ಮದುವೆ ಒಲ್ಲದ ಯುವತಿ ಸಾವು, ಮರ್ಯಾದಾ ಹತ್ಯೆ ಶಂಕೆ!

By: ಮೈಸೂರು ಪ್ರತಿನಿಧಿ
Subscribe to Oneindia Kannada

ಮೈಸೂರು, ಏಪ್ರಿಲ್ 14 : ಮಂಡ್ಯದಲ್ಲಿ ನಡೆದ ಮೋನಿಕಾಳ ಮರ್ಯಾದಾ ಹತ್ಯೆ ಇನ್ನೂ ಹಸಿರಿರುವಾಗಲೇ ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ತವರು ಕ್ಷೇತ್ರ ಮೈಸೂರು ಜಿಲ್ಲೆಯ ನಂಜನಗೂಡು ತಾಲೂಕಿನ ಚಂದ್ರವಾಡಿ ಗ್ರಾಮದಲ್ಲಿ ಯುವತಿಯೊಬ್ಬಳು ಸಂಶಯಾಸ್ಪದವಾಗಿ ಸಾವನ್ನಪ್ಪಿದ್ದು ಅದು ಮರ್ಯಾದಾ ಹತ್ಯೆ ಎಂದು ಹೇಳಲಾಗುತ್ತಿದೆ.

ಈ ಪ್ರಕರಣದ ಬಗ್ಗೆ ಯಾರೂ ದೂರು ನೀಡದ ಹಿನ್ನಲೆಯಲ್ಲಿ ಪೊಲೀಸರೇ ಸ್ವಯಂ ದೂರು ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ. ಇಷ್ಟಕ್ಕೂ ಯುವತಿ ಸಾವನ್ನು ಕೆದಕುತ್ತಾ ಹೋದರೆ ಆಕೆಯದು ಮರ್ಯದಾ ಹತ್ಯೆ ಎಂಬುದು ಗೊತ್ತಾಗಿ ಬಿಡುತ್ತದೆ. ಆದರೆ ಊರಲ್ಲಿ ಯಾರೂ ಕೂಡ ಈ ಬಗ್ಗೆ ಸೊಲ್ಲೆತ್ತುತ್ತಿಲ್ಲ.

ನಂಜನಗೂಡು ತಾಲೂಕಿನ ಚಂದ್ರವಾಡಿ ಗ್ರಾಮದ ನಿವಾಸಿ ಗುರುಮಲ್ಲಪ್ಪ ಮಂಜುಳ ಎಂಬುವರ ಪುತ್ರಿ ಮಧುಕುಮಾರಿ (23) ಸಂಶಯಾಸ್ಪದವಾಗಿ ಸಾವನ್ನಪ್ಪಿದ ದುರ್ದೈವಿ. ಈಕೆ ಎಸ್‌ಎಸ್‌ಎಲ್‌ಸಿಯಲ್ಲಿ ಅನುತ್ತೀರ್ಣಳಾಗಿದ್ದರಿಂದ ಮನೆಯಲ್ಲೇ ಇದ್ದಳು. [ಪ್ರೇಮಕೆ ಹುಟ್ಟೂ ಇಲ್ಲ, ಹೇಳಿಕೊಡಲು ಗುರುವೂ ಬೇಕಾಗಿಲ್ಲ!]

Death of girl in Nanjangud, honor killing suspected

ಕಳೆದ ಆರೇಳು ವರ್ಷಗಳಿಂದ ಚಂದ್ರವಾಡಿ ಗ್ರಾಮದ ನಾಮಧಾರಿ ಶೆಟ್ಟರ ವರ್ಗಕ್ಕೆ ಸೇರಿರುವ ನಾಗಮ್ಮ ಎಂಬುವರ ಪುತ್ರ ಜಯರಾಮ ಅಲಿಯಾಸ್ ಜಯಪ್ಪ(26) ಎಂಬಾತನನ್ನು ಪ್ರೀತಿಸುತ್ತಿದ್ದಳು. ಈ ವಿಚಾರದಲ್ಲಿ ಮಧುಕುಮಾರಿ ಮನೆಯಲ್ಲಿ ವಿರೋಧವಿತ್ತು.

