"ಮಹಾರಾಷ್ಟ್ರದಲ್ಲಿ ಮಾಸ್ಕ್ ಹಾಕಿಕೊಳ್ಳದಿದ್ದರೆ ಮತ್ತೊಮ್ಮೆ ಲಾಕ್ ಡೌನ್"
ಮುಂಬೈ, ಫೆಬ್ರವರಿ.21: ಭಾರತದಲ್ಲಿ ತಣ್ಣಗಾದ ಕೊರೊನಾವೈರಸ್ ಹಾವಳಿಗೆ ಮಹಾರಾಷ್ಟ್ರ ಮತ್ತೊಮ್ಮೆ ನಲುಗಿದೆ. ರಾಜ್ಯದಲ್ಲಿ ದಾಖಲೆ ಮಟ್ಟದ ಕೊವಿಡ್-19 ಸೋಂಕಿತ ಪ್ರಕರಣಗಳು ಪತ್ತೆಯಾಗಿರುವ ಬಗ್ಗೆ ಸ್ವತಃ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಆತಂಕ ವ್ಯಕ್ತಪಡಿಸಿದ್ದಾರೆ.
ಕಳೆದ ಕೆಲವು ದಿನಗಳಿಗೆ ಹೋಲಿಕೆ ಮಾಡಿದರೆ ರಾಜ್ಯದಲ್ಲಿ ಕೊರೊನಾವೈರಸ್ ಸೋಂಕಿತ ಪ್ರಕರಣಗಳ ಸಂಖ್ಯೆ ದ್ವಿಗುಣಗೊಂಡಿದೆ. ಸಾರ್ವಜನಿಕರು ಕೊವಿಡ್-19 ಶಿಷ್ಟಾಚಾರಗಳನ್ನು ಕಡ್ಡಾಯವಾಗಿ ಕಟ್ಟುನಿಟ್ಟಾಗಿ ಪಾಲನೆ ಮಾಡುವಂತೆ ಮನವಿ ಮಾಡಿಕೊಂಡಿದ್ದಾರೆ.
ಕೊರೊನಾ ಸೋಂಕು ಹೆಚ್ಚಳ: ಮಹಾರಾಷ್ಟ್ರದಲ್ಲಿ ರಾತ್ರಿ ಕರ್ಫ್ಯೂಗೆ ನಿರ್ಧಾರ
ಮಹಾರಾಷ್ಟ್ರದಲ್ಲಿ ಕಳೆದ 24 ಗಂಟೆಗಳಲ್ಲಿ 6971 ಮಂದಿಗೆ ಕೊವಿಡ್-19 ಸೋಂಕು ತಗುಲಿರುವುದು ವೈದ್ಯಕೀಯ ತಪಾಸಣೆಯಲ್ಲಿ ದೃಢಪಟ್ಟಿದೆ. ರಾಜ್ಯದಲ್ಲಿ ಒಟ್ಟು ಸೋಂಕಿತ ಪ್ರಕರಣಗಳ ಸಂಖ್ಯೆ 21,00,884ಕ್ಕೆ ಏರಿಕೆಯಾಗಿದೆ. ಒಂದೇ ದಿನ 35 ಮಂದಿಗ ಮಹಾಮಾರಿಗೆ ಬಲಿಯಾಗಿದ್ದು, ಈವರೆಗೂ 51788 ಮಂದಿ ಪ್ರಾಣ ಬಿಟ್ಟಿದ್ದಾರೆ. 2417 ಸೋಂಕಿತರು ಗುಣಮುಖರಾಗಿದ್ದು, ಒಟ್ಟು 19,94,947 ಸೋಂಕಿತರು ಗುಣಮುಖರಾಗಿದ್ದಾರೆ. ರಾಜ್ಯದಲ್ಲಿ 52,956 ಸಕ್ರಿಯ ಪ್ರಕರಣಗಳಿವೆ.
ಮಹಾರಾಷ್ಟ್ರ ಲಾಕ್ ಡೌನ್ ಎಚ್ಚರಿಕೆ:
"ರಾಜ್ಯದಲ್ಲಿ ಮತ್ತೊಮ್ಮೆ ಲಾಕ್ ಡೌನ್ ಜಾರಿಗೊಳಿಸುವುದಕ್ಕೆ ನೀವು ಬಯಸುತ್ತೀರಾ. ಮುಂದಿನ ಎಂಟು ದಿನಗಳಲ್ಲಿ ನೀವು ಮಾಸ್ಕ್ ಧರಿಸದೇ ಅಜಾಗ್ರತಿ ವಹಿಸಿದರೆ ಮತ್ತೊಂದು ಬಾರಿ ಲಾಕ್ ಡೌನ್ ಜಾರಿಗೊಳಿಸಲಾಗುತ್ತದೆ. ಲಾಕ್ ಡೌನ್ ಬೇಡ ಎನ್ನುವುದಾದರೆ ಮಾಸ್ಕ್ ಧರಿಸಿ, ಕೊರೊನಾವೈರಸ್ ನಿಯಮಗಳನ್ನು ಶಿಸ್ತುಬದ್ಧವಾಗಿ ಪಾಲನೆ ಮಾಡುವಂತೆ ಎಚ್ಚರಿಕೆ ನೀಡಲಾಗಿದೆ.
ಮಹಾರಾಷ್ಟ್ರದಲ್ಲಿ ಕೊರೊನಾವೈರಸ್ ಎರಡನೇ ಅಲೆ ಸೃಷ್ಟಿಯಾಗುತ್ತಿದೆಯೋ ಇಲ್ಲವೋ ಎನ್ನುವುದರ ಬಗ್ಗೆ ಮುಂದಿನ 8 ರಿಂದ 15 ದಿನಗಳಲ್ಲಿ ಸ್ಪಷ್ಟವಾಗಲಿದೆ. ಎರಡನೇ ಅಲೆ ರಾಜ್ಯದಲ್ಲಿ ಸೃಷ್ಟಿಯಾಗಿದೆಯೇ ಎನ್ನುವ ಬಗ್ಗೆ ಜನರು ಸಹ ಜಾಗೃತಿ ವಹಿಸಬೇಕು ಎಂದು ಹೇಳಿದ್ದಾರೆ.