ನೀರು ಖಾಲಿಯಾದ ಕಬಿನಿಯಲ್ಲಿ ಎಲ್ಲಿಂದಲೋ ಬಂದ ಹಕ್ಕಿಗಳ ಸಂಭ್ರಮ

By: ಬಿ.ಎಂ.ಲವಕುಮಾರ್
Subscribe to Oneindia Kannada

ಮೈಸೂರು: ನಿಸರ್ಗದ ಮಡಿಲಲ್ಲಿರುವ ಎಚ್.ಡಿ.ಕೋಟೆಯ ಬೀಚನಹಳ್ಳಿ ಬಳಿಯಿರುವ ಕಬಿನಿ ಜಲಾಶಯ ರೈತರ ಜೀವನಾಡಿ, ಜತೆಗೆ ಮೈಸೂರು ಸೇರಿದಂತೆ ಹಲವು ಗ್ರಾಮ, ಪಟ್ಟಣಗಳಿಗೆ ಜೀವ ಜಲವೂ ಹೌದು. ಬಾಯಾರಿದ ವನ್ಯ ಮೃಗಗಳ ದಾಹ ತಣಿಸುವ ಜಲದಾತೆ. ಅಷ್ಟೇ ಅಲ್ಲ, ಇದೀಗ ಎಲ್ಲಿಂದಲೋ ಬಂದ ಬಾನಾಡಿಗಳಿಗೆ ಆಶ್ರಯದಾತೆಯೂ ಹೌದು.

ನಾವೇನಾದರೂ ಈಗ ಕಬಿನಿಯತ್ತ ಹೆಜ್ಜೆ ಹಾಕಿದರೆ ಹಿನ್ನೀರಿನಲ್ಲಿ ಸಹಸ್ರಾರು ಬಾನಾಡಿಗಳು ಬೀಡುಬಿಟ್ಟಿರುವ ಮನಮೋಹಕ ದೃಶ್ಯ ಕಣ್ಮನ ಸೆಳೆಯುತ್ತವೆ. ಮೊದಲೆಲ್ಲ ವಲಸೆ ಬರುವ ಹಕ್ಕಿಗಳು ರಂಗನತಿಟ್ಟನ್ನು ಆಶ್ರಯಿಸುತ್ತಿದ್ದವು. ಆದರೆ ಇತ್ತೀಚೆಗೆ ಪಕ್ಷಿಗಳು ಕೂಡ ಸುರಕ್ಷಿತ ಮತ್ತು ಹೇರಳ ಆಹಾರ ದೊರೆಯುವ ತಾಣವನ್ನು ಅರಸಿಕೊಂಡು ಹೋಗುತ್ತಿದ್ದು, ಜಲಾಶಯಗಳ ಹಿನ್ನೀರಿನಲ್ಲಿ ತಮ್ಮ ಬದುಕು ಕಟ್ಟಿಕೊಳ್ಳುತ್ತಿವೆ.[ಕೌದೇನಹಳ್ಳಿ ಕೆರೆಗೆ ಮರಳಿವೆ ಚೆಂದದ ಪಕ್ಷಿಗಳು...]

