಬಿಟ್ಟಿರುವ ನೀರನ್ನು ತಕ್ಷಣಕ್ಕೆ ನಿಲ್ಲಿಸಿ ಕಬಿನಿ ಎಡ ಮತ್ತು ಬಲದಂಡ ನಾಲೆಗಳಿಗೆ ಕೂಡಲೇ ಹರಿಸುವ ತನಕ ನದಿಯಿಂದ ಹೊರ ಬರುವುದಿಲ್ಲ ಎಂದು ಪಟ್ಟುಹಿಡಿದರು. ಪೊಲೀಸರು ಪ್ರತಿಭಟನಾಕಾರರ ಮನವೊಲಿಸಿ ಪ್ರತಿಭಟನೆ ನಿಲ್ಲಿಸುವಂತೆ ಮನವಿ ಮಾಡಿದರೂ ಯಾವುದೇ ಪ್ರಯೋಜನವಾಗಲಿಲ್ಲ.

'ಕಳೆದ ವರ್ಷಕ್ಕಿಂತ ಭೀಕರವಾಗಿದೆ ರಾಜ್ಯದ ಪ್ರಮುಖ ಜಲಾಶಯಗಳ ಸ್ಥಿತಿ'

ಈ ವೇಳೆ ಮಾತನಾಡಿದ ರಾಜ್ಯ ಕಬ್ಬು ಬೆಳೆಗಾರರ ಸಂಘದ ಜಿಲ್ಲಾ ಕಾರ್ಯದರ್ಶಿ ಕಿರಗಸೂರು ಶಂಕರ್, ರಾಜ್ಯದಲ್ಲಿ ಕಳೆದ ಮೂರು ವರ್ಷದಿಂದ ಮಳೆ ಬೆಳೆ ಇಲ್ಲದೆ ರೈತರು ಭೀಕರ ಬರಗಾಲದಿಂದ ತತ್ತರಿಸಿದ್ದಾರೆ. ಸಾವಿರಾರು ಸಂಖ್ಯೆಯಲ್ಲಿ ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಕೆಲವು ರೈತರು ಹೊಟ್ಟೆಪಾಡಿಗಾಗಿ ಹೊಲ ಗದ್ದೆ ಮನೆಗಳನ್ನು ತೊರೆದು ಪಟ್ಟಣದತ್ತ ಗುಳೆ ಹೋಗಿದ್ದಾರೆ. ಆದರೂ ಇಲ್ಲಿನ ರೈತರ ಹಿತ ಕಾಪಾಡದೆ ಸರ್ಕಾರ ತಮಿಳುನಾಡಿಗೆ ನೀರು ಬಿಟ್ಟಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

Farmers protest against release of water to Tamil Nadu

ಪ್ರಸಕ್ತ ವೈನಾಡು ಮತ್ತು ಕೊಡಗಿನಲ್ಲಿ ಉತ್ತಮ ಮಳೆಯಾಗುತ್ತಿದ್ದು, ಜಲಾಶಯಗಳಿಗೆ ನೀರು ಹರಿದು ಬರುತ್ತಿರುವುದರಿಂದ ಭರ್ತಿಯಾಗುವ ಲಕ್ಷಣಗಳು ಕಂಡು ಬರುತ್ತಿದ್ದು, ರೈತರು ಹರ್ಷಗೊಂಡಿದ್ದಾರೆ. ಸರ್ಕಾರ ಜಲಾಶಯ ಭರ್ತಿಯಾಗುವ ಮೊದಲೇ ತಮಿಳುನಾಡಿಗೆ ನೀರು ಬಿಟ್ಟು ಈ ಭಾಗದ ರೈತರಿಗೆ ಎಳ್ಳುನೀರು ಬಿಡುವಂತಹ ಧೋರಣೆಯನ್ನು ತಾಳಿರುವುದು ಖಂಡನೀಯ. ನದಿಗೆ ಬಿಟ್ಟಿರುವ 2500 ಕ್ಯೂಸೆಕ್ ನೀರನ್ನು ನಿಲ್ಲಿಸಿ ನಾಲೆಗಳಿಗೆ 2000 ಕ್ಯೂಸೆಕ್ ನೀರು ಬಿಡಬೇಕೆಂದು ಆಗ್ರಹಿಸಿದರು.

