ಸೆ.15ರಂದು ಮೈಸೂರು ಅರಮನೆಯಲ್ಲಿ ರತ್ನಖಚಿತ ಸಿಂಹಾಸನ ಜೋಡಣೆ

Posted By: ಬಿ.ಎಂ.ಲವಕುಮಾರ್
Subscribe to Oneindia Kannada

ಮೈಸೂರು, ಸೆಪ್ಟೆಂಬರ್ 14: ಮೈಸೂರಿನಲ್ಲಿ ದಸರಾ ಸಂಭ್ರಮ ದಿನದಿಂದ ದಿನಕ್ಕೆ ವೇಗ ಹೆಚ್ಚಿಸಿಕೊಳ್ಳುತ್ತಿದೆ. ಎಲ್ಲೆಡೆ ದಸರಾ ಕಳೆ ಕಾಣಿಸಿಕೊಳ್ಳತೊಡಗಿದೆ. ಸಾಮಾನ್ಯವಾಗಿ ಅರಮನೆಗೆ ಗಜಪಡೆ ಬಂತೆಂದರೆ ದಸರಾ ಆರಂಭವಾಯಿತು ಎಂದರ್ಥ.

ಮೇಲ್ನೋಟಕ್ಕೆ ವಿಜಯದಶಮಿಯಂದು ನಡೆಯುವ ಜಂಬೂಸವಾರಿ ಎದ್ದು ಕಾಣುತ್ತದೆಯಾದರೂ ನಿಜವಾಗಿಯೂ ಮೈಸೂರು ದಸರಾ ಅಂದ್ರೆ ಬರೀ ಜಂಬೂಸವಾರಿವೊಂದೇ ಅಲ್ಲದೆ, ಅದರ ಹಿಂದೆ ಹತ್ತು ಹಲವು ವಿಶೇಷತೆಗಳಿರುವುದನ್ನು ಕಾಣಬಹುದು.

ಮೈಸೂರು ಸಿಲ್ಕ್ ಸೀರೆ ಹಿಂದಿದೆ ಕುತೂಹಲಕಾರಿ ಕಥೆ

ಇನ್ನು ದಸರಾ ಸಮಯದಲ್ಲಿ ಅರಮನೆಯಂತೂ ವಿದ್ಯುದ್ದೀಪದ ರಂಗಿನಲ್ಲಿ ಝಗಮಗಿಸುತ್ತಾ ಧರೆಗಿಳಿದ ಇಂದ್ರನ ಅಮರಾವತಿಯಂತೆ ಕಂಗೊಳಿಸುತ್ತದೆ. ದಸರಾ ಸಂದರ್ಭ ಇಲ್ಲಿ ನಡೆಯುವ ಖಾಸಗಿ ದರ್ಭಾರ್ ಗತದಿನಗಳನ್ನು ಕಣ್ಮುಂದೆ ತರುತ್ತದೆ.

ಮೈಸೂರು ದಸರಾ: ಇಲ್ಲಿದೆ ಕಾರ್ಯಕ್ರಮದ ಪಟ್ಟಿ

ದಸರಾದಲ್ಲಿ ನಡೆಯುವ ಇತರೆ ಸಾಂಪ್ರದಾಯಿಕ ಕಾರ್ಯಕ್ರಮಗಳ ನಡುವೆ ಭಿನ್ನ ಮತ್ತು ಐತಿಹಾಸಿಕ ಕಾರ್ಯಕ್ರಮವಾಗಿರುವ ಖಾಸಗಿ ದರ್ಭಾರ್ ಅಂದಿನ ರಾಜಮನೆತನದ ಪ್ರತೀಕವೂ ಹೌದು. ಇಂತಹ ಸಿಂಹಾಸನದ ಮೇಲೆ ಹಲವರು ಆಸೀನರಾಗಿ ದರ್ಭಾರ್ ನಡೆಸಿರುವುದನ್ನು ಇತಿಹಾಸದಲ್ಲಿ ಕಾಣಬಹುದಾಗಿದೆ. ಈ ಖಾಸಗಿ ದರ್ಬಾರ್ ಗೆ ಸಿಂಹಾಸನವೇ ಪ್ರಮುಖ ಆಕರ್ಷಣೆಯಾಗಿದೆ.

ಸಿಂಹಾಸನ ಪಾಂಡವರ ಕಾಲದ್ದಂತೆ!

