ರಜೆ ಕಳೆಯಲು ಬಂದ ಇಂಜಿನಿಯರ್ ಕಲ್ಲಂಗಡಿ ಬೆಳೆದರು!

By: ಬಿ.ಎಂ.ಲವಕುಮಾರ್
Subscribe to Oneindia Kannada

ಮೈಸೂರು, ಜೂನ್ 06 : ಒಂದಷ್ಟು ಬಂಡವಾಳ, ಮತ್ತೊಂದಷ್ಟು ಶ್ರಮ ಮತ್ತು ಆತ್ಮವಿಶ್ವಾಸವಿದ್ದರೆ ಕೃಷಿಯಲ್ಲೂ ಯಶಸ್ಸು ಕಾಣಬಹುದು ಎಂಬುದನ್ನು ಕೆ.ಆರ್.ನಗರ ತಾಲೂಕಿನ ಹೊಸೂರು ಗ್ರಾಮದಲ್ಲಿ ಎಚ್.ಸಿ.ಮಧುಸೂದನ್ ಎಂಬ ಇಂಜಿನಿಯರ್‌ ತೋರಿಸಿಕೊಟ್ಟಿದ್ದಾರೆ.

ಇಷ್ಟಕ್ಕೂ ಮಧುಸೂದನ್ ಅವರು ಕೃಷಿ ಕಾರ್ಯ ಕೈಗೊಂಡಿದ್ದು ಕೂಡ ಆಕಸ್ಮಿಕ. ಮೂಲತಃ ಹಾಸನ ಜಿಲ್ಲೆಯ ಹೊಳೆನರಸೀಪುರದ ಮಧುಸೂದನ್ ಸಿಂಗಾಪುರದಲ್ಲಿ ಇಂಜಿನಿಯರ್ ಆಗಿ ಕೆಲಸ ಮಾಡುತ್ತಿದ್ದಾರೆ. ಇತ್ತೀಚೆಗೆ ನಾಲ್ಕು ತಿಂಗಳ ರಜೆಯಲ್ಲಿ ಊರಿಗೆ ಬಂದಿದ್ದರು. ಹೀಗೆ ಬಂದವರಿಗೆ ಒಂದಷ್ಟು ದಿನ ಓಡಾಡಿದ ಮೇಲೆ ಸುಮ್ಮನೆ ದಿನ ಕಳೆಯುವುದು ಬೇಸರ ಎನಿಸಿತು. ಆದ್ದರಿಂದ ಏನಾದರೂ ಮಾಡೋಣ ಎಂದು ಹೊರಟವರ ಕಣ್ಮುಂದೆ ಬಂದಿದ್ದು ಕಲ್ಲಂಗಡಿ ಕೃಷಿ. [ಬಿಸಿಲ ನಾಡಲ್ಲಿ ಅರಳುತ್ತಿರುವ ಜರ್ಬೆರಾ ಹೂಗಳು!]

farmer

ಕಲ್ಲಂಗಡಿ ಅಲ್ಪಾವಧಿ ಬೆಳೆಯಾಗಿರುವುದರಿಂದ ಅದನ್ನು ಬೆಳೆದರೆ ಸಮಯವನ್ನು ವ್ಯರ್ಥ ಮಾಡಿದಂತೆ ಆಗುವುದಿಲ್ಲ ಜತೆಗೆ ಒಂದಷ್ಟು ಆದಾಯವೂ ಬರುತ್ತದೆ ಎಂಬ ಆಲೋಚನೆ ಮಾಡಿದ ಅವರು ಕಲ್ಲಂಗಡಿ ಕೃಷಿ ಮಾಡಲು ಮುಂದಾದರು. ಇದಕ್ಕೆ ಪತ್ನಿಯೂ ಸಹಕಾರ ಕೊಟ್ಟರು. [ನೇಪಥ್ಯಕ್ಕೆ ಸರಿದ ಕೊಡಗಿನ ಜೇನು ಉತ್ಪಾದನೆ]

