ಕುದಿಯುವ ಭೂಮಿಗೆ ಬಾಲಕ ಸಾವು: ಗೊಂದಲ ಮೂಡಿಸಿದ ಹರ್ಷಲ್ ಆಡಿಯೋ

By: ಮೈಸೂರು ಪ್ರತಿನಿಧಿ
Subscribe to Oneindia Kannada

ಮೈಸೂರು, ಏಪ್ರಿಲ್ 18 : ಕಳೆದೆರಡು ದಿನಗಳ ಹಿಂದೆ ನಗರದ ನ ಬೆಲವತ್ತ ಗ್ರಾಮದಲ್ಲಿ ಕುದಿಯುತ್ತಿರೋ ಭೂಮಿಗೆ ಸಿಲುಕಿ ಗಂಭೀರ ಗಾಯಗೊಂಡಿದ್ದ ಬಾಲಕ ಹರ್ಷಲ್ ಮೃತಪಟ್ಟಿರುವುದೇನೋ ನಿಜ. ಆದರೆ ಹರ್ಷಲ್ ಸಾವಿಗೂ ಕೆಲವು ಗಂಟೆಗಳ ಮೊದಲು ಮಾತನಾಡಿದ್ದ ಆಡಿಯೋ ಲಭ್ಯವಾಗಿದೆ.

ಆದರೆ ಆಡಿಯೋದಲ್ಲಿ ಆತನು ನೀಡಿದ ಹೇಳಿಕೆಗೂ, ಆತನ ಸ್ನೇಹಿತ ನೀಡಿರುವ ಹೇಳಿಕೆಗೆ ಗೊಂದಲದಗೂಡಾಗಿದ್ದು, ಹಲವು ಅನುಮಾನಗಳಿಗೆ ಎಡೆ ಮಾಡಿಕೊಟ್ಟಿದೆ .

Audio recording of Harshal tells an untold story

ಆಡಿಯೋದಲ್ಲಿ ಏನಿದೆ...?

ಆಣೆಕಟ್ಟಿನ ಬಳಿಯಿರೋ ತೋಟದಲ್ಲಿ ಕ್ರಿಕೆಟ್ ಆಟವಾಡಲೆಂದು 5, 6 ಮಂದಿ ಗೆಳೆಯರು ಸೇರಿ ಹೋಗಿದ್ದೆವು. ಆಟವಾಡುತ್ತಿದ್ದ ವೇಳೆ ಯಶವಂತ್ ಅಣ್ಣ ಬಾಲ್ ಜೋರಾಗಿ ಹೊಡೆದರು. ಬಾಲ್ ತರಲು ಹೋದೆವು. ಈ ವೇಳೆ ಮನೋಜ್ ಬಾಲ್ ತೆಗೆದುಕೊಂಡು ಬರಲು ಹೋಗಿ ಮಣ್ಣಿನಲ್ಲಿ ಸಿಲುಕಿಕೊಂಡು ಕಿರುಚಿದ.

ತಕ್ಷಣ ಅವನನ್ನು ಎತ್ತಿಕೊಳ್ಳಲು ನಾನು ಹೋದೆ. ಆದರೆ ಅವನು ನನ್ನ ಕೈಗೆ ಸಿಕ್ಕಿಲ್ಲ. ಇತ್ತ ನಾನು ನಿಂತಲ್ಲಿ ಮಣ್ಣು ಕುಸಿಯುತ್ತಿದ್ದು ಕಾಲು ಬೆಂಕಿಯಲ್ಲಿ ಬೇಯುತ್ತಿತ್ತು. ಈ ವೇಳೆ ಆ ಕಡೆಯಿಂದ ಎದ್ದು ಬಂದು ಮನೋಜ್ ನನ್ನನ್ನು ಹೇಗೋ ಮೇಲಕ್ಕೆತ್ತಿದ. ಎದ್ದ ಬಳಿಕ ರೋಡಿನ ವರೆಗೆ ನಡೆದುಕೊಂಡು ಬಂದು ಅಲ್ಲಿ ಇಬ್ಬರು ಅಣ್ಣಂದಿರನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗುವಂತೆ ಬೇಡಿಕೊಂಡೆವು.

Audio recording of Harshal tells an untold story

ಹಾಗಾಗಿ ಅವರು ನಮ್ಮನ್ನು ಆಸ್ಪತ್ರೆಗೆ ಸೇರಿಸಿದರು ಅಂತ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಗ ಹರ್ಷಲ್ ಘಟನೆಯ ಬಗ್ಗೆ ವಿವರಿಸಿದ್ದಾನೆ ಎನ್ನಲಾಗಿದೆ.

