ಮೈಸೂರು, ಜನವರಿ 10 : ಸಿಎಂ ಸಿದ್ದು ಮಕ್ಕಳ ಭಾಗ್ಯವೊಂದನ್ನು ಬಿಟ್ಟು ಮಿಕ್ಕೆಲ್ಲಾ ಭಾಗ್ಯವನ್ನು ದಯಪಾಲಿಸುತ್ತಿದ್ದಾರೆ ಎಂದು ಮಾಜಿ ಸಚಿವ ಹಾಗೂ ಜೆಡಿಎಸ್ ಮುಖಂಡ ಅಡಗೂರು ವಿಶ್ವನಾಥ್ ಕಿಡಿಕಾರಿದರು.
ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಮುಖ್ಯಮಂತ್ರಿ ಸಿದ್ದರಾಮಯ್ಯ ನವಕರ್ನಾಟಕ ಯಾತ್ರೆ ನೆಪದಲ್ಲಿ ಸರ್ಕಾರದ ಖರ್ಚಿನಲ್ಲಿ ಸಭೆಗಳನ್ನು ನಡೆಸುತ್ತಿದ್ದಾರೆ. ಇಂತಹವರಿಗೆ ಮತ ಹಾಕಿ ಇಂಥವರನ್ನು ಸೋಲಿಸಿ ಎಂದು ಅಧಿಕಾರದದರ್ಪದೊಂದಿಗೆ ಸರ್ಕಾರಿ ಅಧಿಕಾರಿಗಳನ್ನು ದುರುಪಯೋಗಪಡಿಸಿಕೊಳ್ಳುತ್ತಿದ್ದಾರೆ. ರಾಜ್ಯದಲ್ಲಿ ಅಭಿವೃದ್ಧಿ ಎಲ್ಲಿದೆ? ಎಲ್ಲ ರೀತಿಯಲ್ಲೂ ದುಂದು ವೆಚ್ಚ ನಡೆಯುತ್ತಿದ್ದು ಸರ್ಕಾರ ದಿವಾಳಿಯಾಗಿದೆ ಎಂದು ವಾಗ್ದಾಳಿ ನಡೆಸಿದರು.
ಮಗು ಭಾಗ್ಯ ಒಂದು ಬಿಟ್ಟರೆ ಉಳಿದಂತೆ ಎಲ್ಲ ಭಾಗ್ಯಗಳನ್ನು ನೀಡಿದ್ದಾರೆ ಎಂದು ಹಾಸ್ಯಾಸ್ಪದವಾಗಿ ಮಾತನಾಡಿದ ಅವರು, ಹಿಂದಿನ ಸರ್ಕಾರಗಳ ಯೋಜನೆಗಳಿಗೆ ಭಾಗ್ಯ ಸೇರಿಸಿ ತಮ್ಮ ಯೋಜನೆಗಳೆಂದು ಹೇಳುತ್ತಿದ್ದಾರೆ, ಹೊರತು ಈ ನಾಲ್ಕು ವರ್ಷದ ಆಡಳಿತದಲ್ಲಿ ರಾಜ್ಯಕ್ಕೆ ನೀಡಿದ ಸ್ವಂತ ಯೋಜನೆ ಯಾವುದೆಂದು ಜನತೆ ತಿಳಿಸಿ ಎಂದು ಸವಾಲೆಸೆದರು. ನವಕರ್ನಾಟಕ ಪ್ರಚಾರಕ್ಕಾಗಿ ಹಣವನ್ನು ಕೇವಲ ಜಾಹೀರಾತಿಗಾಗಿ ಬಳಕೆ ಆಗಿದ್ದು ರಾಜ್ಯ ಸರ್ಕಾರ ಜಾಹೀರಾತು ಸರ್ಕಾರವಾಗಿದೆ ಎಂದು ವ್ಯಂಗ್ಯವಾಡಿ, ಮುಖ್ಯಮಂತ್ರಿಗಳ ಕಚೇರಿಯಲ್ಲಿ 465 ಜನ ಅಧಿಕಾರಿಗಳು ಕಾರ್ಯನಿರ್ವಹಿಸುತ್ತಿದ್ದಾರೆ. ಒಬ್ಬ ಜವಾಬ್ದಾರಿಯುತ ಜನಪ್ರತಿನಿಧಿ ಅಥವಾ ಜನಸಾಮಾನ್ಯ ನಿಮ್ಮ ಕಚೇರಿಗೆ ಪತ್ರ ಬರೆದರೆ ಉತ್ತರ ಕೊಡುವುದಿಲ್ಲವೆಂದು ಆಡಳಿತ ಯಂತ್ರದ ಬೇಜವಾಬ್ದಾರಿಯನ್ನು ತೆಗಳಿದರು.