ಹೀಗಾಗಿ ಆಕೆಗೆ ತಾಲೂಕಿನ ಎಲಚಗೇರಿ ಗ್ರಾಮದ ಶಿವರಾಜು ಎಂಬ ಯುವಕನೊಂದಿಗೆ ಏ.29ರಂದು ಮದುವೆಗೆ ಏರ್ಪಾಡು ಮಾಡಿದ್ದರು. ಆದರೆ ಈ ಮದುವೆಗೆ ಮಧುಕುಮಾರಿ ಮಾತ್ರ ಒಪ್ಪಿರಲಿಲ್ಲ. [ಮಂಡ್ಯದಲ್ಲಿ ಹಿಂದೂ ಯುವತಿ, ಮುಸ್ಲಿಂ ಯುವಕನ ಲಗ್ನಕ್ಕೆ ವಿಘ್ನ]

ಈ ನಡುವೆ ಸೋಮವಾರ ಮಧುಕುಮಾರಿಗೆ ಆರೋಗ್ಯ ಸರಿಯಿರಲಿಲ್ಲ ಹಾಗಾಗಿ ಆಕೆ ಸಾವನ್ನಪ್ಪಿದ್ದು, ಮಂಗಳವಾರ ಮಧ್ಯಾಹ್ನದ ವೇಳೆಗೆ ಆಕೆಯ ಅಂತ್ಯಕ್ರಿಯೆಯೂ ನಡೆದು ಹೋಗಿತ್ತು. ಈ ಬಗ್ಗೆ ಗ್ರಾಮದಲ್ಲಿ ಗುಸುಗುಸು ಆರಂಭವಾಗಿದೆ.

ಆದರೆ ಈ ಪ್ರಕರಣದ ಬಗ್ಗೆ ಯಾರೂ ದೂರು ನೀಡದ ಪರಿಣಾಮ ಎಸ್ಪಿ ಅಭಿನವ್ ಖರೆ ಅವರ ಸೂಚನೆ ಮೇರೆಗೆ ಡಿವೈಎಸ್ಪಿ ದಿವ್ಯಸಾರಾಥಾಮಸ್, ಸಿಐ ರವಿಕುಮಾರ್, ಎಸ್‌ಐ ಅರುಣ್ ಮೊದಲಾದ ಅಧಿಕಾರಿಗಳು ತೆರಳಿ ವಿಚಾರಣೆ ನಡೆಸಿದ್ದಾರೆ. [ಯಾಂತ್ರಿಕ ಯುಗದಲ್ಲಿ ಕಮ್ಮಾರರ ಬದುಕು ಅತಂತ್ರ!]

Death of girl in Nanjangud, honor killing suspected

ಅಲ್ಲದೆ ಸ್ವಯಂ ಪ್ರೇರಣೆಯಿಂದ ಪ್ರಕರಣ ದಾಖಲಿಸಿಕೊಂಡು ಯುವತಿ ಶವದ ಅಂತ್ಯಕ್ರಿಯೆ ನಡೆಸಿದ ಸ್ಥಳದಲ್ಲಿ ದೊರೆತ ಮೂಳೆ ಇನ್ನಿತರ ಅವಶೇಷಗಳನ್ನು ಸಂಗ್ರಹಿಸಿಕೊಂಡು ತನಿಖೆ ಆರಂಭಿಸಿದ್ದಾರೆ. ಯುವತಿಯ ತಂದೆ ಗುರುಮಲ್ಲಪ್ಪ ತಾಯಿ ಮಂಜುಳ ಹಾಗೂ ಪ್ರೀತಿಸಿದ ಯುವಕ ಚಂದ್ರವಾಡಿ ಗ್ರಾಮದ ಜಯರಾಮ ಅಲಿಯಾಸ್ ಜಯಪ್ಪನನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.

