ಈ ಬಾರಿ ತಂಬಾಕು ಬೆಳೆಗಾರರ ಸಂಕಷ್ಟ ನೀಗುತ್ತಾ?

By: ಮೈಸೂರು ಪ್ರತಿನಿಧಿ
Subscribe to Oneindia Kannada

ಮೈಸೂರು: ಮೈಸೂರಿನ ಕೆ.ಆರ್.ನಗರ, ಹುಣಸೂರು, ಪಿರಿಯಾಪಟ್ಟಣ ವ್ಯಾಪ್ತಿಯಲ್ಲಿ ತಂಬಾಕು ಬೆಳೆ ಕೊಯ್ಲಿಗೆ ಬಂದಿದ್ದು, ಸೊಪ್ಪನ್ನು ಕೊಯ್ದು ತಂದು ಹದ ಮಾಡುವ ಕಾರ್ಯ ಇದೀಗ ಭರದಿಂದ ಸಾಗುತ್ತಿದೆ.

ತಂಬಾಕು ಕೊಯ್ಲು, ಹದ ಮಾಡುವುದು, ಸಂಗ್ರಹಣೆ ಹೀಗೆ ವಿವಿಧ ಕಾರ್ಯಗಳಲ್ಲಿ ನಿರತರಾಗಿರುವ ಬೆಳೆಗಾರರು ಉತ್ತಮ ದರ ಸಿಗಬಹುದು ಎಂಬ ನಿರೀಕ್ಷೆಯಲ್ಲಿದ್ದಾರೆ. ಲಕ್ಷಾಂತರ ರು. ಬಂಡವಾಳ ಸುರಿದಿರುವ ಬೆಳೆಗಾರರಲ್ಲಿ ಆತಂಕವೂ ಮನೆ ಮಾಡಿದೆ.

Are Tobacco farmers problems end this time?, Mysore

ತಂಬಾಕು ಹದ ಮಾಡುವ ಸಂದರ್ಭದಲ್ಲಿ ಬ್ಯಾರನ್ ಗೆ ಬೆಂಕಿ ತಾಗಿ ಅಗ್ನಿ ಅವಘಡಗಳು ಸಂಭವಿಸಿದ ನಿದರ್ಶನಗಳೂ ಇವೆ. ಬ್ಯಾರನ್ ಬಳಿ ಕಡ್ಡಿಗಳಿಗೆ ದಾರ ಹಾಕಿ, ತಂಬಾಕು ಸೊಪ್ಪಿನ ಎಲೆಗಳನ್ನು ಹೆಣೆದು ನೇತು ಹಾಕಿ ಬೆಂಕಿ ಕಾವುಕೊಟ್ಟು ಹದಗೊಳಿಸುವ ಕಾರ್ಯಗಳು ಅಲ್ಲಲ್ಲಿ ನಡೆಯುತ್ತಿವೆ.

ಕಳೆದ ವರ್ಷ ತಂಬಾಕು ಹದಗೊಳಿಸಲು ವಿವಿಧ ಜಾತಿ ಸೌದೆಗಳಿಗೆ ಟನ್ ಗೆ 2000 ದಿಂದ 2500 ರ ವರೆಗೆ ಇತ್ತಾದರೂ ಈ ಬಾರಿ ಅದು 4000 ದಿಂದ 4500 ರು.ಗಳಿಗೆ ಏರಿಕೆಯಾಗಿದೆ. ದುಬಾರಿ ಹಣ ನೀಡಿ, ಸೌದೆ ಖರೀದಿಸುವುದು ರೈತರಿಗೆ ದುಸ್ತರವಾಗಿದೆ. 13x13 ಅಳತೆಯ ತಂಬಾಕು ಹದಗೊಳಿಸಲು ಕನಿಷ್ಠ 70 ಸಾವಿರ ರು. ಬೇಕಾಗುತ್ತಿದೆ.