ಪ್ರತಿಭಟನಾ ಸ್ಥಳಕ್ಕೆ ಆಗಮಿಸಿದ ವೃತ್ತ ನಿರೀಕ್ಷಕ ಮನೋಜ್ ಕುಮಾರ್, ನೀರಾವರಿ ಇಲಾಖೆಯ ಎ.ಇ ಮಹೇಶ್, ವರದರಾಜು ಅವರು ಪ್ರತಿಭಟನಾಕಾರರನ್ನುದ್ದೇಶಿಸಿ ಮಾತನಾಡಿ, ರೈತರ ಹಿತ ಕಾಯಲು ನಾವು ಎಲ್ಲ ರೀತಿಯಲ್ಲೂ ಬದ್ಧರಾಗಿದ್ದೇವೆ. ಈ ವಿಚಾರವಾಗಿ ಮೇಲಾಧಿಕಾರಿಗಳ ಗಮನಕ್ಕೆ ತಂದು ಸದ್ಯದಲ್ಲೇ ರೈತರ ಸಭೆಯನ್ನು ಕರೆದು ನಾಲೆಗಳಿಗೆ ನೀರು ಹರಿಸಲು ಕ್ರಮ ಕೈಗೊಳ್ಳುವ ಭರವಸೆ ನೀಡಿದರು. ವೃತ್ತ ನಿರೀಕ್ಷಕ ಮನೋಜ್ ಕುಮಾರ್ ಹಾಗೂ ನೀರಾವರಿ ಇಲಾಖೆ ಅಧಿಕಾರಿಗಳ ಮಾತಿಗೆ ಸ್ಫಂದಿಸಿದ ರೈತರು ಸೋಮವಾರದವರೆಗೆ ಗಡುವು ನೀಡಿ ಪ್ರತಿಭಟನೆಯನ್ನು ಅಂತ್ಯಗೊಳಿಸಿದರು.

Farmers protest against release of water to Tamil Nadu

ಈ ನಡುವೆ ಮೂಗೂರು ಗೌಡ್ರು ಪ್ರಕಾಶ್ ಎಂಬುವರು ಅಧಿಕಾರಿಗಳ ಭರವಸೆ ಮಾತನ್ನು ನಂಬಲು ಸಾಧ್ಯವಿಲ್ಲ, ತಕ್ಷಣದಲ್ಲೇ ನಿಮ್ಮ ಮೇಲಾಧಿಕಾರಿಗಳಿಗೆ ದೂರವಾಣಿ ಕರೆ ಮೂಲಕ ಮಾಹಿತಿಯನ್ನು ನೀಡಿ ನೀರು ಬೀಡುವ ದಿನಾಂಕವನ್ನು ನಿಗದಿಪಡಿಸಬೇಕೆಂದು ಪಟ್ಟು ಹಿಡಿದರು. ನಿಮ್ಮಿಂದ ನಿಖರ ಉತ್ತರ ದೊರೆಯದೆ ಇದ್ದಲ್ಲಿ ಈ ಭಾಗದ ರೈತ ಹಿತಕ್ಕಾಗಿ ಪ್ರಾಣ ಬಿಡಲು ಸಿದ್ಧ ಎಂದು ಹೇಳಿ ನದಿಗೆ ಹಾರಿದರು. ಈ ವೇಳೆ ಸ್ಥಳದಲ್ಲಿದ್ದ ಪೊಲೀಸರು ಅವರನ್ನು ರಕ್ಷಿಸಿ ತೆಪ್ಪದ ಮೂಲಕ ದಡಕ್ಕೆ ಸೇರಿಸಿದರು. ಮುಂಜಾಗೃತಾ ಕ್ರಮವಾಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿತ್ತು.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ - ನೋಂದಣಿ ಉಚಿತ!

English summary
Hundreds of farmers protested against release of Cauvery water to Tamil Nadu by Karnataka government. Farmers have alleged that though it is raining well in catchment area in Madikeri, govt has not released water for irrigation in Karnataka.
Please Wait while comments are loading...