• search
  • Live TV
ಮುಂಬೈ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಅನಿಲ್ ದೇಶ್‌ಮುಖ್ ರಾಜೀನಾಮೆಯಿಂದ ತೆರವಾದ ಸ್ಥಾನಕ್ಕೆ ದಿಲೀಪ್ ವಾಲ್ಸೆ ಪಾಟೀಲ್ ನೇಮಕ?

|

ಮುಂಬೈ, ಏಪ್ರಿಲ್ 5: ಭ್ರಷ್ಟಾಚಾರದ ಗಂಭೀರ ಆರೋಪ ಎದುರಿಸುತ್ತಿರುವ ಮಹಾರಾಷ್ಟ್ರ ಗೃಹ ಸಚಿವ ಅನಿಲ್ ದೇಶ್‌ಮುಖ್ ಅವರ ರಾಜೀನಾಮೆಯು ಆಡಳಿತಾರೂಢ ಮಹಾರಾಷ್ಟ್ರ ವಿಕಾಸ್ ಅಘಾದಿಯಲ್ಲಿ ತಳಮಳ ಮೂಡಿಸಿದೆ. ಎನ್‌ಸಿಪಿ ನಾಯಕ ಅನಿಲ್ ದೇಶ್‌ಮುಖ್ ತಮ್ಮ ವಿರುದ್ಧದ ಆರೋಪಗಳನ್ನು ನಿರಾಕರಿಸುತ್ತಲೇ ಬಂದಿದ್ದರು. ಆದರೆ ಸಿಬಿಐ ತನಿಖೆಗೆ ಬಾಂಬೆ ಹೈಕೋರ್ಟ್ ಆದೇಶ ನೀಡಿದ ಬೆನ್ನಲ್ಲೇ ಸೋಮವಾರ ಅವರು ರಾಜೀನಾಮೆ ಸಲ್ಲಿಸಿದ್ದರು.

ಮೂಲಗಳ ಪ್ರಕಾರ, ಅನಿಲ್ ದೇಶ್‌ಮುಖ್ ಅವರ ರಾಜೀನಾಮೆಯಿಂದ ತೆರವಾದ ಸ್ಥಾನಕ್ಕೆ ಎನ್‌ಸಿಪಿ ಈಗಾಗಲೇ ಮುಖಂಡರೊಬ್ಬರನ್ನು ಸಜ್ಜುಗೊಳಿಸಿದೆ. ಪ್ರಸ್ತುತ ಸರ್ಕಾರದಲ್ಲಿ ಕಾರ್ಮಿಕ ಮತ್ತು ಅಬಕಾರಿ ಸಚಿವರಾಗಿರುವ ದಿಲೀಪ್ ವಾಲ್ಸೆ ಪಾಟೀಲ್ ಅವರನ್ನು ಗೃಹಸಚಿವರ ಹುದ್ದೆಗೆ ಆಯ್ಕೆ ಮಾಡುವ ಸಾಧ್ಯತೆ ಇದೆ.

ಭ್ರಷ್ಟಾಚಾರ ಆರೋಪ: ರಾಜೀನಾಮೆ ಸಲ್ಲಿಸಿದ ಗೃಹ ಸಚಿವ ಅನಿಲ್ ದೇಶ್‌ಮುಖ್

ದಿಲೀಪ್ ವಾಲ್ಸೆ ಅವರನ್ನು ಶರದ್ ಪವಾರ್ ಅವರ ನೆಚ್ಚಿನ ಶಿಷ್ಯ ಎಂದೇ ಕರೆಯಲಾಗುತ್ತದೆ. ಅವರು ಕಾಂಗ್ರೆಸ್‌ನ ಮಾಜಿ ಶಾಸಕ ಹಾಗೂ ಶರದ್ ಪವಾರ್ ಅವರ ಸ್ನೇಹಿತ ದತ್ತಾತ್ರೇಯ ವಾಲ್ಸೆ ಪಾಟೀಲ್ ಅವರ ಮಗ. ದಿಲೀಪ್ ತಮ್ಮ ವೃತ್ತಿ ಬದುಕು ಆರಂಭಿಸಿದ್ದು ಶರದ್ ಪವಾರ್ ಅವರ ಖಾಸಗಿ ಸಹಾಯಕನಾಗಿ.

