ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

83ನೇ ಸಾಹಿತ್ಯ ಸಮ್ಮೇಳನಾಧ್ಯಕ್ಷ ಚಂದ್ರಶೇಖರ ಪಾಟೀಲರ ವ್ಯಕ್ತಿಚಿತ್ರ

By ಚೇತನ್ ಒ. ಆರ್.
|
Google Oneindia Kannada News

ಇದೇ ವರ್ಷ ನವೆಂಬರ್ 24ರಿಂದ ಮೂರು ದಿನಗಳ ಕಾಲ ಮೈಸೂರಿನಲ್ಲಿ ನಡೆಯಲಿರುವ 83ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿ ಹಿರಿಯ ಸಾಹಿತಿ ಚಂದ್ರಶೇಖರ ಪಾಟೀಲರು ಆಯ್ಕೆಯಾಗಿದ್ದಾರೆ. ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಮನು ಬಳಿಗಾರ್ ಇಂದು ಚಂಪಾ ಅವರ ಹೆಸರನ್ನು ಅಧಿಕೃತವಾಗಿ ಘೋಷಿಸಿದ್ದಾರೆ.

ಅಧ್ಯಾಪಕರಾಗಿ ವೃತ್ತಿಜೀವನ ಆರಂಭಿಸಿದ್ದ ಚಂಪಾ, ಆನಂತರ ಸಾಹಿತಿಯಾಗಿ, ಪತ್ರಕರ್ತರಾಗಿ ನಾಡಿನಾದ್ಯಂತ ಹೆಸರು ಮಾಡಿದರು. ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ಇಂಗ್ಲಿಷ್‌ ಉಪನ್ಯಾಸಕರಾಗಿ ಬೋಧಕ ವೃತ್ತಿ ಆರಂಭಿಸಿ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸುತ್ತಲೇ ತಮ್ಮ ಕಾವ್ಯ ಹಾಗೂ ನಾಟಕಗಳ ಮೂಲಕ ಪ್ರಸಿದ್ಧರಾಗುತ್ತಾ ಬಂದರು. ವಿದ್ಯಾರ್ಥಿಯಾಗಿದ್ದಾಗಲೇ ಅವರಿಗೆ ಕಾವ್ಯದ ಬಗ್ಗೆ ಅತೀವ ಆಸಕ್ತಿ ಮೂಡಿತ್ತು.

83ನೇ ಕನ್ನಡ ಸಾಹಿತ್ಯ ಸಮ್ಮೇಳನಾಧ್ಯಕ್ಷರಾಗಿ ಚಂಪಾ ಆಯ್ಕೆ 83ನೇ ಕನ್ನಡ ಸಾಹಿತ್ಯ ಸಮ್ಮೇಳನಾಧ್ಯಕ್ಷರಾಗಿ ಚಂಪಾ ಆಯ್ಕೆ

ವೈಯಕ್ತಿಕ ಜೀವನ: ಹಾವೇರಿ ಜಿಲ್ಲೆಯ ಸವಣೂರು ತಾಲ್ಲೂಕಿನ ಹತ್ತೀಮತ್ತೂರಿನಲ್ಲಿ 1929 ಜೂನ್ 18 ರಂದು ಜನಿಸಿದ ಚಂದ್ರಶೇಖರ ಪಾಟೀಲರ ತಂದೆ ಬಸವರಾಜ ಹಿರೇಗೌಡರು, ತಾಯಿ ಮುರಿಗೆವ್ವ. ಪಾಟೀಲರ ಪ್ರಾರಂಭಿಕ ಶಿಕ್ಷಣ ಹಾವೇರಿಯಲ್ಲಿ ಮತ್ತು ಪ್ರೌಢಶಿಕ್ಷಣ ಧಾರವಾಡದಲ್ಲಿ ನೆರವೇರಿತು. ಜ್ಞಾನಪೀಠ ಪ್ರಶಸ್ತಿ ವಿಜೇತರಾದ ವಿ.ಕೃ. ಗೋಕಾಕ ಪ್ರಭಾವ ಚಂಪಾ ಅವರ ಮೇಲೆ ಗಾಢವಾಗಿತ್ತು. ಕಾವ್ಯದಲ್ಲಿ ಬೆಳೆದ ಆಸಕ್ತಿಯಿಂದ, ಹಲವಾರು ಮಂದಿ ಉದಯೋನ್ಮುಖರು ಸೇರಿ 'ಕಮಲ ಮಂಡ' ಎಂಬ ಸಂಸ್ಥೆಯನ್ನು ಹುಟ್ಟುಹಾಕಿದರು.

