ರಂಗಾಯಣದಲ್ಲಿ ಮೇಳೈಸಲಿದೆ ಬಹುರೂಪಿ ನಾಟಕೋತ್ಸವದ ಮೆರುಗು

Posted By:
Subscribe to Oneindia Kannada

ಮೈಸೂರು, ಜನವರಿ 4: ರಂಗಾಯಣದ ಕಲಾಮಂದಿರದಲ್ಲಿ ವಲಸೆ ಶೀರ್ಷಿಕೆಯಡಿ ಬಹುರೂಪಿ ನಾಟಕೋತ್ಸವ ಜ .14 ರಿಂದ 21 ರವರೆಗೆ ನಡೆಯಲಿದ್ದು, ಈ ಬಾರಿ ಯುವ ಸ್ಪಂದನವನ್ನು ಹಮ್ಮಿಕೊಳ್ಳುವ ಮೂಲಕ ಯುವಜನತೆಗೆ ನಮ್ಮ ನಾಡಿನ ಸಂಸ್ಕೃತಿಯನ್ನು ಅರ್ಥೈಸಲಾಗುವುದು ಎಂದು ರಂಗಾಯಣದ ನಿರ್ದೇಶಕಿ ಭಾಗೀರಥಿ ಬಾಯಿ ಕದಂ ತಿಳಿಸಿದರು.

ನಗರದ ರಂಗಾಯಣದಲ್ಲಿ ನಡೆದ ಬಹುರೂಪಿ ಪೋಸ್ಟರ್ ಮತ್ತು ಟಿಕೇಟ್ ಬಿಡುಗಡೆಗೊಳಿಸಿ ಮಾತನಾಡಿದ ಅವರು, 2001ರಲ್ಲಿ ಪ್ರಸನ್ನ ಅವರ ನೇತೃತ್ವದಲ್ಲಿ ಬಹುರೂಪಿ ಆರಂಭವಾಯಿತು. 17 ವರುಷಗಳ ತನಕ ನಿರಂತರವಾಗಿ ಎಲ್ಲಾ ಭಾಷೆಗಳ ಮೂಲಕ ಬಹುರೂಪಿಯಾಗಿ ಹಲವಾರು ನಾಟಕಗಳು ಬಂದಿವೆ. ಈ ವರುಷ ನಾನೂ ಕೂಡ ಪಾಲ್ಗೊಳ್ಳುತ್ತಿರುವುದು ಸಂತಸದ ವಿಷಯ. ಮಣಿಪುರದ ಅದ್ಭುತ ನಾಟಕ ನಿರ್ದೇಶಕ ರತನ್ ಶ್ಯಾಂ ಬರುತ್ತಿರುವುದು ಹೆಮ್ಮೆಯ ಸಂಗತಿ. ರಾಷ್ಟ್ರೀಯ ಶಾಲೆಯ ನಿರ್ದೇಶಕರಾದ ಅನುರಾಧ ಕಪೂರ್ ಅವರು ಆಗಮಿಸುತ್ತಿದ್ದು, ರಾಷ್ಟ್ರೀಯ ಪುರಸ್ಕೃತೆ ಸೀಮಾ ಬಿಸ್ವಾಸ್ರ ಏಕವ್ಯಕ್ತಿ ಪ್ರದರ್ಶನವಿದೆ ಎಂದರು.

