ಮೈಸೂರಿನ ಹಳ್ಳಿಗಳಲ್ಲಿ ಗಾಂಜಾದ ಕಮಟು ವಾಸನೆ!

By: ಮೈಸೂರು ಪ್ರತಿನಿಧಿ
Subscribe to Oneindia Kannada

ಮೈಸೂರು, ಜುಲೈ 27 : ಗ್ರಾಮೀಣ ಪ್ರದೇಶಗಳಲ್ಲಿ ಅಕ್ರಮ ಮದ್ಯ ಮತ್ತು ಗಾಂಜಾ ಮಾರಾಟ ಎಗ್ಗಿಲ್ಲದೆ ಸಾಗುತ್ತಿದ್ದು, ಹೊಲ, ಗದ್ದೆ ಅಂಥ ತಮ್ಮ ಪಾಡಿಗೆ ತಾವು ಎಂಬಂತೆ ಕೆಲಸ ಮಾಡಿಕೊಂಡಿರುವ ರೈತರಿಗೆ ದುಶ್ಚಟಗಳನ್ನು ಹತ್ತಿಸಿ ಆ ಮೂಲಕ ತಮ್ಮ ಜೇಬುಗಳನ್ನು ತುಂಬಿಸಿಕೊಳ್ಳಲು ಹಲವರು ಯತ್ನಿಸುತ್ತಿರುವುದು ಕಂಡುಬರುತ್ತಿದೆ.

ಇದುವರೆಗೆ ಗ್ರಾಮೀಣ ಪ್ರದೇಶಗಳಲ್ಲಿ ಕೇವಲ ಮದ್ಯದ ವಾಸನೆ ಮಾತ್ರ ಮೂಗಿಗೆ ಬಡಿಯುತ್ತಿತ್ತು. ಈಗ ಗಾಂಜಾದ ಕಮಟು ವಾಸನೆಯೂ ಸೇರಿಕೊಳ್ಳುತ್ತಿರುವುದು ಅಲ್ಲಲ್ಲಿ ಗೋಚರಿಸುತ್ತಿದ್ದು, ಇದು ಹೀಗೆಯೇ ಮುಂದುವರೆದರೆ ಮುಂದಿನ ದಿನಗಳಲ್ಲಿ ಭಾರೀ ಬೆಲೆ ತೆರಬೇಕಾದ ಪರಿಸ್ಥಿತಿ ಬಂದೊದಗುವುದಂತೂ ಖಚಿತ.

ಪ್ಯಾಕೆಟ್ ಸಾರಾಯಿಗಳನ್ನು ನಿಷೇಧಿಸಿದ ಬಳಿಕ ಗ್ರಾಮೀಣ ಪ್ರದೇಶದ ಹಲವು ಕಿರಾಣಿ ಅಂಗಡಿಗಳು ಅಕ್ರಮ ಮದ್ಯ ಮಾರುವ ಕೇಂದ್ರಗಳಾಗಿ ಮಾರ್ಪಾಡುಗೊಳ್ಳುತ್ತಿವೆ. ಪಟ್ಟಣದಿಂದ ಕೊಂಡೊಯ್ದು ಹೆಚ್ಚಿನ ಬೆಲೆಗೆ ಮಾರಾಟ ಮಾಡುವ ಕಲೆಯನ್ನು ಕರಗತ ಮಾಡಿಕೊಳ್ಳುತ್ತಿರುವುದರಿಂದ ಕೂಲಿ ಕಾರ್ಮಿಕರು ಒಂದಕ್ಕೆ ಎರಡು ಪಟ್ಟು ಹಣ ನೀಡಿ ಕುಡಿಯ ತೊಡಗಿದ್ದಾರೆ. [ಬೈಲಕುಪ್ಪೆ ಮಾರುಕಟ್ಟೆಯಲ್ಲಿ ಕದ್ದುಮುಚ್ಚಿ ಗಾಂಜಾ ಮಾರಾಟ]

Banned Marijuana and illicit liquor sale uninhibited in Mysuru

ಪೊಲೀಸರು ಮೇಲಿಂದ ಮೇಲೆ ಅಂಗಡಿಗಳ ಮೇಲೆ ದಾಳಿ ನಡೆಸಿ ಅಕ್ರಮ ಮದ್ಯ ವಶಪಡಿಸಿಕೊಂಡು ಪ್ರಕರಣ ದಾಖಲಿಸಿಕೊಳ್ಳುತ್ತಿದ್ದರೂ ಮಾರಾಟ ಮಾಡುವವರ ಸಂಖ್ಯೆ ಮಾತ್ರ ಕಡಿಮೆಯಾಗಿಲ್ಲ.

ಹುಣಸೂರು ತಾಲೂಕು ವ್ಯಾಪ್ತಿಯಲ್ಲಿ ಅಕ್ರಮ ಮದ್ಯ ಮಾರಾಟ ಹಾಗೂ ಗಾಂಜಾ ಮಾರಾಟ ಎಗ್ಗಿಲ್ಲದೆ ಸಾಗುತ್ತಿದ್ದು ತಡೆಯುವುದು ಕಷ್ಟ ಸಾಧ್ಯವಾಗಿದೆ. ಹುಣಸೂರು, ಎಚ್.ಡಿ.ಕೋಟೆ ಹಾಗೂ ಪಿರಿಯಾಪಟ್ಟಣ ವ್ಯಾಪ್ತಿಯಲ್ಲಿ ಗಾಂಜಾ ಬೆಳೆಯುತ್ತಿರುವ ಬಗ್ಗೆಯೂ ಮಾತುಗಳು ಕೇಳಿ ಬರುತ್ತಿವೆ. ಕೇರಳದ ಕೆಲವರು ವ್ಯವಹಾರ ಕುದುರಿಸುತ್ತಾರೆ.

