ರಾಜು ಹತ್ಯೆ : ಮೈಸೂರಲ್ಲಿ ಬಿಜೆಪಿಯ ಬೃಹತ್ ಪ್ರತಿಭಟನೆ

Posted By:
Subscribe to Oneindia Kannada

ಮೈಸೂರು, ಮಾರ್ಚ್ 17 : 'ರಾಜ್ಯದಲ್ಲಿ ಹಿಂದೂಗಳಿಗೆ ರಕ್ಷಣೆ ಇಲ್ಲ. ಸರ್ಕಾರ ಹಿಂದೂ ವಿರೋಧಿ ಸಂಘಟನೆಗಳಿಗೆ ನೆರವು ನೀಡುತ್ತಿದೆ' ಎಂದು ಆರೋಪಿಸಿರುವ ಬಿ.ಎಸ್.ಯಡಿಯೂರಪ್ಪ ಅವರು, 'ರಾಜು ಹತ್ಯೆ ಪ್ರಕರಣದ ತನಿಖೆಯನ್ನು ಶೀಘ್ರವೇ ಪೂರ್ಣಗೊಳಿಸಬೇಕು' ಎಂದು ಒತ್ತಾಯಿಸಿದರು.

ವಿಶ್ವಹಿಂದೂ ಪರಿಷತ್ ಮುಖಂಡ ಮತ್ತು ಬಿಜೆಪಿ ಕಾರ್ಯಕರ್ತ ರಾಜು ಹತ್ಯೆ ಖಂಡಿಸಿ, ಮೈಸೂರಿನಲ್ಲಿ ಗುರುವಾರ ಪ್ರತಿಭಟನೆ ನಡೆಸಲು ಉದ್ದೇಶಿಸಲಾಗಿತ್ತು. ಆದರೆ, ಜಿಲ್ಲಾಧಿಕಾರಿ ಕಚೇರಿ ಮುಂದೆ ಪ್ರತಿಭಟನೆ ನಡೆಸಲು ತೆರಳುತ್ತಿದ್ದ ಬಿಜೆಪಿ ನಾಯಕರನ್ನು ಪೊಲೀಸರು ವಶಕ್ಕೆ ಪಡೆದು, ನಂತರ ಬಿಡುಗಡೆ ಮಾಡಿದರು.[ಮೈಸೂರು : ಬಿಜೆಪಿ ನಾಯಕರು ಪೊಲೀಸ್ ವಶಕ್ಕೆ]

ಕ್ಯಾತಮಾರನಹಳ್ಳಿಯಲ್ಲಿರುವ ರಾಜು ಅವರ ನಿವಾಸಕ್ಕೆ ಭೇಟಿ ನೀಡಿದ ಯಡಿಯೂರಪ್ಪ ಮುಂತಾದ ನಾಯಕರು, ಕುಟುಂಬಕ್ಕೆ ಸಾಂತ್ವನ ಹೇಳಿದರು. ಪಕ್ಷದ ವತಿಯಿಂದ 10 ಲಕ್ಷ ರೂ. ಪರಿಹಾರದ ಚೆಕ್ ಹಸ್ತಾಂತರಿಸಿದರು. ['ರಾಜು ಕೊಲೆ ಪ್ರಕರಣ, ನ್ಯಾಯಾಂಗ ತನಿಖೆ ಅಗತ್ಯವಿಲ್ಲ']

ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ, ಬಿಜೆಪಿ ರಾಜ್ಯಾಧ್ಯಕ್ಷ ಪ್ರಹ್ಲಾದ್ ಜೋಶಿ, ಸಂಸದ ಪ್ರತಾಪ್ ಸಿಂಹ, ಶೋಭಾ ಕರಂದ್ಲಾಜೆ, ಮಾಜಿ ಸಚಿವ ಎಸ್.ಎ.ರಾಮದಾಸ್ ಸೇರಿದಂತೆ ಹಲವು ನಾಯಕರು ಮೈಸೂರಿನಲ್ಲಿ ಪ್ರತಿಭಟನೆ ನಡೆಸಲು ಸಿದ್ಧತೆ ನಡೆಸಿದ್ದರು. ಬಿಜೆಪಿ ನಾಯಕರು ಹೇಳಿದ್ದೇನು? ಚಿತ್ರಗಳಲ್ಲಿ ನೋಡಿ...... [ಮೈಸೂರಲ್ಲಿ ರಾಜು ಹತ್ಯೆ : ಯಾರು, ಏನು ಹೇಳಿದರು?]

ವೋಟ್ ಬ್ಯಾಂಕ್ ರಾಜಕಾರಣ

ವೋಟ್ ಬ್ಯಾಂಕ್ ರಾಜಕಾರಣ

ಮೈಸೂರಿನಲ್ಲಿ ಪತ್ರಿಕಾಗೋಷ್ಠಿ ನಡೆಸಿದ ಯಡಿಯೂರಪ್ಪ ಅವರು, 'ರಾಜು ಹತ್ಯೆ ಪ್ರಕರಣದ ಆರೋಪಿಗಳನ್ನು ಬಂಧಿಸಲು ಪೊಲೀಸ್ ಇಲಾಖೆ ವಿಫಲವಾಗಿದೆ. ಸಿದ್ದರಾಮಯ್ಯ ಅವರು ವೋಟ್ ಬ್ಯಾಂಕ್ ರಾಜಕಾರಣ ಬಿಡಬೇಕು. ಈ ರಾಜಕಾರಣದಿಂದ ಪೊಲೀಸರು ಸ್ವತಂತ್ರವಾಗಿ ಕೆಲಸ ಮಾಡಲು ಸಾಧ್ಯವಾಗುತ್ತಿಲ್ಲ' ಎಂದು ದೂರಿದರು.

