ಚಿತ್ರಗಳಲ್ಲಿ: 17ನೇ ರಾಷ್ಟ್ರೀಯ ಜಾಂಬೂರಿ ಉತ್ಸವದ ಸಂಭ್ರಮ

By: ಯಶಸ್ವಿನಿ ಎಂ.ಕೆ ಮೈಸೂರು
Subscribe to Oneindia Kannada

ಮೈಸೂರು, ಡಿಸೆಂಬರ್ .31 : ಮೈಸೂರಿನ ನಂಜನಗೂಡು ತಾಲೂಕಿನ ಅಡಕನಹಳ್ಳಿ ಕೈಗಾರಿಕಾ ಪ್ರದೇಶದಲ್ಲಿ ಆಯೋಜಿಸಲಾದ 17ನೇ ರಾಷ್ಟ್ರೀಯ ಜಾಂಬೂರಿ ಸಮಾವೇಶವನ್ನು ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಉದ್ಘಾಟಿಸಿದರು.

ನಾಲ್ವಡಿ ಕೃಷ್ಣರಾಜ ಒಡೆಯರ್ ಪೋತ್ಸಾಹದಿಂದ ಬೆಳೆದು ಇದೀಗ ಹೆಮ್ಮರವಾಗಿರುವ ಸ್ಕೌಟ್ಸ್ ಮತ್ತು ಗೈಡ್ಸ್​ಗೆ ಇದೀಗ 17ನೇ ರಾಷ್ಟ್ರೀಯ ಜಾಂಬೂರಿ ಉತ್ಸವದ ಸಂಭ್ರಮ. ಡಿಸೆಂಬರ್ 29 ರಂದು ಆರಂಭಗೊಂಡಿದ್ದು ಜನವರಿ ಜನವರಿ 4ಕ್ಕೆ ಈ ಜಂಬೂರಿ ಉತ್ಸವ ತೆರೆ ಕಾಣಲಿದೆ. [ಮೈಸೂರು, ಯುವಕರ ಸದ್ವಿನಿಯೋಗದಿಂದ ದೇಶ ಬಲಿಷ್ಠ: ರಾಷ್ಟ್ರಪತಿ]

ಅದಕ್ಕಾಗಿ ಅರಮನೆ ನಗರಿ ಮೈಸೂರಿನಿಂದ 17 ಕಿ.ಮೀ.ದೂರ ಅಡಕನಹಳ್ಳಿ ಕೈಗಾರಿಕೆ ಪ್ರದೇಶದಲ್ಲಿ ನಿರ್ಮಾಣಗೊಂಡಿರುವ ವಿ.ಪಿ.ದೀನದಯಾಳು ನಾಯ್ಡು ನಗರದಲ್ಲಿ ಸಹಸ್ರಾರು ಕೆಡೆಟ್​ಗಳ ಸಮ್ಮುಖದಲ್ಲಿ ನಾಲ್ಕು ವರ್ಷಕ್ಕೊಮ್ಮೆ ನಡೆಯುವ ಈ ಮಹಾಮೇಳವನ್ನು ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಉದ್ಘಾಟಿಸಿ ಶಿಬಿರಾರ್ಥಿಗಳಿಗೆ ಶುಭ ಕೋರಿದರು.

'ಉತ್ತಮ ನಾಳೆಗಳಿಗಾಗಿ ನಾವೆಲ್ಲರೂ ಜತೆಯಾಗಿರೋಣ'ಆಶಯದೊಂದಿಗೆ 3ನೇ ಬಾರಿಗೆ ಇದು ರಾಜ್ಯದಲ್ಲಿ ನಡೆಯುತ್ತಿದೆ ಎನ್ನುವುದು ವಿಶೇಷ. ಬಯಲುಪ್ರದೇಶದಲ್ಲಿ ಮಿನಿ ಕ್ರೀಡಾಂಗಣ(ಅರೇನಾ)ದಲ್ಲಿ ಕುಳಿತಿದ್ದ ಸಾವಿರಾರು ವಿದ್ಯಾರ್ಥಿಗಳ ಉತ್ಸಾಹಕ್ಕೆ ನೆತ್ತಿ ಸುಡುವ ಬಿಸಿಲು ಯಾವುದೇ ಪರಕು ಬೀರಲಿಲ್ಲ.

