4ನೇ ಮದುವೆಯಾಗಲು ಮುಂದಾಗಿದ್ದ ಯೋಧ ಈಗ ಪೊಲೀಸರ ಅತಿಥಿ

Posted By:
Subscribe to Oneindia Kannada

ಮೈಸೂರು, ಅಕ್ಟೋಬರ್ 23 : ಈಗಾಗಲೇ ಮೂವರನ್ನು ವಿವಾಹವಾಗಿ ಕೈಕೊಟ್ಟಿದ್ದ ಭೂಪನೊಬ್ಬ ನಾಲ್ಕನೇ ವಿವಾಹಕ್ಕೆ ಮುಂದಾಗಿ ಮೊದಲ ಪತ್ನಿಯ ಮನೆಯವರಿಗೆ ಸಿಕ್ಕಿಬಿದ್ದ ಘಟನೆ ನಗರದಲ್ಲಿ ನಡೆದಿದೆ.
ಮೂರು ಹೆಂಡಿರ ಭಂಡ ಗಂಡ ಈಗ ವಿಜಯ ನಗರ ಠಾಣೆ ಪೊಲೀಸರ ವಶದಲ್ಲಿದ್ದಾನೆ. ವಿಶೇಷ ಏನೆಂದರೆ ಆತ ಭಾರತೀಯ ಸೇನೆಯಲ್ಲಿ ಯೋಧನಾಗಿದ್ದು, ಪಂಜಾಬ್ ಪ್ರಾಂತ್ಯದಲ್ಲಿ ಸೇವೆ ಸಲ್ಲಿಸುತ್ತಿದ್ದಾನೆ. ಭಾನುವಾರ ಈ ಅಚ್ಚರಿದಾಯಕ ಘಟನೆಗೆ ಸಾಕ್ಷಿಯಾದದ್ದು ವಿಜಯನಗರದಲ್ಲಿನ ಯೋಗಾನರಸಿಂಹಸ್ವಾಮಿ ದೇವಸ್ಥಾನ. ಅಲ್ಲಿ ಎಲ್ಲವೂ ಸಿದ್ಧವಾಗಿತ್ತು. ಪುರೋಹಿತರು ಮಂತ್ರ ಹೇಳುತ್ತಿದ್ದರು. ನೆಂಟರಿಷ್ಟರೆಲ್ಲಾ ಸಿಂಗಾರಗೊಂಡು ಹಾಜರಿದ್ದರು. ಭೂರಿ ಭೋಜನವೂ ಸಿದ್ಧವಾಗಿತ್ತು. ಇನ್ನೇನು ಗಟ್ಟಿಮೇಳದ ಸಡಗರದ ಸದ್ದಿನ ನಡುವೆ ನವ (4ನೇ) ವಧುವಿಗೆ ತಾಳಿ ಕಟ್ಟ ಬೇಕು ಎನ್ನುತ್ತಿರುವಾಗಲೇ ದೇಗುಲಕ್ಕೆ ಬಂದ ವ್ಯಕ್ತಿ ಗಳಿಬ್ಬರು ವರನ ನಿಜ ಬಣ್ಣ ಬಯಲು ಮಾಡಿದರು. ಮದುವೆಯನ್ನು ನಿಲ್ಲಿಸಿ, ಮತ್ತೊಬ್ಬ ಯುವತಿ ವಂಚನೆಗೊಳಗಾಗುವುದನ್ನು ತಪ್ಪಿಸಿದರು.