Chandrashekhar Patil will be president of 83rd Kannada Sahitya Sammelana in Mysuru

ಸಾಹಿತಿ ಕ್ಷೇತ್ರದ ಸೇವೆ: ಕಾವ್ಯಕೃಷಿಯಲ್ಲೇ ತೊಡಗಿಸಿಕೊಂಡಿದ್ದ ಚಂಪಾರವರು ಹಲವಾರು ಸಮಸ್ಯೆಗಳ ಮಿಡಿತಕ್ಕೆ ಒಳಗಾಗಿ ಕಾವ್ಯ ಮಾಧ್ಯಮದಿಂದ ನಾಟಕಮಾಧ್ಯಮವನ್ನೂ ಆಯ್ದುಕೊಂಡು ಹಲವಾರು ನಾಟಕಗಳನ್ನೂ ರಚಿಸಿದ್ದು ಅವುಗಳಲ್ಲಿ ಕೊಡೆಗಳು, ಅಪ್ಪ, ಕುಂಟ ಕುಂಟ ಕುರುವತ್ತಿ, ಗುರ್ತಿನವರು, ಟಿಂಗರ ಬುಡ್ಡಣ್ಣ, ಕತ್ತಲರಾತ್ರಿ, ಗೋಕರ್ಣದ ಗೌಡಸಾನಿ, ಜಗದಂಬೆಯ ಬೀದಿನಾಟಕ, ಬುರಡಿ ಬಾಬನ ವಸ್ತ್ರಾಪಹರಣ ಪವಾಡ, ನಳ ಕವಿಯ ಮಸ್ತಕಾಭಿಷೇಕ, ವಂದಿಮಾಗಧ ಮುಂತಾದವುಗಳು ಪ್ರಖ್ಯಾತವಾಗಿವೆ.

ಪತ್ರಿಕ್ಯೋದಮದಲ್ಲಿ ಸೇವೆ: ಪೂರ್ಣರೂಪದ ಸಾಹಿತ್ಯ ಪತ್ರಿಕೆಯೊಂದರ ಅವಶ್ಯಕತೆಯನ್ನು ಮನಗಂಡ ಚಂದ್ರಶೇಖರ ಪಾಟೀಲರು ಸಮಾನಮನಸ್ಕರೊಡನೆ ಸಮಾಲೋಚಿಸಿ ಗಿರಡ್ಡಿ ಗೋವಿಂದರಾಜ, ಸಿದ್ಧಲಿಂಗ ಪಟ್ಟಣಶೆಟ್ಟಿ, ಇವರುಗಳೊಡನೆ ಸೇರಿ ೧೯೬೪ರಲ್ಲಿ ಪ್ರಾರಂಭಿಸಿದ ಪತ್ರಿಕೆ 'ಸಂಕ್ರಮಣ'. ಈ ಪತ್ರಿಕೆಯು ನವ್ಯದ ಉಚ್ಛ್ರಾಯ ಸ್ಥಿತಿಯಲ್ಲಿ ಪ್ರಾರಂಭವಾಗಿದ್ದು ಎಪ್ಪತ್ತರ ದಶಕದ ನಂತರ ದಲಿತ, ಬಂಡಾಯ ಸಾಹಿತ್ಯ ಚಳವಳಿ ಮುಂತಾದವುಗಳನ್ನು ಒಳಗೊಂಡು ಹಲವಾರು ಯುವ ಬರಹಗಾರರಿಗೆ ವೇದಿಕೆಯನ್ನು ಕಲ್ಪಿಸಿದ ಪತ್ರಿಕೆಯಾಗಿ ಐದು ದಶಕಗಳಿಗೂ ಹೆಚ್ಚು ಕಾಲದಿಂದ ಪ್ರಕಟವಾಗುತ್ತಿದೆ.