ಕಳೆದ ವರ್ಷ ಗಂಡಸರಿಗೆ ಕೂಲಿಯಾಗಿ 200 ರು. ಜೊತೆಗೆ ಊಟ ನೀಡುತ್ತಿದ್ದರು. ಈ ಬಾರಿ 350 ರು. ನೀಡಬೇಕಾಗಿದೆ. ಒಟ್ಟಾರೆ ಒಬ್ಬ ಕೂಲಿ ಆಳಿಗೆ ದಿನಕ್ಕೆ ಕನಿಷ್ಠ 500 ರು. ಖರ್ಚು ಬರುತ್ತಿದೆ.

ಈ ಬಾರಿ ಕೆಲವು ಕಾರ್ಮಿಕರು ಮೂರು ಪಾಳಿಯಲ್ಲಿ (6ರಿಂದ 10, 10ರಿಂದ 2, 2ರಿಂದ 6) ಕೆಲಸ ಮಾಡುತ್ತಿದ್ದಾರೆ. ಇನ್ನೂ ಕೆಲವರು ಬ್ಯಾರನ್ ಗೆ ತಂಬಾಕು ಎಲೆಗಳನ್ನು ಮುರಿದು ಕಟ್ಟಲು ಗುತ್ತಿಗೆ ಆಧಾರದಲ್ಲಿಯೂ ಕಾರ್ಯ ನಿರ್ವಹಿಸುತ್ತಿದ್ದಾರೆ.

Are Tobacco farmers problems end this time?, Mysore

ಸಿಂಗಲ್ ಬ್ಯಾರನ್ ಲೈಸನ್ಸ್ ಹೊಂದಿರುವ ರೈತರಿಗೆ ಒಂದು ಎಕರೆಯಲ್ಲಿ ತಂಬಾಕು ಬೆಳೆಯಲು 10 ಸಾವಿರ ರಸಗೊಬ್ಬರಕ್ಕಾಗಿ ಖರ್ಚಾದರೆ, ಕೂಲಿಗೆ 20 ಸಾವಿರ, ಸೌದೆಗೆ 30 ಸಾವಿರ, ಇನ್ನಿತರೆ ಕೆಲಸಗಳಿಗೆ 15 ಸಾವಿರ ಹೀಗೆ ಒಟ್ಟು 60 ಸಾವಿರ ಬೇಕಾಗುತ್ತದೆ.

ಒಂದು ಎಕರೆಯಲ್ಲಿ ಉತ್ತಮ ಇಳುವರಿ ಬಂದರೆ 700 ರಿಂದ 800 ಕೆ.ಜಿ. ತಂಬಾಕು ಬೆಳೆಯಬಹುದು. ಸರಾಸರಿ ಒಂದು ಕೆ.ಜಿ. ತಂಬಾಕು ಬೆಳೆಯಲು ರೈತರಿಗೆ 100 ರಿಂದ 120 ರು. ಖರ್ಚು ತಗಲುತ್ತದೆ. 2015-16ನೇ ಸಾಲಿನಲ್ಲಿ ತಂಬಾಕಿಗೆ ಮಾರುಕಟ್ಟೆಯಲ್ಲಿ 120 ರು. ಮಾತ್ರ ಸಿಕ್ಕಿದೆ. ಹೀಗಾದರೆ ಬೆಳೆಗಾರ ಬದುಕುವುದಾದರೂ ಹೇಗೆ, ಮಾಡಿದ ಸಾಲ ತೀರಿಸುವುದಾದರೂ ಹೇಗೆ ಎಂಬ ಪ್ರಶ್ನೆಗಳು ರೈತರನ್ನು ಆತಂಕಕ್ಕೀಡು ಮಾಡಿವೆ.

ಪ್ರಸಕ್ತ ವರ್ಷ ತಂಬಾಕಿಗೆ ಉತ್ತಮ ಬೆಲೆ ಸಿಕ್ಕರೆ ಈಗಾಗಲೇ ಲಕ್ಷಾಂತರ ರು. ಸಾಲ ಮಾಡಿ ಬೆಳೆ ಬೆಳೆದ ರೈತ ನೆಮ್ಮದಿಯಿಂದ ಉಸಿರಾಡಬಹುದೇನೋ?

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Tobacco harvesting time around Mysore district. Post harvesting process happening in tremendous speed. But, farmers worrying about tobacco market price. Are Tobacco farmers problems end this time?
Please Wait while comments are loading...