ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ನಂಜನಗೂಡು ಉಪಚುನಾವಣೆಗೆ ಕಾಂಗ್ರೆಸ್ ಗೆ ಅಭ್ಯರ್ಥಿ ಬೇಕಾಗಿದ್ದಾರೆ!

ನಂಜನಗೂಡು ಉಪಚುನಾವಣೆಯನ್ನು ಪ್ರತಿಷ್ಠೆಯಾಗಿ ಪರಿಗಣಿಸಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ, ಮೊದಲಿಗೆ ಶ್ರೀನಿವಾಸ್ ಪ್ರಸಾದ್ ಅವರನ್ನು ಏಕಾಂಗಿ ಎಂದೇ ಅಂದುಕೊಂಡಿದ್ದರು. ಯಾವಾಗ ಪ್ರಸಾದ್ ಬಿಜೆಪಿ ಸೇರಿದರೋ ಚಿತ್ರಣವೇ ಬದಲಾಗಿ ಹೋಯಿತು

By ಬಿ.ಎಂ.ಲವಕುಮಾರ್
|
Google Oneindia Kannada News

ಮೈಸೂರು, ಫೆಬ್ರವರಿ 7: ಮಾಜಿ ಕಂದಾಯ ಸಚಿವ, ರಾಜಕೀಯ ಮುತ್ಸದ್ದಿ ಶ್ರೀನಿವಾಸ ಪ್ರಸಾದ್ ರಾಜೀನಾಮೆ ಬಳಿಕ ತೆರವಾದ ಸ್ಥಾನಕ್ಕೆ ಉಪಚುನಾವಣೆ ನಡೆಯುತ್ತಿದ್ದು, ಕಾಂಗ್ರೆಸ್ ನಿಂದ ಸ್ಪರ್ಧಿಸಲು ಅಭ್ಯರ್ಥಿಗಳು ಬೇಕಾಗಿದ್ದಾರೆ ಎಂಬ ಜಾಹೀರಾತು ನೀಡುವುದು ಇದೀಗ ಪಕ್ಷದ ನಾಯಕರಿಗೆ ಅನಿವಾರ್ಯವಾಗಿದೆ ಎಂಬ ಮಾತಿನ ಚಟಾಕಿ ಸಾರ್ವಜನಿಕ ವಲಯದಲ್ಲಿ ಹರಿದಾಡುತ್ತಿದೆ.

ಶ್ರೀನಿವಾಸ ಪ್ರಸಾದ್ ರಾಜೀನಾಮೆಯನ್ನು ಹಳೇ ಮೈಸೂರು ವ್ಯಾಪ್ತಿಯ ಕಾಂಗ್ರೆಸ್ ನಾಯಕರಿಗೆ ಅರಗಿಸಿಕೊಳ್ಳಲು ಇನ್ನೂ ಸಾಧ್ಯವಾಗಿಲ್ಲ. ಆದರೆ ಅವರು ರಾಜೀನಾಮೆ ನೀಡಲು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸಂಪುಟದಿಂದ ಕೈಬಿಟ್ಟಿದ್ದೇ ಕಾರಣ ಎಂಬುದು ಎಲ್ಲರಿಗೂ ಗೊತ್ತಿರುವ ವಿಚಾರವೇ.[ನಂಜನಗೂಡು ಉಪ ಚುನಾವಣೆ: ಕಾಂಗ್ರೆಸ್ ಟಿಕೆಟ್ ಕದನ ಕುತೂಹಲ]

ಆ ದಿನ ತಾವು ಮಾಡಿದ ನಿರ್ಧಾರವನ್ನು ಸಮರ್ಥಿಸಿಕೊಳ್ಳುವುದು ಸಿಎಂಗೆ ಅನಿವಾರ್ಯವಾಗಿತ್ತು. ಜತೆಗೆ ಶ್ರೀನಿವಾಸಪ್ರಸಾದ್ ಅವರನ್ನು ಸಂಧಾನ ಮಾಡಿ ಮತ್ತೆ ಸಂಪುಟದಲ್ಲಾಗಲೀ ಪಕ್ಷದಲ್ಲಾಗಲೀ ಉಳಿಸಿಕೊಳ್ಳುವ ಗೋಜಿಗೆ ಅವರು ಹೋಗಲಿಲ್ಲ. ಹಾಗೊಂದು ವೇಳೆ ಮಾಡಿದ್ದರೆ ಹೈಕಮಾಂಡ್ ನ ಕೆಟ್ಟ ದೃಷ್ಟಿಗೆ ಬೀಳಬೇಕಾಗಿತ್ತು.

