ಡಿಸಿ ಕೆಲಸಕ್ಕೆ ಅಡ್ಡಿಪಡಿಸಿದ ಮರೀಗೌಡರಿಗೆ ಬಂಧನ ಭೀತಿ

By: ಒನ್ ಇಂಡಿಯಾ ಪ್ರತಿನಿಧಿ
Subscribe to Oneindia Kannada

ಮೈಸೂರು, ಜುಲೈ 07 : ಕಾಂಗ್ರೆಸ್ ಮುಖಂಡ ಕೆ.ಮರೀಗೌಡ ಅವರು ನಿರೀಕ್ಷಣಾ ಜಾಮೀನು ಕೋರಿ ಕೋರ್ಟ್ ಮೆಟ್ಟಿಲೇರಿದ್ದಾರೆ. ಜಿಲ್ಲಾಧಿಕಾರಿ ಸಿ.ಶಿಖಾ ಅವರ ಕರ್ತವ್ಯಕ್ಕೆ ಅಡ್ಡಿಪಡಿಸಿ, ಏಕವಚನದಲ್ಲಿ ಅವರನ್ನು ನಿಂದಿಸಿದ ಆರೋಪವನ್ನು ಮರೀಗೌಡ ಎದುರಿಸುತ್ತಿದ್ದಾರೆ.

ಬುಧವಾರ ಮೈಸೂರು ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ಮತ್ತು ಕಾಂಗ್ರೆಸ್ ಮುಖಂಡ ಕೆ.ಮರೀಗೌಡ ಅವರು ತಮ್ಮ ವಕೀಲರ ಮೂಲಕ 7ನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯಕ್ಕೆ ನಿರೀಕ್ಷಣಾ ಜಾಮೀನು ಅರ್ಜಿ ಸಲ್ಲಿಸಿದ್ದಾರೆ. ಶುಕ್ರವಾರ ಈ ಅರ್ಜಿಯ ವಿಚಾರಣೆ ನಡೆಯುವ ಸಾಧ್ಯತೆ ಇದೆ. ['ಹಾಳಾಗಿ ಹೋಗ್ತೀಯಾ' ಸಿಎಂಗೆ ಕೊಳ್ಳೇಗಾಲದ ವ್ಯಕ್ತಿಯಿಂದ ಶಾಪ]

Mari Gowda

ಸರ್ಕಾರಿ ಕೆಲಸಕ್ಕೆ ಅಡ್ಡಿಪಡಿಸಿದ ಮರೀಗೌಡ ವಿರುದ್ಧ ಮೈಸೂರು ಜಿಲ್ಲಾಧಿಕಾರಿ ಸಿ.ಶಿಖಾ ಅವರು ನಜರಬಾದ್‌ ಠಾಣೆಯಲ್ಲಿ ದೂರು ನೀಡಿದ್ದಾರೆ. ದೇವರಾಜ ಉಪವಿಭಾಗದ ಎಸಿಪಿ ರಾಜಶೇಖರ್‌ ಅವರು ಪ್ರಕರಣದ ತನಿಖಾಧಿಕಾರಿಯಾಗಿ ನೇಮಕಗೊಂಡಿದ್ದು, ಬುಧವಾರದಿಂದ ತನಿಖೆ ಆರಂಭಗೊಂಡಿದೆ. ['ಎಸಿ ಕೊಠಡಿಗಳಿಂದ ಹೊರಬಂದು ಹಳ್ಳಿಗಳಿಗೆ ಹೋಗಿ']

ಸಿ.ಸಿಖಾ ಅವರ ಕಾರು ಚಾಲಕ ಶಿವು ಹಾಗೂ ಭದ್ರತಾ ಸಿಬ್ಬಂದಿ ಸತ್ಯವೇಲು ಅವರನ್ನು ಬುಧವಾರ ವಿಚಾರಣೆ ನಡೆಸಲಾಗಿದೆ. ನಜರಬಾದ್‌ ಠಾಣೆಯಲ್ಲಿ ವಿಚಾರಣೆ ನಡೆಸಿ, ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರ ಹೇಳಿಕೆಗಳನ್ನು ದಾಖಲು ಮಾಡಿಕೊಳ್ಳಲಾಗಿದೆ.