Bahuroopi drama fest-2018 starts in Mysuru from January 14 to 21

ಈ ಬಾರಿಯ ವಿಶೇಷತೆಗಳೇನು ?
'ವಲಸೆ' ವಿಷಯಾಧರಿತವಾಗಿ ನಡೆಯುತ್ತಿರುವ ಬಹುರೂಪಿ ನಾಟಕೋತ್ಸವದಲ್ಲಿ ಕಲಾಕೃತಿಗಳು, ಚಿತ್ರಗಳು(ಪೇಂಟಿಂಗ್) ರಂಗಾಯಣ ಕ್ಯಾಂಪಸ್ ನಲ್ಲಿ ಮೂಡಲಿದೆ. ಇದು ಈ ಬಾರಿ ಬಹುರೂಪಿ ನಾಟಕೋತ್ಸವದ ಹಲವು ಆಯಾಮಗಳನ್ನು ತೆರೆದಿಡಲಿದೆ. ನಾಟಕೋತ್ಸವದಲ್ಲಿ ಯುವ ಸಮುದಾಯದ ಪಾಲ್ಗೊಳ್ಳುವಿಕೆ ಇರಲಿ ಎಂಬ ಕಾರಣಕ್ಕೆ ಇದೇ ಮೊದಲ ಬಾರಿಗೆ ಕಾಲೇಜು ವಿದ್ಯಾರ್ಥಿಗಳಿಗೆ 'ಯುವ ಸ್ಪಂದನ'ದ ಮೂಲಕ ವೇದಿಕೆ ಕಲ್ಪಿಸಲಾಗಿದೆ. ಇದಕ್ಕಾಗಿ ಐದು ತಂಡಗಳಿಂದ ಪ್ರತಿ ತಂಡದಲ್ಲಿ 40 ವಿದ್ಯಾರ್ಥಿಗಳಂತೆ 200 ಕಾಲೇಜು ವಿದ್ಯಾರ್ಥಿಗಳು ಜನಪದ ಕಾರ್ಯಕ್ರಮ ಪ್ರಸ್ತುತ ಪಡಿಸಲಿದ್ದಾರೆ.ಇದರೊಂದಿಗೆ ಎರಡು ಬೀದಿ ನಾಟಕಗಳನ್ನು ಪ್ರದರ್ಶನ ಮಾಡಲಿದ್ದಾರೆ. ಜ.14ರಿಂದ 22ರವರೆಗೆ ಎಂಟು ದಿನಗಳ ಕಾಲ ರಂಗಾಯಣದ ಆವರಣದ ವೇದಿಕೆಯಲ್ಲಿ ಜನಪದ ಕಾರ್ಯಕ್ರಮಗಳನ್ನು ಪ್ರಸ್ತುತಪಡಿಸಲಿದ್ದಾರೆ.

ಗಿರೀಶ್‌ ಕಾರ್ನಾಡ್‌ರಿಂದ ನಾಟಕೋತ್ಸವದ ಉದ್ಘಾಟನೆ:
ಜ.14ರಿಂದ 22ರವರೆಗೆ ನಡೆಯುವ ಬಹುರೂಪಿ ನಾಟಕೋತ್ಸವಕ್ಕೆ ಜ.14ರಂದು ಸಾಹಿತಿ ಹಾಗೂ ನಾಟಕಕಾರ ಗಿರೀಶ್‌ ಕಾರ್ನಾಡ್‌ ಚಾಲನೆ ನೀಡಲಿದ್ದಾರೆ. 2006ರಲ್ಲಿ ನಡೆದ 6ನೇ ಬಹುರೂಪಿ ನಾಟಕೋತ್ಸವವೂ ಕಾರ್ನಾಡ್‌ ಅವರಿಂದ ಉದ್ಘಾಟನೆಯಾಗಿತ್ತು. ಆ ಬಳಿಕ 11 ವರ್ಷದ ನಂತರ 2ನೇ ಬಾರಿಗೆ 17ನೇ ಬಹುರೂಪಿ ನಾಟಕೋತ್ಸವವನ್ನು ಕಾರ್ನಾಡ್‌ ಉದ್ಘಾಟಿಸುತ್ತಿರುವುದು ವಿಶೇಷ.