ಏಕೆಂದರೆ ಲೋಕಸಭೆಯ ವಿರೋಧಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಪುತ್ರ ಪ್ರಿಯಾಂಕ ಖರ್ಗೆಗೆ ಸಂಪುಟದಲ್ಲಿ ಸ್ಥಾನ ಕೊಡಲೇ ಬೇಕಾಗಿತ್ತು. ಹೀಗಾಗಿ ಶ್ರೀನಿವಾಸ ಪ್ರಸಾದ್ ಅವರನ್ನು ಹೊರಗಿಡಲಾಯಿತು. ಅದು ನಿಜಕ್ಕೂ ಒಬ್ಬ ಅನುಭವಿ ರಾಜಕಾರಣಿಗೆ ಮಾಡಿದ ಅವಮಾನವಾಗಿತ್ತು.

 ಪಕ್ಷ ಮುಖ್ಯ ಹೊರತು ವ್ಯಕ್ತಿ ಅಲ್ಲ

ಪಕ್ಷ ಮುಖ್ಯ ಹೊರತು ವ್ಯಕ್ತಿ ಅಲ್ಲ

ಶ್ರೀನಿವಾಸ ಪ್ರಸಾದ್ ಅವರನ್ನು ಹೊರಗಿಟ್ಟ ಬಳಿಕ ಅದನ್ನು ಸಮರ್ಥಿಸಿಕೊಳ್ಳಲು ಮುಖ್ಯಮಂತ್ರಿ ಸಿದ್ದರಾಮಯ್ಯ ಮಾಡಿದ ಕಸರತ್ತು ಒಂದೆರಡಲ್ಲ. ಕಾಂಗ್ರೆಸ್ ಗೆ ಪಕ್ಷ ಮುಖ್ಯ ಹೊರತು ವ್ಯಕ್ತಿ ಅಲ್ಲ ಎಂದು ಘಂಟಾಘೋಷವಾಗಿ ಹೇಳಿದರು. ಅದನ್ನು ಸಾಬೀತು ಮಾಡಲು ಒಂದಷ್ಟು ಜನರನ್ನು ಕರೆತಂದು ನಂಜನಗೂಡಿನಲ್ಲಿ ಸಮಾವೇಶ ಮಾಡಿ ತೊಡೆ ತಟ್ಟಿ ಶ್ರೀನಿವಾಸ ಪ್ರಸಾದ್ ವಿರುದ್ಧ ಹರಿಹಾಯ್ದರು.

ಮುಖ್ಯಮಂತ್ರಿಯಾಗಿರುವುದು ನಿಮ್ಮಿಂದ

ಮುಖ್ಯಮಂತ್ರಿಯಾಗಿರುವುದು ನಿಮ್ಮಿಂದ

ನಾನು ಮುಖ್ಯಮಂತ್ರಿಯಾಗಿರುವುದು ನಿಮ್ಮಿಂದ, ಶ್ರೀನಿವಾಸ ಪ್ರಸಾದ್ ನಿಂದ ಅಲ್ಲ ಎಂದು ಹೇಳುವ ಮೂಲಕ ಜನರಿಂದ ಚಪ್ಪಾಳೆ ತಟ್ಟಿಸಿಕೊಂಡರು. ನೆರೆದಿದ್ದ ಜನರ ಮುಂದೆ ಎಲ್ಲ ನಾಯಕರು ಶ್ರೀನಿವಾಸ ಪ್ರಸಾದ್ ಅವರನ್ನು ತೆಗಳಿದರು. ಆ ಮೂಲಕ ಮುಂದಿನ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಬೆಂಬಲಿಸಿ, ಶ್ರೀನಿವಾಸ ಪ್ರಸಾದ್ ಅವರನ್ನು ಸೋಲಿಸುವಂತೆ ಕರೆ ನೀಡಿದರು.