ಸಿಂಹಾಸನ ಪಾಂಡವರ ಕಾಲದ್ದಂತೆ!

ಸಿಂಹಾಸನದ ಬಗ್ಗೆ ಹೇಳುವುದಾದರೆ ಇದರ ಹಿಂದೆ ಐತಿಹಾಸಿಕ ಕಥೆಯೂ ಮಿಳಿತಗೊಂಡಿರುವುದನ್ನು ಕಾಣಬಹುದಾಗಿದೆ. ಸಿಂಹಾಸನವು ಪಾಂಡವರ ಕಾಲದೆನ್ನಲಾಗಿದ್ದು, ಆ ಕಾಲದಲ್ಲಿ ಕಂಪುಲ ರಾಜನು ಇದನ್ನು ತಂದು ಪೆನಗೊಂಡದಲ್ಲಿ ಹೂತಿಟ್ಟಿದ್ದಂತೆ. 1338ರಲ್ಲಿ ಮಹರ್ಷಿ ವಿದ್ಯಾರಣ್ಯರು ಧ್ಯಾನದೃಷ್ಟಿಯಿಂದ ಇದನ್ನು ಅರಿತು ವಿಜಯನಗರದ ಚಕ್ರಾಧಿಪತ್ಯದ ಸ್ಥಾಪಕ ಹರಿಹರನಿಗೆ ತಿಳಿಸಿದರೆಂತೆ ಆ ನಂತರ ಹೊರತೆಗೆದು 150 ವರ್ಷಗಳ ಕಾಲ ಆನೆಗೊಂದಿಯಲ್ಲಿ ಅಲಂಕರಿಸಿದರೆಂದೂ, ಬಳಿಕ ವಿಜಯನಗರದ ಅವನತಿಯ ವೇಳೆಗೆ ಶ್ರೀರಂಗಪಟ್ಟಣದಲ್ಲಿದ್ದ ವಿಜಯನಗರದ ರಾಯಬಾರಿಯ ಅರಮನೆಗೆ ಸಾಗಿಸಲಾಯಿತೆಂದು ಹೇಳಲಾಗಿದೆ.

ಆ ಬಳಿಕ 1609ರಲ್ಲಿ ಆಗಿನ ಮೈಸೂರು ಅರಸರಾದ ರಾಜಒಡೆಯರ್ ಶ್ರೀರಂಗರಾಜುಲುರನ್ನು ತಲಕಾಡಿಗೆ ಓಡಿಸಿ ಶ್ರೀರಂಗಪಟ್ಟಣವನ್ನು ವಶಪಡಿಸಿಕೊಂಡರು. 1610ರಲ್ಲಿ ತಮ್ಮ ರಾಜಧಾನಿಯನ್ನು ಶ್ರೀರಂಗಪಟ್ಟಣದಿಂದ ಮೈಸೂರಿಗೆ ಬದಲಾಯಿಸಿದಾಗ ಸಿಂಹಾಸನವನ್ನು ಮೈಸೂರಿನ ಅರಮನೆಗೆ ಸಾಗಿಸಲಾಯಿತು ಎಂಬುದು ಇತಿಹಾಸದಿಂದ ತಿಳಿದು ಬರುತ್ತದೆ.