ಎಲ್ಲರ ಕೇಂದ್ರ ಬಿಂದುವಾಗಿದ್ದ ದೇಶದ ಮೊದಲ ಪ್ರಜೆ ಮಧ್ಯಾಹ್ನ 3.32ರ ಹೊತ್ತಿಗೆ ಇಲ್ಲಿಗೆ ಪ್ರವೇಶಿಸುತ್ತಿದ್ದಂತೆ ಚಪ್ಪಾಳೆ ಮೂಲಕ ಸ್ವಾಗತ ಕೋರಲಾಯಿತು. ಬಳಿಕ ಅವರು ತೆರೆದ ಜೀಪಿನಲ್ಲಿ ನಿಂತುಕೊಂಡು ಗೌರವವಂದನೆ ಸ್ವೀಕರಿಸಲು ಕ್ರೀಡಾಂಗಣವನ್ನು ಒಂದು ಸುತ್ತು ಹಾಕಿದರು.

ಈ ವೇಳೆ, ಧ್ವನಿವರ್ಧಕದಲ್ಲಿ 'ಹರ್ಷ್... ಹರ್ಷ್...' ಘೋಷಣೆ ಮೊಳಗುತ್ತಿದ್ದಂತೆ ವಿದ್ಯಾರ್ಥಿಗಳ ಜೈ...ಜೈ.... ಜಯಘೊಷಣೆಯ ಹಿಮ್ಮೇಳವೂ ಪ್ರತಿಧ್ವನಿಸಿತು.

ಅವರು ವೇದಿಕೆ ಏರುತ್ತಿದ್ದಂತೆ ನೌಕಾದಳ ಸಂಗೀತ ತಂಡದಿಂದ ರಾಷ್ಟ್ರಗೀತೆ ರಿಂಗಣಿಸಿತು. ನಂತರ ಮಕ್ಕಳಿಂದ ನಡೆದ ಸಾಂಸ್ಕೃತಿಕ ಕಾರ್ಯಕ್ರಮ ಮನರಂಜಿಸಿತು. ವಿವಿಧ ರಾಜ್ಯಗಳ ಸಾಂಪ್ರದಾಯಿಕ ಕಲೆ, ಸಂಸ್ಕೃತಿ ಪ್ರತಿಬಿಂಬಿಸುವ ನೃತ್ಯ ಪ್ರದರ್ಶನ ಕಣ್ಮನ ಸೆಳೆಯಿತು.

ದಾಖಲೆ ಪ್ರಮಾಣದಲ್ಲಿ ಕೆಡೆಟ್​ಗಳು

ದಾಖಲೆ ಪ್ರಮಾಣದಲ್ಲಿ ಕೆಡೆಟ್​ಗಳು

1960 ಮತ್ತು 1986ರ ತರುವಾಯ 3ನೇ ಬಾರಿಗೆ ರಾಜ್ಯದಲ್ಲಿ ನಡೆಯುತ್ತಿರುವ ಜಾಂಬೂರಿಗೆ ಈ ಸಲ ದಾಖಲೆ ಪ್ರಮಾಣದಲ್ಲಿ ಕೆಡೆಟ್​ಗಳು ಆಗಮಿಸಿರುವುದು ಗಮನಾರ್ಹ. ದೇಶದ 52 ಸ್ಕೌಟ್ಸ್- ಗೈಡ್ಸ್ ರಾಜ್ಯಗಳಿಂದ ಒಟ್ಟು 25 ಸಾವಿರ ಸ್ಕೌಟ್ಸ್ ಮತ್ತು ಗೈಡ್ಸ್ ವಿದ್ಯಾರ್ಥಿಗಳು ಈ ಮೇಳಕ್ಕೆ ಸಾಕ್ಷಿಯಾಗಿದ್ದಾರೆ. ದುಬೈ, ನೇಪಾಳ, ಶ್ರೀಲಂಕಾ ಸೇರಿ ವಿವಿಧ ದೇಶಗಳಿಂದಲೂ ಒಂದು ಸಾವಿರ ಪ್ರತಿನಿಧಿಗಳು ಈ ಐತಿಹಾಸಿಕ ಕ್ಷಣವನ್ನು ಕಣ್ತುಂಬಿಕೊಂಡರು.

