ಶುಕ್ರವಾರ ಸಂಜೆ ಮಕರ ಲಗ್ನದಲ್ಲಿ ಅರಮನೆಗೆ ಗಜಪಡೆ ಪ್ರವೇಶ

By: ಮೈಸೂರು ಪ್ರತಿನಿಧಿ
Subscribe to Oneindia Kannada

ಮೈಸೂರು, ಆಗಸ್ಟ್ 26: ಗಜಪಡೆ ಶುಕ್ರವಾರ ಸಂಜೆ ಅರಮನೆ ಪ್ರವೇಶಿಸಲಿದ್ದು, ಅವುಗಳ ಸಾಂಪ್ರದಾಯಿಕ ಸ್ವಾಗತಕ್ಕೆ ಅರಮನೆ ಆವರಣದಲ್ಲಿ ಎಲ್ಲ ರೀತಿಯ ಸಿದ್ಧತೆ ಕೈಗೊಳ್ಳಲಾಗಿದೆ.

ಆ.21ರಂದು ಬೆಳಗ್ಗೆ ಹುಣಸೂರಿನ ನಾಗಪುರದಲ್ಲಿ ಗಜಪಯಣಕ್ಕೆ ಚಾಲನೆ ನೀಡಲಾಗಿತ್ತು. ಬಳಿಕ ಅಲ್ಲಿಂದ ಅರ್ಜುನ ನೇತೃತ್ವದ ಆರು ಆನೆಗಳನ್ನು ಒಳಗೊಂಡ ಗಜಪಡೆ ಇಲವಾಲ ಬಳಿಯ ಆಲೋಕದಲ್ಲಿ ಬೀಡು ಬಿಟ್ಟಿದ್ದವು. ಅಲ್ಲಿಂದ ಶುಕ್ರವಾರ ಬೆಳಗ್ಗೆ ಲಾರಿಯಲ್ಲಿ ನಗರದ ಅಶೋಕಪುರಂನ ಅರಣ್ಯ ಭವನಕ್ಕೆ ಕರೆತರಲಾಗುತ್ತಿದ್ದು, ಅಲ್ಲಿ ಸಾಂಪ್ರದಾಯಿಕ ಉಪಚಾರ ನೀಡಲಾಗುವುದು. ಬಳಿಕ ಅಲ್ಲಿ ಆನೆಗಳನ್ನು ಅಲಂಕರಿಸಿ, ಪೂಜೆ ಸಲ್ಲಿಸಲಾಗುತ್ತದೆ. ನಂತರ ಅಲ್ಲಿಂದ ಬೀಳ್ಕೊಡಲಾಗುತ್ತದೆ.[ಮೈಸೂರು ದಸರಾಕ್ಕೆ ಗೋಲ್ಡನ್ ಚಾರಿಯಟ್ ನಲ್ಲಿ ಬನ್ನಿ]

Elephant troops enter Mysuru palace today

ಮೊದಲೆಲ್ಲ ನಾಗಪುರದಿಂದ ನೇರವಾಗಿ ಅರಣ್ಯಭವನಕ್ಕೆ ಕರೆತಂದು, ಅಲ್ಲಿ ಕೆಲ ದಿನಗಳ ಕಾಲ ಉಪಚಾರ ಮಾಡಿ, ಬಳಿಕ ಅರಮನೆಗೆ ಕಳುಹಿಸಿಕೊಡಲಾಗುತ್ತಿತ್ತು. ಈ ಬಾರಿ ಅಲೋಕದಲ್ಲಿ ವಾಸ್ತವ್ಯಕ್ಕೆ ಅವಕಾಶ ಮಾಡಿ ಕೊಟ್ಟಿದ್ದರಿಂದ ಸಾಂಪ್ರದಾಯಿಕವಾಗಿ ಅರಣ್ಯಭವನದಲ್ಲಿ ಬೀಳ್ಕೊಡುಗೆ ನೀಡಲಾಗುತ್ತಿದೆ.

