ಚಳಿಯ ನಡುವೆ ರೈತರ ಮೇಲೆ ಜಲಫಿರಂಗಿ ಬಳಸಿದ್ದು ಕ್ರೌರ್ಯ: ಶಿವಸೇನಾ ವಾಗ್ದಾಳಿ
ಮುಂಬೈ, ನವೆಂಬರ್ 30: ಪ್ರತಿಭಟನಾನಿರತ ರೈತರನ್ನು ನಡೆಸಿಕೊಂಡ ರೀತಿಗಾಗಿ ಬಿಜೆಪಿ ಸರ್ಕಾರದ ವಿರುದ್ಧ ಶಿವಸೇನಾ ವಾಗ್ದಾಳಿ ನಡೆಸಿದೆ. ಉತ್ತರ ಭಾರತದಲ್ಲಿ ಕೊರೆಯುವ ಚಳಿ ಇರುವಾಗ ರೈತರನ್ನು ಹಿಮ್ಮೆಟ್ಟಿಸಲು ಜಲಫಿರಂಗಿಯನ್ನು ಬಳಸಿದ್ದು ಅತ್ಯಂತ ಕ್ರೂರ ನಡೆ ಎಂದು ಅದು ಕಿಡಿಕಾರಿದೆ.
ದೆಹಲಿ ಗಡಿ ಭಾಗಗಳಲ್ಲಿ ಕಳೆದ ಐದು ದಿನಗಳಿಂದ ರೈತರು ಪ್ರತಿಭಟನೆ ನಡೆಸುತ್ತಿದ್ದಾರೆ. ನೂತನ ಕೃಷಿ ಕಾಯ್ದೆಗಳನ್ನು ಸರ್ಕಾರ ಕೈಬಿಡಬೇಕು ಎಂದು ಆಗ್ರಹಿಸಿರುವ ರೈತರು, ಯಾವುದೇ ಷರತ್ತುಬದ್ಧ ಮಾತುಕತೆಯನ್ನು ಒಪ್ಪಿಕೊಳ್ಳುತ್ತಿಲ್ಲ. ಹಾಗೆಯೇ ರಾಜಧಾನಿ ದೆಹಲಿಯ ಎಲ್ಲ ಐದು ಪ್ರಮುಖ ಪ್ರವೇಶ ಭಾಗಗಳನ್ನು ಸ್ಥಗಿತಗೊಳಿಸುವುದಾಗಿ ಬೆದರಿಕೆ ಹಾಕಿದ್ದಾರೆ.
ಲಾಠಿ ಬೀಸಿದ ಪೊಲೀಸರಿಗೆ ಊಟ ಕೊಟ್ಟ ರೈತರು
'ನಮ್ಮ ರೈತರನ್ನು ಭಯೋತ್ಪಾದಕರಂತೆ ನಡೆಸಿಕೊಳ್ಳಲಾಗುತ್ತಿದೆ. ಕಾಶ್ಮೀರದ ಗಡಿಯಲ್ಲಿ ಭಯೋತ್ಪಾದಕರು ನಮ್ಮ ಸೈನಿಕರನ್ನು ಕೊಲ್ಲುತ್ತಿರುವಾಗ ದೆಹಲಿ ಗಡಿಗಳ ಮೇಲೆ ದಾಳಿ ನಡೆಸಲಾಗುತ್ತಿದೆ' ಎಂದು ಶಿವಸೇನಾ ತನ್ನ ಮುಖವಾಣಿ ಸಾಮ್ನಾದ ಸಂಪಾದಕೀಯದಲ್ಲಿ ಹೇಳಿದೆ. ಈ ಪ್ರತಿಭಟನೆಯಲ್ಲಿ ಖಲಿಸ್ತಾನ ಸಂಪರ್ಕವಿದೆ ಎಂಬ ಹರಿಯಾಣ ಮುಖ್ಯಮಂತ್ರಿ ಮನೋಹರ ಲಾಲ್ ಖಟ್ಟರ್ ವಿರುದ್ಧವೂ ಶಿವಸೇನಾ ಹರಿಹಾಯ್ದಿದೆ.
'ಅರಾಜಕತೆ ಸೃಷ್ಟಿಸಲು ಬಿಜೆಪಿ ಪ್ರಯತ್ನಿಸುತ್ತಿದೆ. ಇಂದಿರಾ ಗಾಂಧಿ ಮತ್ತು ಜನರಲ್ ಅರುಣ್ ಕುಮಾರ್ ವೈದ್ಯ ತಮ್ಮ ಜೀವವನ್ನು ಅರ್ಪಿಸಿದಾಗಲೇ ಖಲಿಸ್ತಾನ ಮುಗಿದ ಅಧ್ಯಯನವಾಗಿದೆ. ಸರ್ಕಾರವು ತನ್ನ ವಿರೋಧಿಗಳನ್ನು ಹಣಿಯಲು ಎಲ್ಲ ಶಕ್ತಿಗಳನ್ನು ಬಳಸುತ್ತಿದೆ. ಆದರೆ ದೇಶದ ಶತ್ರುಗಳ ವಿಚಾರದಲ್ಲಿಯೂ ಈ ದೃಢ ನಿಶ್ಚಯ ಕಾಣಿಸುವುದಿಲ್ಲ?' ಎಂದು ಪ್ರಶ್ನಿಸಿದೆ.