ದಕ್ಷಿಣ ಚಿತ್ರೋದ್ಯಮಕ್ಕೂ ಹೋಗ್ತೀರಾ? ಮುಂಬೈಗೆ ಮಾತ್ರವೇ?: ಯೋಗಿಗೆ ಶಿವಸೇನಾ ಪ್ರಶ್ನೆ
ಮುಂಬೈ, ಡಿಸೆಂಬರ್ 2: ಮುಂಬೈ ಪ್ರವಾಸದಲ್ಲಿರುವ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ತಮ್ಮ ರಾಜ್ಯದಲ್ಲಿ ಹೂಡಿಕೆ ಮಾಡುವಂತೆ ಬಾಲಿವುಡ್ ಮನವೊಲಿಸುವ ಪ್ರಯತ್ನ ಮಾಡಿರುವುದನ್ನು ಶಿವಸೇನಾ ಟೀಕಿಸಿದೆ.
'ಮುಂಬೈನ ಫಿಲಂ ಸಿಟಿಯನ್ನು ಬೇರೆ ಜಾಗಕ್ಕೆ ಸ್ಥಳಾಂತರಿಸುವುದು ಸುಲಭವಲ್ಲ. ದಕ್ಷಿಣ ಭಾರತದಲ್ಲಿನ ಚಿತ್ರೋದ್ಯಮವೂ ತುಂಬಾ ದೊಡ್ಡದಿದೆ. ಪಶ್ಚಿಮ ಬಂಗಾಳ ಮತ್ತು ಪಂಜಾಬ್ಗಳಲ್ಲಿ ಸಹ ಫಿಲಂ ಸಿಟಿಗಳಿವೆ. ಈ ಪ್ರದೇಶಗಳಿಗೂ ಯೋಗಿ ಅವರು ಭೇಟಿ ನೀಡುತ್ತಾರೆಯೇ? ಅಲ್ಲಿನ ನಿರ್ದೇಶಕರು ಮತ್ತು ಕಲಾವಿದರ ಜತೆಗೆ ಮಾತನಾಡುತ್ತಾರೆಯೇ? ಅಥವಾ ಅವರು ಮುಂಬೈನಲ್ಲಿ ಮಾತ್ರವೇ ಈ ಕೆಲಸ ಮಾಡುತ್ತಾರೆಯೇ?' ಎಂದು ಶಿವಸೇನಾ ಸಂಸದ ಸಂಜಯ್ ರಾವತ್ ಪ್ರಶ್ನಿಸಿದರು.
ಹೈದ್ರಾಬಾದ್ ಹೆಸರು ಬದಲಾವಣೆ, ಯೋಗಿಗೆ ಓವೈಸಿ ಎಚ್ಚರಿಕೆ
ಯೋಗಿ ಆದಿತ್ಯನಾಥ್ ಅವರು ಸಿನಿಮಾ ನಿರ್ಮಾಪಕರಾದ ಸುಭಾಷ್ ಘಾಯ್ ಮತ್ತು ಬೋನಿ ಕಪೂರ್ ಸೇರಿದಂತೆ ಬಾಲಿವುಡ್ನ ಕೆಲವು ಮಂದಿ ಪ್ರಮುಖರ ನಿಯೋಗವನ್ನು ಭೇಟಿ ಮಾಡಿ ತಮ್ಮ ರಾಜ್ಯದಲ್ಲಿನ ಪ್ರಸ್ತಾವಿತ ಫಿಲಂ ಸಿಟಿಯ ಭವಿಷ್ಯದ ಬಗ್ಗೆ ಚರ್ಚಿಸಲು ಸಮಯ ನಿಗದಿಗೊಳಿಸಲಾಗಿದೆ. ಗೌತಮ್ ಬುದ್ಧ ನಗರದಲ್ಲಿ ಬೃಹತ್ ಫಿಲಂ ಸಿಟಿ ಆರಂಭಿಸುವ ಬಗ್ಗೆ ಅವರು ಸೆಪ್ಟೆಂಬರ್ನಲ್ಲಿ ಮಹತ್ವಾಕಾಂಕ್ಷಿ ಯೋಜನೆ ಪ್ರಕಟಿಸಿದ್ದರು. ಯಮುನಾ ಎಕ್ಸ್ಪ್ರೆಸ್ ವೇ ಸಮೀಪದ ಸೆಕ್ಟರ್ 21ರಲ್ಲಿ ಬೃಹತ್ ಜಾಗವನ್ನು ಕೊಡಲು ರಾಜ್ಯ ಸರ್ಕಾರ ಅನುಮೋದನೆ ನೀಡಿತ್ತು.
ಉತ್ತರ ಪ್ರದೇಶದ ಅಭಿವೃದ್ಧಿಗಾಗಿ ಹೂಡಿಕೆ ಮಾಡಲು ಮುಂಬೈ ಮೂಲದ ಸಂಸ್ಥೆಗಳನ್ನು ಆಹ್ವಾನಿಸಲು ಅವರು ಮುಂಬೈಗೆ ಭೇಟಿ ನೀಡಿದ್ದಾರೆ. ಮಂಗಳವಾರ ಬೆಳಿಗ್ಗೆ ಮುಂಬೈಗೆ ತೆರಳಿದ ಅವರು ಕೈಲಾಶ್ ಖೇರ್ ಮತ್ತು ಅಕ್ಷಯ್ ಕುಮಾರ್ ಅವರಂತಹ ಕಲಾವಿದರನ್ನು ಕೂಡ ಭೇಟಿ ಮಾಡಿದ್ದಾರೆ.