ಎಚ್.ಡಿ.ಕೋಟೆ ಅರಣ್ಯದಂಚಿನಲ್ಲಿ ಭಯ ಸೃಷ್ಟಿಸಿದ ಹುಲಿ, ಚಿರತೆ!

Posted By:
Subscribe to Oneindia Kannada

ಮೈಸೂರು, ಜನವರಿ 03: ಎಚ್.ಡಿ.ಕೋಟೆಯ ನಾಗರಹೊಳೆ ಅರಣ್ಯ ವ್ಯಾಪ್ತಿಯ ಅಂತರಸಂತೆ ವಲಯದಲ್ಲಿ ಕಾಣಿಸಿಕೊಂಡಿರುವ ಹುಲಿ ಜಾನುವಾರುಗಳ ಮೇಲೆ ದಾಳಿ ನಡೆಸಿ ಕೊಂದು ತಿನ್ನುತ್ತಿರುವುದರಿಂದ ರೈತರು ಭಯಗೊಂಡಿದ್ದಾರೆ.

ಮೂಡಿಗೆರೆಯಲ್ಲಿ ಹುಲಿ ಪ್ರತ್ಯಕ್ಷ, ಜನರಲ್ಲಿ ಆತಂಕ

ಈಗಾಗಲೇ ಅಂತರಸಂತೆ ವ್ಯಾಪ್ತಿಯ ಹೊನ್ನಮನಕಟ್ಟೆ ಗ್ರಾಮ ಸೇರಿದಂತೆ ಹಲವೆಡೆ ಸಂಚರಿಸಿರುವ ಈ ಹುಲಿ ಸುಮಾರು ನಾಲ್ಕು ಜಾನುವಾರುಗಳನ್ನು ಬಲಿತೆಗೆದುಕೊಂಡಿದೆ. ಅಲ್ಲಲ್ಲಿ ಹುಲಿಯ ಹೆಜ್ಜೆಗುರುತುಗಳು ಕಂಡು ಬಂದಿರುವ ಕಾರಣ ಜನ ಮನೆಯಿಂದ ಹೊರಗೆ ಬರಲು ಭಯಪಡುವಂತಾಗಿದೆ.

A tiger in spotted in HD Kote in Mysuru creates tension among the people

ಇಲ್ಲಿ ರೈತರೇ ಹೆಚ್ಚಾಗಿರುವ ಕಾರಣ ಬೆಳಗ್ಗಿನಿಂದ ಸಂಜೆವರೆಗೆ ಜಮೀನಿನಲ್ಲಿ ದುಡಿಯಬೇಕಾಗಿದೆ. ಆದರೆ ಹುಲಿಯ ಭಯದಿಂದ ಜಮೀನಿಗೆ ತೆರಳಲು ಭಯಪಡುವಂತಾಗಿದೆ. ಇನ್ನು ಮಕ್ಕಳನ್ನು ಶಾಲೆಗೆ ಕಳುಹಿಸಲು ಪೋಷಕರು ಹಿಂದೇಟು ಹಾಕುತ್ತಿದ್ದಾರೆ.

ಸಾಮಾನ್ಯವಾಗಿ ಈ ವ್ಯಾಪ್ತಿಯಲ್ಲಿ ಕಾಡಾನೆ ಹಾವಳಿ ಹೆಚ್ಚಾಗಿದ್ದು, ಕಷ್ಟಪಟ್ಟು ಬೆಳೆ ಬೆಳೆಸಿ ಅದು ಫಸಲಿಗೆ ಬರುತ್ತಿದ್ದಂತೆಯೇ ದಾಳಿ ಮಾಡಿ ಬೆಳೆಯನ್ನು ತಿಂದು ತುಳಿದು ಹಾಕುತ್ತಿವೆ. ಇದೀಗ ಹುಲಿಯ ಭಯವೂ ಇಲ್ಲಿನವರನ್ನು ಕಾಡತೊಡಗಿದೆ. ಜೀವನ ನಿರ್ವಹಣೆಯ ಮೂಲವಾದ ಹಸುಗಳ ಮೇಲೆ ಹುಲಿ ದಾಳಿ ಮಾಡಿ ಕೊಂದು ಹಾಕಿದರೆ ಜೀವನ ಮಾಡುವುದು ಹೇಗೆ ಎಂಬ ಆತಂಕ ರೈತರನ್ನು ನಿತ್ಯ ಕಾಡುತ್ತಿದೆ.

