ಶಿವನ ಅಭಿಷೇಕಕ್ಕೆ ಕಪಿಲೆ ನೀರನ್ನೇ ತರುವ ಭಕ್ತ ಮಹಾಶಯರು

By: ಮೈಸೂರು ಪ್ರತಿನಿಧಿ
Subscribe to Oneindia Kannada

ಮೈಸೂರು,ಮಾರ್ಚ್,08 : ತಲೆ ಮೇಲೆ ನೀರಿನ ಬಿಂದಿಗೆ ಹೊತ್ತು ಉರಿಬಿಸಿಲಿನಲ್ಲಿ ನಡೆಯುವ ಇವರನ್ನು ನೋಡಿ ನೀರಿಗೆ ಎಷ್ಟೊಂದು ತೊಂದರೆ ಎಂದು ನೀವು ಭಾವಿಸಬಹುದು. ಆದರೆ ಇದು ಶಿವನಿಗಾಗಿ ಹರಕೆ ಎಂದರೆ ಅಚ್ಚರಿಯಾಗಬಹುದು.

ಪ್ರತಿ ವರ್ಷವೂ ಚಾಮರಾಜನಗರ ಜಿಲ್ಲೆಯ ಹೆಗ್ಗೋಟಾರ ಗ್ರಾಮದ ಕೆಲವು ಗ್ರಾಮಸ್ಥರು ಶಿವರಾತ್ರಿಯಂದು ಮೈಸೂರಿನ ನಂಜನಗೂಡು ತಾಲೂಕಿನ ನಗರ್ಲೆ ಗ್ರಾಮಕ್ಕೆ ಬರಿಗಾಲಿನಲ್ಲಿ ತಾಮ್ರದ ಬಿಂದಿಗೆಯೊಂದಿಗೆ ಬಂದು ಕಪಿಲಾ ನದಿಗೆ ಪೂಜೆ ಸಲ್ಲಿಸಿ ಬಳಿಕ ಕಪಿಲಾ ನದಿ ನೀರನ್ನು ತುಂಬಿಕೊಂಡು ದೇವಾಲಯದ ಬಳಿ ತೆರಳುತ್ತಾರೆ.[ಹುಬ್ಬಳ್ಳಿ ಜನರ ಭಕ್ತಿಭಾವದ ಮಜ್ಜನದಲ್ಲಿ ಮಿಂದೆದ್ದ ಶಿವ]

Devotees bring water from Kapile river for worship of God Shiva

ಈ ಸಂಕಲ್ಪ ಮಾಡುವವರು ಉಪವಾಸ ವೃತ ಕೈಗೊಂಡಿರುತ್ತಾರೆ. ಉಪವಾಸ ಇದ್ದುಕೊಂಡೇ ಸುಮಾರು 35 ಕಿ.ಮೀ. ನಡೆದು ಬರುವ ಇವರು ನಗರ್ಲೆಯಿಂದ ನೀರನ್ನು ಕೊಂಡೊಯ್ದು ತಮ್ಮ ಊರಿನಲ್ಲಿ ಪೂಜಾ ಕೈಂಕರ್ಯ ನೆರವೇರಿಸುತ್ತಾರೆ. ಇದೊಂದು ಸಂಪ್ರದಾಯ ತಾತ ಮುತ್ತಾತನ ಕಾಲದಿಂದಲೇ ಬಂದಿದ್ದು ಹರಕೆ ಹೊತ್ತವರು ಮಾತ್ರ ಇದನ್ನು ಶಿವರಾತ್ರಿಯಂದು ಕೈಗೊಳ್ಳುತ್ತಾರೆ.

ಕಾಲ್ನಡಿಗೆಯಲ್ಲಿ ಆಗಮಿಸಿ ನದಿಗೆ ಪೂಜೆ ಸಲ್ಲಿಸಿ ತಾಮ್ರದ ಬಿಂದಿಗೆಯಲ್ಲಿ ನೀರನ್ನು ತುಂಬಿಕೊಂಡು ಮತ್ತೆ ಕಾಲ್ನಡಿಗೆಯಲ್ಲಿ ತೆರಳುವ ಸಂದರ್ಭದಲ್ಲಿ ಮಾರ್ಗ ಮಧ್ಯೆ ಶ್ರೀ ದೇವನೂರು ದಾಸೋಹ ಮಠದಲ್ಲಿ ಬಿಂದಿಗೆಗಳನ್ನು ಇಟ್ಟು ವಿಶ್ರಮಿಸಿ ಪ್ರಸಾದ ಸೇವಿಸುತ್ತಾರೆ.[ಚಿತ್ರಗಳಲ್ಲಿ: ಶಿವ ಶಿವ ಎಂದರೆ ಭಯವಿಲ್ಲವೆಂದ ಭಕ್ತ ಕೋಟಿ]

ಈ 35 ಕಿ ಮೀ ಕಾಲ್ನಡಿಗೆಯಲ್ಲಿ ದೇವನೂರು ದಾಸೋಹ ಮಠದ ಹೊರತಾಗಿ ಬೇರೆಲ್ಲಿಯೂ ವಿಶ್ರಮಿಸುವುದಿಲ್ಲ ಮತ್ತು ನೀರನ್ನೂ ಸಹ ಸೇವಿಸುವುದಿಲ್ಲ. ಹೀಗೆ ತಂದ ನೀರನ್ನು ತಮ್ಮ ಗ್ರಾಮ ಹೆಗ್ಗೋಟಾರದ ಸಿದ್ದರಾಮೇಶ್ವರ ದೇವಾಲಯದ ಅರ್ಚಕರಿಗೆ ನೀಡುತ್ತಾರೆ.

