ಚಿಕ್ಕದೇವಮ್ಮ ಅಮ್ಮನವರ ಪ್ರತಿಷ್ಠಾಪನೆ; ಮೂಲವಿಗ್ರಹಕ್ಕೆ ಧಕ್ಕೆ?

Posted By:
Subscribe to Oneindia Kannada

ಮೈಸೂರು, ಜುಲೈ 26 : ತಾಯಿ ಚಾಮುಂಡೇಶ್ವರಿಯ ಸಹೋದರಿ ಚಿಕ್ಕದೇವಮ್ಮನವರ ಪ್ರತಿಷ್ಠಾಪನೆಯ ಮೊದಲು, ಅಪಶಕುನದ ಮಾತುಗಳು ಕೇಳಿಬಂದಿದ್ದು, ಹೆಗ್ಗಡೆದೇವನ ಕೋಟೆಯ ಬೆಟ್ಟದ ಮೇಲೆ ದೇವಸ್ಥಾನದ ಗರ್ಭಗುಡಿಯ ಮೂಲ ವಿಗ್ರಹವನ್ನು ವಿರೂಪಗೊಳಿಸಲಾಗಿದೆ ಎಂದು ಆರೋಪಿಸಲಾಗಿದೆ.

ದೇವಸ್ಥಾನದ ಗರ್ಭಗುಡಿಯ ಮೂಲ ವಿಗ್ರಹವನ್ನು ವಿರೂಪಗೊಳಿಸಲಾಗಿದೆ ಎಂದು ಆರೋಪಿಸಿ ಮಾಜಿ ಶಾಸಕ ಚಿಕ್ಕಣ್ಣ ಜಿಲ್ಲಾಧಿಕಾರಿಗಳಿಗೆ ಮನವಿ ಪತ್ರ ನೀಡಿದ್ದಾರೆ. ಇದಕ್ಕೆ ಪ್ರತಿಯಾಗಿ ಜಿಲ್ಲಾಧಿಕಾರಿ ಶಿಖಾ ಅವರು ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕ್ರಮ ಜರುಗಿಸುವುದಾಗಿ ಆಶ್ವಾಸನೆ ನೀಡಿದ್ದಾರೆ.

Chikkadevamma goddess statue disfigured in HD Kote

ಚಿಕ್ಕದೇವಮ್ಮ ಅಮ್ಮನವರ ಪ್ರತಿಷ್ಠಾಪನಾ ಮಹೋತ್ಸವ ಹೆಗ್ಗಡೆ ದೇವನ ಕೋಟೆಯ ಚಿಕ್ಕದೇವಮ್ಮನ ಬೆಟ್ಟದಲ್ಲಿ ಆ. 5ರಿಂದ 7ರವರೆಗೆ ಮೂರು ದಿನಗಳ ಕಾಲ ನಡೆಯಲಿದೆ. ಕಾರ್ಯಕ್ರಮ ಸುಸೂತ್ರವಾಗಿ ನಡೆಯಲು ಸಮರ್ಪಕ ಕ್ರಮಗಳನ್ನು ಕೈಗೊಳ್ಳಲು ಮೈಸೂರಿನ ಜಿಲ್ಲಾಧಿಕಾರಿ ಸಿ.ಶಿಖಾ ಅವರು ಅಧಿಕಾರಿಗಳಿಗೆ ಸೂಚಿಸಿದ್ದಾರೆ.

ಮೂಲ ವಿಗ್ರಹವನ್ನು ವಿರೂಪಗೊಳಿಸಿದ್ದರಿಂದ ಮೊದಲು ತಹಸೀಲ್ದಾರ್ ಎಂ.ನಂಜುಂಡಯ್ಯನವರನ್ನು ಅಮಾನತುಪಡಿಸಬೇಕು, ವಿಗ್ರಹವನ್ನು ವಿರೂಪಗೊಳಿಸಿದವರನ್ನು ಪತ್ತೆಹಚ್ಚಿ ಕಾನೂನು ಕ್ರಮ ಜರುಗಿಸಬೇಕೆಂದು ಮನವಿಯಲ್ಲಿ ಅವರು ಒತ್ತಾಯಿಸಿದ್ದಾರೆ. ಹಿಂದೂ ಧಾರ್ಮಿಕ ವಿಧಿ ವಿಧಾನಗಳನ್ನು ಗಾಳಿಗೆ ತೂರಿ ಮೂಲ ವಿಗ್ರಹವನ್ನು ತೆಗೆಯಲಾಗಿದೆ ಎಂದು ಅವರು ಆರೋಪಿಸಿದ್ದಾರೆ.