ಹೋರಾಟಗಾರರಾಗಿ ಚಂಪಾ: ರಾಜ್ಯ ಬಂಡಾಯ ಸಾಹಿತ್ಯ ಸಂಘಟನೆಯ ಸಂಚಾಲಕರಾಗಿ, ಅಖಿಲ ಕರ್ನಾಟಕ ಕೇಂದ್ರ ಕನ್ನಡ ಕ್ರಿಯಾಸಮಿತಿಯ ಪ್ರಧಾನ ಕಾರ್ಯದರ್ಶಿಯಾಗಿ, ಧಾರವಾಡ ನಾಟಕ ಕೂಟದ ಕಾರ್ಯದರ್ಶಿಯಾಗಿ, ಮ್ಯಾಳ ನಾಟಕ ಸಂಘದ ಕಾರ್ಯಾಧ್ಯಕ್ಷರಾಗಿ, ಕರ್ನಾಟಕ ವಿಶ್ವವಿದ್ಯಾಲಯದ ವಿಶ್ವಚೇತನ ಸಾಂಸ್ಕೃತಿಕ ವೇದಿಕೆಯ ನಿಯೋಜಕರಾಗಿ-ಹೀಗೆ ಹಲವು ಹತ್ತು ಸಂಘಟನೆಗಳಲ್ಲೂ, ಗೋಕಾಕ ಚಳವಳಿ ಮುಂತಾದ ಅನೇಕ ಜನಪರ ಚಳವಳಿಗಳಲ್ಲೂ ತಮನ್ನು ತೊಡಗಿಸಿಕೊಂಡವರು. ತುರ್ತು ಪರಿಸ್ಥಿತಿಯ ಸಂದರ್ಭದಲ್ಲಿ ದಿನ 25 ದಿನ ಜೈಲುವಾಸವನ್ನನುಭವಿಸಿದರು.

ಸಾಮಾಜಿಕ ಸೇವೆ-ಜವಾಬ್ದಾರಿಗಳು: ಕನ್ನಡಕ್ಕಾಗಿ ದುಡಿಯುತ್ತಿದ್ದ ಚಂದ್ರಶೇಖರ ಪಾಟೀಲರನ್ನು ಕರ್ನಾಟಕ ಸರ್ಕಾರವು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾಗಿ ನೇಮಿಸಿತು. 1996ರಿಂದ 99ರ ಅವಧಿಗೆ ಈ ಜವಾಬ್ಧಾರಿಯನ್ನು ನಿರ್ವಹಿಸುವುದರ ಜೊತೆಗೆ 2004-08 ಅವಧಿಗೆ ಕನ್ನಡ ಸಾಹಿತ್ಯ ಪರಿಷತ್ತಿನ ಚುನಾಯಿತ ಅಧ್ಯಕ್ಷರಾಗಿಯೂ ಕಾರ್ಯನಿರ್ವಹಿಸಿದರು.

ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷರಾಗಿ: ಅವರು ಪರಿಷತ್ತಿನ ಅಧ್ಯಕ್ಷರಾಗಿದ್ದಾಗ ಪರಿಷತ್ತನ್ನು ಪ್ರಬಲ ಹೋರಾಟದ ವೇದಿಕೆಯನ್ನಾಗಿ ರೂಪಿಸಿದ್ದು, ಪುಸ್ತಕ ಮಾರಾಟದ ಮೂಲಕ ಸಣ್ಣ ಪ್ರಮಾಣದ ಪ್ರಕಾಶಕರನ್ನು ಉತ್ತೇಜಿಸಲು 'ಪುಸ್ತಕ ಸಂತೆ'ಯನ್ನು ಪ್ರತಿ ಶನಿವಾರ ಸಂಜೆ ಏರ್ಪಡಿಸಿದ್ದರ ಜೊತೆಗೆ ಆಯೋಜಿಸಿದ ಸಾಂಸ್ಕೃತಿಕ ಕಾರ್ಯಕ್ರಮಗಳು, ಶಿಕ್ಷಣ ಸಮಸ್ಯೆಯನ್ನು ಪರಿಹರಿಸಲು ಉನ್ನತ ಮಟ್ಟದ ಸಮಾಲೋಚನ ಸಭೆಯನ್ನು ಏರ್ಪಡಿಸಿದ್ದರು. ಗಡಿನಾಡ ಕನ್ನಡಿಗರ ಸಮಸ್ಯೆಗಳ ಪರಿಹಾರಕ್ಕಾಗಿ ಅಧ್ಯಕ್ಷರ ಪುಸ್ತಕ ನಿಧಿಯನ್ನು ಪ್ರಾರಂಭಿಸಿದ್ದರು. ಕನ್ನಡ ಭಾಷೆಗೂ ಶಾಸ್ತ್ರೀಯ ಸ್ಥಾನಮಾನ ದೊರೆಯುವಂತಾಗಲು ಹೋರಾಟ ನಡೆಸಿದ್ದು, ಪರಿಷತ್ತಿಗೆ ತನ್ನದೇ ಆದ ವೆಬ್‌ಸೈಟ್‌, ಅಂತರ್ಜಾಲ ಸೌಲಭ್ಯಗಳು, ಗಣಕ ಸಮ್ಮೇಳನದ ಆಯೋಜನೆ ಮುಂತಾದ ಹಲವಾರು ಕಾರ್ಯಕ್ರಮಗಳನ್ನು ಆಯೋಜಿಸಿದರು.

ಪ್ರಶಸ್ತಿ-ಗೌರವಗಳು: ಚಂಪಾ ಅವರಿಗೆ ಸಂದಿರುವ ಪ್ರಮುಖ ಪ್ರಶಸ್ತಿ, ಗೌರವಗಳು ಇಂತಿವೆ. ರಾಜ್ಯ ಸಾಹಿತ್ಯ ಅಕಾಡೆಮಿ ಬಹುಮಾನ (1960, 74, 76), ರಾಜ್ಯ ಸಾಹಿತ್ಯ ಅಕಾಡೆಮಿ ಗೌರವ ಪ್ರಶಸ್ತಿ, ದಿನಕರ ದೇಸಾಯಿ ಪ್ರತಿಷ್ಠಾನ ಪ್ರಶಸ್ತಿ, ಕರ್ನಾಟಕ ನಾಟಕ ಅಕಾಡೆಮಿ ಪ್ರಶಸ್ತಿ, ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ, ಕೆ.ವಿ. ಶಂಕರಗೌಡ ರಂಗಭೂಮಿ ಪ್ರಶಸ್ತಿ, ಸಂದೇಶ್‌ ಮಾಧ್ಯಮ ಪ್ರಶಸ್ತಿ, ಕರುನಾಡ ಭೂಷಣ ಪ್ರಶಸ್ತಿ, ಆಳ್ವಾಸ್ ನುಡಿಸಿರಿ ಪ್ರಶಸ್ತಿ ಮತ್ತು ಪಂಪ ಪ್ರಶಸ್ತಿ ಮುಂತಾದವುಗಳು ಪ್ರಮುಖವಾಗಿವೆ.

English summary
Chandrashekhar patil, popularley known as Champa will be declared as president of 83rd Akhila Bharatiya Kannada Sahitya Sammelana which will be taking place in Mysuru on November 26 to 27th of this year(2017).
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X