ಅಂತರಸಂತೆ ವ್ಯಾಪ್ತಿಯಲ್ಲಿ ಓಡಾಡುತ್ತಿರುವ ಹುಲಿಯನ್ನು ಹಿಡಿಯಲು ಈಗಾಗಲೇ ಅರಣ್ಯ ಇಲಾಖೆ ಸಾಕಾನೆಗಳ ಮೂಲಕ ಕಾರ್ಯಾಚರಣೆ ನಡೆಸುತ್ತಿದೆ. ಬಳ್ಳೆ ಮತ್ತು ಮತ್ತಿಗೋಡು ಸಾಕಾನೆ ಶಿಬಿರಗಳಿಂದ ಅರ್ಜುನ, ಸರಳ, ನಂಜುಂಡ, ದ್ರೋಣ ಎಂಬ ನಾಲ್ಕು ಸಾಕಾನೆಗಳನ್ನು ಕರೆಯಿಸಿಕೊಂಡು ಅವುಗಳ ಮೂಲಕ ಕಾರ್ಯಾಚರಣೆ ನಡೆಸಲಾಗುತ್ತಿದೆ. ಆದರೆ ಎಲ್ಲಿಯೂ ಹುಲಿಯ ಸುಳಿವು ಸಿಗುತ್ತಿಲ್ಲ.

A tiger in spotted in HD Kote in Mysuru creates tension among the people

ಇನ್ನು ಹುಲಿ ಹಸುವನ್ನು ಬೇಟೆಯಾಡಿದ್ದ ಹೊನ್ನಮನಕಟ್ಟೆ ಗ್ರಾಮದ ರೈತ ಭೈರೇಗೌಡ ಜಮೀನಿನ ಸಮೀಪ ಟ್ರಾಪಿಂಗ್ ಕ್ಯಾಮೆರಾ ಅಳವಡಿಸಲಾಗಿದ್ದು, ಅಲ್ಲಿ ಹುಲಿ ಬೇಟೆಯಾಡಿದ್ದ ಜಾನುವಾರನ್ನು ತಿನ್ನಲು ಬಂದ ಚಿರತೆಯ ದೃಶ್ಯ ಸೆರೆಯಾಗಿದೆ. ಸದ್ಯ ಹುಲಿಯ ಸುಳಿವು ಮಾತ್ರ ಎಲ್ಲೂ ಕಾಣುತ್ತಿಲ್ಲ. ಆದ್ದರಿಂದ ಹುಲಿಯನ್ನು ಕಂಡರೆ ತಕ್ಷಣ ಅರಣ್ಯ ಇಲಾಖೆಗೆ ತಿಳಿಸುವಂತೆ ಅರಣ್ಯಾಧಿಕಾರಿಗಳು ಸಾರ್ವಜನಿಕರಿಗೆ ಮನವಿ ಮಾಡಿದ್ದಾರೆ.

ಇದೆಲ್ಲದರ ನಡುವೆ ಚಿರತೆ ಕಾಣಿಸಿಕೊಂಡಿರುವುದರಿಂದ ಜನಕ್ಕೆ ಈಗ ಹುಲಿ ಜತೆ ಚಿರತೆಯ ಭಯವೂ ಕಾಡತೊಡಗಿದೆ. ಒಟ್ಟಾರೆ ಇಲ್ಲಿನ ರೈತರಿಗಂತೂ ವನ್ಯಪ್ರಾಣಿಗಳ ಹಾವಳಿಯಿಂದ ನೆಮ್ಮದಿಯೇ ಇಲ್ಲದಂತಾಗಿದೆ. ಪ್ರಾಣಿಗಳು ಅರಣ್ಯವನ್ನು ದಾಟಿ ಬರದಂತೆ ಕ್ರಮ ಕೈಗೊಳ್ಳಿ ಎಂಬುದು ಸ್ಥಳೀಯರ ಮನವಿ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
A tiger spotted in HD Kote area of Mysuru district creates tension among the people of this region. The tiger is attacking many cattle and people are worrying to send their children to school also.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