ಅಭಿವೃದ್ಧಿ ಕಾಮಗಾರಿಗಳ ಭೂಮಿ ಪೂಜೆ

ಅಭಿವೃದ್ಧಿ ಕಾಮಗಾರಿಗಳ ಭೂಮಿ ಪೂಜೆ

ಕಾರ್ಯಕರ್ತರ ಸಭೆಗೆ ಬಂದಿದ್ದ ಜನರನ್ನು ಕಂಡು ಪಕ್ಷದ ನಾಯಕರು ಖುಷಿಯಾಗಿದ್ದರು. ಜನರ ಬೆಂಬಲ ನಮಗಿದೆ. ಶ್ರೀನಿವಾಸ ಪ್ರಸಾದ್ ಏಕಾಂಗಿಯಾಗಿದ್ದಾರೆ. ಅವರ ಜತೆ ಯಾರೂ ಇಲ್ಲ ಎಂಬುದನ್ನು ಸ್ವತಃ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೇ ನಂಬಿಬಿಟ್ಟಿದ್ದರು. ಸಿಎಂ ಪುತ್ರ ಸೇರಿದಂತೆ ಸಚಿವರು, ಸಂಸದರು, ಸಣ್ಣಪುಟ್ಟ ನಾಯಕರೆಲ್ಲ ನಂಜನಗೂಡಿನಲ್ಲಿ ಬೀಡು ಬಿಟ್ಟು ವಿಧಾನಸಭಾ ಕ್ಷೇತ್ರದ ಹಳ್ಳಿ ಹಳ್ಳಿಗೆ ತೆರಳಿ ಜನರನ್ನು ಭೇಟಿ ಮಾಡಿದರು. ಸರ್ಕಾರದ ಯೋಜನೆಯ ಅನುದಾನಗಳು ಏನಿವೆಯೋ ಅವೆಲ್ಲವನ್ನು ನಂಜನಗೂಡು ವ್ಯಾಪ್ತಿಗೆ ತರುವ ವ್ಯವಸ್ಥೆ ಮಾಡಿದರು. ಅಲ್ಲಲ್ಲಿ ಅಭಿವೃದ್ಧಿ ಕಾಮಗಾರಿಗಳ ಭೂಮಿ ಪೂಜೆ ನಡೆಯಿತು. ಒಂದಷ್ಟು ಅಭಿವೃದ್ಧಿ ಕಾರ್ಯಗಳು ಸದ್ದಿಲ್ಲದೆ ಆಗಿಹೋಯಿತು.

 ಶ್ರೀನಿವಾಸ ಪ್ರಸಾದ್ ಅವರ ನಡೆ ಬಗ್ಗೆ ಅರಿವಿರಲಿಲ್ಲ

ಶ್ರೀನಿವಾಸ ಪ್ರಸಾದ್ ಅವರ ನಡೆ ಬಗ್ಗೆ ಅರಿವಿರಲಿಲ್ಲ

ಉಸ್ತುವಾರಿ ಸಚಿವ ಎಚ್.ಸಿ.ಮಹದೇವಪ್ಪ ನಂಜನಗೂಡಿಗೆ ಸೀಮಿತರಾಗಿಬಿಟ್ಟರು. ಅಷ್ಟೇ ಅಲ್ಲ. ಅವರು ಮೈಸೂರಿಗಲ್ಲ ಕೇವಲ ನಂಜನಗೂಡಿಗೆ ಉಸ್ತುವಾರಿ ಸಚಿವರು ಎಂದು ರಾಜಕೀಯ ಪಕ್ಷಗಳ ನಾಯಕರು ಟೀಕಿಸಿದರು. ಅದರೂ ಯಾರೂ ತಲೆ ಕೆಡಿಸಿಕೊಳ್ಳಲಿಲ್ಲ. ಮುಖ್ಯಮಂತ್ರಿಗಳಿಗೆ ಶ್ರೀನಿವಾಸ ಪ್ರಸಾದ್ ಅವರ ನಡೆ ಬಗ್ಗೆ ಅರಿವಿರಲಿಲ್ಲ. ಕಾಂಗ್ರೆಸ್ ನಿಂದ ಹೊರಗೆ ಹೋಗಿಯಾಗಿದೆ. ಅವರೀಗ ಏಕಾಂಗಿ. ಒಂದಷ್ಟು ಬೆಂಬಲಿಗರಿಂದ ಗೆಲುವು ಪಡೆಯುವುದು ಮರೀಚಿಕೆ. ಹೀಗಾಗಿ ಅವರನ್ನು ಸೋಲಿಸುವಂತೆ ಮಾಡಿದರೆ ರಾಜಕೀಯವಾಗಿ ಮೂಲೆಗುಂಪಾಗುತ್ತಾರೆ. ಇದರಿಂದ ರಾಜಕೀಯ ಶತ್ರುವನ್ನು ಸದೆಬಡಿದಂತಾಗುತ್ತದೆ ಎಂಬುದು ಅವರ ಲೆಕ್ಕಾಚಾರವಾಗಿತ್ತು.