ಗರಿಗೆದರಿದ ಚಟುವಟಿಕೆಗಳು

ಗರಿಗೆದರಿದ ಚಟುವಟಿಕೆಗಳು

ಆರು ದಿನಗಳ ಈ ಜಾತ್ರೆಗೆ ಚಾಲನೆ ದೊರೆಯುತ್ತಿದ್ದಂತೆ ವಿವಿಧ ವೈವಿಧ್ಯಪೂರ್ಣ ಚಟುವಟಿಕೆಗಳು ಗರಿಗೆದರಿದವು. ಸ್ಕೌಟ್ಸ್- ಗೈಡ್ ಪ್ರದರ್ಶನ, ಬ್ಯಾಂಡ್ ಪ್ರದರ್ಶನ ಸ್ಪರ್ಧೆ, ಸಾಹಸಮಯ ಚಟುವಟಿಕೆಗಳು, ಪಥಸಂಚಲನ, ಮೈಸೂರು ದರ್ಶನ, ವಸ್ತುಪ್ರದರ್ಶನ, ಜಾನಪದ ಹಬ್ಬ, ಭಾರತ ದರ್ಶನ, ಕೊರಿಯಾದ ಕಲಾವಿದರಿಂದ ಸಾಂಸ್ಕೃತಿಕ ಪ್ರದರ್ಶನ, ದೈಹಿಕ ಪ್ರದರ್ಶನ, ವಿಶ್ವ ಪರ್ಯಟನೆ, ರಾಜ್ಯ ಮುಕ್ತದಳಗಳ ಮೇಳ, ಯೋಗ ದಿನ, ಪಥಚಲನ, ರಾಷ್ಟ್ರೀಯ ಶಿಕ್ಷಣ ನಾಯಕರ ಸಮಾವೇಶ... ಹೀಗೆ ನಾನಾ ಕಾರ್ಯಕ್ರಮಗಳು ತೆರೆದುಕೊಂಡವು. ಇದು ಮಕ್ಕಳಲ್ಲಿ ಶೈಕ್ಷಣಿಕ, ಬೌದ್ಧಿಕ, ದೈಹಿಕ ವಿಕಾಸದೊಂದಿಗೆ ಸೇವಾ ಮನೋಭಾವನೆ, ಸಹೋದರತ್ವ ಗುಣ, ದೇಶಪ್ರೇಮ, ಭಾವೈಕ್ಯತೆ ಗುಣವನ್ನು ಉದ್ದೀಪನಗೊಳಿಸಲಿದೆ.

ಜಾಂಬೂರಿಯಲ್ಲಿ ವಿವಿಧ ಪ್ರದರ್ಶನಗಳು

ಜಾಂಬೂರಿಯಲ್ಲಿ ವಿವಿಧ ಪ್ರದರ್ಶನಗಳು

ಗಡಿ ಭದ್ರತಾ ಪಡೆಯ ಯೋಧರು ಸೈಕಲ್‌ ಸಾಹಸ ಪ್ರದರ್ಶನ ನೀಡಲಿದ್ದಾರೆ. ಏರ್‌ ಷೋ ಆಯೋಜಿಸಲು ಅನುಮತಿ ಕೋರಲಾಗಿದೆ. ಸರ್ವ ಧರ್ಮ ಪ್ರಾರ್ಥನೆ, ಸಾಂಸ್ಕೃತಿಕ ಕಾರ್ಯಕ್ರಮ, ಶ್ವಾನ ಪ್ರದರ್ಶನ, ಮಿಲಿಟರಿ ಉಪಕರಣ ಪ್ರದರ್ಶನ, ಕ್ಯಾಂಪ್‌ ಫೈರ್‌ ಸೇರಿದಂತೆ ನಿತ್ಯ ಬೆಳಿಗ್ಗೆ 6 ಗಂಟೆಯಿಂದ ರಾತ್ರಿ 10ರ ವರೆಗೆ 30 ಕಾರ್ಯಕ್ರಮಗಳು ದಿನನಿತ್ಯ ಇಲ್ಲಿ ಸಂಪನ್ನಗೊಳ್ಳಲಿದೆ.