ಮೆರವಣಿಗೆಯಲ್ಲಿ ಅರಮನೆಗೆ: ಅರ್ಜುನನ ನೇತೃತ್ವದ ಬಲರಾಮ, ಅಭಿಮನ್ಯು, ವಿಕ್ರಮ, ಕಾವೇರಿ ಮತ್ತು ವಿಜಯ ಆನೆಗಳು ಅರಮನೆ ಪ್ರವೇಶಿಸುತ್ತಿದ್ದು, ಇವುಗಳನ್ನು ಅಲಂಕರಿಸಿ ಅಶೋಕಪುರಂನ ಅರಣ್ಯಭವನದಿಂದ ಅರಮನೆ ಆವರಣದೊಳಗೆ ಮೆರವಣಿಗೆಯಲ್ಲಿ ಕರೆತರಲಾಗುತ್ತದೆ. ಗಜಪಡೆಗೆ ವೀರಗಾಸೆ ಸೇರಿದಂತೆ ವಿವಿಧ ಜಾನಪದ ತಂಡಗಳು ಮೆರುಗು ನೀಡಲಿವೆ.[ದಸರಾ ವಿಶೇಷ: ಮಾವುತರೆಂಬ ಗಜಪಡೆಯ ರಿಂಗ್ ಮಾಸ್ಟರ್!]

ಗಜಪಡೆಯ ಮೆರವಣಿಗೆ ಕೃಷ್ಣಮೂರ್ತಿಪುರಂ, ಬಲ್ಲಾಳ್ ವೃತ್ತ, ಆರ್ ಟಿಓ ವೃತ್ತ, ರಾಮಸ್ವಾಮಿ ವೃತ್ತದ ಮೂಲಕ ಚಾಮರಾಜ ಜೋಡಿ ರಸ್ತೆಯಲ್ಲಿ ಸಾಗುತ್ತವೆ. ಅಲ್ಲಿಂದ ಬಸವೇಶ್ವರ ವೃತ್ತಕ್ಕೆ ತೆರಳಿ, ಸಯ್ಯಾಜಿರಾವ್ ರಸ್ತೆಯಲ್ಲಿ ಸಾಗಿ ನಗರಪಾಲಿಕೆ ವೃತ್ತ, ಪುರಂದರದಾಸರ ರಸ್ತೆ ಮೂಲಕ ಅರಮನೆ ಪೂರ್ವದ್ವಾರ ತಲುಪಲಿವೆ.

ಇಲ್ಲಿಂದ ಸಂಜೆ 4.40 ರಿಂದ 5.30ರೊಳಗಾಗಿ ಮಕರ ಲಗ್ನದಲ್ಲಿ ಅರಮನೆ ಜಯ ಮಾರ್ತಾಂಡ ದ್ವಾರದಲ್ಲಿ ಜಿಲ್ಲಾಡಳಿತ ಮತ್ತು ಅರಮನೆ ಮಂಡಳಿ ವತಿಯಿಂದ ಗಜ ಪಡೆಗಳಿಗೆ ಪುಷ್ಪಾರ್ಚನೆ ಮಾಡುವ ಮೂಲಕ ಸ್ವಾಗತಿಸಲಾಗುವುದು. ಜಿಲ್ಲಾಡಳಿತದ ಪರವಾಗಿ ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಸಿ. ಮಹದೇವಪ್ಪ, ಸಚಿವರಾದ ಎಚ್.ಎಸ್.ಮಹದೇವಪ್ರಸಾದ್, ತನ್ವೀರ್ ಸೇಠ್, ಮೇಯರ್ ಬಿ.ಎಲ್.ಭೈರಪ್ಪ ಮತ್ತಿತರ ಜನಪ್ರತಿನಿಧಿಗಳು ಭಾಗವಹಿಸಲಿದ್ದಾರೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Elephant troops which will participate in Dasara Jambu savari will enter palace today. These elephants started journey for Hunsur taluk, nagapura on August 21st.
Please Wait while comments are loading...