ಕೆ.ಆರ್.ನಗರ ತಾಲೂಕಿನ ಹೊಸೂರಿನಲ್ಲಿ 3 ಎಕರೆ ಭೂಮಿಯನ್ನು ಗುತ್ತಿಗೆ ಪಡೆದ ಅವರು ಕೆಲಸ ಶುರು ಮಾಡಿಯೇ ಬಿಟ್ಟರು. ಒಂದಷ್ಟು ಅನುಭವಿಗಳ ಮಾರ್ಗದರ್ಶನ, ಇನ್ನೊಂದಷ್ಟು ಮಾಹಿತಿ ಪಡೆದು ಕೃಷಿ ಆರಂಭಿಸಿದರು. [ಕೃಷಿಯನ್ನೇ ಬದುಕಾಗಿಸಿಕೊಂಡ ಮೈಸೂರಿನ ಎಂ.ಕಾಂ ಪದವೀಧರೆ]

ಕಲ್ಲಂಗಡಿ ಕೃಷಿಗಿಳಿದ ಮಧುಸೂದನ್ ಅವರನ್ನು ನೋಡಿದ ಕೆಲವರು ಪರವಾಗಿಲ್ಲ ಎಂದು ಬೆನ್ನುತಟ್ಟಿದರೆ ಮತ್ತೆ ಕೆಲವರು ರಜೆಯನ್ನು ಎಂಜಾಯ್ ಮಾಡೋದು ಬಿಟ್ಟು ಕೈಸುಟ್ಟುಕೊಳ್ಳೋಕೆ ಕೃಷಿ ಮಾಡುತ್ತಿದ್ದಾನೆ ಎಂದು ಮೂಗು ಮುರಿದರು. ಆದರೆ, ತುಂಬಾ ಆಸಕ್ತಿಯಿಂದ ಕೃಷಿ ಕೈಗೊಂಡ ಅವರನ್ನು ಅದು ಕೈಬಿಡಲಿಲ್ಲ.

ಇದೀಗ ಬಳ್ಳಿ ಹುಲುಸಾಗಿ ಬೆಳೆದು ಹೂಬಿಟ್ಟು ಕಾಯಿಯಾಗುತ್ತಿದೆ. ಅವರ ಶ್ರಮಕ್ಕೆ ಪ್ರತಿಫಲ ದೊರೆಯತೊಡಗಿದೆ. ಮೂರು ಎಕರೆಯಲ್ಲಿ ಸುಮಾರು 20 ಟನ್ ಕಲ್ಲಂಗಡಿ ಇಳುವರಿ ಬರುವ ನೀರಿಕ್ಷೆಯಿದ್ದು ಈಗ ಕಲ್ಲಂಗಡಿ ನಾಟಿ ಮಾಡಿ 55ದಿನಗಳಾಗಿವೆ. ಇನ್ನು ಸುಮಾರು 15-20 ದಿನಗಳಲ್ಲಿ ಕಟಾವು ಮಾಡಬಹುದಾಗಿದೆ. ಕೆಜಿಗೆ 12 ರಿಂದ14 ರೂಪಾಯಿ ಬೆಲೆ ದೊರೆತರೆ ಖರ್ಚು ಕಳೆದು ಸುಮಾರು ಒಂದು ಲಕ್ಷ ರೂ ಉಳಿಯುವ ಲೆಕ್ಕಾಚಾರ ಅವರದ್ದಾಗಿದೆ.

ಈಗ ಕಲ್ಲಂಗಡಿ ಕೈಹಿಡಿದಿದ್ದು ಮತ್ತೆ ಅದನ್ನೇ ಬೆಳೆಯುವ ಬದಲು ಮುಂದಿನ ದಿನಗಳಲ್ಲಿ ಕಡಿಮೆ ಖರ್ಚು ಮತ್ತು ಕಡಿಮೆ ಅವಧಿಯಲ್ಲಿ ಹೂಗಳನ್ನು ಬೆಳೆಯುವ ಬಗ್ಗೆ ಆಲೋಚನೆ ಮಾಡಿದ್ದಾರೆ. ಉದ್ಯೋಗಕ್ಕಾಗಿ ಹುಡುಕಾಡುತ್ತಾ ಸಮಯ ಹಾಳು ಮಾಡುವ ಬದಲು ಶ್ರಮವಹಿಸಿ ಏನಾದರೊಂದು ಕೆಲಸ ಮಾಡಿದರೆ ಅದು ಕೈಹಿಡಿಯುತ್ತೆ ಎಂಬುದಕ್ಕೆ ಮಧುಸೂದನ್ ಸಾಕ್ಷಿಯಾಗಿದ್ದಾರೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
An engineer H.C.Madhusudhan turns into a successful farmer. Madhusudhan cultivated watermelon in 3 acre land in K.R.Nagar (Krishnarajanagara), Mysuru.
Please Wait while comments are loading...