 ಬಿಜೆಪಿಗೆ ಸೇರಿದ ಬಳಿಕ ಮಂಕಾದ ಸಿಎಂ

ಬಿಜೆಪಿಗೆ ಸೇರಿದ ಬಳಿಕ ಮಂಕಾದ ಸಿಎಂ

ಇದೀಗ ಶ್ರೀನಿವಾಸ ಪ್ರಸಾದ್ ಬಿಜೆಪಿ ಸೇರಿದ್ದಾರೆ. ಅಷ್ಟೇ ಅಲ್ಲ ಬಿಜೆಪಿ ಪಕ್ಷದ ಅಭ್ಯರ್ಥಿಯಾಗಿಯೇ ಚುನಾವಣೆಗೆ ಸ್ಪರ್ಧಿಸುತ್ತಿದ್ದಾರೆ. ಶ್ರೀನಿವಾಸ ಪ್ರಸಾದ್ ಯಾವುದೇ ಪಕ್ಷಕ್ಕೆ ಹೋಗದೆ ಪಕ್ಷೇತರರಾಗಿ ಚುನಾವಣೆ ಎದುರಿಸುತ್ತಾರೆ ಎಂದು ನಂಬಿದ ಸಿಎಂ ಅವರು ಬಿಜೆಪಿಗೆ ಸೇರಿದ ಬಳಿಕ ಮಂಕಾಗಿದ್ದಾರೆ. ಅವರ ಮುಂದೆ ನಿಂತು ಗೆಲುವು ಸಾಧಿಸುತ್ತೇನೆ ಎಂದು ಹೇಳುವ ನಾಯಕರು ಇಲ್ಲದಂತಾಗಿದೆ. ಹೀಗಾಗಿ ಜೆಡಿಎಸ್ ನ ಕಳಲೆ ಕೇಶವಮೂರ್ತಿ ಅವರನ್ನು ತರುವ ಯತ್ನ ಮಾಡಲಾಯಿತು.

 ಕಾಂಗ್ರೆಸ್ ನಾಯಕರಲ್ಲೇ ಸಹಮತವಿಲ್ಲ

ಕಾಂಗ್ರೆಸ್ ನಾಯಕರಲ್ಲೇ ಸಹಮತವಿಲ್ಲ

ಇಷ್ಟಕ್ಕೂ ಕೇಶವಮೂರ್ತಿ ಅವರ ನಡೆಯೇ ವಿಚಿತ್ರವಾಗಿದೆ. ಜೆಡಿಎಸ್ ವರಿಷ್ಠ ದೇವೇಗೌಡರು ಮತ್ತು ಕುಮಾರಸ್ವಾಮಿ ಅವರ ಮುಂದೆ ನಿಷ್ಠರಂತೆ ವರ್ತಿಸುತ್ತಾ, ಇತ್ತ ಕಾಂಗ್ರೆಸ್ ಬಾಗಿಲು ತಟ್ಟುತ್ತಿರುವುದು ಅಚ್ಚರಿ ಮೂಡಿಸಿದೆ. ಕೇಶವಮೂರ್ತಿ ಅವರಿಗೆ ಟಿಕೆಟ್ ನೀಡುವುದಕ್ಕೆ ಕಾಂಗ್ರೆಸ್ ನಾಯಕರಲ್ಲೇ ಸಹಮತವಿಲ್ಲ.