Chikkadevamma goddess statue disfigured in HD Kote

ಪ್ರತಿಷ್ಠಾಪನಾ ದಿನಾಂಕದೊಳಗೆ ಸೂಕ್ತ ಕ್ರಮ ಕೈಗೊಳ್ಳದಿದ್ದರೆ ಹೋರಾಟ ನಡೆಸುವ ಎಚ್ಚರಿಕೆ ನೀಡಿದ್ದಾರೆ. ಇದಕ್ಕೆ ಪ್ರತಿಕ್ರಿಯೆ ನೀಡಿದ ಜಿಲ್ಲಾಧಿಕಾರಿ ಶಿಖಾ ಅವರು ದೇವಸ್ಥಾನಕ್ಕೆ ಸಂಬಂಧಪಟ್ಟ ಮುಜರಾಯಿ ಇಲಾಖೆಯ ಅಧಿಕಾರಿಗಳ ತಂಡವನ್ನು ಕಳುಹಿಸಿ ಎಲ್ಲಿ ಲೋಪವಾಗಿದೆ ಮತ್ತು ಇದನ್ನು ಯಾರು ಮಾಡಿದ್ದಾರೆಂದು ತನಿಖೆಗೆ ಒಳಪಡಿಸಿ ಕ್ರಮ ಕೈಗೊಳ್ಳುವ ಭರವಸೆ ನೀಡಿದ್ದಾರೆ.

ಸುಳ್ಳು ಆರೋಪ : ಈ ಕುರಿತಂತೆ ಪ್ರತಿಕ್ರಿಯೆ ನೀಡಿರುವ ಹಾಲಿ ಶಾಸಕ ಚಿಕ್ಕಮಾದು ಅವರು, ಮಾಜಿ ಶಾಸಕ ಚಿಕ್ಕಣ್ಣನವರು ದೇವಸ್ಥಾನದ ಅಭಿವೃದ್ಧಿ ಕಾಮಗಾರಿಯನ್ನು ಸಹಿಸದೆ ಸುಳ್ಳು ಆರೋಪ ಮಾಡುತ್ತಿದ್ದಾರೆ. ಚಿಕ್ಕದೇವಮ್ಮನವರ ಮೂಲ ವಿಗ್ರಹಕ್ಕೆ ಯಾವುದೇ ಅಪಚಾರವಾಗಿಲ್ಲ ಮತ್ತು ಯಾವುದೇ ಹಾನಿಯೂ ಆಗಿಲ್ಲ, ವಿಘ್ನವೂ ಆಗಿಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ.

Chikkadevamma goddess statue disfigured in HD Kote

ಉತ್ಸವಕ್ಕಾಗಿ ಶಿಖಾ ಸಭೆ : ಎಚ್.ಡಿ.ಕೋಟೆಯ ಮಿನಿ ವಿಧಾನಸೌಧದ ಸಭಾಂಗಣದಲ್ಲಿ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಸೂಚನೆ ನೀಡಿದ ಅವರು ಸ್ವಚ್ಛತೆ, ಕುಡಿಯುವ ನೀರು ಮತ್ತು ಶೌಚಾಲಯಗಳಿಗೆ ಆದ್ಯತೆ ನೀಡಿ, ಬರುವ ಭಕ್ತರಿಗೆ ಯಾವುದೇ ರೀತಿಯ ತೊಂದರೆಯಾಗದಂತೆ ಗಮನಹರಿಸಲು ತಿಳಿಸಿದರು.

Chikkadevamma goddess statue disfigured in HD Kote

ಆಹ್ವಾನ ಪತ್ರಿಕೆ, ವೇದಿಕೆಯ ವ್ಯವಸ್ಥೆ, ಶಿಲಾನ್ಯಾಸ, ಕುಡಿಯುವ ನೀರಿನ ವ್ಯವಸ್ಥೆ, ಪೂಜೆ, ಪ್ರತಿಷ್ಠಾಪನೆ, ಹೋಮ, ದಾಸೋಹ, ಪ್ರಸಾದ ವ್ಯವಸ್ಥೆ, ತುರ್ತು ಆರೋಗ್ಯ ಘಟಕ, ಶುಚಿತ್ವ, ಶೌಚಾಲಯ, ವಾಹನ ನಿಲುಗಡೆ, ಶಿಷ್ಠಾಚಾರ, ಪೊಲೀಸ್ ಬಂದೂಬಸ್ತ್, ಪೂಜಾ ಸಾಮಗ್ರಿಗಳಿಗೆ ಅಂಗಡಿ ಮಳಿಗೆ ತೆರೆಯುವುದು ಸೇರಿದಂತೆ ವಿವಿಧ ವ್ಯವಸ್ಥೆಯ ಬಗ್ಗೆ ಸಭೆಯಲ್ಲಿ ಚರ್ಚೆ ನಡೆಸಿ ತೀರ್ಮಾನಕ್ಕೆ ಬರಲಾಯಿತು. ಅಂದು ದೇವಸ್ಥಾನದ ಬೆಟ್ಟದ ಮೇಲೆ ಖಾಸಗಿ ವಾಹನ ಸಂಚಾರಕ್ಕೆ ನಿರ್ಬಂಧ ಹೇರುವ ಬಗ್ಗೆಯೂ ತೀರ್ಮಾನಿಸಲಾಯಿತು.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Just before the installation of Chikkadevamma statue in Heggadedevana Kote in Mysuru district an allegation of disfiguring the goddess statue has surfaced. DC of Mysuru Shikha has assured of taking action against the culprits. The installation function will be held from August 5 to 7.
Please Wait while comments are loading...