ಜಾಂಬೂರಿಯ ವಿಶೇಷತೆ ಏನು..?

ಜಾಂಬೂರಿಯ ವಿಶೇಷತೆ ಏನು..?

ಜಾಂಬೂರಿಗಾಗಿಯೇ ಆಗಮಿಸುವ ಮಕ್ಕಳು ಹಾಗೂ ಸಿಬ್ಬಂದಿ ವರ್ಗದವರಿಗೆಂದೇ 2500 ಟೆಂಟ್ ಗಳು ಇಲ್ಲಿ ತಲೆ ಎತ್ತಿದೆ. ಊಟದ ಸಭಾಂಗಣ, ಆಯಾ ರಾಜ್ಯದ ವಿಶೇಷ ತಿನಿಸು ತಯಾರಿಸಲು ವಿಶೇಷ ವ್ಯವಸ್ಥೆ, ಮಿನಿ ಕ್ರೀಡಾಂಗಣ, ಸಾಂಸ್ಕೃತಿಕ ವೇದಿಕೆ ವಸ್ತು ಪ್ರದರ್ಶನ, ಆಹಾರ ಮೇಳ ಕೂಡ ಇಲ್ಲಿ ನಡೆಯುತ್ತಿದೆ. ಆಸ್ಪತ್ರೆ ಆಂಬುಲೆನ್ಸ್, ಔಷಧ ಸೌಲಭ್ಯ ಲಭ್ಯವಿರಲಿದೆ. ಭದ್ರತೆಗಾಗಿ ಎರಡೂವರೆ ಸಾವಿರ ಪೊಲೀಸರನ್ನು ನಿಯೋಜಿಸಲಾಗಿದೆ. ಸಿ.ಸಿ ಟಿ.ವಿ ಕ್ಯಾಮೆರಾ ಅಳವಡಿಸಲಾಗಿದೆ. 200 ಅಗ್ನಿಶಾಮಕ ಸಿಬ್ಬಂದಿ ಕರ್ತವ್ಯ ನಿರ್ವಹಿಸಲಿದ್ದಾರೆ.

4 ವರ್ಷಕ್ಕೊಮ್ಮೆ ಜಾಂಬೂರಿ ಸಮಾವೇಶ:

4 ವರ್ಷಕ್ಕೊಮ್ಮೆ ಜಾಂಬೂರಿ ಸಮಾವೇಶ:

ನಾಲ್ಕು ವರ್ಷಕ್ಕೊಮ್ಮೆ ನಡೆಯುವ ಈ ಜಾಂಬೂರಿಯಲ್ಲಿ ಭಾಗವಹಿಸುವ ಬಾಲ ಯೋಧರಿಗೆ ವೈವಿಧ್ಯಮಯ ಚಟುವಟಿಕೆಗಳನ್ನು ಆಯೋಜಿಸಲಾಗುತ್ತದೆ. ಮುಖ್ಯವಾಗಿ ಸಾಹಸ ಕ್ರೀಡೆಗಳಾದ ರಾಕ್ ಕ್ಲೈಂಬಿಂಗ್, ಟೈರ್ ವಾಲ್, ಕ್ರಾಲಿಂಗ್, ಲಾಗ್ ಕ್ರಾಸಿಂಗ್, ಕಮಾಂಡೋ ಬ್ರಿಡ್ಜ್, ಮಂಕಿ ಬ್ರಿಡ್ಜ್, ಜಿಗ್ ಜಾಗ್ ಕ್ರಾಸಿಂಗ್, ಟನಲ್ ಕ್ರಾಸಿಂಗ್, ಹ್ಯಾಂಗಿಂಗ್ ಬ್ರಿಡ್ಜ್ ಸೇರಿದಂತೆ 16 ಬಗೆಯ ಕ್ರೀಡೆಗಳನ್ನು ಆಡಿಸಿ, ಉತ್ತಮ ಪ್ರದರ್ಶನ ನೀಡುವ ಕೆಡೆಟ್ ಗಳನ್ನು ಗುರುತಿಸಿ ಪ್ರಮಾಣಪತ್ರ ಕೊಡಲಾಗುತ್ತದೆ. ಇಷ್ಟೇ ಅಲ್ಲ, ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಿದ್ದು, ಎಲ್ಲಾ ಕೆಡೆಟ್ ಗಳ ಪ್ರತಿಭಾ ಪ್ರದರ್ಶನಕ್ಕೂ ಅವಕಾಶವಿದೆ.