Bahuroopi drama fest-2018 starts in Mysuru from January 14 to 21

ಎಂಟು ದಿನ ನಾಟಕೋತ್ಸವ:
ಪ್ರತಿ ಬಾರಿ ಐದು-ಆರು ದಿನಗಳ ಕಾಲ ನಡೆಯುತ್ತಿದ್ದ ಬಹುರೂಪಿ ನಾಟಕೋತ್ಸವ, ಈ ಸಾಲಿನಲ್ಲಿ ಎಂಟು ದಿನಗಳ ಕಾಲ ಎಂಟು ವೇದಿಕೆಯಲ್ಲಿ ನಾನಾ ನಾಟಕ ಪ್ರದರ್ಶನಗೊಳ್ಳಲಿವೆ. ಜಾನಪದ ಕಾರ‍್ಯಕ್ರಮ, ಚಲನಚಿತ್ರೋತ್ಸವ, ವಿಚಾರ ಸಂಕಿರಣ ನಡೆಯಲಿದೆ. ಕಳೆದ ಬಾರಿ ಅಂತಾರಾಷ್ಟ್ರೀಯ ನಾಟಕಗಳನ್ನು ರಂಗಾಯಣಕ್ಕೆ ತಂದು ವಿದೇಶಿ ನಾಟಕ ಅಭಿರುಚಿ ಉಣಬಡಿಸಿತ್ತು. ಬಹುರೂಪಿ ನಾಟಕೋತ್ಸವದಲ್ಲಿ ಈ ಬಾರಿ ರಾಷ್ಟ್ರೀಯ ಮಟ್ಟದ ನಾಟಕಗಳು ಪ್ರದರ್ಶನಗೊಳ್ಳಲಿವೆ. ಆಯ್ಕೆಗಾಗಿ 50 ನಾಟಕಗಳು ಬಂದಿದ್ದು, ಅದರಲ್ಲಿ 27 ನಾಟಕಗಳನ್ನು ಆಯ್ಕೆ ಮಾಡಲಾಗಿದೆ. ಅದರಲ್ಲಿ 18 ಹೊರ ರಾಜ್ಯದ ನಾಟಕಗಳು, ಏಳು ರಾಜ್ಯದ ವಿವಿಧ ಜಿಲ್ಲೆಗಳಿಂದ, ಮೈಸೂರು ರಂಗಾಯಣ ರೆಪರ್ಟರಿಯ ಎರಡು ನಾಟಕಗಳು ಪ್ರದರ್ಶನಗೊಳ್ಳಲಿದೆ.

ವಲಸೆಯ ಅನಾವರಣ:
ಈ ಬಾರಿ 17ನೇ ಬಹುರೂಪಿ ನಾಟಕೋತ್ಸವ ವಲಸೆ ವಿಷಯಾಧರಿತವಾಗಿದೆ. ಅಂತಾರಾಷ್ಟ್ರೀಯ, ರಾಷ್ಟ್ರೀಯ ಸಿನಿಮಾಗಳು ಪ್ರದರ್ಶನಗೊಳ್ಳಲಿವೆ. ರಂಗಾಯಣ ಆವರಣದಲ್ಲಿರುವ ಶ್ರೀರಂಗ ಸಭಾಂಗಣದಲ್ಲಿ ಎಂಟು ದಿನಗಳ ಕಾಲ 24 ಸಿನಿಮಾಗಳು ಪ್ರದರ್ಶನಗೊಳ್ಳಲಿವೆ. ವಲಸೆ ಕುರಿತ ಕಲಾಕೃತಿಗಳು, ಚಿತ್ರಗಳು ರಂಗಾಯಣದ ಆವರಣವನ್ನು ಸಿಂಗಾರಗೊಳಿಸಲಿದೆ. ರಂಗಾಯಣ ಪ್ರವೇಶ ದ್ವಾರ, ಭೂಮಿಗೀತ, ವನರಂಗ, ಕಲಾಮಂದಿರ ಆವರಣದಲ್ಲಿ ಕಲಾವಿದ ಬಾದಲ್‌ ನಂಜುಂಡಸ್ವಾಮಿ ಅವರ ಕೈ ಚಳಕದಲ್ಲಿ ವಲಸೆಯನ್ನು ಪ್ರತಿಬಿಂಬಿಸುವ ಕಲಾಕೃತಿ ಹಾಗೂ ಚಿತ್ರಕಲೆ ಮೂಡಿಬರಲಿದೆ. ಅಲ್ಲದೆ ವಲಸೆ ಕುರಿತು ಕಲಾಕೃತಿ ಮತ್ತು ಚಿತ್ರಕಲೆ ಪ್ರದರ್ಶನವೂ ಇರಲಿದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Bahuroopi Drama fest 2018 by Rangayana will be started in Mysuru from Jan 14th to 21st. Jnanpith awardee Girish Karnad will inaugurate the function

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