ನವಕರ್ನಾಟಕ ನಿರ್ಮಾಣ ಬರೀ ಪೇಪರ್ ನಲ್ಲಿ ಅಷ್ಟೇ ಎಂದು ವ್ಯಂಗ್ಯವಾಡಿದರು. ಮೈಸೂರಿಗೆ ನಿಮ್ಮ ಅನುದಾನವೇನು ಎಂದು ಪ್ರಶ್ನಿಸಿ, ಹೆಲಿಕಾಪ್ಟರ್ ನಲ್ಲಿ ಬರೋದು ಮರಿಗೌಡ, ಮರಿಸ್ವಾಮಿ ಜೊತೆ ಮಾತನಾಡುತ್ತಾರೆ ಅಷ್ಟೆ. ಮೈಸೂರಿಗೆ ಇದುವರೆಗೂ ಒಂದು ಎಕರೆ ಭೂಮಿ, ನೀರು ಕೊಟ್ಟಿಲ್ಲ.
ಶಾಸಕ ವೆಂಕಟೇಶ್ ಬಿಡಿಎ ಅಧ್ಯಕ್ಷರಾದ ಮೇಲೆ ನನ್ನ ಮೇಲಿನ ದ್ವೇಷದಿಂದ, ನನ್ನ ಅಳಿಯನನ್ನು ಬಿಡಿಎಯಿಂದ ವರ್ಗಾವಣೆ ಮಾಡಿ ದ್ವೇಷದ ರಾಜಕೀಯ ನಡೆಸಿದ್ದಾರೆ. ಇದು ಇನ್ನೆಷ್ಟು ದಿನ ಎಂದು ಕಾದು ನೋಡುವೆ ಎಂದು ಮಾರ್ಮಿಕವಾಗಿ ನುಡಿದರು. ಹಣ ನೀಡಿ ನಡೆಸುವ ಸಿ ಓಟರ್ ಸಮೀಕ್ಷೆಗಳಲ್ಲಿ ಮಾತ್ರ ಕಾಂಗ್ರೆಸ್ ಪರವಾಗಿದೆ. ಹಣಕ್ಕಾಗಿ ನಡೆಯುವ ಸಮೀಕ್ಷೆಯು ಸರ್ಕಾರದ ಪರವಾಗಿ ಹೊರತು ಚುನಾವಣೆಯಲ್ಲಿ ಜನರ ನಿರ್ಣಯ ಭಿನ್ನವಾಗಿದೆ. ನಾಳೆಯಿಂದ ಮೈಸೂರಿನಲ್ಲಿ ನಡೆಯುವ ನಿಮ್ಮ ಕರ್ನಾಟಕ ಪ್ರಚಾರ ಯಾತ್ರೆಯಲ್ಲಿ ರೋಷಾವೇಷದ ಭಾಷಣಕ್ಕೆ ಕಡಿವಾಣ ಹಾಕಿ ಸರ್ಕಾರದ ಸಾಧನೆ ಬಿಂಬಿಸಿ ಎಂದು ತಿಳಿಸಿದರು.
Oneindia ಬ್ರೇಕಿಂಗ್ ನ್ಯೂಸ್ . ಇಡೀ ದಿನ ತಾಜಾ ಸುದ್ದಿಗಳ ಪಡೆಯಿರ.subscribe to Kannada Oneindia.
ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!