ಸ್ಥಳದ ವಿವಾದ ಬಗೆಹರಿಸಬೇಕು

ಸ್ಥಳದ ವಿವಾದ ಬಗೆಹರಿಸಬೇಕು

'ಇಂತಹ ಘಟನೆಗಳು ಮರುಕಳಿಸದಂತೆ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ ಯಡಿಯೂರಪ್ಪ ಅವರು, ವಿವಾದಿತ ಸ್ಥಳದ ಸಮಸ್ಯೆಯನ್ನು ಬಗೆಹರಿಸಬೇಕು. ವಿಧಾನಸಭೆಯಲ್ಲಿಯೂ ಈ ಬಗ್ಗೆ ಧ್ವನಿ ಎತ್ತುವ ಮೂಲಕ ಬಿಜೆಪಿ ಹೋರಾಟ ನಡೆಸಲಿದೆ' ಎಂದು ಯಡಿಯೂರಪ್ಪ ಒತ್ತಾಯಿಸಿದರು. [ಚಿತ್ರ : ಜಿಲ್ಲಾಧಿಕಾರಿಗಳನ್ನು ಭೇಟಿ ಮಾಡಿದ ಬಿಜೆಪಿ ನಾಯಕರು]

ಸಂಘಟನೆಗಳ ಮೇಲೆ ನಿಷೇಧ ಹೇರಿ

ಸಂಘಟನೆಗಳ ಮೇಲೆ ನಿಷೇಧ ಹೇರಿ

'ರಾಜು ಅವರ ಕೊಲೆಗೆ ಪಿಎಫ್‌ಐ ಸಂಘಟನೆ ನೇರವಾಗಿ ಕಾರಣವಾಗಿದೆ. ಈ ಹಿಂದೆ ಬಿಜೆಪಿ ಬೆಂಬಲಿತರನ್ನು ಹತ್ಯೆ ಮಾಡಿದ ಪ್ರಕರಣದಲ್ಲಿಯೂ ಪಿಎಫ್‌ಐ ಕೈವಾಡವಿದೆ. ಪಿಎಫ್‌ಐ, ಕೆಎಫ್‌ಡಿ ಸಂಘಟನೆಗಳ ಮೇಲೆ ರಾಜ್ಯ ಸರ್ಕಾರ ನಿಷೇಧ ಹೇರಬೇಕು. ಸರ್ಕಾರ ದ್ವಿಮುಖ ನೀತಿಯನ್ನು ಬಿಡಬೇಕು' ಎಂದು ಬಿಜೆಪಿ ರಾಜ್ಯಾಧ್ಯಕ್ಷ ಪ್ರಹ್ಲಾದ್ ಜೋಶಿ ಒತ್ತಾಯಿಸಿದರು.

ವಿಧಾನಸೌಧಕ್ಕೆ ಮುತ್ತಿಗೆ

ವಿಧಾನಸೌಧಕ್ಕೆ ಮುತ್ತಿಗೆ

'ರಾಜು ಹತ್ಯೆ ಪ್ರಕರಣದ ಆರೋಪಿಗಳನ್ನು ಶೀಘ್ರವಾಗಿ ಬಂಧಿಸಬೇಕು ಎಂದು ಒತ್ತಾಯಿಸಿ ಪಕ್ಷ ವಿಧಾನಸಭೆ ಕಲಾಪದಲ್ಲಿಯೂ ಹೋರಾಟ ಮಾಡಲಿದೆ. ಮಾ.22ರಂದು ವಿಧಾನಸೌಧಕ್ಕೆ ಮುತ್ತಿಗೆ ಹಾಕಲಾಗುತ್ತದೆ' ಎಂದು ಪ್ರಹ್ಲಾದ್ ಜೋಶಿ ಹೇಳಿದರು.

10 ಲಕ್ಷ ರೂ. ಪರಿಹಾರ ವಿತರಣೆ

10 ಲಕ್ಷ ರೂ. ಪರಿಹಾರ ವಿತರಣೆ

ಕ್ಯಾತಮಾರನಹಳ್ಳಿಯಲ್ಲಿರುವ ರಾಜು ಅವರ ನಿವಾಸಕ್ಕೆ ಭೇಟಿ ನೀಡಿದ ಬಿಜೆಪಿ ನಾಯಕರು ಪಕ್ಷದ ವತಿಯಿಂದ 10 ಲಕ್ಷ ರೂ.ಪರಿಹಾರದ ಚೆಕ್‌ ಅನ್ನು ಕುಟುಂಬದವರಿಗೆ ಹಸ್ತಾಂತರ ಮಾಡಿದರು.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Bharatiya Janata Party on Thursday asked the Karnataka Government to speed up the probe into the killing of Vishwa Hindu Parishad (VHP), BJP worker Raju. Raju murdered in Udaygiri police station limits on Sunday, March 13, 2016.
Please Wait while comments are loading...