ಅರ್ಚಕರು ಸಿದ್ದರಾಮೇಶ್ವರನಿಗೆ ಅಭಿಷೇಕ ಮಾಡಿ ಪೂಜೆ ಸಲ್ಲಿಸಿ ಗ್ರಾಮದ ಮನೆ ಮನೆಗಳಿಗೆ ಅಭಿಷೇಕದ ನೀರನ್ನು ತೀರ್ಥ ರೂಪದಲ್ಲಿ ನೀಡಲಾಗುತ್ತದೆ. ಆ ನೀರನ್ನು ಮನೆಯಲ್ಲಿಟ್ಟುಕೊಂಡು ಪೂಜಿಸುತ್ತಾರೆ. ಒಟ್ಟಾರೆ ಚಾಮರಾಜನಗರದ ಹೆಗ್ಗೋಟಾರದ ಜನ ಶಿವರಾತ್ರಿಯನ್ನು ವಿಭಿನ್ನ ಮತ್ತು ವಿಶಿಷ್ಠವಾಗಿ ಆಚರಿಸುತ್ತಾರೆ ಎನ್ನುವುದರಲ್ಲಿ ಎರಡು ಮಾತಿಲ್ಲ.[ಕೈಲಾಸನಾಥನಿಗೆ ನಮೋಃ ನಮೋಃ ಎಂದ ಸಿದ್ದರಾಮಯ್ಯ]

ಗರ್ಗೇಶ್ವರಿಯಲ್ಲಿ ಶ್ರೀ ಗಾರ್ಗೇಶ್ವರಸ್ವಾಮಿ ಉತ್ಸವ

ಮೈಸೂರು,ಮಾರ್ಚ್,08: ಮಹಾ ಶಿವರಾತ್ರಿ ಅಂಗವಾಗಿ ಟಿ.ನರಸೀಪುರ ತಾಲೂಕಿನ ಗರ್ಗೇಶ್ವರಿ ಗ್ರಾಮದ ಶ್ರೀ ಗಾರ್ಗೇಶ್ವರಸ್ವಾಮಿ ದೇವಾಲಯದಲ್ಲಿ ವಿಶೇಷ ಪೂಜೆ ಮಹಾಭೀಷೇಕ ಕಾರ್ಯಕ್ರಮ ವಿಜೃಂಭಣೆಯಿಂದ ನಡೆಯಿತು.

ದೇವಸ್ಥಾನದ ಪ್ರಧಾನ ಅರ್ಚಕರಾದ ಶ್ರೀ ಶಿವರಾಮದೀಕ್ಷೀತ್ ನೇತೃತ್ವದಲ್ಲಿ ಬೆಳಗಿನ ಜಾವ 4 ಗಂಟೆಯಿಂದ ಶ್ರೀ ಸ್ವಾಮಿಯವರಿಗೆ 2 ಸಾವಿರ ಲೀಟರ್ ಹಾಲಿನ ಅಭಿಷೇಕ, 1 ಸಾವಿರ ಲೀಟರ್ ಮೊಸರು, 2 ಸಾವಿರ ಎಳನೀರು, 5 ಸಾವಿರ ಬಾಳೆಹಣ್ಣು, 300 ಕೆಜಿ ಸಕ್ಕರೆ, 10 ಕೆಜಿ ಗೋಡಂಬಿ, ಕಲ್ಲುಸಕ್ಕರೆ, 5 ಕೆಜಿ ತುಪ್ಪದ ಅಭಿಷೇಕ ಮಾಡಲಾಯಿತು.[ನಾಗೇಶ್ವರ, ಕಾಶಿ ವಿಶ್ವನಾಥ ಪೌರಾಣಿಕ ಹಿನ್ನೆಲೆ]

ಸಾಯಂಕಾಲ 6 ರಿಂದ ಬೆಳಗಿನ ಜಾವ ಆರುಗಂಟೆ ತನಕ ಏಕದಾಶಿ ರುದ್ರಾಭಿಷೇಕ ನಡೆಸಲಾಯಿತು. ಹಬ್ಬದ ದಿನವಾದ್ದರಿಂದ ಬೆಳಗ್ಗಿನಿಂದ ಸಾಯಂಕಾಲದವರೆಗೆ ಸಹಸ್ರಾರು ಸಂಖ್ಯೆಯಲ್ಲಿ ಆಗಮಿಸಿದ ಭಕ್ತರು ಸರದಿ ಸಾಲಿನಲ್ಲಿ ನಿಂತು ಶ್ರೀ ಸ್ವಾಮಿಯ ದರ್ಶನ ಪಡೆದುಕೊಂಡರು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Devotees bring water from the Kapile river for worship of God Shiva. That time they did not wear slipper, did not drink water. They are following strictly.
Please Wait while comments are loading...