ಇಲ್ಲಿ ಮಾತಾಡುವುದಲ್ಲ, ಬನ್ನಿ ಪ್ರಧಾನಿ ಮೋದಿ ಬಳಿ ಹೋಗೋಣ!
ಮುಂಬೈ, ಡಿಸೆಂಬರ್.01: ಮಹಾರಾಷ್ಟ್ರದಲ್ಲಿ ಸರ್ಕಾರ ರಚನೆ ಆಗಿದ್ದೇ ತಡ. ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಫುಲ್ ಆಕ್ಟಿವ್ ಆಗಿ ಬಿಟ್ಟಿದ್ದಾರೆ. ಉದ್ದುದ್ದಾ ಭಾಷಣ ಮಾಡುವುದಲ್ಲ. ಇಲ್ಲಿ ನಿಂತು ಮಾತನಾಡಿದರೆ ಏನೂ ಸಿಗುವುದಿಲ್ಲ. ಬನ್ನಿ ಪ್ರಧಾನಿ ನರೇಂದ್ರ ಮೋದಿ ಅವರಲ್ಲಿಯೇ ಹೋಗೋಣ ಎಂದು ವಿರೋಧ ಪಕ್ಷದ ನಾಯಕರ ವಿರುದ್ಧ ಗುಡುಗಿದ್ದಾರೆ.
ಪ್ರಧಾನಮಂತ್ರಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಮಹಾರಾಷ್ಟ್ರಕ್ಕೆ ಆರ್ಥಿಕ ನೆರವು ನೀಡಲೇಬೇಕು ಎಂದು ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಆಗ್ರಹಿಸಿದ್ದಾರೆ. ರಾಜ್ಯದಲ್ಲಿ ಅಕಾಲಿಕ ಮಳೆ ಹಾಗೂ ಪ್ರವಾಹಕ್ಕೆ ಜನರ ಬದುಕು ಬೀದಿಗೆ ಬಂದು ನಿಂತಿದೆ.
ಯುದ್ಧಮುನ್ನ ಬಿಜೆಪಿ ಶಸ್ತ್ರತ್ಯಾಗ: 'ಮಹಾ' ಆಸೆಂಬ್ಲಿಗೆ ಕೈ ಶಾಸಕರೇ ಸ್ಪೀಕರ್!
ರಾಜ್ಯದಲ್ಲಿ ರೈತರು ಬೆಳೆದ ವರ್ಷದ ಬೆಳೆ ವರುಣನ ರೌದ್ರನರ್ತನಕ್ಕೆ ಕೊಚ್ಚಿ ಹೋಗಿದೆ. ಹೊತ್ತಿನ ಊಟಕ್ಕೂ ಜನರು ಪರದಾಡುವಂತಾ ಸ್ಥಿತಿಯಿದೆ. ಸಂಕಷ್ಟದಲ್ಲಿರುವ ರಾಜ್ಯದ ರೈತರ ನೆರವಿಗೆ ಕೇಂದ್ರ ಸರ್ಕಾರವು ಧಾವಿಸಬೇಕು ಎಂದು ಉದ್ಧವ್ ಠಾಕ್ರೆ ಹೇಳಿದ್ದಾರೆ.
ಮುಂಬೈನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಮುಖ್ಯಮಂತ್ರಿ ಉದ್ಧವ್ ಠಾಕ್ರೆ, ವಿರೋಧ ಪಕ್ಷ ಬಿಜೆಪಿ ವಿರುದ್ಧ ಹರಿ ಹಾಯ್ದಿದ್ದಾರೆ. ಸುಮ್ಮನೆ ಇಲ್ಲಿ ನಿಂತು ಮಾತನಾಡಿದರೆ ಆಗುವುದಿಲ್ಲ. ನಿಮ್ಮದೇ ಪಕ್ಷ ಕೇಂದ್ರದಲ್ಲಿ ಅಧಿಕಾರ ನಡೆಸುತ್ತಿದೆ. ರಾಜ್ಯದಲ್ಲಿರುವ ರೈತರ ಪರಿಸ್ಥಿತಿ ಬಗ್ಗೆ ನಿಮಗೂ ಅರವಿದೆ. ಹಾಗಿದ್ದ ಮೇಲೆ ಯಾಕೆ ತಡ ಮಾಡುತ್ತೀರಿ. ಪ್ರಧಾನಮಂತ್ರಿ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಿ, ರಾಜ್ಯಕ್ಕೆ ಬೇಕಾದ ಅಗತ್ಯ ಆರ್ಥಿಕ ನೆರವು ನೀಡುವಂತೆ ಮನವಿ ಮಾಡಿಕೊಳ್ಳಿ.
ಮಹಾರಾಷ್ಟ್ರದಲ್ಲಿ ಅಧಿಕಾರ ನಡೆಸುತ್ತಿರುವ ಮೈತ್ರಿ ಸರ್ಕಾರ ರೈತರಿಗಾಗಿ ಯೋಜನೆಗಳನ್ನು ಜಾರಿಗೊಳಿಸುತ್ತದೆ. ರೈತಪರ ಆಡಳಿತ ನಡೆಸಲು ನಾವು ಬದ್ಧರಾಗಿದ್ದೇವೆ. ಆದರೆ, ಇದರ ಜೊತೆಗೆ ಕೇಂದ್ರ ಸರ್ಕಾರವೂ ಕೂಡಾ ಆರ್ಥಿಕವಾಗಿ ಮಹಾರಾಷ್ಟ್ರಕ್ಕೆ ನೆರವು ನೀಡಬೇಕು. ಇದರಿಂದ ರಾಜ್ಯದ ರೈತರಿಗೆ ಅನುಕೂಲವಾಗಲಿದೆ. ಈ ಬಗ್ಗೆ ರಾಜ್ಯದ ಬಿಜೆಪಿ ನಾಯಕರು ಕೂಡಾ ಕೇಂದ್ರ ನಾಯಕರ ಜೊತೆಗೆ ಚರ್ಚೆ ಮಾಡಬೇಕು ಎಂದು ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಆಗ್ರಹಿಸಿದ್ದಾರೆ.