ಎರಡನೇ ಮದುವೆಯಾದ ಗಂಡನಿಗೆ ಹೆಂಡತಿಯಿಂದ ಥಳಿತ

ಈ ಮದುವೆ ಹುಚ್ಚಿನ ಕಥೆಯ ಖಳನಾಯಕನ ಹೆಸರು ಶಿವನಂಜು(36). ಆತ ಈವರೆಗೆ 3 ಮದುವೆಯಾಗಿದ್ದು, ಮೂವರು ಪತ್ನಿಯರಿಗೂ ವಂಚಿಸಿದ್ದಾನೆ. ಮೊದಲನೇ ಪತ್ನಿ ಮಾತ್ರ ವಂಚಕನಿಗೆ ಬುದ್ಧಿಕಲಿಸಲು ಹಠ ತೊಟ್ಟು ನ್ಯಾಯಕ್ಕಾಗಿ ಕಾನೂನು ಹೋರಾಟ ನಡೆಸುತ್ತಿದ್ದಾರೆ. ಉಳಿದವರು ಇವನ ಗೊಡವೆಯೇ ಬೇಡ ಎಂದು ಸುಮ್ಮನಾಗಿದ್ದಾರೆ. ಹೀಗಾಗಿಯೇ ಈ ಸೈನಿಕ 4ನೇ ವಿವಾಹಕ್ಕೆ ಮುಂದಾಗಿದ್ದ. ಶಿವನಂಜು, ಕೆ.ಆರ್.ನಗರ ತಾಲ್ಲೂಕು ಸಾಲಿಗ್ರಾಮ ಹೋಬಳಿ ಲಕ್ಕಿಕುಪ್ಪೆ ಗ್ರಾಮದ ನಿವಾಸಿ ಶಿವಣ್ಣೇಗೌಡ ಎಂಬವರ ಮಗ. ಸೇನೆಯಲ್ಲಿ ಯೋಧನಾಗಿ ಸೇವೆ ಸಲ್ಲಿಸುತ್ತಿದ್ದಾಗ 2007ರ ಮೇ 10ರಂದು ಸಾಲಿಗ್ರಾಮ ನಿವಾಸಿ ಶ್ರೀನಿವಾಸ್ ಎಂಬವರ ಪುತ್ರಿ ವರಲಕ್ಷ್ಮಿಯನ್ನು ವಿವಾಹವಾಗಿದ್ದ. ನಂತರ ಪತ್ನಿ ಗರ್ಭಿಣಿಯಾಗುತ್ತಿದ್ದಂತೆ ತವರಿಗೆ ಬಿಟ್ಟು ಹೋದ ಆತ ಮತ್ತೆ ನೋಡಲು ಬಂದಿದ್ದು 2 ವರ್ಷದ ನಂತರ. ಸ್ವತಃ ವರಲಕ್ಷಿಯೇ ಈ ವಿಷಯ ಬಹಿರಂಗಪಡಿಸಿದ್ದಾರೆ. ನಂತರ ರಾಜಿ ಪಂಚಾಯ್ತಿ ನಡೆಸಿದರೂ ಯಾವುದೇ ಪ್ರಯೋಜನವಾಗಲಿಲ್ಲ.

A soldier from Mysuru arrested for trying to marry 4th time.

ವರಲಕ್ಷ್ಮಿ 2009ರಲ್ಲಿ ಪತಿ ವಿರುದ್ಧ ವರದಕ್ಷಿಣೆ ಕಿರುಕುಳ ಹಾಗೂ ಕುಟುಂಬ ನಿರ್ವಹಣೆಗೆ ಪರಿಹಾರ ಕೋರಿ ದಾವೆ ಹೂಡಿದರು. ನ್ಯಾಯಾಲಯದಲ್ಲಿ ದಾವೆ ಹೂಡುವಷ್ಟರಲ್ಲಿ ಆತ ಸಾಲಿಗ್ರಾಮದ ಶ್ವೇತ ಎಂಬಾಕೆಯನ್ನು ವಿವಾಹವಾಗಿದ್ದ. ಅದು ಕೂಡ ಹೆಚ್ಚು ದಿನ ಬಾಳಲಿಲ್ಲ. ನಂತರ ಕಣಗಾಲು ಗ್ರಾಮದ ಆಶಾರಾಣಿಯನ್ನು ವಿವಾಹವಾದ. ಅವರೊಂದಿಗೂ ಬಾಳ್ವೆ ನಡೆಸಲಿಲ್ಲ. ನನ್ನನ್ನೂ ಸೇರಿದಂತೆ ಮೂವರನ್ನು ಅಧಿಕೃತವಾಗಿ ವಿವಾಹವಾಗಿದ್ದಾನೆ. ಆದರೆ, ಮದುವೆಯಾಗುವುದಾಗಿ ನಂಬಿಸಿ ಮತ್ತಷ್ಟು ಯುವತಿಯರ ಬಾಳು ಹಾಳು ಮಾಡಿದ್ದಾನೆ ಎಂದು ವರಲಕ್ಷ್ಮಿ ಆರೋಪಿಸಿದರು.