1990ರಲ್ಲಿ ಅವರು ಅಂಬೆಗಾನ್ ವಿಧಾನಸಭೆ ಕ್ಷೇತ್ರದ ಮೊದಲ ಬಾರಿ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿ ಗೆಲುವು ಸಾಧಿಸಿದ್ದರು. ಅಲ್ಲಿಂದ ಅವರು ಮತ್ತೆ ಆ ಕ್ಷೇತ್ರದಲ್ಲಿ ಸೋತಿದ್ದೇ ಇಲ್ಲ. 1999ರಲ್ಲಿ ಶರದ್ ಪವಾರ್, ಕಾಂಗ್ರೆಸ್‌ನಿಂದ ಹೊರಬಂದು ಎನ್‌ಸಿಪಿ ಸ್ಥಾಪಿಸಿದಾಗಲೂ ಅವರನ್ನು ಹಿಂಬಾಲಿಸಿದ ದಿಲೀಪ್, ವಿಲಾಸರಾವ್ ದೇಶ್‌ಮುಖ್ ಸರ್ಕಾರದಲ್ಲಿ ವಿದ್ಯುತ್ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಸ್ಥಾನ ಪಡೆದಿದ್ದರು.

ಭ್ರಷ್ಟಾಚಾರ ಆರೋಪ: ಮಹಾರಾಷ್ಟ್ರ ಗೃಹ ಸಚಿವ ಅನಿಲ್ ದೇಶ್‌ಮುಖ್‌ಗೆ ಸಂಕಷ್ಟ

ಹಣಕಾಸು ಮತ್ತು ಯೋಜನಾ ಸಂಪುಟ ಸಚಿವ ಸ್ಥಾನಗಳನ್ನೂ ದಿಲೀಪ್ ನಿಭಾಯಿಸಿದ್ದಾರೆ. 2009-2014ರ ಅವಧಿಯಲ್ಲಿ ಅವರು ಮಹಾರಾಷ್ಟ್ರ ವಿಧಾನಸಭೆ ಸ್ಪೀಕರ್ ಆಗಿದ್ದರು. ಈಗ ಶಿವಸೇನಾ-ಎನ್‌ಸಿಪಿ-ಕಾಂಗ್ರೆಸ್ ಸರ್ಕಾರದಲ್ಲಿ ಕೂಡ ಸಚಿವರಾಗಿದ್ದಾರೆ.

'ನ್ಯಾಯಾಲಯದ ಆದೇಶದ ಬಳಿಕ ಹುದ್ದೆಯಲ್ಲಿ ಮುಂದುವರಿಯಲು ನನಗೆ ನೈತಿಕ ಹಕ್ಕು ಇಲ್ಲ. ಹೀಗಾಗಿ ರಾಜೀನಾಮೆ ನೀಡಲು ನಿರ್ಧರಿಸಿದ್ದೇನೆ. ದಯಮಾಡಿ ನನ್ನನ್ನು ನನ್ನ ಹುದ್ದೆಯಿಂದ ಬಿಡುಗಡೆ ಮಾಡಿ' ಎಂದು ಅನಿಲ್ ದೇಶ್‌ಮುಖ್ ಅವರು ರಾಜೀನಾಮೆ ಪತ್ರದಲ್ಲಿ ಬರೆದಿದ್ದರು.

ಭ್ರಷ್ಟಾಚಾರ ಆರೋಪ ಕೇಳಿಬಂದಾಗಲೇ ಈ ಸನ್ನಿವೇಶವನ್ನು ಎನ್‌ಸಿಪಿ ನಿರೀಕ್ಷಿಸಿತ್ತು ಎನ್ನಲಾಗಿದೆ. ಹೀಗಾಗಿ ದಿಲೀಪ್ ಅವರನ್ನು ಗೃಹಸಚಿವರ ಸ್ಥಾನಕ್ಕೆ ನೇಮಿಸಲು ಅದು ಆಗಲೇ ತಯಾರಿ ನಡೆಸಿತ್ತು ಎಂದು ಮೂಲಗಳು ತಿಳಿಸಿವೆ.

English summary
Senior NCP leader Dilip Walse Patil likely to replace Anil Deshmukh as Maharashtra home minister.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X