ಆಕ್ರಂದನ : ಇತ್ತ ಬೆಂಕಿಯ ಕೆನ್ನಾಲಿಗೆಗೆ ಬಲಿಯಾದ ಹರ್ಷಲ್ ಕುಟುಂಬದಲ್ಲಿ ಆಕ್ರಂದನ ಮುಗಿಲುಮುಟ್ಟಿದೆ. ಅಣ್ಣ ನನ್ನ ಜೊತೆ ಚೆನ್ನಾಗಿದ್ದ, ಚೆನ್ನಾಗಿ ಮಾತಾನಾಡುತ್ತಿದ್ದ. ಕ್ರಿಕೆಟ್ ಆಡಿಕೊಂಡು ಹೋಗಿ ಬರುತ್ತೇನೆ ಎಂದು ಹೇಳಿ ಹೋಗಿದ್ದರು. ಅಣ್ಣ ರನ್ನಿಂಗ್ ರೇಸ್‍ನಲ್ಲಿ ಫಸ್ಟ್ ಇದ್ದರು. ಇದೀಗ ಅಣ್ಣ ನಮ್ಮನ್ನ ಬಿಟ್ಟು ಹೋಗಿದ್ದಾರೆ.

ಅಣ್ಣ ನನಗೆ ಬೇಕು ಅಂತಾ ಹರ್ಷಲ್ ಸಹೋದರ ಪ್ರಜ್ವಲ್ ಬಿಕ್ಕಿ ಬಿಕ್ಕಿ ಅಳುತ್ತಿದ್ದಾನೆ. ಹರ್ಷಲ್ ಸಾವಿಗೆ ಆ ಘಟನಾ ಸ್ಥಳದಲ್ಲಿ ರಸಾಯನಿಕ ಸೋರಿಕೆಯಾಗುತ್ತಿರುವುದೇ ಕಾರಣವೆಂದು ಹರ್ಷಲ್ ಚಿಕ್ಕಮ್ಮ ಆರೋಪಿಸಿದ್ದಾರೆ. ಅಲ್ಲದೆ ಹರ್ಷಲ್ ಪ್ರತಿಭಾವಂತ ವಿದ್ಯಾರ್ಥಿಯಾಗಿದ್ದ ಓದು-ಆಟದಲ್ಲೂ ಮುಂದ್ದಿದ್ದ ಎಂದು ತಮ್ಮ ಅಳಲು ತೋಡಿಕೊಂಡರು. ಮಗನ ಸಾವಿನಿಂದ ನೊಂದ ಹರ್ಷಲ್ ತಾಯಿ ಜಾನ್ಸಿ ಅಸ್ವಸ್ಥಗೊಂಡಿದ್ದು, ಇದೀಗ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

Audio recording of Harshal tells an untold story

ಸಮಗ್ರ ವರದಿ: ಇನ್ನು ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಲಿನ್ಯ ನಿಯಂತ್ರಣ ಮಂಡಳಿ ತಾಂತ್ರಿಕ ಸಲಹಾ ಸಮಿತಿ ಸದಸ್ಯ ಡಾ.ಜಯಪ್ರಕಾಶ್ ಮೈಸೂರು ಜಿಲ್ಲಾಧಿಕಾರಿ ಡಿ.ರಂದೀಪ್ ಗೆ ಮಧ್ಯಂತರ ವರದಿ ಸಲ್ಲಿಸಿದ್ದಾರೆ. ಈಗಾಗಲೇ ಸ್ಥಳದಲ್ಲಿನ ಮಾದರಿ ಪಡೆದುಕೊಳ್ಳಲಾಗಿದೆ.ಕೆಮಿಕಲ್ ಅನಾಲಿಸಿಸ್‌ಗಾಗಿ ಎರಡು,ಮೂರು ಲ್ಯಾಬ್‌ಗಳಲ್ಲಿ ಪರೀಕ್ಷೆ ನಡೆಸಬೇಕಿದೆ.