ಜಾಂಬೂರಿ ನಡೆಯುವುದು ಎಲ್ಲಿ ..?

ಜಾಂಬೂರಿ ನಡೆಯುವುದು ಎಲ್ಲಿ ..?

ನಂಜನಗೂಡು ತಾಲ್ಲೂಕು ಅಡಕನಹಳ್ಳಿ ಕೈಗಾರಿಕಾ ಪ್ರದೇಶದ 350 ಎಕರೆ ಜಾಗದಲ್ಲಿ ನಡೆಯುತ್ತಿರುವ ಸಮಾವೇಶ ಜ. 4ರಕ್ಕೆ ತೆರೆ ಬೀಳಲಿದೆ, ದೇಶದ 52 ಸ್ಕೌಟ್ಸ್ ಘಟಕಗಳ 25 ಸಾವಿರ ವಿದ್ಯಾರ್ಥಿಗಳು ಹಾಗೂ 5 ಸಾವಿರ ಶಿಕ್ಷಕರು ಕರ್ನಾಟಕದ 7 ಸಾವಿರ ಮಕ್ಕಳು ಸೇರಿದಂತೆ ಮಲೇಷ್ಯಾ, ಶ್ರೀಲಂಕಾ, ಭೂತಾನ್‌, ನೇಪಾಳ, ಬಾಂಗ್ಲಾದೇಶದಿಂದ ವಿದ್ಯಾರ್ಥಿಗಳು ಭಾಗಿಯಾಗಿರುವುದು ವಿಶೇಷ.

ಏನಿದು ಜಾಂಬೂರಿ?

ಏನಿದು ಜಾಂಬೂರಿ?

1907ರಲ್ಲಿ ಇಂಗ್ಲೆಂಡ್‌ನಲ್ಲಿ ಸ್ಕೌಟ್‌ ಸ್ಥಾಪಿಸಿದ ಲಾರ್ಡ್‌ ಬೇಡನ್ ಪೊವೆಲ್ ಅವರು ಸ್ಕೌಟ್‌ನಲ್ಲಿ ತೊಡಗಿರುವವರು ಎಷ್ಟು ಮಂದಿ ಇದ್ದಾರೆ ಎಂಬುದನ್ನು ತಿಳಿದುಕೊಳ್ಳಲು ‘ಎಲ್ಲರೂ ಒಂದೆಡೆ ಸೇರೋಣ' ಎಂದು ಕರೆ ನೀಡುತ್ತಾರೆ. ಸುಮಾರು 10 ಸಾವಿರ ಮಂದಿ ಒಂದೆಡೆ ಸೇರಿದ್ದನ್ನು ಕಂಡು ‘ಜಾಮ್‌ ಪ್ಯಾಕ್ಡ್ ಎಂದು ಉದ್ಗರಿಸುತ್ತಾರೆ. ಬಳಿಕ ಸ್ಕೌಟ್‌ ಸಮಾವೇಶಕ್ಕೆ ‘ಜಾಂಬೂರಿ' ಎಂದೇ ಹೆಸರು ಜಾರಿಗೆ ಬಂತು. ಜಾಂಬೂರಿ ಎಂದರೆ ಜಾತ್ರೆ, ಉತ್ಸವ ಎಂಬ ಅರ್ಥವೂ ಇದೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
President of India, Shri Pranab Mukherjee at Inauguration of 17th National Jamboree of the Bharat Scouts & Guides at Mysuru
Please Wait while comments are loading...