ಆಶ್ಚರ್ಯ! ಮೈಸೂರಿನಲ್ಲಿ ಕುದಿಯುತ್ತಿರುವ ಭೂಮಿಗೆ ಬಿದ್ದು ಬಾಲಕ ಸಾವು

By: ಮೈಸೂರು ಪ್ರತಿನಿಧಿ
Subscribe to Oneindia Kannada

ಮೈಸೂರು, ಏಪ್ರಿಲ್ 17: ವಿಚಿತ್ರ ಘಟನೆಯೊಂದರಲ್ಲಿ ಕುದಿಯುತ್ತಿರುವ ಭೂಮಿಗೆ ಬಾಲಕ ಬಿದ್ದು ಸಾವನ್ನಪ್ಪಿರುವ ಘಟನೆ ಮೈಸೂರು ಹೊರವಲಯದ ಬೆಲವೆತ್ತಲ ಗ್ರಾಮದಲ್ಲಿ ನಡೆದಿದೆ.

ಶನಿವಾರ ಈ ಘಟನೆ ನಡೆದಿದ್ದು ಸುಟ್ಟು ಗಾಯಗಳಿಂದ 14 ವರ್ಷದ ಹರ್ಷಿಲ್ ಭಾನುವಾರ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾನೆ. ಕೇಳಲು ಈ ಘಟನೆ ವಿಚಿತ್ರವಾಗಿದ್ದು ಮೂಲಗಳ ಪ್ರಕಾರ ಬೆಲೆವೆತ್ತಲ ಗ್ರಾಮದಲ್ಲಿ ಭೂಮಿ ಕುದಿಯುತ್ತಿದ್ದು ಇಲ್ಲಿಗೆ ಶನಿವಾರ ತನ್ನ ಸ್ನೇಹಿತ ಮಂಜುನಾಥ್ ನೊಂದಿಗೆ ಹರ್ಷಿಲ್ ಬಹಿರ್ದೆಸೆಗೆ ತೆರಳಿದ್ದ. ಈ ವೇಳೆ ನೆಲಕ್ಕೆ ಕಾಲಿಡುತ್ತಿದ್ದಂತೆ ಬಾಲಕರ ಕಾಲು ಸುಟ್ಟು ಹೋಗಿದೆ. ಇದನ್ನು ಕಂಡ ಸ್ಥಳೀಯರು ಬಾಲಕರನ್ನು ಆಸ್ಪತ್ರೆಗೆ ಸೇರಿಸಿದ್ದಾರೆ.[ಬಲಮುರಿಯಲ್ಲೂ ಸೊರಗಿದ್ದಾಳೆ ಕಾವೇರಿ!]

Boy dies after fell into burning land in outskirts of Mysuru

ಮೈಸೂರು ನಗರದ ಕೆಆರ್ ಆಸ್ಪತ್ರೆಯಲ್ಲಿ ಹರ್ಷಿಲ್ ಚಿಕಿತ್ಸೆ ಫಲಕಾರಿಯಾಗದೇ ಭಾನುವಾರ ಸಾವನ್ನಪ್ಪಿದರೆ, ಮಂಜುನಾಥ್ ಸಾವು ಬದುಕಿನ ನಡುವೆ ಹೋರಾಡುತ್ತಿದ್ದಾನೆ ಎಂದು ತಿಳಿದು ಬಂದಿದೆ. ಆತನಿಗೆ ಶೇಕಡಾ 75 ರಷ್ಟು ಸುಟ್ಟ ಗಾಯಗಳಾಗಿವೆ ಎಂದು ಮೂಲಗಳು ಹೇಳಿವೆ.

ಇನ್ನು ಮೃತ ಹರ್ಷಿಲ್ ಸದ್ಯ 9ನೇ ತರಗತಿ ಪಾಸ್ ಆಗಿ ಹತ್ತನೇ ತರಗತಿಗೆ ಮುಂದಿನ ವರ್ಷದಿಂದ ತೆರಳಬೇಕಾಗಿತ್ತು ಎಂದು ತಿಳಿದು ಬಂದಿದೆ. ಈತ ಕ್ಯಾದನಹಳ್ಳಿಯ ಮೂರ್ತಿ ಮತ್ತು ಜಾನಕಿ ಎಂಬವವರ ಮಗನಾಗಿದ್ದ.

