ಮೈಸೂರು: ಕಾಡಾನೆಗೆ ಹೆದರಿ ಮರದ ಮೇಲೆ ಮನೆ ಮಾಡಿದ ಮಹಿಳೆ

Posted By: ಮೈಸೂರು ಪ್ರತಿನಿಧಿ
Subscribe to Oneindia Kannada

ಮೈಸೂರು, ಆಗಸ್ಟ್ 29: ಗಂಡನ ಕಳೆದುಕೊಂಡು ಕೂಲಿ ಮಾಡಿ ಬದುಕುತ್ತಿರುವ ಆದಿವಾಸಿ ಮಹಿಳೆಯೊಬ್ಬರು ತನ್ನಿಬ್ಬರು ಮಕ್ಕಳನ್ನು ಆಶ್ರಮಶಾಲೆಯಲ್ಲಿ ಬಿಟ್ಟು ತಾನು ಕಾಡಾನೆಗಳಿಂದ ತಪ್ಪಿಸಿಕೊಳ್ಳುವ ಸಲುವಾಗಿ ಮರದ ಮೇಲೆ ಅಟ್ಟಳಿಗೆ ನಿರ್ಮಿಸಿಕೊಂಡು ಜೀವನ ಸಾಗಿಸುತ್ತಿದ್ದಾರೆ.

ಮೈಸೂರು ಜಿಲ್ಲೆಯ ಪಿರಿಯಾಪಟ್ಟಣ ತಾಲೂಕಿನ ದೊಡ್ಡಹರವೆ ಮೀಸಲು ಅರಣ್ಯಕ್ಕೆ ಸೇರಿದ ಕಾಡಂಚಿನಲ್ಲಿ ಕರಡಿಬೊಕ್ಕೆ ಗಿರಿಜನ ಹಾಡಿಯ ವಿಧವೆ ಲತಾ ಕಾಡಾನೆ ದಾಳಿಯಿಂದ ತಪ್ಪಿಸಿಕೊಳ್ಳೋದಕ್ಕೆ ಮಾಡಿದ ಉಪಾಯ ಇದು.

A tribal woman in Mysuru built house on the tree to protect from elephant attack

ಕರಡಿಬೊಕ್ಕೆ ಗಿರಿಜನ ಹಾಡಿಯಲ್ಲಿ 22 ಕುಟುಂಬಗಳಿದ್ದು ಇವರೆಲ್ಲ ಜೇನುಕುರುಬ ಜನಾಂಗಕ್ಕೆ ಸೇರಿದವರಾಗಿದ್ದು, ಕಳೆದ 65 ವರ್ಷಗಳಿಂದ ಜೋಪಡಿ ಹಾಕಿಕೊಂಡು ಅದರ ಸುತ್ತಮುತ್ತ ಖಾಲಿ ಜಾಗಗಳಲ್ಲಿ ಗೆಡ್ಡೆ ಗೆಣಸುಗಳನ್ನು ಬೆಳೆಸಿಕೊಂಡು ಜೀವನ ಸಾಗಿಸುತ್ತಿದ್ದಾರೆ.

ಕೊಡಗಿನಲ್ಲಿ ಕೃಷಿಕರಿಗೆ ಸಂಕಷ್ಟ ತಂದೊಡ್ಡುತ್ತಿರುವ ಕಾಡಾನೆಗಳು

ಈ ಮಧ್ಯೆ ಕಳೆದ ಕೆಲವು ಸಮಯಗಳಿಂದ ಕಾಡಾನೆಗಳು ಹಾಡಿಗೆ ನುಗ್ಗಿ ಮನೆಗಳನ್ನು ನಾಶ ಮಾಡಿದ್ದಲ್ಲದೆ, ಅವರು ಬೆಳೆಸಿದ ಗೆಡ್ಡೆ ಗೆಣಸು ತಿಂದು ಹಾಕಿದ್ದವು. ಆ ಸಮಯದಲ್ಲಿ ಗುಡಿಸಲಲ್ಲಿ ಒಬ್ಬರೇ ಇದ್ದ ಲತಾ ಮನೆಯಿಂದ ಹೊರ ಓಡಿ ಜೀವ ರಕ್ಷಿಸಿಕೊಂಡಿದ್ದರು.

