ಸಲಗ ತಿವಿದರೂ ಪ್ರಾಣಾಪಾಯದಿಂದ ಪಾರಾದ ಸಿಬ್ಬಂದಿ

Posted By: ಬಿ ಎಂ ಲವಕುಮಾರ್
Subscribe to Oneindia Kannada

ಮೈಸೂರು, ಜನವರಿ 11: ಆಹಾರವನ್ನು ಅರಸಿ ಕಾಡಿನಿಂದ ನಾಡಿಗೆ ಬಂದಿದ್ದ ಎಂಟು ಕಾಡಾನೆಗಳ ಹಿಂಡನ್ನು ಕಾಡಿಗೆ ಅಟ್ಟುವ ವೇಳೆ ಸಲಗವೊಂದು ಅರಣ್ಯ ಸಿಬ್ಬಂದಿಗೆ ತಿವಿದು ತೀವ್ರ ಗಾಯಗೊಳಿಸಿರುವ ಘಟನೆ ಬುಧವಾರ (ಜ.10) ಹುಣಸೂರು ತಾಲೂಕಿನಲ್ಲಿ ನಡೆದಿದೆ.

ತಾಲೂಕಿನ ಹನಗೋಡಿಗೆ ಸಮೀಪದ ನಾಗಾಪುರ ಗಿರಿಜನ ಪುನರ್ವಸತಿ ಕೇಂದ್ರದ ಮೂರನೇ ಬ್ಲಾಕ್ ಬಳಿ ಸಲಗವೊಂದು ಅರಣ್ಯ ಸಿಬ್ಬಂದಿ ಎಂ. ಮದನ್ ಕುಮಾರ್ ಅವರಿಗೆ ತಿವಿದಿದೆ. ಮದನ್ ಕುಮಾರ್ ಅವರು ನಾಗರಹೊಳೆ ರಾಷ್ಟ್ರೀಯ ಉದ್ಯಾನದ ವೀರನಹೊಸಳ್ಳಿ ವಲಯದ ರಾಪಿಡ್ ರೆಸ್ಪಾನ್ಸ್ ಟೀಮ್ ನ ವಾಹನದ ಚಾಲಕ ದಿನಗೂಲಿ ನೌಕರರಾಗಿ ಕೆಲಸ ನಿರ್ವಹಿಸುತ್ತಿದ್ದಾರೆ.

ಮಂಗಳವಾರ ರಾತ್ರಿ ಸಲಗಗಳ ಹಿಂಡು ವೀರನಹೊಸಹಳ್ಳಿ ವಲಯದಿಂದ ನಾಗಾಪುರ ಪ್ರೌಢಶಾಲೆಯ ಎದುರಿನ ಕಂದಕವನ್ನು ದಾಟಿಕೊಂಡು ಬಂದು ರಾತ್ರಿಯಿಡೀ ಸುತ್ತಮುತ್ತಲಿನಲ್ಲಿ ಬೆಳೆ ನಾಶಪಡಿಸಿ, ಬೆಳÀಗ್ಗೆ ನಾಗಾಪುರ ಮೂರನೇ ಬ್ಲಾಕ್ ಬಳಿಯ ವುಡ್‍ಲಾಟ್ ಪ್ರದೇಶದಲ್ಲಿ ಬೀಡು ಬಿಟ್ಟಿದ್ದವು.

Elephant nuzzles forest staff

ಆನೆಗಳ ಹಿಂಡು ಕಂಡ ಗ್ರಾಮಸ್ಥರು ಅರಣ್ಯ ಇಲಾಖೆಗೆ ಮಾಹಿತಿ ನೀಡಿದ ಮೇರೆಗೆ ಸ್ಥಳಕ್ಕಾಗಮಿಸಿದ ಅರಣ್ಯ ಸಿಬ್ಬಂದಿ ಕಾಡಾನೆಯನ್ನು ಕಾಡಿಗೆ ಅಟ್ಟುವ ವೇಳೆ ಒಂಟಿಯಾಗಿದ್ದ ಸಲಗವು ಕಾರ್ಯಾಚರಣೆಯಲ್ಲಿದ್ದ ಮದನ್ ಕುಮಾರ್ ಅವರನ್ನು ಬೆನ್ನಟ್ಟಿ ಬಂದಾಗ ಓಡಿ ತಪ್ಪಿಸಿಕೊಳ್ಳಲು ಯತ್ನಿಸಿ ಆಯತಪ್ಪಿ ಬಿದ್ದಿದ್ದಾರೆ. ಈ ವೇಳೆ ಬೆನ್ನಟ್ಟಿ ಬಂದ ಸಲಗ ದಂತದಲ್ಲಿ ತಿವಿದಿದೆ.

ಆದರೆ ಸುತ್ತಲಿದ್ದ ಜನರ ಕಿರುಚಾಟದಿಂದ ಬೆದರಿ ಅದು ಪೇರಿಕಿತ್ತಿದ್ದರಿಂದ ಪ್ರಾಣಾಪಾಯದಿಂದ ಪಾರಾಗಿದ್ದಾರೆ ಸೊಂಟದ ಭಾಗಕ್ಕೆ ತೀವ್ರಪೆಟ್ಟು ಬಿದ್ದು, ಪ್ರಜ್ಞಾಹೀನರಾಗಿದ್ದ ಮದನ್‍ಕುಮಾರ್‍ನ್ನು ಆರ್‍ಎಫ್‍ಓ ಮಧುಸೂಧನ್ ಹಾಗೂ ಸಿಬ್ಬಂದಿ ಹುಣಸೂರು ಆಸ್ಪತ್ರೆಗೆ ಕರೆತಂದು ಚಿಕಿತ್ಸೆ ಕೊಡಿಸಿ, ಹೆಚ್ಚಿನ ಚಿಕಿತ್ಸೆಗಾಗಿ ಮೈಸೂರಿನ ಖಾಸಗಿ ಆಸ್ಪತ್ರೆಯಲ್ಲಿ ದಾಖಲಿಸಿದ್ದಾರೆ.

Elephant nuzzles forest staff

ವಿಷಯ ತಿಳಿಯುತ್ತಿದ್ದಂತೆ ಆಸ್ಪತ್ರೆಗೆ ನಾಗರಹೊಳೆ ಹುಲಿ ಯೋಜನೆ ಕ್ಷೇತ್ರ ನಿರ್ದೇಶಕ ಮಣಿಕಂದನ್ ಹಾಗೂ ಎಸಿಎಫ್ ಪ್ರಸನ್ನಕುಮಾರ್ ಭೇಟಿ ನೀಡಿ ಆರೋಗ್ಯ ವಿಚಾರಿಸಿದ್ದಾರೆ.

ಸಂಕ್ರಾಂತಿ ವಿಶೇಷ ಪುಟ

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
An elephant nuzzle forest staff during operation taken by then at Nagapur tribal camp near Hanagodi of Hunasur taluk in Mysuru district on wednesday.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