ಕುದಿಯುತ್ತಿರುವ ಭೂಮಿ

ನಗರದ ಆರ್.ಬಿ.ಐ ಹಿಂಭಾಗದದಲ್ಲಿರುವ ಸೋಮಣ್ಣ ಎಂಬುವವರಿಗೆ ಸೇರಿದ ನಾಲ್ಕು ಎಕರೆ ಭೂಮಿಯಲ್ಲಿ ಈ ಕೌತುಕ ಸೃಷ್ಟಿಯಾಗಿದೆ. ಹರ್ಷಿಲ್ ಸಾವನ್ನಪ್ಪಿರುವ ಭೂಮಿ ಕುದಿಯಲು ರಾಸಾಯನಿಕ ಪ್ರಕ್ರಿಯೆ ಕಾರಣ ಎಂದು ಇಲ್ಲಿನ ಸ್ಥಳೀಯರು ದೂರುತ್ತಾರೆ. ಈ ಜಮೀನಿನ ಸುತ್ತ ಮುತ್ತ ಹಲವು ಕೈಗಾರಿಕೆಗಳಿವೆ. ಈ ಕೈಗಾರಿಕೆಗಳು ತಮ್ಮ ತಾಜ್ಯವನ್ನು ತಂದು ಈ ಭೂಮಿಯಲ್ಲಿ ಸುರಿಯುತ್ತಾರೆ ಎನ್ನಲಾಗಿದೆ. ಈ ತ್ಯಾಜ್ಯಗಳಲ್ಲಿನ ರಾಸಾಯನಿಕಗಳಿಂದ ರಾಸಾಯನಿಕ ಪ್ರಕ್ರಿಯೆ ನಡೆದು ಈ ಭೂಮಿ ಕುದಿಯುತ್ತಿದೆ ಎಂದು ಸ್ಥಳೀಯರು ಅಭಿಪ್ರಾಯಪಟ್ಟಿದ್ದಾರೆ. [ಲೆಕ್ಕಕ್ಕೇ ಸಿಗದ ರೈತರ ಆತ್ಮಹತ್ಯೆ ಸರಣಿಗೆ ಮೈಸೂರಿನ ಮೂವರು ಸೇರ್ಪಡೆ]

ಸದ್ಯ ಘಟನಾ ಸ್ಥಳಕ್ಕೆ ಮೇಟಿಗಹಳ್ಳಿ ಪೊಲೀಸರು ಭೇಟಿ ನೀಡಿ ಪರಿಶೀಲಿಸಿದ್ದಾರೆ. ಈ ಪ್ರದೇಶವನ್ನು ಸಾರ್ವಜನಿಕ ವೀಕ್ಷಣೆಗೆ ನಿರ್ಬಂಧಿಸಲಾಗಿದೆ. ಈ ಭೂಮಿ ಮೇಲೆ ನೀರು ಸುರಿದರೆ ಬೆಂಕಿ ಹತ್ತಿಕೊಳ್ಳುತ್ತದೆ ಎಂದು ಸ್ಥಳೀಯರು ಹೇಳಿದ್ದಾರೆ. ಈ ಭೂಮಿಗೆ ಓರ್ವ ಬಾಲಕ ಸಾವಿಗೀಡಾಗಿದ್ದರಿಂದ ಅಕ್ಕಪಕ್ಕದ ಗ್ರಾಮಗಳ ಜನರು ಭಯಭೀತರಾಗಿದ್ದಾರೆ.

ಭೂ ವಿಜ್ಞಾನಿಗಳಿಗೂ ಸವಾಲು

ಕೇಳಲು ಈ ಎಲ್ಲಾ ಘಟನೆಗಳು ವಿಚಿತ್ರವಾಗಿವೆ. ಆದರೆ ಈ ಪ್ರದೇಶದಲ್ಲಿ ಈ ಹಿಂದೆಯೂ ಹಲವು ಪ್ರಾಣಿಗಳು ಬಿದ್ದು ಸಾವನ್ನಪ್ಪಿವೆ ಎಂದು ಸ್ಥಳೀಯರು ಹೇಳುತ್ತಿದ್ದಾರೆ. ಮಾತ್ರವಲ್ಲ ಈ ಬಗ್ಗೆ ಅಧಿಕಾರಿಗಳಿಗೆ ದೂರು ನೀಡಿದ್ದೇವೆ. ಆದರೆ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಹೇಳಿದ್ದಾರೆ.

ಸದ್ಯ ಈ ಎಲ್ಲಾ ಘಟನೆಗಳು ಭೂ ವಿಜ್ಞಾನಿಗಳಿಗೂ ಸವಾಲಾಗಿ ಪರಿಣಮಿಸಿದೆ. ಹಗಲಿನಲ್ಲಿ ದೂರದಿಂದ ನೋಡಿದರೆ ಏನೂ ಕಾಣಿಸದ ಈ ಜಾಗ ರಾತ್ರಿಯಾದಂತೆ ಕೆಂಡದಂತೆ ಕೆಂಪಗೆ ಗೋಚರಿಸುತ್ತದೆ ಎಂದು ತಿಳಿದು ಬಂದಿದೆ. ಇದೀಗ ಸ್ಥಳಕ್ಕೆ ಹಿರಿಯ ಭೂ ವಿಜ್ಞಾನಿಗಳು ಹಾಗೂ ಅಗ್ನಿಶಾಮಕ ಸಿಬ್ಬಂದಿ ದೌಡಾಯಿಸಿದ್ದಾರೆ.

ಒಟ್ಟಾರೆ ಪ್ರಕೃತಿಯ ಈ ಕೌತುಕ ಜನರಲ್ಲಿ ಆಶ್ಚರ್ಯ ಮೂಡಿಸಿದ್ದು ಸಂಶೋಧನೆಯ ಬಳಿಕವೇ ಸತ್ಯಾಂಶ ತಿಳಿದು ಬರಬೇಕಿದೆ ಅಷ್ಟೇ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
In a miracle incident teenage boy Harshil dies after fell into burning land in Belavettala village in outskirts of Mysuru.
Please Wait while comments are loading...