ತಮ್ಮ ವಿರುದ್ಧ ನಜರಬಾದ್‌ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗುತ್ತಿದ್ದಂತೆ ಮರೀಗೌಡ ಅವರು ತಲೆಮರೆಸಿಕೊಂಡಿದ್ದಾರೆ. ಅವರ ಬಂಧನಕ್ಕಾಗಿ ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ. ಜುಲೈ 7ರಂದು ವಿಚಾರಣೆಗೆ ಹಾಜರಾಗುವಂತೆ ಪೊಲೀಸರು ನೋಟಿಸ್ ಜಾರಿ ಮಾಡಿದ್ದಾರೆ.

C.Shikha

ಆಗಿದ್ದೇನು? : ಜುಲೈ 3ರ ಭಾನುವಾರ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇಫ್ತಾರ್ ಕೂಟದಲ್ಲಿ ಭಾಗವಹಿಸಲು ಮೈಸೂರಿಗೆ ಆಗಮಿಸಿದ್ದರು. ಶಿಷ್ಟಾಚಾರದ ಹಿನ್ನಲೆಯಲ್ಲಿ ಜಿಲ್ಲಾಧಿಕಾರಿಗಳು ಸೇರಿದಂತೆ ಹಲವು ಅಧಿಕಾರಿಗಳು ಸರ್ಕಾರಿ ಅತಿಥಿ ಗೃಹದಲ್ಲಿ ಮುಖ್ಯಮಂತ್ರಿಗಳನ್ನು ಬರಮಾಡಿಕೊಂಡಿದ್ದರು.

ಆಗ ಅಲ್ಲಿಗೆ ಆಗಮಿಸಿದ್ದ ಕೆ.ಮರೀಗೌಡ ಅವರು ಯಾದಗಿರಿ ಉಪ ವಿಭಾಗಾಧಿಕಾರಿಯಾಗಿ ಬಡ್ತಿ ಹೊಂದಿ, ವರ್ಗಾವಣೆಯಾಗಿರುವ ನವೀನ್‌ ಜೋಸೆಫ್‌ ಅವರನ್ನು ತಹಶೀಲ್ದಾರ್‌ ಏಕೆ ಜಿಲ್ಲಾಧಿಕಾರಿಗಳು ಬಿಡುಗಡೆ ಮಾಡಿಲ್ಲ? ಎಂದು ಪ್ರಶ್ನಿಸಿದ್ದರು.

ನಂತರ ಅತಿಥಿಗೃಹದಿಂದ ಹೊರಟ ಜಿಲ್ಲಾಧಿಕಾರಿ ಸಿ.ಸಿಖಾ ಅವರನ್ನು ಏಕವಚನದಲ್ಲಿ ಮರೀಗೌಡ ಅವರು ನಿಂದಿಸಿದ್ದರು. ಮರೀಗೌಡ ಅವರ ಬೆಂಬಲಿಗರು ಜಿಲ್ಲಾಧಿಕಾರಿ ವಿರುದ್ಧ ಘೋಷಣೆ ಕೂಗಿ, ಕಾರು ಅಡ್ಡಹಾಕಿದ್ದರು. ಈ ಬಗ್ಗೆ ಸಿಖಾ ಅವರು ಪೊಲೀಸರಿಗೆ ದೂರು ಕೊಟ್ಟಿದ್ದಾರೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ - ನೋಂದಣಿ ಉಚಿತ!

English summary
Mysuru former Zilla Panchayat president, and Congress leader K.Mari Gowda on July 6, 2016 applied for anticipatory bail. Deputy Commissioner C.Shikha filed complaint against Mari Gowda in Nazarbad police station Mysuru.
Please Wait while comments are loading...