ಸಿಂಹಾಸನದಲ್ಲಿದ್ದಾರೆ ಬ್ರಹ್ಮ-ವಿಷ್ಣು-ಶಿವ

ಸಿಂಹಾಸನದಲ್ಲಿದ್ದಾರೆ ಬ್ರಹ್ಮ-ವಿಷ್ಣು-ಶಿವ

ಸಿಂಹಾಸನವು ಚಿನ್ನದ ಬಾಳೆಯ ಕಂಬ ಮತ್ತು ಚಿನ್ನದ ಮಾವಿನ ಎಲೆಗಳಿಂದ ಅಲಂಕರಿಸಲ್ಪಟ್ಟಿದೆ. ಛತ್ರಿಯ ತುದಿಯಲ್ಲಿ ಒಡವೆಗಳಿಂದ ಅಲಂಕರಿಸಿದ ಪಕ್ಷಿಯನ್ನು ಕೂರಿಸಲಾಗಿದೆ. ಸಿಂಹಾಸನವನ್ನು ಹತ್ತುವ ಎರಡು ಕಡೆಗಳಲ್ಲೂ ಸ್ತ್ರೀಪುತ್ಥಳಿಯನ್ನು ನಿರ್ಮಿಸಲಾಗಿದೆ. ಜೊತೆಗೆ ಛತ್ರಿಯ ಸುತ್ತಲೂ ಮುತ್ತಿನ ಕುಚ್ಚುಗಳನ್ನು ಕಟ್ಟಲಾಗಿದೆ. ಅಲ್ಲದೆ ಸಿಂಹಾಸನಕ್ಕೆ ಕೂರ್ಮರೂಪದ ಆಸನವನ್ನು ಒದಗಿಸಲಾಗಿದೆ. ಉಭಯ ಪಾರ್ಶ್ವಗಳಲ್ಲಿ ಯಾಳಿಗಳನ್ನು ಮತ್ತು ನಾಲ್ಕು ಕಡೆಗಳಲ್ಲಿ ಬಳ್ಳಿ ಲತೆಗಳನ್ನು ಕೆತ್ತಲಾಗಿದೆ. ಸಿಂಹಾಸನದ ದಕ್ಷಿಣದಲ್ಲಿ ಬ್ರಹ್ಮ, ಉತ್ತರದಲ್ಲಿ ಶಿವ, ಮಧ್ಯದಲ್ಲಿ ವಿಷ್ಣುವನ್ನು ನಿಲ್ಲಿಸಲಾಗಿದೆ.

ವಿಜಯ ಸೂಚಕ ನಾಲ್ಕು ಸಿಂಹಗಳನ್ನು ಇಡಲಾಗಿದೆ. ಮೂರು ಕೋನಗಳಲ್ಲೂ ರಾಕ್ಷಸ ಶರೀರ, ಎರಡು ಕುದುರೆಗಳು ಮತ್ತು ನಾಲ್ಕು ಹಂಸಪಕ್ಷಿಗಳನ್ನಿಡಲಾಗಿದೆ. ನಾಗದೇವತೆಗಳ ಚಿತ್ರಗಳು, ಸ್ವಸ್ತಿಕ ಆಕೃತಿ ಮತ್ತು ಮುತ್ತಿನ ಹಡಗು ಮೇಲಿನ ಗುಡಾರಗಳ ಚಿತ್ರಣಗಳಿವೆ. ಸಿಂಹಾಸನವನ್ನು ನಾಲ್ಕು ದಿಕ್ಕುಗಳಲ್ಲಿ ತೆರೆಯಲಾಗಿದೆ. ಸಿಂಹಾಸನದ ಛತ್ರಿಯ ಮೇಲೆ ಸಂಸ್ಕೃತದ 96 ಸಾಲುಗಳ ಶ್ಲೋಕಗಳಿವೆ.

ಸಿಂಹಾಸನ ಜೋಡಣಾ ಕಾರ್ಯ

ಸಿಂಹಾಸನ ಜೋಡಣಾ ಕಾರ್ಯ

ಈ ಖಾಸಗಿ ದರ್ಬಾರ್ ಕಾರ್ಯಕ್ರಮಕ್ಕೆ ರತ್ನಖಚಿತ ಸಿಂಹಾಸನವನ್ನು ಜೋಡಿಸುವುದು ಸುಲಭದ ಕೆಲಸವಲ್ಲ. ಪ್ರತ್ಯೇಕವಾಗಿರುವ ಸಿಂಹಾಸನವನ್ನು ಜೋಡಿಸುವ ಕಾರ್ಯವನ್ನು ಎಲ್ಲರೂ ಮಾಡುವುದಿಲ್ಲ. ಹಿಂದಿನಿಂದಲೂ ಸಮೀಪದ ಗೆಜ್ಜಗಳ್ಳಿ ಗ್ರಾಮದಿಂದ ಆಯ್ದ ಕೆಲವು ಕೆಲಸಗಾರರು ಆಗಮಿಸಿ ಜೋಡಣಾ ಕಾರ್ಯವನ್ನು ಮಾಡುತ್ತಾರೆ. ಈ ಬಾರಿ ಜೋಡಣಾ ಕಾರ್ಯ ಸೆ.15ರಂದು ನಡೆಯಲಿದೆ.

