ಮೈಸೂರು : ಬಿಜೆಪಿ ಕಾರ್ಯಕರ್ತ ರಾಜು ಹತ್ಯೆ ರಹಸ್ಯ ಬಯಲು

Posted By:
Subscribe to Oneindia Kannada

ಮೈಸೂರು, ಆಗಸ್ಟ್ 10 : ಭಾರೀ ಚರ್ಚೆಗೆ ಕಾರಣವಾಗಿದ್ದ ಮೈಸೂರು ಬಿಜೆಪಿ ಕಾರ್ಯಕರ್ತ ರಾಜು ಹತ್ಯೆ ಪ್ರಕರಣದ ರಹಸ್ಯ ಬಯಲಾಗಿದೆ. ಕೊಲೆ ಪ್ರಕರಣದ ಪ್ರಮುಖ ಆರೋಪಿಯನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.

ನಗರ ಅಪರಾಧ ವಿಭಾಗ (ಸಿಸಿಬಿ) ಪೊಲೀಸರು ರಾಜ್ಯ ಹತ್ಯೆ ಪ್ರಕರಣದ ಪ್ರಮುಖ ಆರೋಪಿ ಹುಣಸೂರಿನ ಬಜಾರ್ ರಸ್ತೆ ನಿವಾಸಿ ಅಬೀದ್ ಪಾಷಾ (34)ನನ್ನು ಬಂಧಿಸಿದ್ದಾರೆ. ಆರೋಪಿಯನ್ನು ಕೋರ್ಟ್ ಆಗಸ್ಟ್ 12ರ ತನಕ ಪೊಲೀಸರ ವಶಕ್ಕೆ ಒಪ್ಪಿಸಿದೆ.[ಮೈಸೂರಲ್ಲಿ ರಾಜು ಹತ್ಯೆ : ಯಾರು, ಏನು ಹೇಳಿದರು?]

Raju murder

ಕೊಲೆ ರಹಸ್ಯ ಬಯಲು : ಹುಣಸೂರಿನ ಉದ್ಯಮಿ ಮೋಹನ್ ಕುಮಾರ್ ಅವರ ಪುತ್ರ ಸುಧೀಂದ್ರ ಹಾಗೂ ಆತನ ಸ್ನೇಹಿತ ವಿಘ್ನೇಶ್‌ನನ್ನು 2011ರ ಜೂನ್‌ನಲ್ಲಿ ಹಣಕ್ಕಾಗಿ ಅಪಹರಣ ಮಾಡಿ ಕೊಲೆ ಮಾಡಿದ ಆರೋಪ ಅಬೀದ್ ಪಾಷಾ ಮೇಲಿದೆ.[ರಾಜು ಕೊಲೆ ಪ್ರಕರಣದ ತನಿಖೆ ಸಿಸಿಬಿಗೆ]

ಈ ಪ್ರಕರಣದಲ್ಲಿ ಅಬೀದ್‌ನ ಸಹಚರರನ್ನು ಪೊಲೀಸರು ಬಂಧಿಸಿದ್ದರು ಮತ್ತು ನ್ಯಾಯಾಲಯಕ್ಕೆ ಅಬೀದ್ ನಾಪತ್ತೆಯಾಗಿದ್ದಾನೆ ಎಂದು ಚಾರ್ಜ್‌ಶೀಟ್ ಸಲ್ಲಿಸಿದ್ದರು. ಈ ಪ್ರಕರಣದಲ್ಲಿ ರಾಜು ಪ್ರಮುಖ ಸಾಕ್ಷಿಯಾಗಿದ್ದರು. ಹೈದರಾಬಾದ್‌ನಲ್ಲಿ ತಲೆಮರೆಸಿಕೊಂಡಿದ್ದ ಅಬೀದ್ ಕೆಲವು ದಿನಗಳ ಹಿಂದೆ ಮೈಸೂರಿನ ಉದಯಗಿರಿಗೆ ಬಂದು ನೆಲೆಸಿದ್ದ.[ಬಿಜೆಪಿ ಕಾರ್ಯಕರ್ತನ ಕೊಲೆ, ಕೋಮು ಗಲಭೆ ಎಚ್ಚರಿಕೆ]

ವೈಯಕ್ತಿಕ ದ್ವೇಷ : ಅಪಹರಣ, ಕೊಲೆ ಪ್ರಕರಣದಲ್ಲಿ ಸಾಕ್ಷಿಯಾದ ರಾಜು ವಿರುದ್ಧ ಅಬೀದ್‌ಗೆ ದ್ವೇಷವಿತ್ತು. ಉದಯಗಿರಿಯ ಮಸೀದಿಯಲ್ಲಿ ಹಂದಿ ಮಾಂಸ ಹಾಕಿದ ಘಟನೆಯಲ್ಲಿಯೂ ರಾಜು ಪಾತ್ರವಿದೆ ಎಂದು ಅಬೀದ್ ರಾಜು ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದ.

ದ್ವೇಷದ ಹಿನ್ನಲೆಯಲ್ಲಿ ಅಬೀದ್ ಸಹಚರರ ಜೊತೆ ಸೇರಿ ರಾಜು ಹತ್ಯೆ ಸಂಚು ರೂಪಿಸಿದ್ದರು. ಅದರಂತೆ 2016ರ ಮಾರ್ಚ್ 13ರಂದು ರಾಜು ಅವರನ್ನು ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಲಾಗಿತ್ತು. ಅಬೀದ್ ಮೇಲೆ 2 ಕೊಲೆ ಯತ್ನ, 2 ಕೊಲೆ, 1 ದೊಂಬಿ ಪ್ರಕರಣಗಳಿವೆ.

ಬಿಜೆಪಿ ಕಾರ್ಯಕರ್ತ ರಾಜು ಹತ್ಯೆ ಪ್ರಕರಣವನ್ನು ಭೇದಿಸುವಲ್ಲಿ ಯಶಸ್ವಿಯಾದ ಸಿಸಿಬಿ ಪೊಲೀಸರ ತನಿಖಾ ತಂಡಕ್ಕೆ ಡಿಜಿಪಿ ಓಂಪ್ರಕಾಶ್ ಅವರು 1 ಲಕ್ಷ ರೂ. ಬಹುಮಾನ ಘೋಷಣೆ ಮಾಡಿದ್ದಾರೆ.

ಹಿಂಸಾಚಾರ ನಡೆದಿತ್ತು : ರಾಜು ಹತ್ಯೆ ಖಂಡಿಸಿ ಕರೆ ನೀಡಿದ್ದ ಮೈಸೂರು ಬಂದ್ ವೇಳೆ ಹಿಂಸಾಚಾರ ನಡೆದಿತ್ತು. ರಾಜು ಅವರ ಅಂತ್ಯಕ್ರಿಯೆ ಮುಗಿಸಿ ಬರುತ್ತಿದ್ದ ನೂರಾರು ಜನರ ಮೇಲೆ ಕಲ್ಲು ತೂರಾಟ ನಡೆಸಲಾಗಿತ್ತು. ಹತ್ಯೆ ಪ್ರಕರಣದ ತನಿಖೆಯನ್ನು ಸಿಬಿಐಗೆ ವಹಿಸಲು ಪ್ರತಿಪಕ್ಷಗಳು ಒತ್ತಾಯಿಸಿದ್ದವು.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Mysuru BJP worker Raju murder mystery solved and Mysuru City Crime Branch(CCB) police arrested key accused of the murder case. Raju murdered in Mysuru Udaygiri police station limits on March 13th, 2016.
Please Wait while comments are loading...