ನೋಟು ನಿಷೇಧದಿಂದ ಮೈಲಾಕ್ ಗೆ ಕೋಟ್ಯಂತರ ರುಪಾಯಿ ಆದಾಯ!

By: ಮೈಸೂರು ಪ್ರತಿನಿಧಿ
Subscribe to Oneindia Kannada

ಮೈಸೂರು, ಡಿಸೆಂಬರ್ 10: ಐನೂರು ಮತ್ತು ಸಾವಿರ ನೋಟಗಳು ಅಮಾನ್ಯವಾದ ಬಳಿಕ ಮೈಸೂರಿನ ಅರಗು ಮತ್ತು ಬಣ್ಣದ ಕಾರ್ಖಾನೆಗೆ ಕೋಟ್ಯಂತರ ರುಪಾಯಿ ಆದಾಯ ಹರಿದು ಬಂದಿದೆ. ಮೊದಲೆಲ್ಲ ಕೇವಲ ಚುನಾವಣೆಗಷ್ಟೆ ಸೀಮಿತವಾಗಿ ಮತದಾರರ ಬೆರಳಿಗೆ ಹಾಕಲು ಉಪಯೋಗಿಸುತ್ತಿದ್ದ ಶಾಯಿಯು ಈಗ ನೋಟು ವಿನಿಮಯದಲ್ಲೂ ಮಹತ್ತರ ಪಾತ್ರ ವಹಿಸುವುದರ ಜೊತೆಗೆ ಗಮನ ಸೆಳೆದಿದೆ.

ನೋಟು ವಿನಿಮಯದಲ್ಲಿ ಆಗುತ್ತಿರುವ ವಂಚನೆಯನ್ನು ತಡೆಯಲು ಗ್ರಾಹಕರಿಗೆ ಶಾಯಿ ಹಾಕುವ ವ್ಯವಸ್ಥೆಯನ್ನು ಜಾರಿಗೆ ತಂದಿದ್ದರಿಂದ ಸುಮಾರು 1.40 ಕೋಟಿ ರುಪಾಯಿಯ ದಾಖಲೆ ಆದಾಯ ಬಂದಿದೆ. ಹಾಗೆ ನೋಡಿದರೆ ಮೈಲಾಕ್ ನ ಶಾಯಿಗೆ ದೇಶ ಮಾತ್ರವಲ್ಲದೆ, ವಿದೇಶದಲ್ಲಿಯೂ ಬೇಡಿಕೆಯಿದೆ.[ಇಂಕು ತಯಾರಿಸಲು ಆರ್ ಬಿಐ ನೀಡಿದ ಹಣವೆಷ್ಟು?]

After Note Ban Mysuru paints income increased

ಹಲವು ದೇಶಗಳು ಚುನಾವಣೆಗೆ ಬೇಕಾದ ಶಾಹಿಯನ್ನು ಮೈಸೂರಿನಿಂದಲೇ ಆಮದು ಮಾಡಿಕೊಳ್ಳುತ್ತಿವೆ. ಇದೀಗ ನೋಟು ವಿನಿಮಯದಲ್ಲೂ ಪ್ರಮುಖ ಪಾತ್ರ ವಹಿಸಿರುವುದು ಕಂಡು ಬಂದಿದೆ. 1937ರಲ್ಲಿ ನಾಲ್ವಡಿ ಕೃಷ್ಣರಾಜ ಒಡೆಯರ್ ಸ್ಥಾಪಿಸಿದ ಈ ಕಾರ್ಖಾನೆ ಆರಂಭದ ದಿನಗಳಲ್ಲಿ ವೈವಿಧ್ಯಮಯ ಬಣ್ಣಗಳ ತಯಾರಿಕೆಗಷ್ಟೇ ಸೀಮಿತವಾಗಿತ್ತು. ಸ್ವಾತಂತ್ರ್ಯ ನಂತರ ಇದು ರಾಜ್ಯ ಸರಕಾರದ ಅಧೀನಕ್ಕೆ ಒಳಪಟ್ಟಿತು.

1951, 1957ರಲ್ಲಿ ಸಾರ್ವತ್ರಿಕ ಚುನಾವಣೆ ನಡೆಯಿತಾದರೂ ಇದರಲ್ಲಿ ಒಬ್ಬರೇ ಹಲವು ಬಾರಿ ಮತ ಚಲಾಯಿಸಿದ ಆರೋಪ ಕೇಳಿ ಬಂದಿತ್ತು. ಈ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಕೇಂದ್ರ ಚುನಾವಣಾ ಆಯೋಗ ಮತದಾರರ ಬೆರಳಿಗೆ ಕಪ್ಪು ಮಸಿ ಅಥವಾ ಶಾಯಿ ಹಾಕುವ ನಿರ್ಧಾರ ಕೈಗೊಂಡಿತು.