ಕಬಿನಿ ಜಲಾಶಯ ಮೊದಲೆಲ್ಲ ನೀರಿನಿಂದ ತುಂಬಿ ತುಳುಕುತ್ತಿತ್ತು. ಕಾರಣ ಕೇರಳದ ವೈನಾಡಿನಲ್ಲಿ ಉತ್ತಮ ಮಳೆಯಾಗಿ ನೀರು ಹರಿದು ಬರುತ್ತಿತ್ತು. ಹೀಗಾಗಿ ಹಿನ್ನೀರು ಪ್ರದೇಶ ಜಲದಿಂದ ಆವೃತವಾಗುತ್ತಿತ್ತು. ಆದರೆ ಮಳೆಯ ಪ್ರಮಾಣ ಕಡಿಮೆಯಾದ ಕಾರಣ ಕಬಿನಿಯಲ್ಲಿ ನೀರಿನ ಪ್ರಮಾಣ ಕಡಿಮೆಯಾಗಿ ಹಿನ್ನೀರು ಪ್ರದೇಶ ಬಟಾಬಯಲಾಗುತ್ತಿದೆ. ಹೀಗಾಗಿ ಹಿನ್ನೀರು ಪ್ರದೇಶದಲ್ಲಿ ಅಡ್ಡಾಡುತ್ತಾ ಸಣ್ಣಪುಟ್ಟ ಮೀನು, ಇನ್ನಿತರ ಜಲಚರಗಳನ್ನು ತಿಂದು ಬದುಕಲು ಪಕ್ಷಿಗಳು ಇಲ್ಲಿ ಅಡ್ಡಾಡುತ್ತಿರುತ್ತವೆ. ಬೆಳ್ಳಕ್ಕಿ, ಕೊಕ್ಕರೆ ಇಲ್ಲಿ ಜಲಚರಗಳಿಗಾಗಿ ಕಾದುಕುಳಿತಿರುತ್ತವೆ.

ಬೂದು ಬಣ್ಣದ ಬಾತುಕೋಳಿ

ಬೂದು ಬಣ್ಣದ ಬಾತುಕೋಳಿ

ಇಲ್ಲಿಗೆ ವಿದೇಶಗಳದ್ದು ಎನ್ನಲಾದ ಬೂದು ಬಣ್ಣದ ಬಾತುಕೋಳಿ (ಹೆಡೆಡ್ ಗೂಸ್) ದಂಡು ಬಂದಿದೆ. ಸಾಮಾನ್ಯವಾಗಿ ಇವು ಚಳಿಗಾಲದಲ್ಲಿ ಇತ್ತ ಬರುತ್ತವೆ. ಒಂದಷ್ಟು ಸಮಯ ಇಲ್ಲಿದ್ದು, ಮೊಟ್ಟೆಯಿಟ್ಟು ಮರಿ ಮಾಡಿ ತಮ್ಮ ಸಂತಾನೋತ್ಪತ್ತಿ ಮಾಡಿಕೊಂಡು ಮರಳುತ್ತವೆ. ಚಳಿಗಾಲದಲ್ಲಿ ಹಿಮ ಗಟ್ಟಿಯಾಗಿ ವಾತಾವರಣ ವಿಷಮವಾಗುವುದರಿಂದ ಚಳಿಯಿಂದ ರಕ್ಷಿಸಿಕೊಳ್ಳುವ ಸಲುವಾಗಿ ಇವು ಹಿಮಾಲಯ ಕಡೆಯ ಚೀನಾ, ನೇಪಾಳದಿಂದ ಬರುತ್ತವೆ. ಹೀಗೆ ಬರುವ ಈ ಬಾತುಗಳು ಕಬಿನಿ ಹಿನ್ನೀರಿನಲ್ಲಿ ಆಶ್ರಯ ಪಡೆದುಕೊಳ್ಳುತ್ತಿವೆ.

