ಮೈಸೂರು ದಸರಾಕ್ಕೆ ಕಳೆಕಟ್ಟಿದ ಗಜಪಯಣ

By: ಮೈಸೂರು ಪ್ರತಿನಿಧಿ
Subscribe to Oneindia Kannada

ಹುಣಸೂರು: ವಿಶ್ವ ವಿಖ್ಯಾತ ದಸರಾಕ್ಕೆ ಕಳೆ ಬಂದಿದೆ. ದಸರಾದ ಪ್ರಮುಖ ಆಕರ್ಷಣೆಯಾದ ಆನೆಗಳ ಗಜಪಯಣಕ್ಕೆ ಶನಿವಾರ ಬೆಳಗ್ಗೆ ವಿಧ್ಯುಕ್ತ ಚಾಲನೆ ದೊರಕಿತು.

ತಾಲೂಕಿನ ನಾಗಾಪುರ ಗಿರಿಜನ ಆಶ್ರಮ ಶಾಲೆಯಲ್ಲಿ ಅಲಂಕೃತವಾಗಿದ್ದ ಅಂಬಾರಿ ಹೊರುವ ಆನೆ ಅರ್ಜುನ ನೇತೃತ್ವದ ಗಜಪಡೆಗೆ ಜಿಲ್ಲಾಉಸ್ತುವಾರಿ ಸಚಿವ ಡಾ.ಎಚ್.ಸಿ.ಮಹದೇವಪ್ಪ ಅವರು ದೀಪ ಬೆಳಗಿ, ಪುಷ್ಪಾರ್ಚನೆ ಮಾಡಿ ಆನೆಗಳಿಗೆ ಕಬ್ಬು, ಬೆಲ್ಲವನ್ನು ತಿನ್ನಿಸಿದರು. ಮಾವುತ ಮತ್ತು ಕಾವಾಡಿಗಳಿಗೆ ಫಲ-ತಾಂಬೂಲ ನೀಡಿ ಗಜಪಯಣಕ್ಕೆ ಶುಭ ಹಾರೈಸಿದರು.[ನಾಡಹಬ್ಬ ಮೈಸೂರು ದಸರಾ ಲಾಂಛನ, ವೆಬ್ ಸೈಟ್ ಅನಾವರಣ]

Gaja-1

ಸಂಕಷ್ಟ ಚತುರ್ಥಿ ಹಿನ್ನೆಲೆಯಲ್ಲಿ ಷೋಡಶೋಪಾಚಾರ ಪೂಜೆ ಸೇರಿದಂತೆ 15 ಪೂಜೆಗಳನ್ನು ನೆರವೇರಿಸಲಾಯಿತು. 50ಕ್ಕೂ ಹೆಚ್ಚು ಮಹಿಳಾ ಸಂಘಟನೆಗಳ ಕಾರ್ಯಕರ್ತೆಯರು ಕಳಸ ಹೊತ್ತು, ಗಡಿ ಭಾಗದ ತನಕ ಗಜಪಡೆಯೊಂದಿಗೆ ಹೆಜ್ಜೆ ಹಾಕಿ ಬೀಳ್ಕೊಟ್ಟರು.

ಅರ್ಜುನ ನೇತೃತ್ವದಲ್ಲಿ ಬಲರಾಮ, ಅಭಿಮನ್ಯು, ಕಾವೇರಿ, ವಿಜಯ, ಗಜೇಂದ್ರ ಆನೆಗಳ ಮೊದಲ ತಂಡ ತಮ್ಮ ಮಾವುತರು ಮತ್ತು ಕಾವಾಡಿಗಳ ಕುಟುಂಬಗಳೊಂದಿಗೆ ಮೈಸೂರಿನತ್ತ ಹೆಜ್ಜೆ ಹಾಕಿದವು. ಇದೇ ಸಂದರ್ಭ ನಾಗಾಪುರ ಶಾಲೆಯ ವೇದಿಕೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು.[ಅರ್ಜುನ, ಬಲರಾಮ, ಅಭಿಮನ್ಯು.. ದಸರಾ ಆನೆಗಳ ಪರಿಚಯ ಇಲ್ಲಿದೆ]

Gaja-2

ಈ ಜಿಲ್ಲಾ ಉಸ್ತುವಾರಿ ಸಚಿವ ಡಾ. ಎಚ್.ಸಿ.ಮಹದೇವಪ್ಪ ಮಾತನಾಡಿ, ಗಜಪಯಣವನ್ನು 13 ವರ್ಷಗಳಿಂದ ಆಚರಣೆ ಮಾಡುತ್ತಾ ಬರಲಾಗುತ್ತಿದೆ. ಅಂಬಾರಿ ಹೊರುವ ಅರ್ಜುನನ ಮಾವುತ ದೊಡ್ಡಮಾಸ್ತಿ ಸಾವನ್ನಪ್ಪಿರುವ ಕಾರಣ ಅರ್ಜುನ ಯಾರ ಮಾತನ್ನೂ ಕೇಳುತ್ತಿಲ್ಲ. ಸದ್ಯಕ್ಕೆ ಅವರ ಮಗ ಸಣ್ಣಪ್ಪ ಅದನ್ನು ನೋಡಿಕೊಳ್ಳುತ್ತಿದ್ದಾರೆ. ಮೈಸೂರು ಮಹಾರಾಜರನ್ನು ನೆನಪಿಸಿಕೊಳ್ಳುವ ದಸರಾ ಆಗಿದೆ ಎಂದರು. ಕಾರ್ಯಕ್ರಮದಲ್ಲಿ ಶಾಸಕ ಹೆಚ್.ಪಿ. ಮಂಜುನಾಥ್, ಮೇಯರ್ ಬೈರಪ್ಪ, ಜಿ.ಪಂ. ಅಧ್ಯಕ್ಷೆÀ್ಷ ನಯಿಮಾ ಸುಲ್ತಾನ್, ಜಿಲ್ಲಾಧಿಕಾರಿ ರಣದೀಪ್ ಮತ್ತಿತರರು ಉಪಸ್ಥಿತರಿದ್ದರು.[ದಸರೆಗೆ ಮೈಸೂರಲ್ಲಿ ವಿಮಾನಯಾನ ಮತ್ತೆ ಶುರು ಮಾಡಿ: ಪ್ರತಾಪ್ ಸಿಂಹ]

gaja-3

ಗಜಪಯಣದ ಅಂಗವಾಗಿ ನಾಗಾಪುರ ಆಶ್ರಮ ಶಾಲೆ ಆವರಣವನ್ನು ತಳಿರು ತೋರಣಗಳಿಂದ ಸಿಂಗರಿಸಿದ್ದರೆ, ಸುತ್ತಮುತ್ತಲಿನ ಪ್ರದೇಶದಲ್ಲಿ ಹಬ್ಬದ ಸಂಭ್ರಮ ಮನೆ ಮಾಡಿತ್ತು. ಗುರುಪುರ ಟಿಬೆಟಿಯನ್ ರಿಂದ ನೃತ್ಯ, ಜಾನಪದ ಕಲಾವಿದರಿಂದ ಕಂಸಾಳೆ, ವೀರಭದ್ರ ಕುಣಿತ ಮತ್ತು ಶಾಲಾ ಮಕ್ಕಳಿಂದ ಜನಪದ ನೃತ್ಯ ಮೊದಲಾದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ - ನೋಂದಣಿ ಉಚಿತ!

English summary
Dasara elephants start jouney from Hunsur taluk Nagapura towards Mysuru on Sunday. District incharge minister inaugurated the function.
Please Wait while comments are loading...