ಆಹಾರ ಪ್ರಿಯರಿಗೆ ದಸರೆಯಲ್ಲಿ ಬಂಬೂ ಬಿರಿಯಾನಿ ಭಾಗ್ಯ!

By: ಯಶಸ್ವಿನಿ ಎಂ.ಕೆ
Subscribe to Oneindia Kannada

ಮೈಸೂರು, ಆಗಸ್ಟ್ 19: ಬಿದಿರಕ್ಕಿಯ ಘಮ, ಬಾಯಲ್ಲಿ ನೀರೂರಿಸುವ ತರಹೇವಾರಿ ತಿನಿಸುಗಳು ಜನತೆಯನ್ನು ತನ್ನತ್ತ ಸೆಳೆಯುವಲ್ಲಿ ಆಹಾರ ಮೇಳದ ಆಕರ್ಷಣೆಯೆಂದರೆ ಬಂಬೂ ಬಿರಿಯಾನಿ. ಬುಡಕಟ್ಟು ಹಾಡಿ ಮನೆ ಊಟವನ್ನು ಆಹಾರ ಮೇಳಕ್ಕೆ ಆಗಮಿಸಿ ಸವಿಯದವರೇ ಇಲ್ಲ.

ಬಿದಿರಿನೊಳಗೆ ಬಿದಿರಕ್ಕಿ ಮತ್ತು ಮಸಾಲೆಯನ್ನು ಸೇರಿಸಿ ಬೆಂಕಿಯ ಕೆಂಡದಲ್ಲಿರಿಸಿ ತಯಾರಿಸುವ ರುಚಿಕರವಾದ ಬಂಬೂ ಬಿರಿಯಾನಿಯಾಗಿದ್ದು ಇದನ್ನು ಸವಿಯಲೋಸುಗವೇ ನೂರಾರು ಮಂದಿ ಭೇಟಿ ನೀಡುತ್ತಾರೆ. ಬುಡಕಟ್ಟು ಜನಾಂಗದವರ ವಿಶೇಷ ತಿನಿಸುಗಳು ಆಹಾರ ಮೇಳದಲ್ಲಿ ಜನರನ್ನಾಕರ್ಷಿಸುವಲ್ಲಿ ಯಶಸ್ವಿಯಾಗುತ್ತದೆ.

Bamboo biryani will be there in Mysuru dasara -2017

ಸ್ಪೆಷಲ್ ಬಿದಿರು ಬೊಂಬಿನ ಬಿರಿಯಾನಿ!
ಈ ಭಾರಿ ಆಹಾರ ಮೇಳದಲ್ಲಿ ಭೋಜನ ಪ್ರಿಯರನ್ನು ಸೆಳೆಯಲು ರೆಡಿಯಾಗಿರುವುದು ಬಿದಿರು ಬೊಂಬಿನ ಬಿರಿಯಾನಿ! ಅರೇ?! ಇದೇನಿದು ಬಿದಿರು ಬಿರಿಯಾನಿ? ಚಿಕನ್ ಬಿರಿಯಾನಿ ಕೇಳಿದ್ದೀನಿ, ಮಟನ್ ಬಿರಿಯಾನಿ ತಂದಿದ್ದೀನಿ, ವೆಜ್ ಬಿರಿಯಾನಿಯನ್ನೂ ಕೂಡ ಟೆಸ್ಟ್ ಮಾಡಿದ್ದೀನಿ ಇದೇನಿದು ಬಿದಿರು ಬಿರಿಯಾನಿ? ಅಂತ ಕೇಳ್ಬೆಡಿ... ಒಂದಷ್ಟು ದಿನ ಕಾದರೆ ದಸರಾ ಆಹಾರ ಮೇಳದಲ್ಲಿ ನೀವೂ ಬಿದಿರು ಬೊಂಬಿನ ಬಿರಿಯಾನಿ ರುಚಿ ಸವಿಯಬಹುದು.

Bamboo biryani will be there in Mysuru dasara -2017

ಏನಿದು ಬಿದಿರು ಬೊಂಬಿನ ಬಿರಿಯಾನಿ?
ಇದು ಬುಡಕಟ್ಟು ಜನರ ಸಾಂಪ್ರಾದಾಯಿಕ ಶೈಲಿಯ ಆಹಾರ. ಸಸ್ಯಹಾರ ಹಾಗೂ ಮಾಂಸಾಹಾರ ಎರಡೂ ಬಗೆಗಳಲ್ಲೂ ಇದನ್ನು ತಯಾರಿಸುತ್ತಾರೆ. ಕಾಡಿನ ಜನರು ಪಾತ್ರಗಳಿಲ್ಲದ ಸಮಯದಲ್ಲಿ ಬಿದಿರನ್ನು ಬಳಸಿ ಆಹಾರ ತಯಾರಿಸಿಕೊಳ್ಳುತ್ತಿದ್ದರು. ಕಾಡು ವಾಸಿಗಳು ಈಗಲೂ ಈ ಸಂಪ್ರದಾಯವನ್ನು ಮುಂದುವರೆಸಿಕೊಂಡು ಬರುತ್ತಿದ್ದಾರೆ.

