ರಣಬಿಸಿಲಿಗೆ ನೆಲಕಚ್ಚಿದ ಹೂಕೋಸು, ರೈತರಿಗೆ ಸಂಕಷ್ಟ

By: ಮೈಸೂರು ಪ್ರತಿನಿಧಿ
Subscribe to Oneindia Kannada

ಮೈಸೂರು, ಏಪ್ರಿಲ್ 27 : ಇಷ್ಟರಲ್ಲೇ ಸುರಿಯಬೇಕಾಗಿದ್ದ ಮಳೆ ಸುರಿದಿಲ್ಲ. ಎಲ್ಲೋ ಒಂದೆರಡು ಕಡೆ ಒಂದಷ್ಟು ಮಳೆ ಸುರಿದಿದ್ದರೆ ಉಳಿದಂತೆ ಮಳೆ ಬರುವ ಲಕ್ಷಣವೇ ಕಂಡು ಬರುತ್ತಿಲ್ಲ. ಇದರಿಂದಾಗಿ ಹೂಕೋಸು, ಮೆಣಸಿನಕಾಯಿ ಸೇರಿದಂತೆ ವಿವಿಧ ಬೆಳೆಗಳನ್ನು ಬೆಳೆಯುತ್ತಿದ್ದ ರೈತರು ಕಂಗಾಲಾಗಿದ್ದಾರೆ.

ಸಾಮಾನ್ಯವಾಗಿ ಬೇಸಿಗೆಯಲ್ಲೂ ಉತ್ತಮ ಮಳೆಯಾಗುತ್ತಿತ್ತು. ಈ ಮಳೆಯನ್ನು ನಂಬಿ ರೈತರು ಬೆಳೆ ಬೆಳೆಯುತ್ತಿದ್ದರು. ಆದರೆ, ಈ ಬಾರಿ ಮಳೆ ಬರಲಿಲ್ಲ. ಅಷ್ಟೇ ಅಲ್ಲ ಅಂತರ್ಜಲವೂ ನೆಲಕಚ್ಚಿದೆ. ಇರುವ ಕೊಳವೆ ಬಾವಿಗಳಲ್ಲೂ ನೀರಿಲ್ಲ. ಆದ್ದರಿಂದ ಕೃಷಿಯನ್ನೇ ನಂಬಿ ಬದುಕುತ್ತಿದ್ದ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ. [ಬತ್ತಿದ ನೇತ್ರಾವತಿ, ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನೀರಿನ ಕೊರತೆ]

crop

ಬೆಳೆ ಬೆಳೆಯುವುದಿರಲಿ ಮೂರು ಹೊತ್ತು ತುತ್ತು ಅನ್ನ ತಿನ್ನುವುದಕ್ಕೆ ಸಾಲ ಮಾಡಬೇಕಾದ ಅನಿವಾರ್ಯತೆ ಬಂದೊದಗಿದೆ. ಇಷ್ಟು ವರ್ಷ ಬೇಸಿಗೆಯಲ್ಲಿ ಮಳೆ ಸಕಾಲದಲ್ಲಿ ಬರುತ್ತಿತ್ತು. ಜತೆಗೆ ರಣಬಿಸಿಲು ಇರಲಿಲ್ಲ. ಅಂತರ್ಜಲ ಮಟ್ಟವೂ ಕುಸಿದಿರಲಿಲ್ಲ. ಇದರಿಂದ ರೈತರು ಬೇಸಿಗೆಯಲ್ಲಿ ಅಲ್ಪಾವಧಿಯ ಬೆಳೆಬೆಳೆದು ಅದಕ್ಕೆ ಕೊಳವೆ ಬಾವಿ ಮೂಲಕ ನೀರು ಹಾಯಿಸಿ ಫಸಲು ಪಡೆಯುತ್ತಿದ್ದರು. ['ಬರ'ಗೆಟ್ಟ ರಾಯಚೂರು ಜನತೆಗೆ ನೀರು ಮಾಫಿಯಾ ಬರೆ]

ಬೇಸಿಗೆಯಲ್ಲಿ ಹೂಕೋಸು, ಮೆಣಸಿನಕಾಯಿ ಮೊದಲಾದ ಬೆಳೆಗಳನ್ನು ಬೆಳೆದು ಒಂದಷ್ಟು ಆದಾಯವನ್ನು ಪಡೆಯವ ಸಲುವಾಗಿ ಈ ಬಾರಿ ಹುಣಸೂರಿನ ರಾಮೇನಹಳ್ಳಿ ಗ್ರಾಮದ ರೈತ ವೆಂಕಟರಮಣ ಒಂದು ಎಕರೆ ಪ್ರದೇಶದಲ್ಲಿ ಹೂವುಕೋಸು ಬೆಳೆದಿದ್ದರು. ಆದರೆ, ನೀರಿಲ್ಲದ ಪರಿಣಾಮ ಬೆಳೆ ನೆಲಕಚ್ಚಿದೆ. [ಮಳೆಯಿಲ್ಲ, ಬೆಳೆಯಿಲ್ಲ, ಉತ್ತರದ ಮಂದಿ ಹೊಂಟರು ಗುಳೆ]

ಪ್ರತಿರ್ಷದಂತೆ ಈ ಬಾರಿಯೂ ಮಳೆ ಬರಬಹುದು ಜತೆಗೆ ಕೊಳವೆಬಾಯಿಯಲ್ಲಿ ನೀರು ಸಿಗಬಹುದೆಂಬ ನಿರೀಕ್ಷೆಯಲ್ಲಿ ಬೆಳೆ ಬೆಳೆದಿದ್ದರೂ ಇದೀಗ ಬೆಳವಣಿಗೆಯ ಹಂತದಲ್ಲಿರುವಾಗಲೇ ಹೂಕೋಸು ಬೆಳೆ ನೀರಿಲ್ಲದೆ ಒಣಗುತ್ತಿರುವುದು ರೈತನನ್ನು ಸಂಕಷ್ಟಕ್ಕೆ ಸಿಲುಕುವಂತೆ ಮಾಡಿದೆ. [ಸುಡುತ್ತಿದೆ ಕರ್ನಾಟಕ, ಬಾ ಮಳೆಯೇ ಬೇಗ ಬಾ..]

ಇದೀಗ ಮಳೆ ಬಾರದೆ ಹೋದರೆ ಹಾಕಿದ ಬಂಡವಾಳ ಸೇರಿದಂತೆ ಶ್ರಮವೂ ವ್ಯರ್ಥವಾಗಲಿದೆ. ಕಷ್ಟಪಟ್ಟರೂ ಬೆಳೆ ಕೈಗೆ ಬಾರದಿರುವುದರಿಂದ ರೈತರು ಚಿಂತಾಕ್ರಾಂತರಾಗಿದ್ದಾರೆ. ಯಾವಾಗ ಮಳೆ ಬರುತ್ತದೆಯೋ? ಎಂದು ಮುಗಿಲನ್ನು ದಿಟ್ಟಿಸುತ್ತಿದ್ದಾರೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
‍Cauliflower crops hit by drought Hunsur, Mysuru district. Farmed cauliflower plants look half dead by the water scarcity.
Please Wait while comments are loading...