ಮರಿ ಮಡುವ ಸಂಭ್ರಮ

ಮರಿ ಮಡುವ ಸಂಭ್ರಮ

ಇದೀಗ ಇವು ಗೂಡು ಕಟ್ಟಿ, ಮೊಟ್ಟೆಯಿಟ್ಟು, ಕಾವು ಕೊಟ್ಟು ಮರಿ ಮಾಡುವ ಸಂಭ್ರಮದಲ್ಲಿವೆ. ಹೆಣ್ಣು ಬಾತುಗಳು ಗೂಡುಕಟ್ಟಿ, ಮೊಟ್ಟೆಯಿಟ್ಟು ಕಾವು ಕೊಡುತ್ತಿದ್ದರೆ, ಗಂಡು ಬಾತುಗಳು ಹಿನ್ನೀರಿನಲ್ಲಿ ಬೇಟೆಯಾಡುತ್ತಿವೆ. ಸುತ್ತಮುತ್ತಲ ಗದ್ದೆ ಜಮೀನಿಗೆ ಹೋಗಿ ಹುಳ-ಹುಪ್ಪಟೆಗಳನ್ನು ಹಿಡಿದು ತರುತ್ತಿವೆ. ಹೆಚ್ಚಿನ ಸಂದರ್ಭ ಹಿನ್ನೀರಿನಲ್ಲಿ ಗುಂಪು ಗುಂಪಾಗಿ ಓಡಾಡುತ್ತಾ, ಹಾರಾಡುತ್ತಾ ಸಮಯ ಕಳೆಯುತ್ತವೆ. ಇವು ಹಾರಾಡುವಾಗ ಕಾಣಸಿಗುವ ಸುಂದರ ದೃಶ್ಯಗಳು ನೋಡುಗರ ಮನ ಸೆಳೆಯುತ್ತಿವೆ. ಈ ಪಕ್ಷಿಗಳನ್ನು ನೋಡಲೆಂದೇ ಹೆಚ್ಚಿನವರು ಈಗ ಕಬಿನಿ ಜಲಾಶಯದತ್ತ ತೆರಳುತ್ತಿದ್ದಾರೆ.

ಸೆಳೆಯುವ ಬಾನಾಡಿಗಳು

ಸೆಳೆಯುವ ಬಾನಾಡಿಗಳು

ಸದಾ ನೀರಿನಿಂದ ತುಂಬಿ ತುಳುಕುತ್ತಿದ್ದ ಜಲಾಶಯವನ್ನು ನೋಡಿದವರು ಅದು ಬರಿದಾಗಿರುವ ದೃಶ್ಯವನ್ನು ನೋಡಲು ಬರುತ್ತಿದ್ದಾರೆ. ಹೀಗೆ ಬರುವ ಪ್ರವಾಸಿಗರನ್ನು ಬಾನಾಡಿಗಳು ಸೆಳೆಯುತ್ತಿವೆ. ಸ್ಥಳೀಯ ರೈತರ ಪ್ರಕಾರ ಇವು ನಿರುಪದ್ರವಿಗಳು. ರೈತರಿಗೆ ಇವುಗಳಿಂದ ಯಾವುದೇ ತೊಂದರೆಯಿಲ್ಲ. ಜಮೀನಿನಲ್ಲಿ ಅಡ್ಡಾಡುತ್ತಾ ಸಣ್ಣಪುಟ್ಟ ಆಹಾರಗಳನ್ನು ತಿಂದು ಮರಳುತ್ತವೆ.

ಗುಂಪಾಗಿ ಹಾರುವ ಖುಷಿ

ಗುಂಪಾಗಿ ಹಾರುವ ಖುಷಿ

ಸಂಘ ಜೀವಿಯಾಗಿರುವ ಇವು ಮುಂಜಾನೆ ಎಳೆಬಿಸಿಲಿಗೆ ಮೈಯ್ಯೊಡ್ಡಿ ಹಿನ್ನೀರಿನಲ್ಲಿ ಚಳಿ ಕಾಯಿಸುತ್ತಾ.. ಒಂದೆಡೆಯಿಂದ ಮತ್ತೊಂದೆಡೆಗೆ ಗುಂಪು ಗುಂಪಾಗಿ ಹಾರುತ್ತಾ, ಖುಷಿಯಾಗಿ ಕಾಲ ಕಳೆಯುವ ದೃಶ್ಯ ಮನಮೋಹಕವಾಗಿರುತ್ತದೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Awesome Photos of migratory birds on a 2016 winter sojourn to Kabini Reservoir. The Kabani dam is built on the River Kabini in the district of Mysuru.
Please Wait while comments are loading...