ಹಾಗಾಗಿ 2017 ನೇ ಸಾಲಿನ ವಿಶ್ವ ವಿಖ್ಯಾತ ಮೈಸೂರು ದಸರಾ ಮಹೋತ್ಸವದ ಅಂಗವಾಗಿ ನಡೆಯಲಿರುವ ಜನಪ್ರಿಯ ಆಹಾರ ಮೇಳದಲ್ಲಿ ಬುಡಕಟ್ಟು ಜನರ ಆಹಾರ ಪದ್ಧತಿಗಳನ್ನು ಉಣಬಡಿಸುವ ಕುರಿತು ಶುಕ್ರವಾರ ಸಭೆ ನಡೆಸಲಾಯಿತು. ಸಭೆಯಲ್ಲಿ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ಉಪನಿರ್ದೇಶಕ ಕಾ.ರಾಮೇಶ್ವರಪ್ಪ ಮಾತನಾಡಿ ಮೈಸೂರಿನಲ್ಲಿ ದಸರಾ ಸಂದರ್ಭದಲ್ಲಿ 2015 ರಲ್ಲಿ ಆಹಾರ ಮೇಳ ಆರಂಭವಾಯಿತು. ಸತತ 2 ವರ್ಷಗಳಿಂದ ಈ ಆಹಾರ ಮೇಳವನ್ನು ಆಯೋಜಿಸುತ್ತಾ ಬಂದಿದ್ದೇವೆ. ಈ ಬಾರಿಯೂ ದಸರಾ ಪ್ರಯುಕ್ತ ಸೆಪ್ಟೆಂಬರ್ 21 ರಿಂದ 28 ರವರೆಗೆ ಆಹಾರ ಮೇಳ ನಡೆಯಲಿದೆ ಎಂದರು.

ಮೈಸೂರಿಗೆ ಆಗಮಿಸುವ ಪ್ರವಾಸಿಗರಿಗೆ ಮತ್ತಷ್ಟು ವಿವಿಧ ಬಗೆಯ ಆಹಾರವನ್ನು ಉಣಬಡಿಸಲು ಈ ಬಾರಿ ಮೂರು ಕಡೆಗಳಲ್ಲಿ ಅಂದರೆ ಡಿಸಿ ಕಚೇರಿ ಹಿಂಭಾಗವಿರುವ ಸ್ಕೌಟ್ ಅಂಡ್ ಗೈಡ್ಸ್ ಮೈದಾನ, ಲಲಿತ ಮಹಲ್ ಪ್ಯಾಲೇಸ್, ಸಾತಗಳ್ಳಿ ಡಿಪೋ ಹತ್ತಿರ ಆಹಾರ ಮೇಳವನ್ನು ಆಯೋಜಿಸಲಾಗಿದೆ. ಈ ಬಾರಿ ನಡೆಯಲಿರುವ ಆಹಾರ ಮೇಳ ವಿಶೇಷವಾಗಿದ್ದು, ಆದಿವಾಸಿ ಬುಡಕಟ್ಟು ಆಹಾರ ಪದ್ಧತಿಯನ್ನು ಉಣಬಡಿಸಲಾಗುವುದು. ಆಹಾರ ಪ್ರಿಯರು ಬಂಬೂ ಬಿರಿಯಾನಿಗೆ ಹೆಚ್ಚು ಮುಗಿಬೀಳುವುದರಿಂದ ಅವರಿಗೆ ಇಷ್ಟವಾದ ಆಹಾರ ನೀಡುವ ಉದ್ದೇಶದಿಂದ ಮೂರು ಕಡೆಗಳಲ್ಲಿ ಆಹಾರ ಮೇಳ ನಡೆಯಲಿದೆ.

ಆಹಾರ ಮೇಳದ ಜೊತೆಗೆ ಸಾಂಪ್ರದಾಯಿಕ ವೈವಿಧ್ಯಮಯ ಕಾರ್ಯಕ್ರಮ ಜರುಗಲಿದೆ. ಈ ಬಾರಿ ಎಲ್ಲಾ ಜಿಲ್ಲೆಯ ಆದಿವಾಸಿ ಬುಡಕಟ್ಟು ಜನಾಂಗದವರನ್ನು ಆಹ್ವಾನಿಸಿದ್ದೇವೆ. ಗ್ರಾಮೀಣ ಪ್ರದೇಶದ ಜನರಿಗೂ ಕೂಡ ಆಹಾರ ಮೇಳದಲ್ಲಿ ಅವಕಾಶ ಮಾಡಿಕೊಡಲಾಗಿದೆ. ಉತ್ತರ ಕರ್ನಾಟಕದ ಆದಿವಾಸಿಗಳ ಆಹಾರ ಪದ್ಧತಿ ಬೇರೆ, ದಕ್ಷಿಣ ಕರ್ನಾಟಕದ ಆದಿವಾಸಿಗಳ ಆಹಾರ ಪದ್ಧತಿಯೇ ಬೇರೆ ಆದ್ದರಿಂದ ಎಲ್ಲಾ ಜನಾಂಗದ ಆದಿವಾಸಿಗಳನ್ನು ಈ ಬಾರಿ ಆಹಾರ ಮೇಳಕ್ಕೆ ಆಹ್ವಾನಿಸಲಾಗಿದ್ದು, ಇಡೀ ಆದಿವಾಸಿ ಜನಾಂಗದ ಆಹಾರ ಪದ್ಧತಿಯ ಆಹಾರವನ್ನು ಈ ಬಾರಿಯ ಆಹಾರ ಮೇಳದಲ್ಲಿ ಸವಿಯಬಹುದು ಎಂದರು.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
The bamboo biryani is ready to catch dinner lovers at this huge food festival on Mysuru Dasara

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