ಫಾರಿನ್ ಹೆಂಡ್ತಿ ಆಸೆಗೆ 11ಲಕ್ಷ ರೂ. ಕಳೆದು ಕೊಂಡ ಮಂಗಳೂರು ಯುವಕ

A soldier from Mysuru arrested for trying to marry 4th time.

ಮತ್ತೊಂದು ವಿವಾಹಕ್ಕೆ ಮುಂದಾಗಿದ್ದ ಶಿವನಂಜು, ನಗರದ ಗೋಕುಲಂ ನಿವಾಸಿ, ಹಾಲು ವ್ಯಾಪಾರಿಯ ಮಗಳನ್ನು ವಿವಾಹವಾಗಲು ನಿಶ್ಚಯ ಮಾಡಿಕೊಂಡ. ಈಗಾಗಲೇ ವಿವಾಹವಾಗಿದ್ದರೂ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದೇನೆ. ಶೀಘ್ರವೇ ವಿಚ್ಛೇದನ ದೊರೆಯಲಿದೆ ಎಂದು ನಂಬಿಸಿ ವಿವಾಹಕ್ಕೆ ಒಪ್ಪಿಸಿದ್ದ. ನಯವಾದ ಮಾತು ನಂಬಿ ಯುವತಿ ಮತ್ತು ಪೋಷಕರು ವಿವಾಹಕ್ಕೆ ಸಮ್ಮತಿಸಿದ್ದರು. ಭಾನುವಾರ ಬೆಳಿಗ್ಗೆ 8 ಗಂಟೆಗೆಲ್ಲಾ ಯುವತಿ ಹಾಗೂ ಶಿವನಂಜು ಕಡೆಯವರು, ನೆಂಟರಿಷ್ಟರು ದೇವಸ್ಥಾನದಲ್ಲಿ ಸೇರಿದ್ದರು. 10 ಗಂಟೆಗೆಲ್ಲಾ ವಿವಾಹ ಕಾರ್ಯ ಮುಗಿಯಲಿತ್ತು. ಅದೇ ವೇಳೆ ವರಲಕ್ಷ್ಮಿ ಅವರ ಭಾವ ಸ್ವಾಮಿ ಅವರು ದೇವಸ್ಥಾನಕ್ಕೆ ಬಂದಿದ್ದಾರೆ. ಕುತೂಹಲದಿಂದ ವಿವಾಹ ಕಾರ್ಯಕ್ರಮದತ್ತ ಕಣ್ಣು ಹಾಯಿಸಿದಾಗ ವರನ ಸ್ಥಾನದಲ್ಲಿ ಶಿವನಂಜು ಕುಳಿತಿದ್ದು ಕಂಡು ಅಚ್ಚರಿಗೊಂಡಿದ್ದಾರೆ. ಕೂಡಲೆ ವಧುವಿನ ಕಡೆಯವರನ್ನು ಸಂಪರ್ಕಿಸಿ ಶಿವನಂಜು ಇತಿಹಾಸ ತಿಳಿಸಿದ್ದಾರೆ.

ವಿಜಯನಗರ ಠಾಣೆಯ ಪೊಲೀಸರಿಗೆ ಶಿವನಂಜು ಮೋಸದ ಕುರಿತು ಮಾಹಿತಿ ನೀಡಿದ್ದು, ಇದೀಗ ವರಮಹಾಶಯನಿಗೆ ಪೊಲೀಸರು ಆತಿಥ್ಯ ನೀಡುತ್ತಿದ್ದಾರೆ. ವಿಜಯನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
A man who was a soldier, has already married 3 women and now tried to marrying another woman now became a guest for poilce Vijayanagara Police in Mysuru.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