ಬೈಲಕುಪ್ಪೆ ಪೊಲೀಸ್ ಠಾಣೆಗೆ ಆಧುನಿಕ ವಾಹನ ಕೊಡಿ

By: ಒನ್ ಇಂಡಿಯಾ ಪ್ರತಿನಿಧಿ
Subscribe to Oneindia Kannada

ಮೈಸೂರು, ಜುಲೈ 04 : ಏನೇ ಘಟನೆ ನಡೆದರೂ, ಸಮಸ್ಯೆ ಆದರೂ ತಕ್ಷಣಕ್ಕೆ ಪೊಲೀಸರು ಸ್ಥಳಕ್ಕೆ ಬಂದಿಲ್ಲ ಎಂದರೆ ಜನರ ಆಕ್ರೋಶ ಮುಗಿಲು ಮುಟ್ಟುತ್ತದೆ. ಆದರೆ, ಗ್ರಾಮೀಣ ಪ್ರದೇಶದಲ್ಲಿರುವ ಪೊಲೀಸ್ ಠಾಣೆಗಳಿಗೆ ಉತ್ತಮ ಮತ್ತು ಸಮರ್ಪಕವಾದ ಸೌಲಭ್ಯವನ್ನು ಸರ್ಕಾರ ಕಲ್ಪಿಸಬೇಕು.

ಇವತ್ತು ಹಲವು ಠಾಣೆಗಳು ಇನ್ನೂ ಹಳೆಯ ಕಾಲದ ಕಟ್ಟಡಲ್ಲೇ ಕಾರ್ಯನಿರ್ವಹಿಸುತ್ತಿವೆ. ಇಲ್ಲಿ ಮೂಲ ಸೌಲಭ್ಯವೇ ಇಲ್ಲದಾಗಿದೆ. ಸಮಾಜದ ಸಮಸ್ಯೆ ಈಡೇರಿಸುವ ಪೊಲೀಸರಿಗೆ ತಮ್ಮ ಕಚೇರಿಯಲ್ಲೇ ಸಮರ್ಪಕವಾದ ಸೌಲಭ್ಯವಿಲ್ಲದಂತಾಗಿದೆ. [ಬೆಂಗಳೂರು ಪೊಲೀಸರ ಗಸ್ತಿಗೆ ಹೈಟೆಕ್ ವಾಹನಗಳು]

bylakuppe

ಹಲವು ಠಾಣೆಗಳ ಕಟ್ಟಡಗಳು ಶಿಥಿಲಾವಸ್ಥೆಯಲ್ಲಿವೆ. ಇನ್ನು ಠಾಣೆಗಳಿಗೆ ನೀಡುವ ವಾಹನಗಳ ಸ್ಥಿತಿ ದೇವರಿಗೇ ಪ್ರೀತಿ ಎಂಬಂತಾಗಿದೆ. ಆಗಾಗ್ಗೆ ಕೈಕೊಡುವ ಓಬಿರಾಯನ ಕಾಲದ ಜೀಪುಗಳಲ್ಲಿ ಯಾವ ರೀತಿಯ ಗಸ್ತು ತಿರುಗಬಹುದು?.[ಗಸ್ತು ತಿರುಗುವ ಪಿಸಿಆರ್ ವಾಹನಗಳಿಗೆ ಇಂಧನ ಕೊರತೆ]

ಪಿರಿಯಾಪಟ್ಟಣ ತಾಲೂಕಿನ ಬೈಲಕುಪ್ಪೆ ಠಾಣೆಯ ಸ್ಥಿತಿ ಇದೇ ಆಗಿದೆ. ಠಾಣೆಗೆ ನೀಡಿರುವ ವಾಹನ ಹಳೆಯದಾಗಿದ್ದು ಅದನ್ನು ನಂಬಿ ಹೋದರೆ ಕಥೆ ಮುಗಿದಂತೆ. ಯಾವಾಗ? ಎಲ್ಲಿ ಕೆಟ್ಟು ನಿಲ್ಲುತ್ತದೆ ಎಂಬುದೇ ಗೊತ್ತಾಗುವುದಿಲ್ಲ.

ಇನ್ನು ಎಲ್ಲಾದರೂ ರಾತ್ರಿ ಸಮಯದಲ್ಲಿ ಗಸ್ತಿಗೆ ಇದೇ ವಾಹನದಲ್ಲಿ ತೆರಳಿದರೆ ಅವರ ಗೋಳು ಕೇಳುವವರೇ ಇಲ್ಲದಾಗಿದೆ. ಬೈಲಕುಪ್ಪೆ ಠಾಣೆ ಇವತ್ತು ನಿರ್ಮಾಣವಾದುದಲ್ಲ. ನೆಹರು ಕಾಲದಲ್ಲಿ ಟಿಬೆಟಿಯನ್ನರ ರಕ್ಷಣೆಗಾಗಿ ಇಲ್ಲಿ ಠಾಣೆ ಸ್ಥಾಪಿಸಲಾಗಿದೆ.

ಈ ಠಾಣೆ ವ್ಯಾಪ್ತಿಗೆ ಪ್ರಸಿದ್ಧ ಗೋಲ್ಡನ್ ಟೆಂಪಲ್ ಕೂಡಾ ಒಳಪಡುತ್ತದೆ. ಇಲ್ಲಿ ಏನಾದರೊಂದು ಘಟನೆಗಳು ನಡೆಯುತ್ತಲೇ ಇರುತ್ತದೆ. ಈ ಸಂದರ್ಭ ತಕ್ಷಣ ಸ್ಥಳಕ್ಕೆ ತೆರಳಲು ಸುಸಜ್ಜಿತ ವಾಹನ ಬೇಕಾಗಿದೆ. ಈಗಿರುವ ವಾಹನದ ಬದಲಿಗೆ ಆಧುನಿಕವಾಗಿರುವ ವಾಹನವನ್ನು ಠಾಣೆಗೆ ನೀಡಬೇಕಾಗಿದೆ.

ಇನ್ನಾದರೂ ಸಂಬಂಧಿಸಿದವರು ಇತ್ತ ಗಮನಹರಿಸಿ, ಆಧುನಿಕ ವಾಹನವನ್ನು ನೀಡಿದರೆ ಪೊಲೀಸರಿಗೂ ನೆಮ್ಮದಿಯಿಂದ ಕಾರ್ಯ ನಿರ್ವಹಿಸಲು ಸಾಧ್ಯವಾಗುತ್ತದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Bylakuppe police station Periyapatna, Mysuru district does not even have basic facilities. Police demanding for new patrol vehicle.
Please Wait while comments are loading...