ಇಷ್ಟಕ್ಕೂ ಮಧುಕುಮಾರಿಯ ಸಾವು ಸಹಜ ಸಾವಲ್ಲ ಅದು ಮರ್ಯಾದಾ ಹತ್ಯೆ ಎಂದು ಹೇಳಲು ಹಲವು ಕಾರಣಗಳಿವೆ. ಈ ಮಧ್ಯೆ ಆಕೆಯ ಪ್ರಿಯಕರ ಜಯಪ್ಪನ ತಾಯಿ ನಾಗಮ್ಮ ಮಾತನಾಡಿ, "ನನ್ನ ಮಗನನ್ನು ಮಧುಕುಮಾರಿ ಪ್ರೀತಿಸುತ್ತಿದ್ದಳು. ಅವಳ ಮನೆಯವರು ನಿಶ್ಚಯಿಸಿದ್ದ ವರನೊಂದಿಗೆ ಮದುವೆ ಆಗಲು ಆಕೆಗೆ ಇಷ್ಟವಿರಲಿಲ್ಲ. ಇಬ್ಬರ ದೂರ ಹೋಗಿ ಮದುವೆಯಾಗಲು ನಿಶ್ಚಯಿಸಿದ್ದರು. ಅಷ್ಟರಲ್ಲಾಗಲೇ ಸಾವನ್ನಪ್ಪಿರುವುದು ಹಲವು ಸಂಶಯಗಳಿಗೆ ಎಡೆಮಾಡಿದೆ" ಎಂದು ಹೇಳಿದ್ದಾರೆ.

ಗ್ರಾಮದಲ್ಲಿ ಹರಡಿರುವ ವದಂತಿಗಳ ಪ್ರಕಾರ, ಮಧುಕುಮಾರಿ ಮದುವೆಯಾಗಲು ಇಷ್ಟವಿಲ್ಲದ ಕಾರಣ ನಿದ್ದೆಮಾತ್ರೆ ಸೇವಿಸಿದ್ದಳು ಎನ್ನಲಾಗಿದೆ. ಇದರಿಂದ ಸಾವನ್ನಪ್ಪಿದಳೇ ಎಂಬ ಸಂಶಯ ಎದ್ದಿದ್ದರೆ, ಯುವತಿ ಮನೆಯವರು ಆಕೆಗೆ ವಾಂತಿಬೇಧಿಯಾಗಿ ಸಾವನ್ನಪ್ಪಿದ್ದಾಗಿ ಹೇಳುತ್ತಿದ್ದಾರೆ.

ಒಂದು ವೇಳೆ ಹಾಗೆಯೇ ಸಾವನ್ನಪ್ಪಿದ್ದರೆ, ಎಲ್ಲರನ್ನೂ ಹೂಳುವಂತೆ ಆಕೆಯನ್ನು ಹೂಳಬಹುದಿತ್ತು. ಆದರೆ ಆಕೆಯನ್ನು ಗ್ರಾಮದಿಂದ ಸುಮಾರು 1 ಕಿ.ಮೀ ದೂರದಲ್ಲಿರುವ ನುಗು ವಲಯದ ಅಂಚಿನಲ್ಲಿ ಸುಟ್ಟು ಹಾಕಿರುವುದು ಕೂಡ ಸಂಶಯವನ್ನುಂಟು ಮಾಡಿದೆ. ಹಲವು ಸಂಶಯಕ್ಕೆಡೆ ಮಾಡಿರುವ ಪ್ರಕರಣದ ನಿಜಾಂಶ ಪೊಲೀಸರ ತನಿಖೆಯಿಂದಷ್ಟೆ ಹೊರಬರಬೇಕಿದೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
A 23-year-old girl's death in Nanjangud taluk in Mysuru district is the talk of the town. Police say it could be honor killing, as the girl was in love with a boy, while her marriage was fixed with another one in April. Her body was cremated without informing police.
Please Wait while comments are loading...