ಈ ನಿರ್ಧಾರದಿಂದ ಮೈಸೂರಿನ ಬಣ್ಣ ಮತ್ತು ಅರಗು ಕಾರ್ಖಾನೆಯ ಅದೃಷ್ಟದ ಬಾಗಿಲು ತಟ್ಟಿದಂತಾಯಿತು. ಆ ನಂತರ ಅಳಿಸಲಾಗದ ಶಾಯಿ ತಯಾರಿಸುವ ಜವಾಬ್ದಾರಿ ಹೊತ್ತ ಕಾರ್ಖಾನೆ 1962ರಲ್ಲಿ ನಡೆದ ಸಾರ್ವತ್ರಿಕ ಚುನಾವಣೆಗೆ ಶಾಯಿ ಪೂರೈಸಿ, ಚುನಾವಣೆ ಇತಿಹಾಸದಲ್ಲಿ ಮೈಲುಗಲ್ಲು ಸ್ಥಾಪಿಸಿತು.[ಶಾಹಿ ತಯಾರಿಸಲು ಮೈಸೂರು ಪೈಂಟ್ಸ್ ಗೆ ಸೂಚನೆ]

After Note Ban Mysuru paints income increased

ಆಗಿನಿಂದ ದೇಶದ ಯಾವುದೇ ಭಾಗದಲ್ಲಿ ಚುನಾವಣೆ ನಡೆದರೂ ಮೈಸೂರಿನಿಂದಲೇ ಕಪ್ಪು ಶಾಯಿಯನ್ನು ತರಿಸಿಕೊಳ್ಳುವ ಪರಿಪಾಠ ಆರಂಭವಾಯಿತು. ಉತ್ಪಾದನೆ ಆರಂಭಿಸಿದಂದಿನಿಂದ ಇಂದಿನವರೆಗೂ ಕಾರ್ಖಾನೆ ಗುಣಮಟ್ಟದಲ್ಲಿ ಯಾವುದೇ ರಾಜಿ ಮಾಡಿಕೊಂಡಿಲ್ಲ.
ಈಗಲೂ ಈ ಕಪ್ಪು ಶಾಯಿ ಉತ್ಕೃಷ್ಟ ಗುಣಮಟ್ಟದಲ್ಲಿ ತಯಾರಾಗುತ್ತಿದೆ.

ಈ ಶಾಯಿ ಕನಿಷ್ಠ 48 ಗಂಟೆಗಳಿಂದ 30 ದಿನಗಳವರೆಗೆ ಅಚ್ಚಳಿಯದೆ ಉಳಿಯುತ್ತದೆ. ಇದು ವ್ಯಕ್ತಿಯ ಆರೋಗ್ಯಕ್ಕೆ ಹಾನಿಕರವಲ್ಲ ಎಂದು ರಾಷ್ಟ್ರೀಯ ಭೌತಿಕ ಪ್ರಯೋಗಾಲಯ ದೃಢಪಡಿಸಿದೆ. 5 ಎಂಎಲ್ ಮತ್ತು 10 ಎಂಎಲ್ ನ ಬಾಟಲಿಗಳಲ್ಲಿ ತುಂಬಿ ಕಳಿಸಲಾಗುತ್ತಿದೆ. 5 ಎಂಎಲ್ ಬಾಟಲಿಯಲ್ಲಿ 500 ಮತ್ತು 10 ಎಂಎಲ್ ಬಾಟಲಿಯಲ್ಲಿ 800 ಮಂದಿಯ ಕೈಗೆ ಶಾಯಿ ಹಾಕಬಹುದಂತೆ.[ಮಂಕುಬೂದಿ ಎರಚಲು ಸಾಧ್ಯವಿಲ್ಲದ ಇಂಕು!]

ದೇಶದಾದ್ಯಂತ ವಿವಿಧ ಬ್ಯಾಂಕ್ ಗಳಿಗೆ 1.20 ಲಕ್ಷ ಬಾಟಲಿಗಳನ್ನು ಕಳುಹಿಸಿಕೊಡಲಾಗಿದೆ. ಒಂದೇ ದಿನದಲ್ಲಿ 5 ಎಂಎಲ್ ಸುಮಾರು 22 ಸಾವಿರ ಬಾಟಲಿಗಳು ಮೈಸೂರು ಅರಗು ಮತ್ತು ಬಣ್ಣದ ಕಾರ್ಖಾನೆ (ಮೈಲಾಕ್)ಯಿಂದ ಸಾಗಾಟವಾಗಿರುವುದು ದಾಖಲೆಯಾಗಿದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
After the note ban decision by central government Mysuru Paints and Varnish company income increased. Because inc which produced by the company using in Banks across the country.
Please Wait while comments are loading...