ಬೆಳಿಗ್ಗೆ 7.45ರಿಂದ 8.45 ನವಗ್ರಹ ಹೋಮ, 9.45 ರಿಂದ 10.15ರವರೆಗೆ ಶಾಂತಿಪೂಜೆಯೊಂದಿಗೆ ನವಗ್ರಹ ಹೋಮದ ಬಳಿಕ ರತ್ನಖಚಿತ ಸಿಂಹಾಸನದ ಜೋಡಣೆ ಕಾರ್ಯಕ್ಕೆ ಚಾಲನೆ ನೀಡಲಾಗುತ್ತದೆ. ಬಳಿಕ ಜೋಡಣೆಗೊಂಡ ಸಿಂಹಾಸನವನ್ನು ಕನ್ನಡಿ ತೊಟ್ಟಿಯಲ್ಲಿ ಇರಿಸಲಾಗುತ್ತದೆ.

ಯದುವೀರ್ ಗೆ ಕಂಕಣಧಾರಣೆ

ಯದುವೀರ್ ಗೆ ಕಂಕಣಧಾರಣೆ

ಸೆ.21ರಂದು 11.15ಕ್ಕೆ ಯದುವೀರ್ ಗೆ ಚಾಮುಂಡಿತೊಟ್ಟಿಯಲ್ಲಿ ಕಂಕಣಧಾರಣೆ ಮಾಡಲಾಗುತ್ತದೆ. 12.45 ರಿಂದ 12.55ರ ಶುಭ ಘಳಿಗೆಯಲ್ಲಿ ಯದುವೀರ್ ಸಿಂಹಾಸನಾರೋಹಣ ಕಾರ್ಯಕ್ರಮ ನಡೆಯಲಿದೆ. 1.35 ರಿಂದ 1.45ವರೆಗೆ ಚಾಮುಂಡಿತೊಟ್ಟಿಯಲ್ಲಿ ಚಾಮುಂಡೇಶ್ವರಿಗೆ ಪೂಜೆ ಸಲ್ಲಿಸಿ ನಂತರ ಅಂದು ಸಂಜೆ ಕನ್ನಡಿತೊಟ್ಟಿಯಲ್ಲಿ ಕಾಳರಾತ್ರಿಪೂಜೆ ನೆರವೇರಲಿದೆ. ಸೆ.29 ರಂದು 6.15ಕ್ಕೆ ಚಂಡೀಹೋಮ. 6.45 ರಿಂದ 7.45 ಶುಭ ಘಳಿಗೆಯಲ್ಲಿ ಪಟ್ಟದ ಆನೆ, ಕುದುರೆ, ಹಸು ಸೇರಿದಂತೆ ಆಯುಧಗಳನ್ನು ಕೋಡಿಸೋಮೇಶ್ವರ ದೇವಾಲಯಕ್ಕೆ ರವಾನೆ ಮಾಡಲಾಗುತ್ತದೆ.

ಪೂಜೆ ನೆರವೇರಿಸಿದ ಬಳಿಕ 8.20ರಿಂದ 8.40ರವರೆಗೆ ಅರಮನೆಯ ಕಲ್ಯಾಣಮಂಟಪದಲ್ಲಿ ಆಯುಧಪೂಜೆ ನಡೆಯಲಿದೆ. ಅಂದು ರಾತ್ರಿ 7 ಗಂಟೆಗೆ ಖಾಸಗಿ ದರ್ಬಾರ್ ಮುಕ್ತಾಯವಾಗಿ ಸಿಂಹಾಸನದ ಸಿಂಹ ವಿಸರ್ಜನೆ ಮಾಡಲಾಗುತ್ತದೆ. ಬಳಿಕ ಸೆ.30ರಂದು 12 ಗಂಟೆಗೆ ಶಮಿವೃಕ್ಷದ ಸಮಿಪ ಶಮಿ ಪೂಜೆ ನಡೆಯುತ್ತದೆ. ಭುವನೇಶ್ವರಿ ದೇವಾಲಯದಿಂದ ವಿಜಯಯಾತ್ರೆ ಆರಂಭಗೊಂಡು ಅ.14 ರಂದು 10.45 ರಿಂದ 11.45ರವರೆಗೆ ಸಿಂಹಾಸನದ ವಿಸರ್ಜನೆ ನಡೆಯಲಿದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
A traditional ceremony to set-out Jeweled throne in Mysuru palace will be taking place on Sep 15th. Palace is prepared for the programme.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