ಆವತ್ತು ಆಕೆಯ ಗುಡಿಸಲನ್ನು ಕಾಡಾನೆ ಧ್ವಂಸಗೊಳಿಸಿತ್ತು. ಇದಾದ ಬಳಿಕ ಜೀವಭಯದಲ್ಲಿರುವ ಲತಾ ಪಕ್ಕದ ಮರದಲ್ಲೊಂದು ಅಟ್ಟಳಿಗೆ(ಜೋಪಡಿ) ನಿರ್ಮಿಸಿಕೊಂಡು ಅದರಲ್ಲಿಯೇ ರಾತ್ರಿ ಕಳೆಯುತ್ತಿದ್ದಾರೆ.

A tribal woman in Mysuru built house on the tree to protect from elephant attack

ಲತಾ ಅವರ ಪತಿ ಗಣೇಶ್ ಕೆಲವು ವರ್ಷಗಳ ಹಿಂದೆ ಮೃತಪಟ್ಟಿದ್ದು, ಇಬ್ಬರು ಚಿಕ್ಕಮಕ್ಕಳು ಅಬ್ಬಳತಿ ಗಿರಿಜನ ಆಶ್ರಮ ಶಾಲೆಯಲ್ಲಿ ಓದುತ್ತಿದ್ದಾರೆ. ಈ ಎರಡು ಮಕ್ಕಳು ಅಲ್ಲಿಯೇ ಇರುವುದರಿಂದ ಲತಾ ಮಾತ್ರ ತನ್ನ ಹಾಡಿಯಂಚಿನ ಪುಟ್ಟ ಗುಡಿಸಲಲ್ಲಿ ಜೀವನ ಸಾಗಿಸುತ್ತಿದ್ದಳು. ಆದರೆ ಕಾಡಾನೆ ಮನೆಯನ್ನು ಜಖಂ ಮಾಡಿದ್ದರಿಂದ ಮರವೇ ಆಸರೆಯಾಗಿದೆ.

ಮಾವುತ - ಕಾವಾಡಿ ಕಾದಾಟದಲ್ಲಿ ಬಡವಾದ ಗಜಪಡೆ ಕ್ಯಾಪ್ಟನ್ ಅರ್ಜುನ

ಕೂಲಿ ಕೆಲಸ ಮಾಡುವ ಲತಾ ಹಗಲು ಕೂಲಿಗೆ ಹೋದ ಮನೆಯಲ್ಲೇ ಊಟ ಮಾಡಿ ಬಂದು ರಾತ್ರಿಯಾಗುವ ಮುನ್ನ ಕೆಲಸ ಮುಗಿಸಿಕೊಂಡು ಮರವೇರುತ್ತಿದ್ದಾರೆ. ಈಕೆಗೆ ಪಡಿತರ ಚೀಟಿ ಇಲ್ಲ. ಇರುವ ಜಾಗಕ್ಕೆ ಹಕ್ಕುಪತ್ರವೂ ಇಲ್ಲ ಹೀಗಾಗಿ ಸರ್ಕಾರದ ಸೌಲಭ್ಯ ಮರೀಚಿಕೆಯಾಗಿದೆ.

ಹಾಡಿ ಮತ್ತು ಅರಣ್ಯವನ್ನು ಒಳಗೊಂಡಂತೆ ಕಂದಕ ಮತ್ತು ಸೋಲಾರ್ ಬೇಲಿಯನ್ನು ನಿರ್ಮಿಸದೆ ಇರುವುದರಿಂದ ಕಾಡು ಪ್ರಾಣಿಗಳು ಬರುತ್ತಿವೆ ಎನ್ನುವದು ಹಾಡಿವಾಸಿಗಳ ಆರೋಪವಾಗಿದೆ.

ಇನ್ನಾದರೂ ಇತ್ತ ಸಂಬಂಧಿಸಿದವರು ಗಮನಹರಿಸಿ ಬಡ ಮಹಿಳೆಗೊಂದು ಸೂರು ಕಲ್ಪಿಸಿಕೊಡುವ ಕೆಲಸವನ್ನು ಮಾಡಬೇಕಿದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
A tribal woman in Piriyapatna in Mysuru has built a house on the tree to protect herself from wild elephant attack.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