ಸ್ವಚ್ಛತೆ ಕಾಣದ ಹಗಿನವಾಳು ಗ್ರಾಮಕ್ಕೆ 'ರೋಗ ಭಾಗ್ಯ'!

By: ಮೈಸೂರು ಪ್ರತಿನಿಧಿ
Subscribe to Oneindia Kannada

ಮೈಸೂರು, ಜುಲೈ 06 : "ಸ್ವಚ್ಛ ಭಾರತದ ಅಭಿಯಾನದ ಬಗ್ಗೆ ಜಾಥಾ ನಡೆಸಿ, ಎಲ್ಲೋ ಒಂದು ಕಡೆ ಕಸಪೊರಕೆ ಹಿಡಿದು ಗುಡಿಸಿದ ತಕ್ಷಣ ಸ್ವಚ್ಛತೆ ಸಾಧ್ಯವಾಗುವುದಿಲ್ಲ. ನಿಮ್ಮ ಅಭಿಯಾನವನ್ನು ನಮ್ಮ ಗ್ರಾಮದಲ್ಲಿ ಮಾಡಿ ಆಗ ನಿಮ್ಮ ಸ್ವಚ್ಛತಾ ಅಭಿಯಾನಕ್ಕೆ ಅರ್ಥ ಬರುತ್ತದೆ" ಎಂದು ನಂಜನಗೂಡು ತಾಲೂಕಿನ ಹಗಿನವಾಳು ಗ್ರಾಮಸ್ಥರು ಅಧಿಕಾರಿಗಳಿಗೆ ತಾಕೀತು ಮಾಡುತ್ತಿದ್ದಾರೆ.

ಅವರು ಹೇಳುವುದರಲ್ಲಿ ಅರ್ಥವಿದೆ. ಅಲ್ಲಿಗೆ ತೆರಳಿದ ಯಾರೇ ಆಗಲಿ ಅಲ್ಲಿನ ಕೊಳಕು ಸ್ಥಿತಿಯನ್ನು ನೋಡಿ ಹೌಹಾರದೆ ಇರಲಾರರು. ಆದರೆ ಅದೇ ಕೊಳಕು ತುಂಬಿದ ವಾತಾವರಣದಲ್ಲಿ ಅಲ್ಲಿನ ಜನ ದಿನ ಕಳೆಯುತ್ತಿದ್ದಾರೆ. ಚುನಾವಣೆಗಳಲ್ಲಿ ಮತಹಾಕಿ ಗೆಲ್ಲಿಸಿದ್ದಕ್ಕೆ ದಕ್ಕಿದ ಪ್ರತಿಫಲ ಇದೇನಾ? ಕರ್ನಾಟಕದ ಯಾವುದಾದರೂ ಸಂಸದ ಈ ಗ್ರಾಮವನ್ನು ದತ್ತು ತೆಗೆದುಕೊಂಡು ಅಭಿವೃದ್ಧಿ ಪಡಿಸಬಹುದಲ್ಲ? [ಎಲ್ಲ ಇಲ್ಲಗಳ ನಡುವೆ ಜೀವನ ದೂಡುತ್ತಿರುವ ಯಡಹಳ್ಳಿ]

Disease bhagya to Haginavalu villagers in Nanjangud

ತ್ಯಾಜ್ಯ ನೀರು ಹರಿದು ಹೋಗಲು ಸಮರ್ಪಕ ಚರಂಡಿಯಿಲ್ಲದ ಕಾರಣ ಮನೆ ಮುಂದೆ ನಿಂತು ನಾರುತ್ತಿರುತ್ತದೆ. ಗ್ರಾಮದ ಮಧ್ಯೆದಲ್ಲೇ ಹೊಂಡಗಳಿದ್ದು ಅಲ್ಲಿ ತ್ಯಾಜ್ಯ ನೀರು ಸಂಗ್ರಹವಾಗಿ ಸೊಳ್ಳೆಗಳಿಗೆ ಆಶ್ರಯ ತಾಣವಾಗುತ್ತಿವೆ. ಈಗಾಗಲೇ ಡೆಂಗ್ಯೂ, ಚಿಕೂನ್‌ಗುನ್ಯಾ ಮುಂತಾದ ರೋಗಗಳು ಹರಡುತ್ತಿದ್ದು, ರೋಗ ಹರಡುವ ಸೊಳ್ಳೆಗಳು ಇಲ್ಲಿ ಉತ್ಪತ್ತಿಯಾಗಲು ಹೇಳಿ ಮಾಡಿಸಿದ ಜಾಗದಂತಿದೆ.