 ಹೆಚ್ಚಿನ ನಾಯಕರು ಶ್ರೀನಿವಾಸಪ್ರಸಾದ್ ನಿಷ್ಠರು

ಹೆಚ್ಚಿನ ನಾಯಕರು ಶ್ರೀನಿವಾಸಪ್ರಸಾದ್ ನಿಷ್ಠರು

ಈಗಿರುವ ಹೆಚ್ಚಿನ ನಾಯಕರು ವೈಯಕ್ತಿಕವಾಗಿ ಶ್ರೀನಿವಾಸಪ್ರಸಾದ್ ಅವರಿಗೆ ನಿಷ್ಠರಾಗಿರುವವರು. ಹೀಗಿರುವಾಗ ಅವರ ಮುಂದೆ ಸ್ಪರ್ಧಿಸಲು ಯಾರೂ ಮುಂದಾಗುತ್ತಿಲ್ಲ. ಉಪಚುನಾವಣೆಯ ದಿನಗಳು ಹತ್ತಿರ ಬರುತ್ತಿದ್ದು ಇನ್ನೂ ಕಾಂಗ್ರೆಸ್ ಗೆ ಅಭ್ಯರ್ಥಿಯನ್ನು ಆಯ್ಕೆ ಮಾಡಲು ಸಾಧ್ಯವಾಗುತ್ತಿಲ್ಲ ಎನ್ನುವುದಾದರೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ತವರು ಕ್ಷೇತ್ರದಲ್ಲಿ ಕಾಂಗ್ರೆಸ್ ಸ್ಥಿತಿ ಎಂತಹ ಶೋಚನೀಯ ಮಟ್ಟಕ್ಕೆ ಬಂದು ತಲುಪಿದೆ ಎನ್ನುವುದು ಗೊತ್ತಾಗಿ ಬಿಡುತ್ತದೆ.

ಬೋಸ್ ಸ್ಪರ್ಧೆ ಅನಿವಾರ್ಯವಾಗಲಿದೆ

ಬೋಸ್ ಸ್ಪರ್ಧೆ ಅನಿವಾರ್ಯವಾಗಲಿದೆ

ಇದೀಗ ಕಾಂಗ್ರೆಸ್ ನಾಯಕರು ಅಭ್ಯರ್ಥಿಗಾಗಿ ಟಾರ್ಚ್ ಹಿಡಿದುಕೊಂಡು ಹುಡುಕಾಟ ನಡೆಸಲು ಆರಂಭಿಸಿದ್ದಾರೆ. ಇದನ್ನೇ ಅಸ್ತ್ರವಾಗಿ ಉಪಯೋಗಿಸಿಕೊಳ್ಳುತ್ತಿರುವ ಸಣ್ಣಪುಟ್ಟ ಪುಢಾರಿಗಳು ತಮ್ಮ ಒಂದಿಷ್ಟು ಬೆಂಬಲಿಗರನ್ನು ಮುಂದೆ ಬಿಟ್ಟು ಟಿಕೆಟ್ ಪಡೆಯಲು ಹವಣಿಸುತ್ತಿದ್ದಾರೆ. ಶ್ರೀನಿವಾಸ ಪ್ರಸಾದ್ ಅವರಿಗೆ ಸ್ಪರ್ಧೆ ನೀಡುವಂತಹ ಯಾವ ನಾಯಕರೂ ಕಾಂಗ್ರೆಸ್ ನಲ್ಲಿ ಸಿಗದಿರುವುದರಿಂದ ಕೊನೆಗೆ ಸಚಿವ ಡಾ.ಮಹದೇವಪ್ಪ ಅವರ ಸುಪುತ್ರ ಬೋಸ್ ಅವರನ್ನೇ ಕಣಕ್ಕಿಳಿಸುವುದು ಅನಿವಾರ್ಯವಾಗಲಿದೆ.

English summary
Nanjangud by election become prestigious for CM Siddaramaiah. But local Congress leaders not ready to contest against Srinivasa Prasad. So, party is looking for potential candidate, who can fight against Dalit leader Srinivasa Prasad.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X