ಕೆಲವು ರೈತರು ಯಾರಿಗೂ ಗೊತ್ತಾಗದ ರೀತಿಯಲ್ಲಿ ಇತರೆ ಬೆಳೆಗಳ ನಡುವೆ ಬೆಳೆಸಿ ಮಾರಾಟ ಮಾಡುತ್ತಿದ್ದು, ಇದಕ್ಕೆ ಸಾಕ್ಷಿ ಎಂಬಂತೆ ಇಬ್ಬರು ರೈತರು ಮಾಲು ಸಹಿತ ಸಿಕ್ಕಿಬಿದ್ದಿದ್ದಾರೆ. ಹುಣಸೂರು ತಾಲೂಕಿನ ನೆಲ್ಲೂರು ಪಾಲ ನಿವಾಸಿ ನಂಜೇಗೌಡ ಹಾಗೂ ಸಿಬಿಟಿ ಕಾಲೋನಿಯ ರಾಜೇಗೌಡ ಗಾಂಜಾ ಸಹಿತ ಸಿಕ್ಕಿಬಿದ್ದವರಾಗಿದ್ದು ಇವರು ಹದಮಾಡಿದ ಸುಮಾರು ೨.೫ಕೆಜಿ ಗಾಂಜಾವನ್ನು ಮಾರಾಟ ಮಾಡಲು ಬೈಕ್‌ನಲ್ಲಿ ಹೆಚ್.ಡಿ.ಕೋಟೆ ಕಡೆಗೆ ತೆರಳುತ್ತಿದ್ದಾಗ ಪೊಲೀಸರಿಗೆ ಸಿಕ್ಕಿ ಬಿದ್ದಿದ್ದಾರೆ.

ಗಾಂಜಾ ಮಾರಾಟಗಾರರ ಕಥೆ ಹೀಗಾದರೆ, ಅಕ್ರಮ ಮದ್ಯ ಮಾರಾಟಗಾರರ ಕಥೆ ಮತ್ತೊಂದು ರೀತಿಯದ್ದಾಗಿದೆ. ಕೆಲವರು ಮನೆಯಲ್ಲೇ ಮದ್ಯವನ್ನು ಶೇಖರಿಸಿಟ್ಟುಕೊಂಡು ಮಾರಾಟ ಮಾಡುತ್ತಿದ್ದಾರೆ. [ಕಲಬುರಗಿಯಲ್ಲಿ 50 ಲಕ್ಷ ಮೌಲ್ಯದ ಗಾಂಜಾ ವಶ]

ಹುಣಸೂರು ತಾಲೂಕಿನ ನೇರಳಕುಪ್ಪೆ ಗ್ರಾಮದ ಸಂಜೀವ(58) ಎಂಬುವರ ಮನೆಯಲ್ಲಿ ಸುಮಾರು 50 ಸಾವಿರ ರು. ಮೌಲ್ಯದ ಮದ್ಯದ ದಾಸ್ತಾನು ಪತ್ತೆಯಾಗಿದೆ. ಈ ಸಂಬಂಧ ಅವರ ಮಗ ಶಶಿಕಾಂತ (27) ಸೇರಿ ಇಬ್ಬರನ್ನು ಬಂಧಿಸಲಾಗಿದೆ. ಒಬ್ಬರ ಮನೆಯಲ್ಲೇ ಇಷ್ಟೊಂದು ಮದ್ಯ ದೊರೆತಿರುವಾಗ ಬೇರೆಯವರ ಬಳಿ ಇನ್ನೆಷ್ಟು ದಾಸ್ತಾನಿರಬಹುದು ಎಂಬುದನ್ನು ಊಹಿಸಬಹುದು.

ಹುಣಸೂರು ವ್ಯಾಪ್ತಿಯ ಕೂಲಿ ಕಾರ್ಮಿಕರು ಹೆಚ್ಚಾಗಿರುವ ಕಾಲೋನಿಗಳಲ್ಲಿ ಅಕ್ರಮ ಮದ್ಯ ಮಾರಾಟ ಎಗ್ಗಿಲ್ಲದೆ ನಡೆಯುತ್ತಿದ್ದು, ಮನೆಗಳಲ್ಲೇ ಮದ್ಯದ ದಾಸ್ತಾನಿಟ್ಟುಕೊಂಡು ಮಾರಾಟ ಮಾಡುತ್ತಿರುವ ಬಗ್ಗೆ ದೂರುಗಳು ಬಂದಿತ್ತು. ಇದರಿಂದ ಎಚ್ಚೆತ್ತುಕೊಂಡಿರುವ ಪೊಲೀಸರು ದಾಳಿ ಮಾಡುತ್ತಿದ್ದು, ಹಲವು ಪ್ರಕರಣಗಳು ಬೆಳಕಿಗೆ ಬರುತ್ತಿವೆ. ಪೊಲೀಸರು ಎಚ್ಚೆತ್ತುಕೊಂಡು ಅಕ್ರಮ ಮದ್ಯ ಮತ್ತು ಗಾಂಜಾ ಮಾರಾಟ ಮಾಡುವವರ ವಿರುದ್ಧ ಕ್ರಮ ಕೈಗೊಳ್ಳಬೇಕಿದೆ. [ಧೋಧೋ ಸುರಿವ ಮಳೆಯಲ್ಲಿ ಕುಡಿದ ಯುವಕನ ರಂಪಾಟ]

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Banned Marijuana and illicit liquor sale uninhibited in many villages in Mysuru district. Piriyapatna, HD Kote, Hunsur have become hub for illegal trades. Karnataka Police have to take stringent action against the culprits.
Please Wait while comments are loading...