ಈ ಗ್ರಾಮದಲ್ಲಿ ಸುಮಾರು ಹತ್ತು ಸಾವಿರ ಜನಸಂಖ್ಯೆಯಿದ್ದು, ಒಂಬತ್ತು ಜನ ಗ್ರಾಮ ಪಂಚಾಯಿತಿ ಸದಸ್ಯರಿದ್ದರೂ ಜನರ ಗೋಳು ಮಾತ್ರ ತೀರುತ್ತಿಲ್ಲ. ಇವರು ಯಾರೂ ಮನೆ ಮುಂದೆ ಉತ್ತಮ ಚರಂಡಿ ನಿರ್ಮಿಸಿ ನೀರು ಸರಾಗವಾಗಿ ಹರಿದು ಹೋಗುವ ವ್ಯವಸ್ಥೆ ಮಾತ್ರ ಮಾಡಿಲ್ಲ. ಹೀಗಾಗಿ ತ್ಯಾಜ್ಯ ನೀರು ಅಲ್ಲೇ ನಿಂತು ದುರ್ವಾಸನೆ ಬೀರುತ್ತಿದೆ. [ಕಾಡಿನಲ್ಲಿನ ಲಟಾರಿ ಕಾರೇ ಸುಳ್ಯದ ಸಾಹುಕಾರನ 'ಅರಮನೆ']

Disease bhagya to Haginavalu villagers in Nanjangud

ಕೆಲವೊಮ್ಮೆ ಜೋರಾಗಿ ಮಳೆ ಬಂದರೆ ಚರಂಡಿ ನೀರು ಮನೆಗೆ ನುಗ್ಗಿ ನಿವಾಸಿಗಳು ಪರದಾಡುವ ಸ್ಥಿತಿ ನಿರ್ಮಾಣವಾಗಿ ಬಿಡುತ್ತದೆ. ಕಳೆದ ಆರು ವರ್ಷಗಳಿಂದ ಈ ಗ್ರಾಮ ಸ್ವಚ್ಛತೆ ಕಾಣದಂತಾಗಿದೆ. ಇನ್ನು ರಾತ್ರಿ ವೇಳೆ ಬೀದಿ ದೀಪವಿಲ್ಲ. ಗ್ರಾಮದ ರಸ್ತೆಗಳು ಹದಗೆಟ್ಟು ಹೋಗಿವೆ. ಈ ಬಗ್ಗೆ ಗಮನಹರಿಸಿ ಗ್ರಾಮವನ್ನು ಅಭಿವೃದ್ಧಿಗೊಳಿಸಬೇಕಾದ ಗ್ರಾಮಪಂಚಾಯಿತಿ ತಮಗೆ ಸಂಬಂಧವೇ ಇಲ್ಲವೇನೋ ಎಂಬಂತೆ ತೆಪ್ಪಗಿದೆ.

ಅನ್ನಭಾಗ್ಯ, ಕ್ಷೀರಭಾಗ್ಯ, ಆರೋಗ್ಯಭಾಗ್ಯದಂತಹ ಯೋಜನೆಗಳನ್ನು ಜಾರಿಗೆ ತಂದಿರುವ ಸರ್ಕಾರ ನಮ್ಮ ಹಗಿನವಾಳು ಗ್ರಾಮಕ್ಕೆ ಮಾತ್ರ ರೋಗಭಾಗ್ಯ ಕರುಣಿಸಿದೆ ಎಂದು ಜನ ನೊಂದು ನುಡಿಯುತ್ತಿದ್ದಾರೆ. ಇನ್ನಾದರೂ ಜಿಲ್ಲಾಡಳಿತ ಇತ್ತ ಗಮನಹರಿಸಿ, ಅಧಿಕಾರಿಗಳಿಗೆ ಚುರುಕು ಮುಟ್ಟಿಸಿ ಸ್ವಚ್ಛ ಭಾರತ ಅಭಿಯಾನವನ್ನು ಹಗಿನವಾಳು ಗ್ರಾಮದಲ್ಲಿ ನಡೆಸುವಂತಾಗಲಿ. [ಕರ್ನಾಟಕದ ಸಂಸದರು ಆಯ್ಕೆಮಾಡಿಕೊಂಡ ಗ್ರಾಮಗಳು]

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ - ನೋಂದಣಿ ಉಚಿತ!

English summary
Wherever you see there is dirt in this Haginavalu village in Nanjangud taluk in Mysuru district. Gram panchayat members, state representatives have not even bothered to provide sanitation system to the people, who have voted them.
Please Wait while comments are loading...