ಮಣ್ಣಿನ ಸ್ಯಾಂಪಲ್ ಪರೀಕ್ಷೆಗಾಗಿ, ಬೆಂಗಳೂರು ಹಾಗೂ ಮೈಸೂರಿನ ಕೆ.ಎಸ್.ಪಿ.ಸಿ.ಬಿ ಲ್ಯಾಬೋರೇಟರಿ ಮತ್ತು ಮೈಸೂರಿನ ಗಣೇಶ್ ಕನ್ಸಲ್ಟೆನ್ಸಿ ಲ್ಯಾಬ್ ಗೆ ಕಳುಹಿಸಲಾಗಿದೆ. ವರದಿ ಕೈ ಸೇರಲು 4ರಿಂದ 5ದಿನಗಳು ಆಗಲಿದೆ. ನಂತರ ಕ್ರಮ ಜರುಗಿಸಲು ಸಾಧ್ಯ ಎಂದಿದ್ದಾರೆ.ಎಲ್ಲ ಲ್ಯಾಬ್‌ಗಳ ವರದಿ ಬರಲು ಇನ್ನೂ 5 ದಿನ ಕಾಯಬೇಕಾಗಿದೆ.

ಅಲ್ಲಿಯ ತನಕ ಘಟನೆಗೆ ನಿಖರ ಕಾರಣ ತಿಳಿಯಲು ಕಷ್ಟ ಎಂದು ತಿಳಿಸಿದ್ದಾರೆ ಎಂದು ಜಿಲ್ಲಾಧಿಕಾರಿ ಡಿ.ರಂದೀಪ್ ಮಾಧ್ಯಮಗಳಿಗೆ ತಿಳಿಸಿದ್ದಾರೆ.
ಇತ್ತ ಘಟನಾ ಸ್ಥಳಕ್ಕೆ ಮುಖಂಡರ ಭೇಟಿ

ಮೈಸೂರಿನಲ್ಲಿ ಬೆಂಕಿ ಕಾಣಿಸಿಕೊಳ್ಳುತ್ತಿರುವ ಶಾದನಹಳ್ಳಿ ಗ್ರಾಮಕ್ಕೆ ಶಾಸಕ ಜಿ.ಟಿ.ದೇವೇಗೌಡ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಬಳಿಕ ಮಾತನಾಡಿದ ಅವರು ''ಈ ರೀತಿಯ ಘಟನೆ ಆಗಬಾರದಿತ್ತು. ನಾನು ಅಧಿಕಾರಿಗಳಿಗೆ ಈಗಾಗಲೇ ಸೂಚನೆ ನೀಡಿದ್ದೇನೆ. ಬಾಲಕನ ಕುಟುಂಬಕ್ಕೆ ನೆರವು ನೀಡಬೇಕಾಗಿದೆ. ನಾನೂ ವೈಯಕ್ತಿಕವಾಗಿ 10 ಸಾವಿರ ನೀಡಿದ್ದೇನೆ.ಅದು ಅವರ ಮನೆಯ ಕಾರ್ಯಕ್ಕಷ್ಟೇ.
ಮುಂದೆ ಅವರಿಗೆ ಪರಿಹಾರದ ಬಗ್ಗೆ ಸಂಬಂಧಿಸಿದವರ ಜೊತೆ ಮಾತನಾಡುತ್ತೇನೆ'' ಎಂದರು.

''ಖಾಸಗಿ ಕಂಪನಿಗಳ ತ್ಯಾಜ್ಯದಿಂದ ಈ ರೀತಿ ದುರಂತ ಆಗಿದೆ. ಖಾಸಗಿ ಕಂಪನಿಯ ತ್ಯಾಜ್ಯ ನಿರ್ದಿಷ್ಟ ಸ್ಥಳದಲ್ಲಿ ಹಾಕುವಂತೆ ಸೂಚನೆ ನೀಡಬೇಕು'' ಎಂದರು. ಇತ್ತ ಮೃತ ಬಾಲಕನ ಮನೆಗೆ ತೆರಳಿದ ಅವರು ಅವನ ಕುಟುಂಬಕ್ಕೆ 1 ಲಕ್ಷ ನೆರವು ನೀಡಿದ್ದಾರೆ. ಜೊತೆಗಿದ್ದು ಗಾಯಗೊ೦ಡಿದ್ದ ಮತ್ತೋರ್ವ ಬಾಲಕ ಮನೋಜ್ ಶೀಘ್ರ ಗುಣಮುಖನಾಗಲಿ ಎ೦ದು ಶುಭ ಹಾರೈಸಿದ್ದಾರೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
The death of Harshal who was recently caught in the flames fuming from the ground in Shadalli has created a lot of controversies. An audio bit, recorded in the hospital just before the death of Harshal has surfaced.
Please Wait while comments are loading...